ಬೆಳ್ತಂಗಡಿ : ಸಮಗ್ರ ಭೂಹಂಚಿಕೆ ಮಾಡಲಾಗದ ಹಾಗೂ ರೈತರ ಪರ ನಿರ್ಲಕ್ಷ ದೋರಣೆ ಇರುವ ಕಾಂಗ್ರೆಸ್, ಬಿಜೆಪಿಗಳ ದುರಾಡಳಿತಗಳಿಂದ ಇಂದು ರೈತ ಆತ್ಮಹತ್ಯೆ ಮಾಡುವಂತಹ ದುರಂತ ನಮ್ಮ ಮುಂದೆಇದೆ. ರೈತರ ಸಾಲ ಮನ್ನಾ ಮಾಡಲು ಸಿದ್ದವಿಲ್ಲದ ಸರಕಾರ ಕಾರ್ಪರೇಟ್ ಮಾಲಕರ ಸಾಲ ಮನ್ನಾ ಮಾಡಿ ಅವರ ವರ್ಗ ಹಿತವನ್ನು ರಕ್ಷಿಸುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದದ.ಕ. ಜಿಲ್ಲಾ ಅಧ್ಯಕ್ಷ ಕೆ.ಆರ್.ಶ್ರೀಯಾನ್ ಹೇಳಿದರು.
ಅವರು ಜ.23 ರಂದು ಬೆಳ್ತಂಗಡಿಯ ಅಂಬೇಡ್ಕರ್ ಭವನದ ಕೆ.ವಿ.ರಾವ್ ವೇದಿಕೆಯಲ್ಲಿ ನಡೆದ ಕರ್ನಾಟಕ ಪ್ರಾಂತರೈತ ಸಂಘದ ಬೆಳ್ತಂಗಡಿ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. ನೋಟು ಬದಲಾವಣೆ ಮೂಲಕವೂ ರೈತರನ್ನು ಸಂಕಷ್ಟಕ್ಕೀಡು ಮಾಡುವ, ಕಪ್ಪು ದೊರೆಗಳ ಹಿತಗಳನ್ನೇ ಕಾಪಾಡಿದ ನರೇಂದ್ರ ಮೋದಿ ಸರಕಾರ ಧರ್ಮ ರಕ್ಷಣೆಯ ಫೋಸ್ ನೀಡಿ ಅತ್ತ ಧರ್ಮವನ್ನೂ, ಇತ್ತ ಜನರನ್ನೂ ನಾಶ ಮಾಡುತ್ತಿದೆ ಎಂದು ಟೀಕಿಸಿದರು. ಅಂದು ಭೂಮಸೂದೆಗಾಗಿ ಕಾ,ಕೃಷ್ಣ ಶೆಟ್ಟಿ ಅವರ ನಾಯಕತ್ವದಲ್ಲಿ ರೈತರು ಒಂದು ಗೂಡಿದಂತೆ ಇಂದೂ ರೈತರು ಸಂಘಟಿತರಾಗಿ ಬಲಿಷ್ಠ ರಾಜಕೀಯ ಶಕ್ತಿಯಾಗಿ ಬೆಳೆದು ಬರಬೇಕು ಎಂದವರು ಕರೆ ನೀಡಿದರು.
ರೇಶನ್ ವಸ್ತು ರೂಪದಲ್ಲೇ ನೀಡಬೇಕು, ತಾಲೂಕಾದ್ಯಂತ ನದಿ, ತೋಡುಗಳಿಗೆ ಕಿಂಡಿ ಅಣೆಕಟ್ಟು ಕಟ್ಟ ಬೇಕು ಹಾಗೂ ಗುಂಡ್ಯ ಯೋಜನೆ ಜಾರಿ ಮಾಡಿ ಜಿಲ್ಲೆಯಲ್ಲಿ ಸುಭದ್ರ ನೀರಾವರಿ ವ್ಯವಸ್ಥೆ ತರಬೇಕು, ತುಳು ನಾಡಿನ ರೈತರ ಗ್ರಾಮೀಣ ಕ್ರೀಡೆಯಾದ ಕಂಬಳ ನಿಷೇಧವನ್ನು ಹಿಂಪಡೆಯಬೇಕು, ರೈತರ ಸಮಸ್ಯೆಗಳ ಬಗ್ಗೆ ಮಾತ್ರ ಚರ್ಚೆ ನಡೆಸಲು ವರ್ಷಕ್ಕೊಮ್ಮೆ ಪ್ರತ್ಯೇಕ ಗ್ರಾಮ ಸಭೆ ನಡೆಸಬೇಕು, ಪ್ರತಿ ರೈತ, ಕೃಷಿಕೂಲಿಕಾರ, ಆದಿವಾಸಿ, ದಲಿತ ಕುಟುಂಬಕ್ಕೂ ಕನಿಷ್ಠ 5 ಎಕ್ರೆಗೆ ಕಡಿಮೆ ಆಗದಂತೆ ಭೂಮಿ ಹಂಚಿಕೆಯಾಗುವಂತೆ ಸಮಗ್ರ ಭೂ ಹಂಚಿಕೆ ಮಸೂದೆ ಜಾರಿಯಾಗಬೇಕು, ಡಿಸಿ ಮನ್ನಾ ಭೂಮಿಯನ್ನು ದಲಿತರಿಗೆ ಹಂಚಿಕೆ ಮಾಡಬೇಕು, ಆದಿವಾಸಿಗಳ ಭೂಮಿ ಹಕ್ಕು, ಅರಣ್ಯ ಉತ್ಪತ್ತಿ ಮೇಲಿನ ಹಕ್ಕು, ಮೂಲ ಭೂತ ಸೌಕರ್ಯ ಒದಗಿಸಬೇಕು, ಎಳನೀರು ಘಾಟಿ ರಸ್ತೆ ಡಾಮರೀಕರಣವಾಗಬೇಕು, ಮೊದಲಾದ ರೈತರ ಪರ ನಿರ್ಣಯಗಳನ್ನು ಕೈಗೊಂಡ ಸಮ್ಮೇಳನವು ಇದನ್ನು ಜಾರಿಗೊಳಿಸಲು ಒತ್ತಾಯಿಸಿ ರೈತರು ನಿರಂತರ ಹೋರಾಟ ನಡೆಸಲು ನಿರ್ಧರಿಸಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಲಕ್ಷ್ಮಣಗೌಡ ಪಾಂಗಳ ಅವರು ಹೊರ್ನಾಡಿಗೆ ಅತೀ ಹತ್ತಿರದ ದಾರಿಯಾದ ದಿಡುಪೆಯ ರೈತರ ಅಗತ್ಯವಾದ ಬೇಡಿಕೆಯೂ ಆದ ಎಳನ್ನೀರು ಘಾಟಿ ರಸ್ತೆ ನಿರ್ಮಾಣಕ್ಕಾಗಿ ಹೋರಾಟ ಮುನ್ನಡೆಸಲು ರೈತ ಸಂಘ ಸಿದ್ದ ಎಂದರು. ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಮಾತಾಡಿದರು. ಪಟ್ರಮೆ ಗ್ರಾಮ ಪಂಚಾಯತು ಸದಸ್ಯ, ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶ್ಯಾಮರಾಜ್ ಪಟ್ರಮೆ ಸ್ವಾಗತಿಸಿ, ವರದಿ ಮಂಡನೆ ಮಾಡಿದರು. ಕೊನೆಗೆ ನೂತನ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್ ಧನ್ಯವಾದ ನೀಡಿದರು.