ಮುಗುಳಿ ತೀರ್ಥಕ್ಷೇತ್ರ ಪುನಃ ಪ್ರತಿಷ್ಠಾ ಮಹೋತ್ಸವ ಭಯದಿಂದ ಭಕ್ತಿ ಬರಬಾರದು: ಡಾ. ಹೆಗ್ಗಡೆ

muguli ksthetrada raste udhgatane copyಉಜಿರೆ: ವಂದೇ ತದ್ಗುಣ ಲಬ್ದಯೇ ಎಂದು ಜೈನರು ದೇವರನ್ನು ಆರಾಧಿಸುತ್ತಾರೆ. ಅಂದರೆ ದೇವರಲ್ಲಿರುವ ಅನಂತ ಗುಣಗಳು ತಮಗೂ ಬರಲಿ ಎಂದು ಬೇಡಿಕೊಳ್ಳುತ್ತಾರೆ. ಧನ, ಧಾನ್ಯ, ಸಂಪತ್ತು ಯಾವುದನ್ನೂ ಬೇಡುವುದಿಲ್ಲ. ಏಕೆಂದರೆ ಎಲ್ಲವನ್ನೂ ತ್ಯಾಗ ಮಾಡಿದಾಗ ಮಾತ್ರ ತೀರ್ಥಂಕರರಾಗಬಹುದು. ಭಯದಿಂದ ಭಕ್ತಿ ಬರಬಾರದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಜ.5 ರಂದು ಮುಗುಳಿ ತೀರ್ಥ ಕ್ಷೇತ್ರದಲ್ಲಿ ಶೀತಲನಾಥ ತೀರ್ಥಂಕರರ ಸಾನ್ನಿಧ್ಯದಲ್ಲಿರುವ ಬ್ರಹ್ಮಯಕ್ಷ ದೇವರ ಬಸದಿಯಲ್ಲಿ ಪುನಃ ಪ್ರತಿಷ್ಠಾ ಮಹೋತ್ಸವದ ಸಂದರ್ಭ ಶಾಸಕರ ಅನುದಾನದಿಂದ ನಿರ್ಮಿಸಲಾದ ನೂತನ ರಸ್ತೆಯನ್ನು ಉದ್ಘಾಟಿಸಿ, ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಜೈನ ಧರ್ಮದ ಶಕ್ತಿ ಮತ್ತು ಸತ್ವದಿಂದ ಕೆಲವು ಸಾನ್ನಿಧ್ಯಗಳಲ್ಲಿ ಅತಿಶಯಗಳು ನಡೆಯುತ್ತವೆ. ಬಂಗಾಡಿಯಲ್ಲಿ ನೀರಿನಲ್ಲಿ ಕಲ್ಲಿನ ಗುಂಡು ತೇಲುವುದು. (ಈಗ ಇದು ನಡೆಯುತ್ತಿಲ್ಲ) ಭಕ್ತರಲ್ಲಿ ಭಕ್ತಿ ಮಾಡಲು ಇಂತಹ ಪುರಾವೆಗಳು, ಅತಿಶಯಗಳು ಬೇಕಾಗುತ್ತವೆ. ಆಗ ಭಕ್ತರೂ ಶರಣಾಗುತ್ತಾರೆ. ಆದರೆ ಭಕ್ತರು ಜಿಜ್ಞಾಸುಗಳಾಗಬೇಕು. ಕುತೂಹಲದಿಂದ ದೆ ಯಾವುದನ್ನೂ ನಂಬಬಾರದು ಎಂದು ಅವರು ಸಲಹೆ ನೀಡಿದರು. ಜೈನ ಧರ್ಮದ ಪ್ರಕಾರ ಯಕ್ಷ-ಯಕ್ಷಿಯರು ಭಕ್ತರನ್ನು ದೇವರ ಕಡೆಗೆ ಆಕರ್ಷಿಸುವ ಕಾರ್ಯ ಮಾಡುತ್ತಾರೆ. ಆಗ ಧರ್ಮದ ರಕ್ಷಣೆಯಾಗಿ ಶಾಂತಿ, ನೆಮ್ಮದಿ ಸಿಗುತ್ತದೆ ಎಂದರು.
ಮುಗುಳಿ ಕ್ಷೇತ್ರದಲ್ಲಿ ನೀರಿನ ಕೊರತೆ, ಅಂತರ್ ಜಲದಮಟ್ಟ ಕುಸಿತದಿಂದಾಗಿ ತೀರ್ಥ ಹರಿದು ಬರುವುದು ನಿಂತಿದೆ. ಬಸದಿಯ ಸುತ್ತಲೂ ಒಂದೆರಡು ಕೆರೆಗಳನ್ನು ನಿರ್ಮಿಸಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.ಧರ್ಮಸ್ಥಳ ವತಿಯಿಂದ ಹಮ್ಮಿಕೊಳ್ಳಲಾದ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಅಭಿಯಾನಕ್ಕೆ ಈಗಾಗಲೇ ಮೂವತ್ತು ಸಾವಿರ ಶ್ರದ್ಧಾಕೇಂದ್ರಗಳ ಪ್ರತಿನಿಧಿಗಳು ಸಹಕಾರ ನೀಡಲು ಒಪ್ಪಿದ್ದಾರೆ. ಕೇರಳ ಗಡಿಭಾಗದ ಚರ್ಚ್, ಮಸೀದಿಗಳ ಪ್ರತಿನಿಧಿಗಳೂ ಬೆಂಬಲ ನೀಡಿದ್ದಾರೆ. ಇದೇ ೧೩ರೊಳಗೆ ರಾಜ್ಯದ ಎಲ್ಲಾ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಅಭಿಯಾನ ಪೂರ್ಣಗೊಳ್ಳಲಿದೆ ಎಂದರು. ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ ಬೆಳ್ತಂಗಡಿ ತಾಲೂಕಿನಲ್ಲಿ ಬಂಗಾಡಿ, ಸವಣಾಲು ಮತ್ತು ಮುಗುಳಿ ಎಂಬ ಮೂರು ಕ್ಷೇತ್ರಗಳಲ್ಲಿ ಬ್ರಹ್ಮಯಕ್ಷ ಸಾನ್ನಿಧ್ಯವಿದೆ. ಮುಗುಳಿ ಕ್ಷೇತ್ರದಲ್ಲಿ ನಡೆದ ನವೀಕರಣ ಹಾಗೂ ಪೂಜಾ ವಿಧಿ-ವಿಧಾನಗಳಿಂದ ಬ್ರಹ್ಮಯಕ್ಷ ಪ್ರಸನ್ನ ಗೊಂಡಿದ್ದು ಹೂ ಬೀಳುವ ಮೂಲಕ ಅಪ್ಪಣೆಯಾಗಿದೆ. ಮುಂದೆ ತೀರ್ಥ ಹರಿದು ಬಂದು ಇದು ಅತಿಶಯ ಕ್ಷೇತ್ರವಾಗಿ ಬೆಳಗಲಿದೆ ಎಂದು ಭವಿಷ್ಯ ನುಡಿದರು. ಶಾಸಕ ಕೆ. ವಸಂತ ಬಂಗೇರ ಮತ್ತು ಮುಗುಳಿ ನಾರಾಯಣ ಭಟ್ ಶುಭಾಶಂಸನೆ ಮಾಡಿದರು. ಬಳಕ್ಕ ಜೀವಂಧರ ಕುಮಾರ್ ಸ್ವಾಗತಿಸಿದರು. ಸುರೇಂದ್ರ ಜೈನ್ ಧರ್ಮಸ್ಥಳ ಧನ್ಯವಾದವಿತ್ತರು. ಸೋಮಶೇಖರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.