ನ.20 : ಕೊಯ್ಯೂರುಡು ತುಳುಜಾತ್ರೆ ಬೋಳ್ತೇರ್ ತುಳು ಮಿನದನ

  ಬೆಳ್ತಂಗಡಿ : ಉಜಿರೆಯಲ್ಲಿ 2009ರಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ರೂವಾರಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ತುಳು ಭಾಷೆಯನ್ನು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ತುಳುವರ ಪ್ರಯತ್ನಕ್ಕೆ ಪೂರಕವಾಗಿ ಕೊಯ್ಯೂರಿನ ಸರಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ನ.20 ರಂದು ಕೊಯ್ಯೂರುಡು ತುಳುಜಾತ್ರೆ-ಬೋಳ್ತೇರ್ ತುಳು ಮಿನದನ-2016ಎಂಬ ತುಳು ನಾಡು ನುಡಿ ಸಂಸ್ಕೃತಿಗೆ ಸಂಬಂಧಿಸಿದ ತಾಲೂಕು ಮಟ್ಟದ ಸಮ್ಮೇಳನ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಅಗ್ರಸಾಲೆ ಹೇಳಿದರು.
ಅವರು ನ.4 ರಂದು ಬೆಳ್ತಂಗಡಿ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಬೆಳ್ತಂಗಡಿ ತಾಲೂಕಿನ ಅತ್ಯುತ್ತಮ ಸರಕಾರಿ ಪ್ರೌಢಶಾಲೆಗಳಲ್ಲಿ ಕಯ್ಯೂರು ಶಾಲೆಯೂ ಒಂದಾಗಿದ್ದು, ಪಾಠದ ಜೊತೆಗೆ ವರ್ಷದುದ್ದಕ್ಕೂ ಹತ್ತು ಹಲವು ಮೌಲಿಕ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷ ತುಳುವನ್ನು ಮೂರನೇ ಭಾಷೆಯನ್ನಾಗಿ ಕಲಿಯಲು ಇಲ್ಲಿ ಅವಕಾಶವನ್ನು ಕಲ್ಪಿಸಿ, ತುಳುಪಠ್ಯವನ್ನು ಅನುಷ್ಠಾನಗೊಳಿಸಿದ ತಾಲೂಕಿನ ಮೊದಲ ಶಾಲೆ ಎಂಬ ಹೆಗ್ಗಳಿಕೆಯೂ ಈ ಶಾಲೆಯದ್ದಾಗಿದೆ. ಇಂತಹ ಸಂದರ್ಭದಲ್ಲಿ ತುಳು ಅಕಾಡೆಮಿಯ ಅಪೇಕ್ಷೆಯಂತೆ ಶಾಲೆಯ ನೇತೃತ್ವದಲ್ಲಿ ಊರವರ ಸಂಘಟನೆಯೊಂದಿಗೆ ಸರ್ವರ ಸಹಕಾರದೊಂದಿಗೆ ಇಲ್ಲಿ ತಾಲೂಕು ಮಟ್ಟದ ತುಳು ಸಮ್ಮೇಳನ ನಡೆಸಲು ಸಿದ್ಧತೆಗಳು ನಡೆಯುತ್ತಿವೆ ಎಂದರು.
ಶಾಸಕ ವಸಂತ ಬಂಗೇರ ದೀಪ ಬೆಳಗಿಸಿ, ಬಂಟ್ವಾಳದ ಲೆವಿನ್ ಎಲೆಕ್ಟ್ರಿಕಲ್ಸ್‌ನ ಮಾಲಕ ಪಿಯೂಸ್ ಎಲ್. ರೋಡ್ರಿಗಸ್ ಕುರಲ್ ಕಟ್ಟುವ ಮೂಲಕ ತುಳುಜಾತ್ರೆ ಉದ್ಘಾಟನೆ ನಡೆಯಲಿದ್ದು ಉಜಿರೆ ಶ್ರೀ ಧ. ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಆಶಯ ಭಾಷಣ ಮಾಡಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಎಂ. ಜಾನಕಿ ಬ್ರಹ್ಮಾವರ ಅವರು ಅಧ್ಯಕ್ಷತೆ ವಹಿಸಲಿದ್ದು, ತಾಲೂಕಿನ ಗಣ್ಯರು, ಶಿಕ್ಷಣ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಮುಖ್ಯ ಅತಿಥಿಗಳಾಗಿರುತ್ತಾರೆ ಎಂದು ತಿಳಿಸಿದರು.
ತುಳು ಜಾನಪದ ಕುಣಿತಗಳೊಂದಿಗೆ ಉದ್ಘಾಟನಾ ಸಮಾರಂಭ ಮೆರುಗು ಪಡೆಯಲಿದ್ದು, ತುಳುನಾಡಿನ ಆಚರಣೆಗಳು, ಆರಾಧನೆಗಳು, ಕುಲಕಸುಬುಗಳು, ತುಳು ತಿಂಡಿ-ತಿನಿಸುಗಳ ಹೋಟೆಲ್ ಕೊಯ್ಯೂರು-ಹೀಗೆ ತುಳು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಗಳು ತುಳುಜಾತ್ರೆಯ ಆಕರ್ಷಣೆಗಳಾಗಿರುತ್ತವೆ. ತುಳುಭಾಷೆಯ ಚಂದ-ಸೌಂದರ್ಯ ಮತ್ತು ಶ್ರೀಮಂತಿಕೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ರಚಿಸಿ ನಿರ್ದೇಶಿಸಿ ನಟಿಸಿರುವ ನಾಟಕ ಪನ್ಯರಾವಂದಿನವು, ಸಸಿಹಿತ್ಲು ಮೇಳದವರ ಪ್ರಸಿದ್ಧ ಪೌರಾಣಿಕ ಧಾರ್ಮಿಕ ಯಕ್ಷಗಾನ ಬಯಲಾಟ ನಾಗತಂಬಿಲ, ತುಳುವ ಬೊಳ್ಳಿ ದಯಾನಂದ ಕತ್ತಲ್‌ಸಾರ್ ನೇತೃತ್ವದಲ್ಲಿ ವಿಚಾರಕೂಟ, ತಾಲೂಕಿನ ಹಲವು ಹಿರಿಯ-ಕಿರಿಯ ಕವಿಗಳಿಂದ ಕವಿಗೋಷ್ಠಿ, ಸುಗ್ಗಿ ಪುರುಷರ ಕುಣಿತ ಹಾಗೂ ಸಭಿಕರಿಗೆ ಮುಡಿ ಅಕ್ಕಿ ಬಹುಮಾನದ ತುಳು ರಸಪ್ರಶ್ನೆ ಮತ್ತು ಮುಡಿ ಅಕ್ಕಿ ಸೋರ್ತಿ ಆಟಗಳು ತುಳುಜಾತ್ರೆಯ ವಿಶೇಷ ಕಾರ್ಯಕ್ರಮಗಳಾಗಿರುತ್ತವೆ. ಮಧ್ಯಾಹ್ನ ಮತ್ತು ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆಯೂ ನಡೆಯಲಿದೆ. ಅಲ್ಲದೆ ಜಾತ್ರೆಯ ಅಂಗವಾಗಿ ನ.13 ರಂದು ಆದಿತ್ಯವಾರ ತಾಲೂಕು ಮಟ್ಟದ ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆ ಮತ್ತು ಗ್ರಾಮ ಮಟ್ಟದ ತುಳು ಜಾನಪದ ಕ್ರೀಡೆಗಳ ಸ್ಪರ್ಧೆ, ಶಾಲಾ ಮಕ್ಕಳಿಗೆ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು. ಸುಮಾರು ೪-೫ ಸಾವಿರ ಜನ ಸೇರುವ ನಿರೀಕ್ಷೆಯಿದ್ದು, ವ್ಯವಸ್ಥಿತ ನಿರ್ವಹಣೆ ಹಿನ್ನೆಲೆಯಲ್ಲಿ ಶಾಸಕ ವಸಂತ ಬಂಗೇರ ಗೌರವಾಧ್ಯಕ್ಷರಾಗಿರುವ ಸಂಘಟನ ಸಮಿತಿಯನ್ನು ರಚಿಸಲಾಗಿದೆ. ೧೫ ವಿವಿಧ ಉಪಸಮಿತಿಗಳು ಭರದ ಸಿದ್ಧತೆ ನಡೆಸುತ್ತಿದ್ದಾರೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ದಿವ ಕೊಕ್ಕಡ, ಸಮಿತಿ ಕಾರ್ಯಾಧ್ಯಕ್ಷ ಮಹಮ್ಮದ್ ಹಾರೂನ್ ಬಜಿಲ, ಪ್ರಧಾನ ಕಾರ‍್ಯದರ್ಶಿ ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ತಚ್ಚಮೆ, ತಾ.ಪಂ ಸದಸ್ಯ ಪ್ರವೀಣ್ ಗೌಡ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.