ನಾಳ ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ‘ಕ್ಷೀರ ಗಂಗಾ’ ಉದ್ಘಾಟನೆ ಹೈನುಗಾರಿಕೆಯಿಂದ ಜೀವನಕ್ಕೆ ಸಂಸ್ಕಾರ : ರವಿರಾಜ ಹೆಗ್ಡೆ

Naala halu uthpadakara sanga 1 copy

Naala halu uthpadakara sanga copy

  ನಾಳ: ಹಳ್ಳಿಗಳಲ್ಲಿ ಹೈನುಗಾರಿಕೆಯಿಂದ ಜನರು ಸ್ವಾವಲಂಬಿಗಳಾಗಿದ್ದು, ಈ ಕೃಷಿಯಿಂದ ಜನರ ಜೀವನಕ್ಕೆ ಸಂಸ್ಕಾರ ದೊರೆಯುತ್ತದೆ, ಜೊತೆಗೆ ಮನಸ್ಸಿಗೆ ಸಂತೋಷವನ್ನು ಕೊಡುತ್ತದೆ ಎಂದು ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದರು.
ಅವರು ನ.7ರಂದು ನಾಳ ಹಾಲು ಉತ್ಪಾದಕರ ಸಹಕಾರ ಸಂಘ ಇದರ ವತಿಯಿಂದ ಸುಮಾರು 15 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಸಂಘದ ನೂತನ ಕಟ್ಟಡ ಕ್ಷೀರ ಗಂಗಾಇದರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಹೈನುಗಾರಿಕೆ ಇಂದು ಲಾಭದಾಯಕ ಕೃಷಿಯಾಗಿದೆ. ಪೇಟೆ-ಪಟ್ಟಣಗಳಲ್ಲಿ ಜನರು ತಮ್ಮ ಆರೋಗ್ಯ ಕಾಪಾಡಲು ಬೆಳಗ್ಗೆ ಐದು ಗಂಟೆಗೆ ಎದ್ದು ವಾಕಿಂಗ್‌ಗೆ ಹೋಗುತ್ತಾರೆ. ಆದರೆ ಹಳ್ಳಿಯಲ್ಲಿ ಹೈನುಗಾರಿಗೆ ವಾಕಿಂಗ್ ಅಗತ್ಯವಿಲ್ಲ, ಬೆಳಗ್ಗೆ ಬೇಗನೆ ಎದ್ದು, ಹಟ್ಟಿಯಲ್ಲಿ ಬೇಕಾದಷ್ಟು ಕೆಲಸವಿದೆ. ನಿಗದಿತ ಸಮಯಕ್ಕೆ ಸರಿಯಾಗಿ ಎಲ್ಲಾ ಕೆಲಸಗಳನ್ನು ಮಾಡಬೇಕಾಗುತ್ತದೆ. ಇದರಿಂದ ನಮ್ಮ ಜೀವನಕ್ಕೆ ಹೈನುಗಾರಿಕೆ ಸಂಸ್ಕಾರವನ್ನು ಕೊಡುತ್ತದೆ ಎಂದು ತಿಳಿಸಿದರು.
ನಾಳ ಹಾಲು ಉತ್ಪಾದಕರ ಸಂಘದಲ್ಲಿ 800 ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಈ ಸಂಘ ೮ ಸೆಂಟ್ಸ್ ಜಾಗ ಖರೀದಿಸಿ ಈಗ ನೂತನ ಕಟ್ಟಡ ನಿರ್ಮಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನುದಾನದಿಂದ ಸ್ವಂತ ಕಟ್ಟಡ ಕಟ್ಟಿದ ಅನೇಕ ಸಂಘಗಳಿವೆ, ಈಗ ಧರ್ಮಸ್ಥಳ, ಒಕ್ಕೂಟ ಹಾಗೂ ಮಹಾಮಂಡಲ ಸಹಕಾರ ನೀಡುತ್ತಿದೆ. ಜಿಲ್ಲೆಯಲ್ಲಿ 695 ಹಾಲು ಉತ್ಪಾದಕ ಸಹಕಾರಿ ಸಂಘಗಳಿದ್ದು, ಇದರಲ್ಲಿ 409 ಸಂಘಗಳು ಸ್ವಂತ ಕಟ್ಟಡ ಹೊಂದಿದೆ ಬೆಳ್ತಂಗಡಿ ತಾಲೂಕಿನಲ್ಲಿ ಇರುವ 76 ಸಹಕಾರಿ ಸಂಘಗಳಲ್ಲಿ ನಾಳ ಸೇರಿ ಈಗ 46 ಸಂಘಗಳು ಸ್ವಂತ ಕಟ್ಟಡ ಹೊಂದಿದಂತಾಗಿದೆ ಎಂದರು.
ಅಡಿಕೆ ಸೇರಿದಂತೆ ಇತರ ವಾಣಿಜ್ಯ ಬೆಳೆಗಳಿಗೆ ನಿರ್ದಿಷ್ಟ ಬೆಲೆ ಸ್ಥೀರಿಕರಣವಿಲ್ಲ, ಆದರೆ ಹಾಲಿಗೆ ನಿರ್ದಿಷ್ಟ ಬೆಲೆ ಯಾವಾಗಲೂ ಇರುತ್ತದೆ. ಸಂಘದಲ್ಲಿ ಗುಣಮಟ್ಟದ ಎಷ್ಟು ಬೇಕಾದರೂ ಹಾಲು ಖರೀದಿಸುತ್ತೇವೆ. ಇದಕ್ಕೆ ಬೇಕಾದ ಮಾರುಕಟ್ಟೆಯನ್ನು ಒಕ್ಕೂಟ ಮಾಡುತ್ತದೆ ಜೊತೆಗೆ ಹೈನುಗಾರಿಕೆಗೆ ಸರಕಾರವೂ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದ.ಕ. ಹಾಲು ಒಕ್ಕೂಟದ ನಿರ್ದೇಶಕ ಬಿ. ನಿರಂಜನ್ ಅವರು ಮಾತನಾಡಿ, ನಾಳದಂತಹ ಗ್ರಾಮೀಣ ಪ್ರದೇಶದಲ್ಲಿ ಸಂಘವನ್ನು ಸ್ಥಾಪಿಸಿ ಸುಂದರ ನೂತನ ಕಟ್ಟಡವನ್ನು ನಿರ್ಮಿಸಿದ ಸಂಘದ ಅಧ್ಯಕ್ಷ ಹಾಗೂ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದರು. ಧರ್ಮಸ್ಥಳ ಸಮುದಾಯ ಅಭಿವೃದ್ಧಿ ಯೋಜನೆಯ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಅವರು ಮಾತನಾಡಿ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ಯೋಜನೆ ಮೂಲಕ ೬೯ ಕಟ್ಟಡಗಳಿಗೆ ರೂ.೯ಲಕ್ಷ ಅನುದಾನ ನೀಡಲಾಗಿದ್ದು, ನಾಳದ ಈ ಕಟ್ಟಡಕ್ಕೂ ದೊಡ್ಡ ಮೊತ್ತವನ್ನು ನೀಡಲಾಗುವುದು ಎಂದು ತಿಳಿಸಿದರು. ಇಂದು ಮಳೆ ಕಡಿಮೆಯಾಗಿ ನೀರಿನ ಸಮಸ್ಯೆ ನಮ್ಮನ್ನು ಕಾಡಲಿದೆ. ಅದಕ್ಕಾಗಿ ನೀರಿನ ಉಳಿತಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಕೊಳವೆ ಬಾವಿ ಕೊರೆಯುವುದನ್ನು ಕಡಿಮೆ ಮಾಡಬೇಕು, ನೀರಿನ ಸಂರಕ್ಷಣೆಗೆ ಎಲ್ಲರಲ್ಲಿಯೂ ಅರಿವು ಮೂಡಿಸಬೇಕು ಎಂದರು. ದ.ಕ. ಹಾಲು ಒಕ್ಕೂಟದ ನಿರ್ದೇಶಕ ಪದ್ಮನಾಭ ಅರ್ಕಜೆ ಮಾತನಾಡಿ ಬೆಳ್ತಂಗಡಿ ತಾಲೂಕಿನ 76 ಸಂಘಗಳಲ್ಲಿ ಗುಣಮಟ್ಟದ ಹಾಲು ಸಂಗ್ರಹವಾಗುತ್ತಿದ್ದು, ಲಾಭದಲ್ಲಿ ಮುನ್ನಡೆಯುತ್ತಿದೆ ಇದಕ್ಕೆ ಸಂಘದ ಪ್ರಜ್ಞಾವಂತ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ಹಾಗೂ ಸದಸ್ಯರು ಕಾರಣ ಎಂದು ಅಭಿಪ್ರಾಯ ಪಟ್ಟರು. ಒಕ್ಕೂಟದ ಇನ್ನೋರ್ವ ನಿರ್ದೇಶಕ ನಾರಾಯಣ ಪ್ರಕಾಶ್ ಮಾತನಾಡಿ ಒಳ್ಳೆಯ ಆದಾಯ ಕೊಡುವ ಉಪಕೃಷಿ ಹೈನುಗಾರಿಕೆಯಾಗಿದ್ದು, ಈ ಕೃಷಿಯ ಮೂಲಕ ಸಾವಯವ ಕೃಷಿಯನ್ನು ಮಾಡುವ ಮನೋಭಾವ ರೈತರಲ್ಲಿ ಬೆಳೆಯಬೇಕು ಎಂದು ಸಲಹೆಯಿತ್ತರು. ಒಕ್ಕೂಟ ನಿರ್ವಾಹಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ ಅವರು ಸರಕಾರದಿಂದ ಹೈನುಗಾರರಿಗೆ ಬರಬೇಕಾದ ಪ್ರೋತ್ಸಾಹ ಧನ ಕಳೆದ ಜುಲೈ ತಿಂಗಳ ತನಕ ಬಂದಿದೆ. ಹೈನುಗಾರರು ತಮ್ಮ ಆಧಾರ್ ನಂಬ್ರವನ್ನು ಬ್ಯಾಂಕ್ ಪಾಸ್ ಪುಸ್ತಕಕ್ಕೆ ಲಿಂಕ್ ಮಾಡಬೇಕು. ಉಳಿದ ಎಲ್ಲಾ ತಿಂಗಳ ಹಣ ಬ್ಯಾಂಕ್‌ಗೆ ಬರಲಿದೆ ಎಂದು ತಿಳಿಸಿದರು. ಜಿ.ಪಂ. ಸದಸ್ಯೆ ಶ್ರೀಮತಿ ಮಮತಾ ಎಂ. ಶೆಟ್ಟಿ ಅವರು ಮಾತನಾಡಿ ತಾಲೂಕಿನ ಎಲ್ಲಾ ಸಂಘಗಳು ಒಕ್ಕೂಟಕ್ಕೆ ಗುಣಮಟ್ಟದ ಹಾಲು ಪೂರೈಸುವ ಸಂಘಗಳಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಎಂ.ಕೆ. ಗಣಪತಿ ಭಟ್ ಅವರು ಸಂಘ ಆರಂಭದ ದಿನಗಳ ಬಗ್ಗೆ ಮಾತನಾಡಿ, ಸಂಘದ ಅಭಿವೃದ್ಧಿಗೆ ಕಾರಣರಾದ ಹಿಂದಿನ ಆಡಳಿತ ಮಂಡಳಿಯವರಿಗೆ, ಎಲ್ಲಾ ನಿರ್ದೇಶಕರು, ಹಾಗೂ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗಣಪತಿ ಭಟ್, ಹಿಂದೆ ಕಟ್ಟಡ ನೀಡಿದ್ದ ಕೆ. ಮಹಮ್ಮದಾಲಿ, ಗುತ್ತಿಗೆದಾರ ರಾಮಣ್ಣ ಕೋಲಾಜೆ ಇವರನ್ನು ಸನ್ಮಾನಿಸಲಾಯಿತು. ಮಾಜಿ ನಿರ್ದೇಶಕರಾದ ಸುಕುಮಾರ್ ಭಟ್, ಇಸ್ಮಾಯಿಲ್, ವಿಲಿಯಂ ಫೆರ್ನಾಂ ಡೀಸ್, ಶೋಭಾ, ರಾಜೀವ ಗೌಡ, ದಾಸಪ್ಪ ಗೌಡ, ಕೃಷ್ಣ ನಾಯ್ಕ್ ಇವರನ್ನು ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ಸುಧಾಕರ ಮಜಲು, ನಿರ್ದೇಶಕರಾದ ಕೇಶವ ಪೂಜಾರಿ, ದೇವಕಿ, ವಿಠಲ ಗೌಡ, ಉಮೇಶ್ ಶೆಟ್ಟಿ, ಶ್ರೀಧರ ಪೂಜಾರಿ, ಬೊಮ್ಮಣ್ಣ ಗೌಡ, ಉಮೇಶ್ ಟಿ, ರೇಖಾ ಇವರನ್ನು ಅಭಿನಂದಿಸ ಲಾಯಿತು. ಸಂಘದ ವತಿಯಿಂದ ಆಯ್ದ ಸದಸ್ಯರಿಗೆ ಪಾತ್ರೆಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.
ವೇದಿಕೆಯಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿತ್ಯಾನಂದ ಭಕ್ತ, ಕಳಿಯ ಗ್ರಾ.ಪಂ. ಅಧ್ಯಕ್ಷ ಶರತ್‌ಕುಮಾರ್ ಶೆಟ್ಟಿ, ತಾ.ಪಂ. ಸದಸ್ಯ ಪ್ರವೀಣ್ ಕುಮಾರ್, ಒಕ್ಕೂಟದ ವಿಸ್ತರಣಾಧಿಕಾರಿ ಡಾ| ರಾಮಕೃಷ್ಣ ಭಟ್, ಪಶು ವೈದ್ಯಾಧಿಕಾರಿ ಡಾ| ದಿನೇಶ್ ಸರಳಾಯ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಸುಧಾರಕ ಮಜಲು ಸ್ವಾಗತಿಸಿದರು. ಕಾರ್ಯದರ್ಶಿ ಸೌಮ್ಯ ಎಂ. ವರದಿ ವಾಚಿಸಿದರು. ನಿರ್ದೇಶಕ ಕೇಶವ ಪೂಜಾರಿ ಸಂದೇಶ ವಾಚಿಸಿದರು. ಸತೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವೆಂಕಪ್ಪ ವಂದಿಸಿದರು. ಸಿಬ್ಬಂದಿಗಳಾದ ಹಾಲು ಪರೀಕ್ಷಕ ವೆಂಕಪ್ಪ ಪೂಜಾರಿ, ಸಹಾಯಕಿ ಮಾಲತಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.