ಸದ್ದಿಲ್ಲದೆ ಎದ್ದು ನಿಲ್ಲುತ್ತಿದೆ ಕೊಲ್ಪಾಡಿ ಶ್ರೀಸುಬ್ರಹ್ಮಣ್ಯ ದೇವಸ್ಥಾನ, 2017 ರ ಫೆಬ್ರವರಿಯಲ್ಲಿ ಬ್ರಹ್ಮಕಲಶೋತ್ಸವ ತಾಲೂಕಿನಲ್ಲೆಲ್ಲೂ ಇಲ್ಲದ ಅಪೂರ್ವ ಶಿಲ್ಪ ಕಲೆ ಮತ್ತು ಮರದ ಕೆತ್ತನೆಗೆ ಸಾಕ್ಷಿಯಾಗಲಿದೆ ಈ ದೇವಾಲಯ

Advt_NewsUnder_1
Advt_NewsUnder_1
Advt_NewsUnder_1

 1 copy 2 copy 3 copy 4 copy 7 copy 8 copy 10 copy 13 copy

ಬೆಳ್ತಂಗಡಿ ತಾಲೂಕಿನ ಪುಟ್ಟ ಗ್ರಾಮವಾದ ಬೆಳಾಲಿನ ಕೊಲ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಹಳ್ಳಿ ಮೂಲೆಯಲ್ಲಿ ಹೊರ ಪ್ರಪಂಚದ ಸಂಪರ್ಕಕ್ಕೂ ಬಾರದೆ ಸದ್ದಿಲ್ಲದೆ ಎದ್ದು ನಿಲ್ಲುತ್ತಿದೆ. ದೈವೀಚ್ಛೆ, ಆಡಳಿತ ಮಂಡಳಿಯ ತೀರ್ಮಾನ ಹಾಗೂ ಭಕ್ತರ ಸದಭಿಪ್ರಾಯದಂತೆ ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಫೆಬ್ರವರಿ 1 ರಿಂದ 9ರ ವರೆಗೆ ಶ್ರೀ ಕ್ಷೇತ್ರದಲ್ಲಿ ಶ್ರೀ ಸ್ವಾಮಿಯ ಸನ್ನಿದಾನ ನವೀಕರಣಗೊಂಡು ಅಷ್ಟಬಂಧ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ.
ಈ ದೇವಾಲಯದ ವಿಶೇಷವೆಂದರೆ ಅಪೂರ್ವವಾದ ಮರದ ಕೆತ್ತನೆ ಮತ್ತು ಶಿಲೆಯ ಕಾಮಗಾರಿಯ ಮೂಲಕ ತಾಲೂಕಿನ ಯಾವುದೇ ದೇವಸ್ಥಾನಗಳಲ್ಲೂ ಇಲ್ಲದ ರೀತಿಯ ಅತ್ಯಪೂರ್ವ ವೈಭವದ ಶಿಲ್ಪಕಲಾ ಸಾಮ್ರಾಜ್ಯವೇ ಈ ದೇವಾಲಯದಲ್ಲಿ ನಿರ್ಮಾಣಗೊಳ್ಳುತ್ತಿದ್ದು ಅಂತಿಮ ಸ್ಪರ್ಶದತ್ತ ಸಾಗುತ್ತಿದೆ. ಕಣ್ಮನ ಸೆಳೆಯುವ ಮರದ ಕೆತ್ತನೆಯು ಕಲಾವಿದನ ಅದ್ಭುತ ಕೈಚಳಕವನ್ನು ಪ್ರಸ್ತುತಪಡಿಸುತ್ತಿದ್ದರೆ, ಶ್ರೀ ಸುಬ್ರಹ್ಮಣ್ಯೇಶ್ವರ ದೇವರನ್ನು ವೈಭವದ ಉತ್ತುಂಗಕ್ಕೇರಿಸಲಿದೆ ಎಂದರೆ ಖಂಡಿತ ತಪ್ಪಲ್ಲ.
ಜೀರ್ಣೋದ್ಧಾರದ ಕಾಮಗಾರಿ ಪ್ರಾರಂಭವಾಗಿ 9 ವರ್ಷ :
1992 ರಲ್ಲಿ ಮಧೂರು ರಂಗನಾರಾಯಣ ಭಟ್, ನೀಲೇಶ್ವರ ಕೃಷ್ಣ ನಂಬೂದಿರಿ ಅವರಿಂದ ಅಷ್ಟಮಂಗಳ ಪ್ರಶ್ನೆ ಇರಿಸಿ ತೀರ್ಥ ಮಂಟಪ ರಚನೆಗೆ ಮುಂದಡಿಯಿಡಲಾಯಿತು. 1995 ರಲ್ಲಿ ಅದು ಮೇಲ್ಚಾವಣಿವರೆಗೆ ಬಂದು ನಿಂತುಹೋಗಿತ್ತು. ಶ್ರೀ ದೇವರ ಸಂಕಲ್ಪದಂತೆ 2007 ನೇ ಏಪ್ರಿಲ್‌ನಲ್ಲಿ ಶ್ರೀ ಕ್ಷೇತ್ರದಲ್ಲಿ ಮತ್ತೆ ಜೀರ್ಣೋದ್ಧಾರ ಕಾರ್ಯಗಳು ಪ್ರಾರಂಭಗೊಂ ಡವು. ಕೆಳಗಿನ ಕೋಲ್ಪಾಡಿ
ಮತ್ತು ಮೇಲಿನ ಕೋಲ್ಪಾಡಿ ಮನೆತನದವರಾದ ಶ್ರೀನಿವಾಸ ಭಟ್ ಮತ್ತು ಸೂರ್ಯನಾರಾಯಣ ಶರ್ಮ (ಮೇಲುಸ್ತುವಾರಿಯಲ್ಲಿ) ರಾಜಾರಾಮ ಶರ್ಮ ಅವರ ಪ್ರಮುಖ ನೇತೃತ್ವ ಮತ್ತು ಅವಿರತ ಶ್ರಮವಹಿಸುತ್ತಿದ್ದಾರೆ. ಎಸ್ ಲಕ್ಷ್ಮಣ ಗೌಡ (ಕಾರ್ಯದರ್ಶಿ), ಜಯಂತ ಗೌಡ (ಕೋಶಾಧಿಕಾರಿ) ಅವರನ್ನೊಳಗೊಂಡ ಸಮಿತಿ ರಚಿಸಲಾಗಿರುತ್ತದೆ. ಬಳಿಕ ನಿಧಾನಗತಿಯಿಂದ ಸಾಗುತ್ತಿದ್ದ ಕಾಮಗಾರಿಗೆ 2013 ರಲ್ಲಿ ಭಾರೀ ವೇಗ ದೊರೆತು ಇದೀಗ ಅಂತಿಮ ಸ್ಪರ್ಷದತ್ತ ಸಾಗುತ್ತಿದೆ.
ಪ್ರಾರಂಭದಲ್ಲಿ 75 ಲಕ್ಷ ರೂ. ಗಳ ಯೋಜನೆ ಉದ್ದೇಶಿಸಲಾಗಿದ್ದರೂ ಇದೀಗ ಗರ್ಭಗುಡಿ, ತೀರ್ಥ ಮಂಟಪ, ಸುತ್ತುಪೌಳಿ, ತೀರ್ಥ ಬಾವಿ ಅಭಿವೃದ್ಧಿ, ದೈವಗಳ ನೂತನ ತಾಣ ನಿರ್ಮಾಣ, ಅರ್ಚಕರ ನಿವಾಸ, ಅನ್ನಛತ್ರ ಇತ್ಯಾದಿಯಾಗಿ ಸುಮಾರು 1.5 ಕೋಟಿ ರೂ. ಮಿಕ್ಕಿದ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಸಾರ್ವಜನಿಕರಿಂದ 4ನೇ ಒಂದಂಶದಷ್ಟು ಮಾತ್ರ ದೇಣಿಗೆ ಸಂಗ್ರಹವಾಗಿದ್ದು ಉಳಿಕೆ ಅಂದರೆ ಸುಮಾರು 70 ಲಕ್ಷಕ್ಕೂ ಅಧಿಕ ಮೊತ್ತವನ್ನು ಈಗಾಗಲೇ ಕೋಲ್ಪಾಡಿ ಕುಟುಂಬ ಭರಿಸಿದೆ. ದೇವಾಲಯಕ್ಕೆ ಬೇಕಾಗಿರುವ ಮರಮಟ್ಟುಗಳು ಕೊಲ್ಪಾಡಿ ಜಾಗದಿಂದಲೇ ಬಳಸಿಕೊಳ್ಳಲಾಗಿದ್ದು ಅದಕ್ಕೆ ತಗಲುವ ಲಕ್ಷಾಂತರ ರೂ. ವೆಚ್ಚವನ್ನು ಉಳಿಸಲಾಗಿದೆ.
ಮರದ ಕೆತ್ತನೆ ಕೆಲಸದಲ್ಲಿ ಶಶಿಧರ ಆಚಾರ್ಯ, ವಸಂತ ಆಚಾರ್ಯ ತಂಡದಿಂದ ಕೈ ಚಲಕ :
ದೇವಸ್ಥಾನದ ಹೊರ ಚಾವಡಿಯ ಮೇಲ್ಮೈಗೆ ಅಳವಡಿಕೆಗೆ ನಿರ್ಮಿಸಲಾಗಿರುವ ಮರದ ಕೆತ್ತನೆ ನಿಮ್ಮನ್ನು ಅತ್ಯಂತ ಮೂಕಪ್ರೇಕ್ಷಕರಾಗಿ ಆಹ್ವಾನಿಸುತ್ತದೆ. ಅಲ್ಲಿಂದ ದೇವಾಲಯದ ಒಳಪ್ರವೇಶಿಸುತ್ತಿರುವಂತೆಯೇ ಮೇಲಕ್ಕೆ ನೋಡಿದರೆ ಸಪರಿವಾರ ನವಗ್ರಹಗಳನ್ನೊಳಗೊಂಡ ಸುಂದರ ಕೆತ್ತನೆ ಅತ್ಯಾಕರ್ಷಕ ಮತ್ತು ಅಪೂರ್ವವಾಗಿ ಮೂಡಿಬಂದಿದೆ. ಇದರ ಪ್ರತಿ ಹಂತದ ಕೆತ್ತನೆಯಲ್ಲೂ ಸೂಕ್ಷ್ಮವಾದ ಕಲಾ ಸಂವೇದನೆ ಅಡಕವಾಗಿದೆ. ಈಟಿ, ಬಿಲ್ಲು- ಬಾಣ, ಕೊಡಲಿ, ತ್ರಿಶೂಲ, ಬರ್ಚಿ, ಕುಡುಗೋಲು, ಸುತ್ತಿಗೆ ಇತ್ಯಾದಿ ಎಲ್ಲಾ ರೀತಿಯ ಆಯುಧಗಳ ಚಿತ್ರವನ್ನು ಇಲ್ಲಿ ಕೆತ್ತಲಾಗಿದೆ. ಹಲಸಿನ ಮರದ ಪ್ರಕೃತಿದತ್ತವಾದ ವೈವಿಧ್ಯಮಯ ಬಣ್ಣದ ಚಿತ್ತಾರ ಇಲ್ಲಿ ಮೂಡಿದೆ. ಕೆತ್ತಿದ ಉಳಿಕೆ ಮರದಲ್ಲಿ ದೇವಳದ ಕಚೇರಿ, ಅರ್ಚಕರ ಕೊಠಡಿ, ಇತ್ಯಾದಿಗಳ ಬಾಗಿಲುಗಳನ್ನು ಅಷ್ಟೇ ನಾಜೂಕಿನ ಕೆತ್ತನೆಗಳ ಮೂಲಕ ನಿರ್ಮಿಲಾಗಿದ್ದು ಮರದ ದುರ್ವ್ಯಯ ತಪ್ಪಿಸಲಾಗಿದೆ.
ಅಡುಗೆ ಕೋಣೆಗೆ ಬಾಗಿಲಿನಲ್ಲಿ ಅಡುಗೆ ಸಾಮಾಗ್ರಿಗಳದ್ದೇ ಚಿತ್ತಾರ :
ದೇವರ ನೈವೇದ್ಯ ತಯಾರಿಸುವ ಕೊಠಡಿಯ ಬಾಗಿಲನ್ನೂ ಉಳಿಕೆ ಮರದಿಂದಲೇ ಮಾಡಲಾಗಿದೆ. ಇದರ ಪ್ರತಿ ಪದರಗಳಲ್ಲೂ ಅಡುಗೆ ಮಾಡಲು, ಉಣ್ಣಲು ಬಳಕೆಯಾಗುವ ಸಾಮಾಗ್ರಿಗಳು, ಅಂದರೆ ಗೆರಟೆ-ಸೌಟು, ಬಾಳೆ ಎಲೆ, ದಿಂಬಿಗೆ, ಬಕೀಟು, ಲೋಟ, ಹೆರೆಮನೆ ಮತ್ತು ತೆಂಗಿನ ಕಾಯಿಯ ಎರಡು ಭಾಗಗಳು, ಕಾವಲಿ ಸಟ್ಟುಗ ಇತ್ಯಾದಿ ಚಿತ್ರಗಳನ್ನು ಅತ್ಯದ್ಭುತವಾಗಿ ಕೆತ್ತಲಾಗಿದೆ.
ದೇವಾಲಯದ ಮುಂದಿನ ಬಾಗಿಲಿನ ಮರದ ಕೆತ್ತನೆಯ ಶೈಲಿ, ಅಲ್ಲಿ ಸುಂದರವಾಗಿ ಮೂಡಿಬಂದಿರುವ ಗಂಡಬೇರುಂಡ, ಹಂಸ, ಮುಂಗಾಲು ಮತ್ತು ಸೊಂಡಿಲೆತ್ತಿ ನಿಂತು ಸ್ವಾಗತಿಸುವ ಶೈಲಿಯಲ್ಲಿ ನಿಂತಿರುವ ಆನೆಯ ಚಿತ್ರದ ಕೆತ್ತನೆ ನೋಡಲೇಬೇಕಾದುದು ಅನ್ನಿಸುತ್ತಿದೆ. ಹೊರ ಚಾವಡಿಯ ಮರದ ಕೆತ್ತನೆಯಲ್ಲಿ ಇನ್ನೊಂದು ವಿಶೇಷತೆ ಎಂದರೆ ಒಂದೇ ಮರದ ತುಂಡಿನಲ್ಲಿ ಸರಪಳಿ ಮಾದರಿಯನ್ನು ಮರದಿಂದಲೇ ನಾಜೂಕಾಗಿ ಕೆತ್ತಲಾಗಿದೆ. ನಾಲ್ಕು ಆನೆಯ ಮೊಗವನ್ನೂ ಕೆತ್ತಲಾಗಿದ್ದು ಅದುಎತ್ತಿ ಹಿಡಿದಿರುವ ಸೊಂಡಿಲಿಗೆ ಈ ಚೈನನ್ನು ಜೋಡಿಸಿ ಸ್ವಾಗತ ಕೋರುವ ರೀತಿ ಮಾಡುವ ಕಲ್ಪನೆ ಹೊಂದಲಾಗಿದೆ.
ಗರ್ಭಗುಡಿಯ ಮೇಲಿನ ಬಾಗಿಲಿನಂತಹಾ ರೂಪದಲ್ಲೂ ಅಪೂರ್ವ ಕೆತ್ತನೆಗಳು ಮೂಡಿಬಂದಿವೆ.
ಗರ್ಭಗುಡಿಯ ಮೇಲಿನ ತಾಮ್ರದ ಛಾವಣಿಗೆ ವರ್ಣದ ಹೋಲಿಕೆಗೆ ಸರಿಯಾಗುವಂತೆ ನವಿಲು ಮತ್ತು ನಾಲ್ಕು ಮೂಲೆಗಳಲ್ಲಿ ಸಿಂಹದ ರೂಪವನ್ನು ಮರದಿಂದ ಕೆತ್ತಲಾಗಿದ್ದು ಅತ್ಯಾಕರ್ಷಕವಾಗಿರುವ ಇವುಗಳು ದೇವಾಲಯದ ಸೌಂದರ್ಯವನ್ನು ಹೆಚ್ಚಿಸಿದೆ.
ಶಿಲೆಯಲ್ಲೂ ಕೌಶಲ್ಯ : ಗರ್ಭಗುಡಿ ಪೂರ್ಣವಾಗಿ ಶಿಲಾಮಯವಾಗಿದ್ದು ಇಲ್ಲೂ ಕೂಡ ನೈಪುಣ್ಯತೆಯ ಕೆಲಸ ನಡೆದಿದೆ. ಕಲ್ಲಿನ ಎಲ್ಲಾ ಜಾಯಿಂಟ್‌ಗಳನ್ನೂ ಗೊತ್ತಾಗದ ರೀತಿಯಲ್ಲಿ ಸಂಧಿಸುವಂತೆ ಮಾಡಲಾಗಿದ್ದು ಅಳತೆ ಮತ್ತು ಲೆಕ್ಕಾಚಾರದಲ್ಲಿ ಒಂದಿಷ್ಟೂ ಒಪ್ಪಂದ ಮಾಡಿಕೊಳ್ಳದೆ ಉತ್ತಮ ರೀತಿಯಲ್ಲಿ ನಿರೂಪಿಸಲಾಗಿದೆ.
ಮರದ ಕೆತ್ತನೆಗಳನ್ನು ಶಶಿಧರ ಆಚಾರ್ಯ ಮತ್ತು ಅವರ ಅಣ್ಣ ವಸಂತ ಆಚಾರ್ಯ ಹಾಗೂ ಬಳಗ ಮಾಡಿದ್ದರೆ, ತಾಮ್ರದ ಹೊದಿಕೆ ಇರುವ ಮೇಲ್ಛಾವಣಿಯ ಕೆಲಸವನ್ನು ದಿವಾಕರ ಆಚಾರ್ಯ ಕೊಯ್ಯೂರು ಮಾಡಿದ್ದಾರೆ. ಸುತ್ತುಪೌಳಿಯ ಮಾಡಿನ ಕೆಲಸವನ್ನು ಜಿನ್ನಪ್ಪ ಆಚಾರ್ಯ ನಿರ್ವಹಿಸಿದ್ದಾರೆ. ಮೇಸ್ತ್ರಿ ಕೆಲಸವನ್ನು ಪಿಲತ್ತಡಿ ಶೇಖರ ಪೂಜಾರಿ ಮಾಯ ಅವರ ಮುಖಂಡತ್ವದ ತಂಡ ಮಾಡಿದೆ. ಕಾರ್ಕಳದಿಂದ ತಂದಿರುವ ಶಿಲೆಯ ಕೆತ್ತನೆಯ ಕೆಲಸವನ್ನು ಅಶೋಕ್ ಕುಮಾರ್ ಕಾರ್ಕಳ ಅವರು ಮಾಡುತ್ತಿದ್ದಾರೆ.
ಶ್ರೀ ಸುಬ್ರಹ್ಮಣ್ಯನಿಗೆ ನಿತ್ಯ 1 ಕೆ.ಜಿ. ಅಕ್ಕಿಯ ನೈವೇದ್ಯ, ಸಾಸ್ತಾರನಿಗೆ 1 ಪಾವು ಅಕ್ಕಿಯ ನೈವೇದ್ಯ : ಶ್ರೀ ಸನ್ನಿದಾನದಲ್ಲಿ ಕಳೆದ 22 ವರ್ಷಗಳಿಂದ ಶ್ರೀ ದೇವರ ವಿಶೇಷ ಪ್ರೇರಣೆಯೆಂಬಂತೆ ಊರವರೇ ಆಗಿರುವ ಸುಬ್ರಾಯ ನೂರಿತ್ತಾಯ ಅವರು ಅರ್ಚಕರಾಗಿದ್ದು ಪ್ರತೀ ದಿನ ಶ್ರೀ ಸುಬ್ರಹ್ಮಣ್ಯ ದೇವರಿಗೆ 1 ಕೆ.ಜಿ. ಅಕ್ಕಿ ನೈವೇದ್ಯ, ಶ್ರೀಶಾಸ್ತಾರನಿಗೆ 1 ಪಾವು ಅಕ್ಕಿ ನೈವೇದ್ಯ ಮಾಡಿ ಪೂಜೆ ನಡೆಯುತ್ತಿದೆ. ಪಂಚಾಮೃತ, ಹಾಲು ಪಾಯಸ, ಪವಮಾನ ಅಭಿಷೇಕ, ಗಟ್ಟಿ ಪಾಯಸ ಇಲ್ಲಿನ ವಿಶೇಷ ಸೇವೆಗಳು. ಡಿಸೆಂಬರ್ ಕಳೆದು ಜನವರಿಯ ವೇಳೆಯಲ್ಲಿ ಕುಂಭ ಮಾಸದಲ್ಲಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಜಾತ್ರೆಯ ಬಳಿಕ ಈ ಕ್ಷೇತ್ರದಲ್ಲಿ ಜಾತ್ರೆ ನಡೆಯುತ್ತದೆ.
ಗಣಹೋಮ, ಪ್ರತೀ ತಿಂಗಳು ಸಂಕ್ರಾಂತಿ ಕಳೆದ ಮೊದಲ ಮಂಗಳವಾರ ದುರ್ಗಾ ಪೂಜೆ, ರಕ್ಷಸ್ಸು ಪೂಜೆ ನಡೆಯುತ್ತದೆ. ಫೆಬ್ರವರಿ 1 ರಿಂದ 10ರ ಒಳಗಾಗಿ ನೇಮ, ಮಾರಿ ಪೂಜೆ ಆಗಿ ದೇವರ ಜಾತ್ರೆ ನಡೆಯುತ್ತದೆ. ಕ್ಷೇತ್ರದಲ್ಲಿ ಸಮಾರಾಧನೆ ಆಗಿ ರಂಗ ಪೂಜೆ, ಮಧ್ಯಾಹ್ನ ಅನ್ನದಾನವಾಗಿ ನಂತರವೇ ರಂಗ ಪೂಜೆ ನಡೆಯುವಂತದ್ದು ಕ್ಷೇತ್ರದ ವಿಶೇಷತೆಗಳಲ್ಲೊಂದು.
ಪುತ್ರಸಂತಾನ, ಚರ್ಮವ್ಯಾಧಿಗಳಿಗೆ ಪರಿಹಾರ, ಇತ್ಯಾದಿಯಾಗಿ ನಂಬಿದವರ ಅಭೀಷ್ಠೆಗಳನ್ನು ಪೂರೈಸುತ್ತಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಇಲ್ಲಿ ಮೂರ್ತಿ ರೂಪದಲ್ಲಿ ಕಂಡು ಬರುತ್ತಾನೆ. ಎಡಗೈಯ್ಯನ್ನು ಸೊಂಟಕ್ಕೆ ಇಟ್ಟುಕೊಂಡ ರೀತಿ ಮತ್ತು ಬಲಗೈ ಅಭಯ ನೀಡುವ ರೀತಿಯಲ್ಲಿ ಶ್ರೀ ಸ್ವಾಮಿಯ ಮೂರ್ತಿ ಇದೆ.
ದಕ್ಷಿಣ ಆಗ್ನೇಯದಲ್ಲಿ ಕಲ್ಕುಡ, ಪಶ್ಚಿಮಕ್ಕೆ ಸಾಸ್ತಾರ, ವನದುರ್ಗೆ, ವಾಯುವ್ಯದಲ್ಲಿ ಶಿರಾಡಿ ದೈವ, ಪರಿವಾರ ದೈವಗಳಿದ್ದು ಅವುಗಳ ಗುಡಿಗಳನ್ನು ದೇವಳದ ಈ ಹಿಂದಿನ ಗರ್ಭಗುಡಿಯ ಹಳೆಯ ಶಿಲೆಗಳ ಮೂಲಕ ನಿರ್ಮಿಸಲು ಆಲೋಚಿಲಾಗಿದ್ದು ಕೆಲಸ ಪ್ರಗತಿಯಲ್ಲಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಹಿಂದೊಂದು ಬಾರಿ 1.5 ಲಕ್ಷ ರೂ. ದೇಣಿಗೆ ನೀಡಲಾಗಿದ್ದು ಅದನ್ನು ತಾಮ್ರದ ಹೊದಿಕೆಗೆ ಬಳಕೆ ಮಾಡಿಕೊಳ್ಳಲಾಗಿದೆ.
ಅಪಚಾರ, ಅಶುದ್ಧ ಅಥವಾ ದೇವರ ಮೂದಲಿಕೆ ಇತ್ಯಾದಿ ಏನಾದರೂ ಸಂಭವಿಸಿದಲ್ಲಿ ದೇವರ ಅವಕೃಪೆಯ ಸಂದೇಶವು ಶೀಘ್ರವೇ ಎಚ್ಚರಿಕೆ ನೀಡುವ ರೀತಿಯ ವಿಶೇಷ ಸಾನಿಧ್ಯ ಇಲ್ಲಿದೆ. ಕಾಳಿಂಗ ಸರ್ಪ ಅಥವಾ ನಾಗರ ಹಾವುಗಳು ಪ್ರತ್ಯಕ್ಷವಾಗಿ ಆಗಿರುವ ಲೋಪ ಸರಿಯಾದ ಬಳಿಕವೇ ಅವುಗಳು ಅಪ್ರತ್ಯಕ್ಷವಾಗಿರುವ ಉದಾಹರಣೆಗಳು ಇವೆ. ಇಲ್ಲಿನ ಶ್ರೀ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಟಾಪಿಸಲಾಗಿದೆಯಾದರೂ ವರ್ಷಾವಧಿ ಜಾತ್ರೆ, ಭೂತಬಲಿ, ದರ್ಶನಬಲಿ ಇತ್ಯಾದಿ. ಸಂಪ್ರದಾಯಗಳು ಮೊಟಕಾಗದೇ ನಡೆಯುತ್ತಲೇ ಬರುತ್ತಿರುವುದು ಕ್ಷೇತ್ರದ ಇನ್ನೊಂದು ವಿಶೇಷತೆಯಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.