ಬಿ.ಸಿ.ಎಂ ಇಲಾಖಾ ಉಜಿರೆ ಹಾಸ್ಟೇಲಿನ ಜಾಗ ಖಾಸಗಿ ವ್ಯಕ್ತಿಯಿಂದ ಅತಿಕ್ರಮಣ : ರೂ.43 ಲಕ್ಷಕ್ಕೆ ಮಾರಾಟ

Advt_NewsUnder_1
Advt_NewsUnder_1
Advt_NewsUnder_1

KDP copyತ್ರೈಮಾಸಿಕ ಕೆಡಿಪಿ ಸಭೆ

ಬೆಳ್ತಂಗಡಿ : ಬಿ.ಸಿ.ಎಂ. ಇಲಾಖೆಗೆ ಸೇರಿದ ಉಜಿರೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದ ಜಾಗವನ್ನು ಖಾಸಗಿ ವ್ಯಕ್ತಿಯೋರ್ವರು ಅತಿಕ್ರಮಣ ಮಾಡಿ, ಅದನ್ನು ರೂ.43 ಲಕ್ಷಕ್ಕೆ ಮಾರಾಟ, ತಾಲೂಕಿಗೆ ಮಂಜೂರಾದ ೫ ನೂತನ ಗ್ರಾ.ಪಂ.ಗಳ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಂದರೂ ಜಾಗದ ಸಮಸ್ಯೆ, ಎಂಡೋ ಸಲ್ಫಾನ್ ಹೆಸರಿನಲ್ಲಿ ವಾಹನ ಅಪಘಾತದ ಗಾಯಾಳು ಫಲಾನುಭವಿಗಳಾಗಿ ಆರೋಗ್ಯ ಕಾರ್ಡ್ ಪಡೆದು ಸೌಲಭ್ಯ ಪಡೆಯುತ್ತಿರುವುದು, ಬಂದಾರು ಗ್ರಾ.ಪಂ.ದಲ್ಲಿ ಸದಸ್ಯರ ಗಮನಕ್ಕೆ ಬಾರದೆ ಖರ್ಚು ಮಾಡಿದ ಅನುದಾನ ವಸೂಲಿ, ಗುರುವಾಯನಕೆರೆ ಪೇಟೆಯಲ್ಲಿ ಪಾರ್ಕಿಂಗ್ ಸುವ್ಯವಸ್ಥೆ, ಪಡಿತರ ಅಂಗಡಿಗಳಿಗೆ ಪಡಿತರ ಪೂರೈಕೆ ಮಾಡುವಾಗ ಲೋಡ್-ಅನ್‌ಲೋಡ್‌ಗೆ ಹಣ ವಸೂಲಿ ಮೊದಲಾದ ವಿಷಯಗಳು ಅ.26ರಂದು ನಡೆದ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ತೀವ್ರ ಚರ್ಚೆಗೆ ಒಳಗಾಯಿತು.
ಸಭೆಯ ಅಧ್ಯಕ್ಷತೆಯನ್ನು ಶಾಸಕ ಕೆ. ವಸಂತ ಬಂಗೇರ ಅವರು ವಹಿಸಿದ್ದರು. ತಾ.ಪಂ. ಅಧ್ಯಕ್ಷೆ ದಿವ್ಯಾಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ನ.ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್, ತಹಶೀಲ್ದಾರ್ ತಿಪ್ಪೇಸ್ವಾಮಿ, ಕಾರ್ಯನಿರ್ವಾಹಣಾಧಿಕಾರಿ ಸಿ.ಆರ್. ನರೇಂದ್ರ, ನಾಮನಿರ್ದೇಶನ ಸದಸ್ಯರಾದ ಸುಕುಮಾರನ್ ಮೇರ್ಲ, ಬಿ.ಎಂ. ಅಬ್ದುಲ್ ಹಮೀದ್, ಅಭಿನಂದನ್, ರಮೇಶ್ ಬಿ., ಹರೀಶ್ ಗೌಡ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಬಿ.ಸಿ.ಎಂ. ಇಲಾಖೆಯ ಪ್ರಭಾರ ವಿಸ್ತರಣಾಧಿಕಾರಿ ಸುರೇಂದ್ರ ಅವರು ಮಾತನಾಡಿ ಇಲಾಖೆಗೆ ಸೇರಿದ ಉಜಿರೆ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಕ್ಕೆ ಒಟ್ಟು 2.84 ಎಕ್ರೆ ಜಾಗವಿದ್ದು, ಇದರಲ್ಲಿ 0.50 ಎಕ್ರೆ ಜಾಗವನ್ನು ಪುಷ್ಪಾವತಿ ಚೆನ್ನಪ್ಪ ನಾಯ್ಕ್ ಪೆರ್ಲ ಎಂಬವರು ಅತಿಕ್ರಮಿಸಿದ್ದಾರೆ. ಇದರ ತೆರವಿಗೆ ಹಿಂದೆ ತಾ.ಪಂ. ಸಭೆಯಲ್ಲಿ ನಿರ್ಣಯವಾಗಿ 2003ರಲ್ಲಿ ತೆರವಿಗೆ ಕಂದಾಯ ಮತ್ತು ಪೊಲೀಸ್ ಇಲಾಖೆಗೆ ದೂರು ನೀಡಲಾಗಿತ್ತು. 2014ರಲ್ಲಿ ಮತ್ತೊಂದು ದೂರನ್ನು ಕಂದಾಯ ಇಲಾಖೆಗೆ ನೀಡಿದ್ದರೂ ಇದರ ಸರ್ವೆ ನಡೆಸಿ ತೆರವು ಮಾಡಿಲ್ಲ, ಹಾಸ್ಟೇಲ್ ಸುತ್ತಾ ಕಂಪೌಂಡ್ ಕಟ್ಟುವಾಗ ಅವರು ನ್ಯಾಯಾಲಯಕ್ಕೆ ಹೋಗಿದ್ದು, ಆ ಕೇಸು ವಜಾ ಆಗಿತ್ತು. ಈಗ ಇವರು ಈ ಜಾಗವನ್ನು ರೂ.43ಲಕ್ಷಕ್ಕೆ ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಎಂದು ಸುರೇಂದ್ರ ಅವರು
ಆರೋಪಿಸಿದರು. ಈ ಸಂದರ್ಭ ಮಾತನಾಡಿದ ತಹಶೀಲ್ದಾರ್ ತಿಪ್ಪೇಸ್ವಾಮಿಯವರು ಈ ರೀತಿ ಜಾಗದ ಅತಿಕ್ರಮಿಸಿ ಮಾರಾಟ ಮಾಡುವುದು ಕಾನೂನು ಬಾಹಿರವಾಗಿದೆ. ಜಾಗದ ಗಡಿಗುರುತು ಮಾಡಿಕೊಡುತ್ತೇವೆ. ಇದರ ಅಳತೆಗೆ ಪೊಲೀಸ್ ಇಲಾಖೆಯ ನೆರವು ಪಡೆದುಕೊಳ್ಳಬೇಕು. ಅಳತೆ ಮಾಡಿ ಜಾಗ ವಶಪಡಿಸಿಕೊಂಡ ನಂತರ ಅದನ್ನು ಕಾಪಾಡಿಕೊಂಡು ಬರುವುದು ಇಲಾಖೆಯ ಜವಾಬ್ದಾರಿ ಎಂದು ತಿಳಿಸಿದರು. ಅದರಂತೆ ಅಳತೆಗೆ ನಿರ್ಣಯ ಕೈಗೊಳ್ಳಲಾಯಿತು.
ಗ್ರಾ.ಪಂ.ಗಳಿಗೆ ನೂತನ ಕಟ್ಟಡ: ತಾಲೂಕಿಗೆ 5 ನೂತನ ಗ್ರಾ.ಪಂ.ಗಳು ಮಂಜೂರಾಗಿದ್ದು, ಇದರ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಸರಕಾರ ಅನುದಾನ ಮಂಜೂರುಗೊಳಿಸಿದೆ. ಆದರೆ ಇದಕ್ಕೆ ಜಾಗದ ವ್ಯವಸ್ಥೆಯನ್ನು ಕಂದಾಯ ಇಲಾಖೆ ಇನ್ನೂ ಮಾಡಿಕೊಟ್ಟಿಲ್ಲ ಎಂದು ಕಾರ್ಯನಿರ್ವಾಹಣಾಧಿಕಾರಿ ಸಿ.ಆರ್. ನರೇಂದ್ರ ತಿಳಿಸಿದರು. ಸುಲ್ಕೇರಿ ಮತ್ತು ಕಳೆಂಜ ಗ್ರಾ.ಪಂ.ದ ಜಾಗ ಕಂದಾಯ ಜಾಗವಾಗಿದೆ ಎಂದು ನರೇಂದ್ರ ಅವರು ತಿಳಿಸಿದಾಗ ಕಳೆಂಜದ ಜಾಗ ಅರಣ್ಯ ಜಾಗದಲ್ಲಿದೆ ಎಂದು ವಲಯಾರಣ್ಯಾಧಿಕಾರಿ ಸಂಧ್ಯಾ ಸ್ಪಷ್ಟಪಡಿಸಿದರು. ಇದು ಅರಣ್ಯ ಜಾಗವಲ್ಲ, ಕಂದಾಯ ಇಲಾಖೆಯ ಸ್ಥಳ ಎಂದು ಸುಕುಮಾರನ್ ವಿವರಿಸಿದಾಗ ಇದರ ಜಂಟಿ ಸರ್ವೆ ನಡೆಯಬೇಕು ಎಂದು ವಲಯಾರಣ್ಯಾಧಿಕಾರಿ ಸಂಧ್ಯಾ ಹೇಳಿದರು. ಅದರಂತೆ ನಿರ್ಣಯಿಸಲಾಯಿತು. ಕಡಿರುದ್ಯಾವರ, ತೆಕ್ಕಾರು ಜಾಗ ಶೀಘ್ರ ಮಾಡಿಕೊಡಬೇಕು, ನಾವೂರು ಗ್ರಾ.ಪಂ. ಕಟ್ಟಡ ರಸ್ತೆ ಮಾರ್ಜಿನ್ ಬಿಟ್ಟು ಕಟ್ಟುವುದಾಗಿ ಇ.ಒ ಸಭೆಗೆ ತಿಳಿಸಿದರು.
ಎಂಡೋ ದುರುಪಯೋಗ ಸಲ್ಲದು: ಎಂಡೋಸಲ್ಫಾನ್ ಹೆಸರಿನಲ್ಲಿ ವಾಹನ ಅಪಘಾತದಲ್ಲಿ ಗಾಯಾಳುಗಾಗಿದ್ದವರು ಆರೋಗ್ಯ ಕಾರ್ಡ್ ಪಡೆದು ಸೌಲಭ್ಯ ಪಡೆಯುತ್ತಿದ್ದಾರೆ. ಹಿಂದೆ ಎಂಡೋಸಲ್ಫಾನ್ ಪರಿಹಾರ ಪಡೆದುಕೊಂಡವರ ಬಗ್ಗೆ ಪರಿಶೀಲನೆ ನಡೆಸಿ ಅನರ್ಹರಿದ್ದರೆ ಅವರ ಹೆಸರನ್ನು ತೆಗೆದು ಹಾಕಿ ಅರ್ಹ ಫಲಾನುಭವಿಗಳನ್ನು ಸೇರಿಸಿ ಎಂದು ಶಾಸಕರು ಆರೋಗ್ಯ ಅಧಿಕಾರಿ ಡಾ| ಕಲಾಮಧು ಅವರಿಗೆ ಸೂಚನೆ ನೀಡಿದರು. ಬಂದಾರು ಗ್ರಾ.ಪಂ. ದಲ್ಲಿ ಸದಸ್ಯರ ಗಮನಕ್ಕೆ ಬಾರದೆ ರೂ.3.88 ಲಕ್ಷ ಅನುದಾನವನ್ನು ಖರ್ಚು ಮಾಡುತ್ತಿದ್ದಾರೆ ಎಂದು ಹರೀಶ್ ಗೌಡ ಆರೋಪಿಸಿದಾಗ ಮಾತನಾಡಿದ ಕಾರ್ಯನಿರ್ವಾಹಣಾಧಿಕಾರಿ ನರೇಂದ್ರ ಅವರು 13ನೇ ಹಣಕಾಸು ಯೋಜನೆಯಲ್ಲಿ 11 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 9 ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದೆ ಎಂದರು ತಿಳಿಸಿದರು. ಇದು ನಿರ್ಣಯ ಆಗದೆ ಮಾಡಿದ ಕಾಮಗಾರಿ ಹಿಂದಿನ ಪಿ.ಡಿ.ಒರವರ ಅವಧಿಯಲ್ಲಿ ಆಗಿದೆ ಎಂದು ಹರೀಶ್ ಗೌಡ ತಿಳಿಸಿದಾಗ ಈ ಹಣವನ್ನು ಅಧ್ಯಕ್ಷರಿಂದ ವಸೂಲಿ ಮಾಡಿ, ಅವರಿಗೆ ನೋಟೀಸು ಮಾಡಿ ಎಂದು ಶಾಸಕರು ತಾಕೀತು ಮಾಡಿದರು.
ರೇಷ್ಮೇ ಇಲಾಖಾ ಸಿಬ್ಬಂದಿಗಳಿಗೆ ಸಂಬಲವಿಲ್ಲ :
ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕರ ಹುದ್ದೆಯನ್ನು ರದ್ದುಗೊಳಿಸಿದ ಬಳಿಕ ಇಲಾಖೆಯ ಸಿಬ್ಬಂದಿಗಳಿಗೆ ವೇತನ ಮಾಡುವವರು ಇಲ್ಲದೆ ಕಳೆದ ಆರು ತಿಂಗಳಿಂದ ವೇತನ ದೊರಕಿಲ್ಲ ಎಂದು ಇಲಾಖೆಯ ವಿಸ್ತರಣಾಧಿಕಾರಿ ಸಭೆಗೆ ತಿಳಿಸಿದರು.
ತಾಲೂಕಿನಲ್ಲಿ 16 ಮಂದಿ ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ರೇಷ್ಮೆರೋಡುನಲ್ಲಿರುವ ಫಾರ್ಮ್ ಸೀಡ್‌ಫಾರ್ಮ್ ಆಗಿದ್ದು, ಇಲಾಖೆ ಮತ್ತು ಇಲ್ಲಿ ಸಿಬ್ಬಂದಿಗಳ ಕೊರತೆಯಿದೆ ಎಂದು ಅವರು ಹೇಳಿದರು. ಕಕ್ಕಿಂಜೆ- ನೆರಿಯ ರಸ್ತೆ ಬೆಂದ್ರಾಳ ಎಂಬಲ್ಲಿ ಸೇತುವೆ ಅಪಾಯದಲ್ಲಿದ್ದು ಇಲ್ಲಿ ಈಗಾಗಲೇ ಅನೇಕ ಅಪಘಾತಗಳು ನಡೆದಿದೆ ಎಂದು ಸುಕುಮಾರ್‌ನ್ ಸಭೆಯ ಗಮನಕ್ಕೆ ತಂದಾಗ ಮಾತನಾಡಿದ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಪ್ರಸಾದ್ ಅವರು ಇಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಪ್ರಸ್ತಾಪವಿದ್ದು, ಸೇತುವೆ ಇಕ್ಕೆಡೆಗಳಲ್ಲಿ ಖಾಸಗಿ ಜಾಗವಾಗಿದೆ. ಇಲ್ಲಿ ಜಾಗ ನೀಡಲು ಮಾಲಕರು ಒಪ್ಪುವುದಿಲ್ಲ ಇದರಿಂದ ಸಮಸ್ಯೆಯಾಗಿದೆ ಎಂದು ತಿಳಿಸಿದರು.
ಗುರುವಾಯನಕೆರೆ ಟ್ರಾಫಿಕ್ ಸಮಸ್ಯೆ: ಗುರುವಾಯನಕೆರೆ ಪೇಟೆಯಲ್ಲಿ ಟ್ರಾಫಿಕ್ ಸಮಸ್ಯೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಎ.ಸಿ.ಯವರು ಮೂರು ಸಭೆ ನಡೆಸಿದ್ದಾರೆ. ರಸ್ತೆ ಅಗಲೀಕರಣದ ಬಗ್ಗೆ ಸರ್ವೆ ನಡೆಸಿ ಗುರುತು ಹಾಕಲಾಗಿದೆ. ಇಲ್ಲಿಯ ಜಾಗದವರು ಪರಿಹಾರ ಬೇಡಿಕೆ ಇಟ್ಟಿದ್ದರಿಂದ ಮರುಸರ್ವೆ ನಡೆಸಲಾಗಿದೆ ಎಂದು ಸ.ಕಾ. ಇಂಜಿನಿಯರ್ ಶಿವಪ್ರಸಾದ್ ತಿಳಿಸಿದರು.
ಗುರುವಾಯನಕೆರೆ ಪೇಟೆಯಲ್ಲಿ ನಾಲ್ಕು ಕಡೆ ಬಸ್ ತಂಗುದಾಣ ಮಾಡಿದ್ದರೂ ಪೇಟೆಯಲ್ಲೇ ಬಸ್ ನಿಲುಗಡೆ ಮಾಡುತ್ತಿದ್ದಾರೆ. ಇದರ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು, ಈಗ ನಿರ್ಮಿಸಿರುವ ಬಸ್ ತಂಗುದಾಣದಲ್ಲೇ ಬಸ್ ನಿಲ್ಲಿಸಬೇಕು, ಪೇಟೆಯಲ್ಲಿ ಯಾವುದೇ ಬಸ್ ನಿಲ್ಲಿಸಬಾರದು ಇದರ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಸೂಚನೆ ನೀಡಿದರು. ಉಜಿರೆಯಿಂದ ಗುರುವಾಯನಕೆರೆ ತನಕ ವಾಹನಗಳನ್ನು ರಸ್ತೆಯಿಂದ ಕೆಳಗಿಳಿಸಿ ಪಾರ್ಕಿಂಗ್ ಮಾಡಬೇಕು, ರಸ್ತೆಯಲ್ಲೇ ಪಾರ್ಕಿಂಗ್ ಮಾಡುವವರ ಮೇಲೆ ಕ್ರಮಕ್ಕೆ ನಿರ್ಣಯಿಸಲಾಯಿತು. ಬೆಳ್ತಂಗಡಿ ಸಂತೆಕಟ್ಟೆ ಬಸ್‌ತಂಗುದಾಣದಲ್ಲೂ ಇದೇ ರೀತಿ ಮಾಡಬೇಕು ಎಂದು ಶಾಸಕರು ಸೂಚನೆ ನೀಡಿದರು.
ಪಡಿತರ ಪೂರೈಕೆಗೆ ಹಣ ವಸೂಲಿ:
ಆಹಾರ ಇಲಾಖೆಯಿಂದ ಪಡಿತರ ಅಂಗಡಿಗಳಿಗೆ ಪಡಿತರ ಪೂರೈಕೆದಾರರು ಲೋಡ್- ಅನ್‌ಲೋಡುಗೆ ಗೋಣಿಯೊಂದಕ್ಕೆ ರೂ.೧೦ರಂತೆ ಪಡಿತರ ಅಂಗಡಿಯವರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಇದು ನಿಮ್ಮ ಗಮಕ್ಕೆ ಬಂದಿದೆಯೇ ಎಂದು ಆಹಾರ ಶಿರಾಸ್ತೇದಾರ್ ಅವರನ್ನು ಶಾಸಕರು ಪ್ರಶ್ನಿಸಿದರು. ಈ ಸಂದರ್ಭ ಶಿರಾಸ್ತೇದಾರ್ ಅವರು ಉತ್ತರಿಸಲಿಲ್ಲ. ತಾಲೂಕು ತಹಶೀಲ್ದಾರ್ ತಿಪ್ಪೇಸ್ವಾಮಿಯವರು ಪಡಿತರ ಲೋಡ್-ಅನ್‌ಲೋಡುಗೆ ಹಣ ಪಡೆಯುವ ಹಾಗಿಲ್ಲ ಎಂದು ಸ್ವಷ್ಟಪಡಿಸಿದರು. ಪಡಿತರ ಅಂಗಡಿಯಲ್ಲಿ ಪ್ರತಿ ಕಾರ್ಡ್‌ದಾರರಿಂದ ಸಾಗಾಟ ವೆಚ್ಚ ಎಂದು ರೂ.10 ಪಡೆದುಕೊಳ್ಳಲಾಗುತ್ತಿದೆ ಎಂದು ಉಪಾಧ್ಯಕ್ಷೆ ವೇದಾವತಿ ಆರೋಪಿಸಿದರು. ಇದರ ತನಿಖೆಗೆ ನಿರ್ಧರಿಸಲಾಯಿತು.ಮಡಂತ್ಯಾರುನಲ್ಲಿ ಪಂಚಾಯತಕ್ಕೆ ಹಸ್ತಾಂತರವಾದ ೮ ಎಕ್ರೆ ಜಾಗದ ಮರಗಳನ್ನು ಅರಣ್ಯ ಇಲಾಖೆ ತೆರವುಗೊಳಿಸುವುದು, ತಾಲೂಕಿಗೆ 48 ಅತಿಥಿ ಶಿಕ್ಷಕರ ನೇಮಕ, ಪಶುಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ, ಎ.ಪಿ.ಎಂ.ಸಿಯಲ್ಲಿ ಸಿಬ್ಬಂದಿಗಳ ಕೊರತೆ, ಅರಸಿನಮಕ್ಕಿ ರದ್ದಾದ ಪಡಿತರ ಚೀಟಿದಾರಿಂದ ಆಧಾರ್ ನಂಬ್ರ ಸಂಗ್ರಹ ಮೊದಲಾದ ವಿಷಯಗಳು ಸಭೆಯಲ್ಲಿ ಚರ್ಚಿಸಲ್ಪಟ್ಟವು. ಕಾರ್ಯನಿರ್ವಾಹಣಾಧಿಕಾರಿ ಸಿ.ಆರ್. ನರೇಂದ್ರ ಸ್ವಾಗತಿಸಿ, ತಾಲೂಕು ಸಂಯೋಜಕ ಜಯಾನಂದ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.