ಬಾರ್ಯ ಕೃಷಿ ಪತ್ತಿನ ಸಹಕಾರಿ ಸಂಘ ನಿರ್ದೇಶಕರ ವಜಾ ಆದೇಶಕ್ಕೆ ಹೈಕೋರ್ಟು ತಡೆ

 ಬಾರ್ಯ: ಬಾರ್ಯ ಕೃಷಿ ಪತ್ತಿನ ಸಹಕಾರಿ ಸಂಘದ ಎಲ್ಲಾ ನಿರ್ದೇಶಕರುಗಳನ್ನು ಅನರ್ಹಗೊಳಿಸಿ ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ಉಪ ನಿಬಂಧಕರು ನೀಡಿದ ಆದೇಶಕ್ಕೆ ರಾಜ್ಯ ಉಚ್ಚನ್ಯಾಯಾಲಯವು ಅ.6ರಂದು ತಡೆಯಾಜ್ಞೆ ನೀಡಿದೆ.
ಬಾರ್ಯ ಸಹಕಾರಿ ಸಂಘದ ಆಡಳಿತ ಮಂಡಳಿ ವಿರುದ್ಧ ಒಟ್ಟು ಹದಿನಾರು ಆರೋಪಗಳನ್ನು ಮಾಡಿ ಇದರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ, ರಾಜ್ಯ ಸಹಕಾರಿ ಸಚಿವರಿಗೆ ದೂರು ನೀಡಲಾಗಿತ್ತು. ಈ ದೂರಿನ ಬಗ್ಗೆ ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಕೆ. ಮಂಜುನಾಥ್ ಅವರು ತನಿಖೆ ನಡೆಸಿದ್ದರು. ಈ 16 ಆರೋಪಗಳಲ್ಲಿ ನಾಲ್ಕು ಆರೋಪಗಳಾದ ಸಂಘದಲ್ಲಿ ಹೊಸದಾಗಿ ಸದಸ್ಯತ್ವ ಕೋರಿ ಅರ್ಜಿ ಸಲ್ಲಿಸಿದವರಿಗೆ ಸದಸ್ಯತ್ವ ನೀಡಿ,  ಅದೇ ದಿನ ಸಾಲ ಮಂಜೂರು ಮಾಡಿರುವುದು, ತೆಕ್ಕಾರು ಶಾಖಾ ಕಚೇರಿ ಗೋದಾಮು ನಿರ್ಮಾಣ ಕಾಮಗಾರಿಗೆ ತಗಲಿದ ಒಟ್ಟು ರೂ.8.70ಲಕ್ಷಗಳ ಪೈಕಿ ರೂ. ೫ಲಕ್ಷವನ್ನು ಸಂಘದ ದುಡಿಯುವ ಬಂಡವಾಳದಿಂದ ಉಪಯೋಗಿಸಿದ್ದು, ಸದಸ್ಯರಿಗೆ ಸಾಲ ನೀಡುವಾಗ ಹೆಚ್ಚುವರಿ ಷೇರು ಪಡೆಯದಿರುವುದು, ಮೃತಪಟ್ಟ ಸದಸ್ಯರ ಸಾಲವನ್ನು ಮುಂದುವರಿಸಿರುವುದು ಸಹಕಾರ ಸಂಘಗಳ ಕಾಯ್ದೆ ಹಾಗೂ ಉಪನಿಬಂಧನೆಗಳ ಉಲ್ಲಂಘನೆ ಎಂಬ ಕಾರಣ ನೀಡಿ ಎಲ್ಲಾ ನಿರ್ದೇಶಕರನ್ನು ಅನರ್ಹಗೊಳಿಸಿ ಸೆ.24ರಂದು ಆದೇಶ ನೀಡಿದ್ದರು. ಸಂಘದ ಅಧ್ಯಕ್ಷ ಕೈಕುರೆ ಸುಬ್ರಹ್ಮಣ್ಯ ಗೌಡ, ಉಪಾಧ್ಯಕ್ಷ ಶೇಷಪ್ಪ ಎಂ. ಸಾಲ್ಯಾನ್, ನಿರ್ದೇಶಕರುಗಳಾದ ಪ್ರಸನ್ನ ಎನ್, ಪ್ರವೀಣ್ ರೈ, ಅಣ್ಣು ಪಿ, ಪಾರ್ಶ್ವನಾಥ್ ಜೈನ್ ಇವರು ರಾಜ್ಯ ಉಚ್ಚ ನ್ಯಾಯಾಲಯದ ಮೆಟ್ಟಲೇರಿ ಪುತ್ತೂರು ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ಸಂಘದ ಆಡಳಿತ ಮಂಡಳಿಯನ್ನು ವಜಾಗೊಳಿಸಿದ ಆದೇಶವನ್ನು ಪ್ರಶ್ನಿಸಿ, ಬಾರ್ಯ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಹಣಕಾಸಿನ ಯಾವುದೇ ಅವ್ಯವಹಾರ ನಡೆದಿರುವುದಿಲ್ಲ, ಇದೊಂದು ರಾಜಕೀಯ ಪ್ರೇರಿತ ದೂರು ಇದಕ್ಕೆ ತಡೆ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಉಚ್ಚ ನ್ಯಾಯಾಲಯದಲ್ಲಿ ಪ್ರಕರಣದ ಪರಿಶೀಲನೆ ನಡೆಸಿದ ನ್ಯಾಯಾಧೀಶರು ಪುತ್ತೂರು ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ಬಾರ್ಯ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯನ್ನು ವಜಾಗೊಳಿಸಿ ನೀಡಿದ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದಾರೆ.
ಸದಸ್ಯರಲ್ಲಿ ಹರ್ಷ: ಈ ಆದೇಶ ಸತ್ಯಕ್ಕೆ ಸಂದ ಜಯವಾಗಿದೆ ಎಂದು ಸಂಘದ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ. ಉತ್ತಮ ಆಡಳಿತವನ್ನು ಸಹಿಸಲಾಗದ ಕೆಲವರು ಆಡಳಿತದ ದುರಾಸೆಯಿಂದ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.