ಕೊಳವೆ ಬಾವಿ ಕೊರೆಯುವುದಕ್ಕೆ ಸರಕಾರ ತಡೆ ನೀಡಿ ಆದೇಶ

Borwell copy1.ಮಳೆ ಪ್ರಮಾಣ ಇಳಿಕೆ
2. ಅಂತರ್ಜಲ ಮಟ್ಟ ಕುಸಿತ
3. ಎಂಟುನೂರು ಅಡಿ ಕೊರೆದರೂ
4. ಕೊಳವೆ ಬಾವಿಯಲ್ಲಿ ಸಿಗದ ನೀರು.

ಬೆಳ್ತಂಗಡಿ : ಪ್ರತಿ ವರ್ಷ ಮಳೆ ಪ್ರಮಾಣದಲ್ಲಿ ಇಳಿಕೆ, ಭೂಮಿಯಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತದ ಹಿನ್ನಲೆಯಲ್ಲಿ ಕೊಳವೆ ಬಾವಿಗಳನ್ನು ಕೊರೆಯುವುದಕ್ಕೆ ತಡೆ ನೀಡಿ ಸರಕಾರ ಆದೇಶ ನೀಡಿದೆ.
ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರಿನಲ್ಲಿ ಮಳೆ ಕೊರತೆ ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟದ ಕುಸಿತದಿಂದ ಕುಡಿಯುವ ನೀರಿನ ಸiಸ್ಯೆ ಉಂಟಾಗುವುದನ್ನು ನಿವಾರಿಸಲು ಹೊಸ ಬೋರ್‌ವೆಲ್‌ಗಳನ್ನು ಕೊರೆಯುವುದನ್ನು ತಡೆಗಟ್ಟಿ ಸರ್ಕಾರದ ಆದೇಶ ಸಂಖ್ಯೆ ಆರ್.ಡಿ. 267/ಟಿಎನ್‌ಆರ್/2016 ಮತ್ತು ಪ್ರಾದೇಶಿಕ ಆಯುಕ್ತರು ಮೈಸೂರು ವಿಭಾಗ ಇವರ ಪತ್ರ ಸಂಖ್ಯೆ ಸಿಎಎಲ್/ಸಿಆರ್-29/2016ರಂತೆ ಈ ಆದೇಶವನ್ನು ನೀಡಲಾಗಿದೆ. ಹೊಸ ಬೋರ್‌ವೆಲ್‌ಗಳನ್ನು ಕೊರೆಯುವುದನ್ನು ತಡೆಗಟ್ಟುವ ಸಂಪೂರ್ಣ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಈ ಸಂಬಂಧ ಅವಶ್ಯಕತೆಯಿದ್ದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೆರವನ್ನು ಪಡೆದುಕೊಳ್ಳಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶ ಈಗಾಗಲೇ  ಸಹಾಯಕ  ಕಾರ್ಯನಿರ್ವಾಹಕ ಇಂಜಿನಿಯರ್ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಉಪವಿಭಾಗ ಬೆಳ್ತಂಗಡಿ ಹಾಗೂ ತಾಲೂಕಿನ ೪೮ ಗ್ರಾಮ ಪಂಚಾಯತುಗಳ ಅಭಿವೃದ್ಧಿ ಅಧಿಕಾರಿಗಳಿಗೆ ಬಂದಿದೆ
ಹಿಂದೆ ಪ್ರತಿ ವರ್ಷ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ಅಲ್ಲಲ್ಲಿ ಕೆರೆ, ಹಳ್ಳ, ಭತ್ತದ ಗದ್ದೆಗಳಲ್ಲಿ ವರ್ಷ ಪೂರ್ತಿ ನೀರು ನಿಲ್ಲುವ ವ್ಯವಸ್ಥೆಗಳಿತ್ತು. ತೋಡುಗಳಿಗೆ ಮಣ್ಣಿನ ಕಟ್ಟಕಟ್ಟಿ ನೀರು ನಿಲ್ಲಿಸುತ್ತಿದ್ದರು. ಅದರ ನೀರಿನಿಂದಲೇ ಭತ್ತ ಹಾಗೂ ಇತರ ಕೃಷಿಯನ್ನು ಮಾಡುತ್ತಿದ್ದ ಕಾಲವಿತ್ತು. ಇದರಿಂದ ಕೃಷಿ ಬೆಳೆಗಳು ಸಮೃದ್ಧಿಯಾಗಿ ಬೆಳೆಯುತ್ತಿತ್ತು. ಮಳೆ ನೀರು ಅಲ್ಲಲ್ಲಿ ಸಂಗ್ರಹವಾಗುತ್ತಿದ್ದುದರಿಂದ ಭೂಮಿಯ ಅಂತರ್ಜಲ ಮಟ್ಟವು ಹೆಚ್ಚುತ್ತಿತ್ತು.
ಆದರೆ ಆಧುನಿಕ ಕಾಲಕ್ಕೆ ಜನರು ಕಾಲಿಡುತ್ತಿದ್ದಂತೆ ಕೆರೆ, ಹಳ್ಳಗಳ ಜಾಗ ಯಾರದೋ ಪಾಲಾಗಿ ಇವುಗಳು ಮಾಯಾವಾಗಿದೆ. ತೋಡಿನಲ್ಲಿ ಹೂಳು ತುಂಬಿ ಹೋಗಿದೆ. ಭತ್ತದ ಕೃಷಿ ಗದ್ದೆಗಳು ಅಡಿಕೆ, ತೆಂಗು, ರಬ್ಬರು ತೋಟಗಳಾಗಿವೆ. ಭತ್ತದ ಕೃಷಿ ಅವನತಿ ಹೊಂದಿ ಮಣ್ಣಿನ ಕಟ್ಟಗಳೇ ಕಣ್ಣಿಗೆ ಕಾಣುತ್ತಿಲ್ಲ, ಅಡಿಕೆ, ತೆಂಗು ರಬ್ಬರು ಕೃಷಿಗಾಗಿ ಅಲ್ಲಲ್ಲಿ ಕೊಳವೆ ಕೊರೆಯಲಾಗಿದೆ. ಭೂಮಿಗೆ ಯಾವುದೇ ರೀತಿಯಲ್ಲಿ ನೀರು ಇಂಗುವ ಕೆಲಸಗಳಾಗುತ್ತಿಲ್ಲ. ಕಾಡು ಅತಿಕ್ರಮಣವಾಗಿ, ಪರಿಸರ ಮಾಲಿನ್ಯವಾಗಿ ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಾ ಹೊಗುತ್ತಿದೆ. ಭೂಮಿಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. 800, 1000 ಸಾವಿರ ಅಡಿ ಕೊರೆದರೂ ನೀರು ಸಿಗುತ್ತಿಲ್ಲ, ಪ್ರತಿ ಬೇಸಿಗೆ ಕಾಲದಲ್ಲಿ ರಾಜ್ಯದೆಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ. ಈ ಎಲ್ಲಾ ಕಾರಣಗಳಿಂದ ಸರಕಾರ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದನ್ನು ನಿವಾರಿಸಲು ಹೊಸ ಬೋರ್‌ವೆಲ್‌ಗಳನ್ನು ಕೊರೆಯುವುದನ್ನು ತಡೆ ಹಿಡಿದು ಆದೇಶ ನೀಡಿದೆ. ಸರಕಾರದ ಆದೇಶ ಉಲ್ಲಂಘನೆಯಾಗದ ರೀತಿಯಲ್ಲಿ ಜಿಲ್ಲಾಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು, ಮುಂದಿನ ಆದೇಶದವರೆಗೆ ಕೊಳವೆ ಬಾವಿ ಯಾರೂ ಕೊರೆಯಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದು ಸರಕಾರಿ ಯೋಜನೆ ಹಾಗೂ ಖಾಸಗಿಯಾಗಿ ಕೊರೆಯುವುದಕ್ಕೂ ಅನ್ವಯಿಸಿದೆ.
ಕೊಳೆವೆ ಬಾವಿ ಖಾಸಗಿಯಾಗಿ ಕೊರೆಯಬೇಕಾದರೆ ಗ್ರಾಮ ಪಂಚಾಯತದಿಂದ ಎನ್.ಒ.ಸಿ ಪಡೆದುಕೊಳ್ಳಬೇಕು. ಸರಕಾರದ ಈ ಆದೇಶದಿಂದಾಗಿ ಇನ್ನು ಮುಂದೆ ಗ್ರಾಮ ಪಂಚಾಯತು ಎನ್.ಒ.ಸಿ ನೀಡುವುದಿಲ್ಲ. ಒಂದು ವೇಳೆ ಯಾರಿಗೂ ಗೊತ್ತಾಗದೆ ಅನಧಿಕೃತವಾಗಿ ಕೊಳವೆ ಬಾವಿ ಕೊರೆದರೆ, ಗ್ರಾಮ ಪಂಚಾಯತು ಮತ್ತು ಇಲಾಖೆ ಇದನ್ನು ತಡೆಯಲಿದೆ. ಕೊರೆದ ಕೊಳವೆ ಬಾವಿಗೆ ಪಂಚಾಯತು ಎನ್.ಒ.ಸಿ ಇಲ್ಲದೆ ಮೆಸ್ಕಾಂ ವಿದ್ಯುತ್ ಸಂಪರ್ಕ ನೀಡುವ ಹಾಗಿಲ್ಲ. ಬಾವಿಗೆ ಆದ್ಯತೆ : ಇತ್ತೀಚೆಗೆ ಉದ್ಯೋಗ ಖಾತರಿ ಯೋಜನೆಯಲ್ಲಿ ಕುಡಿಯುವ ನೀರಿನ ಬಾವಿ, ಕೆರೆ ನಿರ್ಮಾಣ, ಹಳೆ ಕೆರೆಗಳ ಹೂಳೆತ್ತುವಿಕೆ ಮೊದಲಾದ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಕೊಳವೆ ಬಾವಿಯ ಬದಲು ಬಾವಿಗಳ ನಿರ್ಮಾಣದತ್ತ ಜನರು ಯೋಚಿಸಬೇಕಾದ ಅಗತ್ಯವಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.