ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸ್ವಚ್ಛ ಧಾರ್ಮಿಕ ಕ್ಷೇತ್ರ ಪ್ರಶಸ್ತಿ

dharmasthala swachate Safaigiri Award 01 08 copyಡಿ. ಹರ್ಷೇಂದ್ರ ಕುಮಾರ್ ಪ್ರಶಸ್ತಿ ಸ್ವೀಕರಿಸುತ್ತಿರುವುದು

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ನಾಡಿನ ಅತ್ಯಂತ ಪವಿತ್ರ ಕ್ಷೇತ್ರ, ಇಲ್ಲಿಗೆ ದೇಶ ವಿದೇಶಗಳಿಂದ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ವಿವಿಧ ದಾನಪರಂಪರೆಗೆ ಪ್ರಖ್ಯಾತಿಯಾದ ಈ ಕ್ಷೇತ್ರದಲ್ಲಿ ಸ್ವಚ್ಚತೆಗೆ ಅನಾದಿಯಿಂದಲೂ ಹೆಚ್ಚಿನ ಒತ್ತು ನೀಡುತ್ತಾ ಬರಲಾಗುತ್ತಿದೆ. ಇದೀಗ ಇಂಡಿಯಾ ಟುಡೆ ಇಂಗ್ಲೀಷ್ ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ ಧರ್ಮಸ್ಥಳ ಕ್ಷೇತ್ರ ದೇಶದಲ್ಲಿಯೇ ಅತಿ ಸ್ವಚ್ಚ ಧಾರ್ಮಿಕ ಕ್ಷೇತ್ರ ಎಂಬ ಪ್ರಶಸ್ತಿಯಿಂದ ಪುರಸ್ಕೃತಗೊಂಡಿದೆ.
ಅ.2 ಗಾಂಧಿ ಜಯಂತಿಯಂದು ದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪರವಾಗಿ ಅವರ ಸಹೋದರ ಡಿ. ಹರ್ಷೇಂದ್ರ ಕುಮಾರ್ ಅವರು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಇವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭ ಖ್ಯಾತ ಚಲನಚಿತ್ರ ತಾರೆ ಐಶ್ವರ್ಯ ರೈ ಬಚ್ಚನ್ ಉಪಸ್ಥಿತರಿದ್ದರು.  ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸ್ವಚ್ಚತೆಗೆ ಅತ್ಯಂತ ಮಹತ್ವವನ್ನು ನೀಡಲಾಗುತ್ತಿದೆ. ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ಹೋಗುತ್ತಿರುವುದರಿಂದ ಇಲ್ಲಿ ಸ್ವಚ್ಚತಾ ಕಾರ್ಯವು ಅಷ್ಟೇ ರೀತಿಯಲ್ಲಿ ನಡೆಸಲಾಗುತ್ತಿದೆ. ಅನ್ನಪೂರ್ಣ ಛತ್ರದಲ್ಲಿ ಆಧುನಿಕ ಸ್ಪರ್ಶದೊಂದಿಗೆ ಪರಿಸರ ಸ್ನೇಹಿ ಯೋಜನೆ ರೂಪಿಸಲಾಗಿದೆ. ಪರ್ಯಾಯ ಇಂಧನದ ಮೂಲಕ ಇಲ್ಲಿ ಅಡುಗೆ ಮಾಡಲಾಗುತ್ತಿದೆ. ಆರೋಗ್ಯಕರ ಪರಿಸರದಲ್ಲಿ ಆಹಾರವನ್ನು ಶುಚಿ-ರುಚಿಯಾಗಿ ಮಾಡಲಾಗುತ್ತಿದೆ. ಇಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡಗಳಿಗೆ ಮರ ಬಳಸಲಾಗುತ್ತಿಲ್ಲ ಇದೊಂದು ಕ್ರಾಂತಿಕಾರಿ ಅನುಷ್ಠಾನವಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಡಿ. ಹರ್ಷೇಂದ್ರ ಕುಮಾರ್ ಅವರು ಕ್ಷೇತ್ರದ ಅಭಿವೃದ್ಧಿ, ಸ್ವಚ್ಚತೆ, ಶಿಸ್ತು ಸೇರಿದಂತೆ ವಿವಿಧ ಕಾರ್ಯಕ್ರಮಗಳ ಅನುಷ್ಠಾನದ ರೂವಾರಿಗಳಾಗಿದ್ದಾರೆ.
ಇಂಡಿಯಾ ಟುಡೆ ಪತ್ರಿಕಾ ಬಳಗದವರು ದೇಶದ ಎಲ್ಲಾ ಧಾರ್ಮಿಕ ಕ್ಷೇತ್ರಗಳು ಮತ್ತು ವಿವಿಧ ನಗರಗಳನ್ನು ವರ್ಗೀಕರಿಸಿ ಸ್ವಚ್ಚತೆ ಬಗ್ಗೆ ಸರ್ವೇಕ್ಷಣೆಯನ್ನು ನಡೆಸಿದ್ದರು. ಇದರಲ್ಲಿ ರಾಷ್ಟ್ರದ ಧಾರ್ಮಿಕ ನಗರಗಳ ಪೈಕಿ ಧರ್ಮಸ್ಥಳವನ್ನು ಅತ್ಯಂತ “ಸ್ವಚ್ಚ ಧಾರ್ಮಿಕ ನಗರ” ಎಂದು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಪತ್ರಿಕಾ ಬಳಗದವರು ನೀಡುತ್ತಿರುವ ಪ್ರಥಮ ರಾಷ್ಟ್ರೀಯ ‘ಸಫಾಯಿಗಿರಿ ಪ್ರಶಸ್ತಿ’ ಇದಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.