ಮನಃ ಪರಿವರ್ತನೆಯಿಂದ ದುಶ್ಚಟಕ್ಕೆ ಮುಕ್ತಿ : ಡಾ| ಹೆಗ್ಗಡೆ

Janajagruthi invitation copyಅ.1 : ಧರ್ಮಸ್ಥಳದಲ್ಲಿ ಸಾವಿರ ಶಿಬಿರದ ಸಹಸ್ರಾರು ಮದ್ಯವರ್ಜಿತರ ಸಮಾವೇಶ

ಸಾವಿರ  ಶಿಬಿರದ ಸಹಸ್ರಾರು ಮದ್ಯವರ್ಜಿತರ ಸಮಾವೇಶ

ಜನಜಾಗೃತಿ ವೇದಿಕೆಯಿಂದ ನಡೆಯುತ್ತಿರುವ ಮದ್ಯವರ್ಜನ ಶಿಬಿರ, 1,000ವನ್ನು ಪೂರೈಸುತ್ತಿರುವ ಹಿನ್ನಲೆಯಲ್ಲಿ ಅ.1ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾ ಭವನದಲ್ಲಿ ‘ಸಾವಿರ ಶಿಬಿರದ ಸಹಸ್ರಾರು ಮದ್ಯವರ್ಜಿತರ ಸಮಾವೇಶ’ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಕಳೆದ ಎರಡು ದಶಕಗಳಿಂದ ಕರ್ನಾಟಕ ರಾಜ್ಯದಾದ್ಯಂತ 990ಶಿಬಿರಗಳನ್ನು ನಡೆಸಿ 70 ಸಾವಿರಕ್ಕೂ ಮಿಕ್ಕಿ ಜನರು ಈ ಚಟದಿಂದ ಮುಕ್ತರಾಗಿದ್ದಾರೆ. ಇದೀಗ ರಾಜ್ಯದ 10 ತಾಲೂಕುಗಳಾದ ಬೆಳ್ತಂಗಡಿ, ಸುಳ್ಯ, ಮೂಡಬಿದ್ರೆ, ಹಾಸನ, ಶಿವಮೊಗ್ಗ, ಹೊನ್ನಾಳ್ಳಿ, ಕೆ.ಆರ್ ನಗರ, ಶಿರಸಿ, ತುಮಕೂರು, ಕೊಪ್ಪ ಕಡೆಗಳಲ್ಲಿ ಸೆ.24ರಿಂದ ಅ.1ರವರೆಗೆ ಏಕಕಾಲದಲ್ಲಿ 10 ಶಿಬಿರಗಳನ್ನು ನಡೆಸಲಾಗುವುದು. ಒಂದು ಶಿಬಿರದಲ್ಲಿ 100 ಜನರಂತೆ ಒಂದು ಸಾವಿರ ಮಂದಿ ಈ ಶಿಬಿರದಲ್ಲಿ ಮದ್ಯಮುಕ್ತರಾಗಿ ಹೊಸ ಬದುಕಿಗೆ ಪಾದಾರ್ಪಣೆ ಮಾಡಲಿದ್ದಾರೆ. ಸಾವಿರ ಶಿಬಿರದ ಸಹಸ್ರಾರು ಮದ್ಯವರ್ಜಿತರು ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ ಎಂದು ಹೇಳಿದರು.
ಶಿಬಿರವನ್ನು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಉದ್ಘಾಟಿಸಲಿದ್ದು, ಶ್ರೀ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕೇಂದ್ರದ ಆಯುಶ್ ಇಲಾಖೆ ಸಚಿವ ಶ್ರೀಪಾದ್ ಯೆಸ್ಸೋ ನಾಯ್ಕ್ ಲಾಂಛನ ಬಿಡುಗಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದ ನಳಿನ್‌ಕುಮಾರ್ ಕಟೀಲ್, ಶಾಸಕ ವಸಂತ ಬಂಗೇರ ವ್ಯಾಸ ಯೋಗ ವಿಶ್ವವಿದ್ಯಾಲಯದ ಡಾ| ಎಚ್.ಆರ್ ನಾಗೇಂದ್ರ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ರಂಗಶ್ಯಾಮಯ್ಯ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಧರ್ಮಸ್ಥಳ ಗ್ರಾ.ಪಂ ಅಧ್ಯಕ್ಷ ಚಂದನ್ ಕಾಮತ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಧರ್ಮಸ್ಥಳ : ಮದ್ಯಪಾನ ಸಾಮಾಜಿಕ ಪಿಡುಗಾಗಿದ್ದು, ಕಾನೂನಿಂದ, ದಂಡ ಹಾಕುವುದರಿಂದ ಮದ್ಯಪಾನ ನಿಷೇಧ ಸಾಧ್ಯವಿಲ್ಲ, ಬದಲಾಗಿ ವ್ಯಸನಿಗಳ ಮಾನಸಿಕ ಪರಿವರ್ತನೆಯಿಂದ ಮತ್ತು ಸಾಮಾಜಿಕವಾಗಿ ಬಹಿಷ್ಕರಿಸಿದಾಗ ಇದನ್ನು ನಿಧಾನವಾಗಿ ನಾಶ ಮಾಡಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಸೆ.12ರಂದು ಧರ್ಮಸ್ಥಳದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳ ಮತ್ತು ಸಹಸ್ರ ಶಿಬಿರಗಳ ಸಮಗ್ರ ವ್ಯವಸ್ಥಾಪನಾ ಸಮಿತಿಯ ವತಿಯಿಂದ ಅ.1ರಂದು ಧರ್ಮಸ್ಥಳದಲ್ಲಿ ನಡೆಯಲಿರುವ 1000 ಶಿಬಿರದ ಮದ್ಯವರ್ಜಿತರ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಮದ್ಯಪಾನ ಸಹಸ್ರಾರು ವರ್ಷಗಳಿಂದ ಚಟವಾಗಿ ಬೆಳೆದು ಬಂದಿದ್ದು. ಬೇರೆ, ಬೇರೆ ಅವನತಿಗೆ ಕಾರಣವಾಗಿದೆ. ಮನಪರಿವರ್ತನೆಯಿಂದ ಮಾತ್ರ ಇದನ್ನು ನಿಯಂತ್ರಿಸಲು ಸಾಧ್ಯ. ಕೆಟ್ಟ ಚಟ ತಕ್ಷಣ ಬರುತ್ತದೆ. ಆದರೆ ಮನಪರಿವರ್ತನೆ ನಿಧಾನವಾಗಿ ನಡೆಯುವ ಪ್ರಕ್ರಿಯೆ. ಯಾವುದೇ ದುಶ್ಚಟವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎನ್ನುವುದು ಸರಿಯಲ್ಲ, ಬಸ್‌ಗಳಲ್ಲಿ, ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ನಿಷೇಧ ಜಾರಿಯಾದ ಬಳಿಕ ಬಹಳಷ್ಟು ಪರಿಣಾಮ ಬೀರಿದೆ. ಸ್ವಚ್ಚಭಾರತದ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡುತ್ತಿದೆ. ಮಾನಸಿಕವಾಗಿ ನಡೆಯುವ ಪರಿವರ್ತನೆಯೇ ಶಾಶ್ವತವಾಗಿ ಉಳಿಯುತ್ತದೆ ಎಂದು ತಿಳಿಸಿದರು. ಹಿಂದೆ ಮದ್ಯವರ್ಜನ ಶಿಬಿರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಖರ್ಚು ವೆಚ್ಚಗಳನ್ನು ಭರಿಸಲಾಗುತ್ತಿತ್ತು. ಶಿಬಿರದ ಪರಿಣಾಮವನ್ನು ನೋಡಿ ಸಾರ್ವಜನಿಕರು, ಸಂಘ-ಸಂಸ್ಥೆಗಳು ಮದ್ಯವರ್ಜನಾ ಶಿಬಿರ ನಮ್ಮಲ್ಲಿ ನಡೆಸಿ ಖರ್ಚು ನಾವೇ ಭರಿಸುತ್ತೇವೆ ಎಂದು ಮುಂದೆ ಬರುತ್ತಿದ್ದಾರೆ. ಇದು ಪರಿವರ್ತನೆಯ ಸಂಕೇತವಾಗಿದೆ. ಇದೀಗ ಶಿಬಿರದ ತರಬೇತುದಾರರ ಸಂಖ್ಯೆ ಹೆಚ್ಚು ಮಾಡಲಾಗಿದ್ದು, ವರ್ಷದಲ್ಲಿ 120 ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಸತೀಶ್ ಹೊನ್ನವಳ್ಳಿ ಮಾತನಾಡಿ ಜನಜಾಗೃತಿ ವೇದಿಕೆಯ ಕಳೆದ ೨೫ ವರ್ಷಗಳ ಕನಸು ಇಂದು ನನಸಾಗುತ್ತಿದ್ದು, ಹಿಂದೆ ಮದ್ಯವರ್ಜನ ಶಿಬಿರವನ್ನು ದೂರುತ್ತಿದ್ದ ಜನರೇ ಈಗ ಕೇಳುತ್ತಾ ಬರುತ್ತಿದ್ದಾರೆ. ಶಿಬಿರಗಳಿಗೆ ಜನರೇ ಸಹಕಾರ ನೀಡುತ್ತಿದ್ದಾರೆ. ಸರಕಾರಗಳು ಇಂತಹ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು.
ವೇದಿಕೆಯಲ್ಲಿ ಸ್ಥಾಪಕಾಧ್ಯಕ್ಷ ವಸಂತ ಸಾಲ್ಯಾನ್, ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಹೆಚ್ ಮಂಜುನಾಥ್, ವೇದಿಕೆಯ ನಿಕಟಪೂರ್ವಾಧ್ಯಕ್ಷ ದೇವದಾಸ್ ಹೆಬ್ಬಾರ್, ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್ ಶಿಬಿರಾಧಿಕಾರಿ ಗಣೇಶ್ ಉಪಸ್ಥಿತರಿದ್ದರು.
ವೇದಿಕೆ ಕಾರ್ಯದರ್ಶಿ ವಿವೇಕ್ ವಿ. ಪಾಯಸ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್ ವಂದಿಸಿದರು. ಇದೇ ಸಂದರ್ಭದಲ್ಲಿ ಹತ್ತು ಕಡೆ ನಡೆಯಲಿರುವ ಮದ್ಯವರ್ಜನ ಶಿಬಿರಗಳ ಆಮಂತ್ರಣ ಪತ್ರಿಕೆಯನ್ನು ಮದ್ಯವರ್ಜನ ವ್ಯವಸ್ಥಾಪನ ಶಿಬಿರದ ಪದಾಧಿಕಾರಿಗಳು ಡಾ. ಹೆಗ್ಗಡೆಯವರಿಗೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.