HomePage_Banner_
HomePage_Banner_

ಗ್ರಾಮ ಪಂಚಾಯತ್ ಉಪಚುನಾವಣೆ 4 ಸ್ಥಾನಗಳಲ್ಲಿ :2 ಕಾಂಗ್ರೆಸ್ 2 ಬಿಜೆಪಿ ಸದಸ್ಯರ ಆಯ್ಕೆ

  panchayath  ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ನಾಲ್ಕು ಗ್ರಾಮ ಪಂಚಾಯ ತುಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ 4 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ 2 ಗ್ರಾ.ಪಂ.ಗಳಲ್ಲಿ ಕಾಂಗ್ರೆಸ್ ಹಾಗೂ 2 ಗ್ರಾ.ಪಂ.ಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಉಜಿರೆ ಗ್ರಾ.ಪಂ.ದಿಂದ ಕಾಂಗ್ರೆಸ್ ಬೆಂಬಲಿತರಾದ ಪ್ರಕಾಶ್ ವಿ.ಎಸ್, ನಡ ಗ್ರಾ.ಪಂ.ದಿಂದ ಬಿಜೆಪಿ ಬೆಂಬಲಿತರಾದ ಪೂರ್ಣಿಮಾ ಉಮೇಶ್, ಧರ್ಮಸ್ಥಳ ಗ್ರಾ.ಪಂ.ದಿಂದ ಕಾಂಗ್ರೆಸ್ ಬೆಂಬಲಿತರಾದ ಹರೀಶ್ ಸುವರ್ಣ, ಶಿಬಾಜೆ ಗ್ರಾ.ಪಂ.ದಿಂದ ಬಿಜೆಪಿ ಬೆಂಬಲಿತರಾದ ರಮೇಶ್ ಗೌಡ ಕುರುಂಜ ಸದಸ್ಯರಾಗಿ ಚುನಾಯಿತರಾಗಿದ್ದಾರೆ. ಈ ಹಿಂದೆ ಉಜಿರೆಯಲ್ಲಿ ಕಾಂಗ್ರೆಸ್, ನಡದಲ್ಲಿ ಬಿಜೆಪಿ, ಧರ್ಮಸ್ಥಳದಲ್ಲಿ ಬಿಜೆಪಿ, ಶಿಬಾಜೆಯಲ್ಲಿ ಬಿಜೆಪಿ ಸದಸ್ಯರಿದ್ದು, ಈ ಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನ ಕಳೆದುಕೊಂಡಿದೆ.
ಉಜಿರೆ ಗ್ರಾ.ಪಂ.: ಕಾಂಗ್ರೆಸ್ ಬೆಂಬಲಿತ ಪ್ರಕಾಶ್ ವಿ.ಎಸ್. ಆಯ್ಕೆ: ಉಜಿರೆ ಗ್ರಾ.ಪಂ.ದ ಕ್ಷೇತ್ರ 6ಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾದ ಪ್ರಕಾಶ್ ವಿ.ಎಸ್. 389 ಮತಗಳನ್ನು ಪಡೆದು ಸದಸ್ಯರಾಗಿ ಚುನಾಯಿತರಾಗಿದ್ದಾರೆ. ಇವರ ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತರಾದ ಮಂಜುನಾಥ ಮುಂಡತ್ತೋಡಿ ಅವರು 384 ಮತಗಳನ್ನು ಪಡೆದು 5 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ.
ಮರು ಎಣಿಕೆ: ಈ ಕ್ಷೇತ್ರದ ಮತ ಎಣಿಕೆ ಪೂರ್ಣಗೊಂಡಾಗ ಪ್ರಕಾಶ್ ಅವರು 3 ಅಲ್ಪ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈ ಸಂದರ್ಭ ಇವರ ಪ್ರತಿಸ್ಪರ್ಧಿ ಮಂಜುನಾಥ ಮುಂಡತ್ತೋಡಿ ಅವರು ಮರು ಎಣಿಕೆಗೆ ಚುನಾವಣಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು. ಇದರನ್ವಯ ಮತ್ತೆ ಎಣಿಕೆ ಮಾಡಲಾಯಿತು. ಇದು ಪೂರ್ಣಗೊಂಡಾಗ ಪ್ರಕಾಶ್ ಅವರು ಮಂಜುನಾಥ ಅವರಿಗಿಂತ 5 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಈ ಕ್ಷೇತ್ರದಲ್ಲಿ ಒಟ್ಟು 784 ಮತಗಳು ಚಲಾವಣೆಯಾಗಿದ್ದು, 11 ಮತಗಳು ತಿರಸ್ಕೃತಗೊಂಡಿತ್ತು. ಈ ಕ್ಷೇತ್ರದಲ್ಲಿ ಹಿಂದೆ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದು, ಕಾಂಗ್ರೆಸ್ ಮತ್ತೆ ಈ ಕ್ಷೇತ್ರವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
ನಡ ಗ್ರಾ.ಪಂ.: ಬಿಜೆಪಿ ಬೆಂಬಲಿತ ಪೂರ್ಣಿಮಾ ಉಮೇಶ್ ಆಯ್ಕೆ
ನಡ ಗ್ರಾಮ ಪಂಚಾಯತದ 1ನೇ ಕ್ಷೇತ್ರದ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾದ ಪೂರ್ಣಿಮ ಉಮೇಶ್ ಅವರು 531 ಮತಗಳನ್ನು ಪಡೆದು ಚುನಾಯಿತರಾಗಿದ್ದಾರೆ. ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತರಾದ ಶ್ರೀಮತಿ ಲಲಿತ 353 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ. ಇಲ್ಲಿ ಒಟ್ಟು 884 ಮತಗಳು ಚಲಾವಣೆಯಾಗಿದ್ದು, ಇದರಲ್ಲಿ 10 ಮತ ತಿರಸ್ಕೃತಗೊಂಡಿತ್ತು. ಈ ಪಂಚಾಯತದಲ್ಲಿ ಹಿಂದೆ ಬಿಜೆಪಿ ಸದಸ್ಯರಿದ್ದು, ಈ ಕ್ಷೇತ್ರವನ್ನು ತನ್ನಲ್ಲೆ ಉಳಿಸುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಈ ಪಂಚಾಯತದ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿದ್ದು, ಈಗ ಆಯ್ಕೆಯಾಗಿರುವ ಪೂರ್ಣಿಮ ಅವರೇ ಇಲ್ಲಿ ಮುಂದೆ ಅಧ್ಯಕ್ಷರಾಗಲಿದ್ದಾರೆ.
ಧರ್ಮಸ್ಥಳ ಗ್ರಾ.ಪಂ : ಕಾಂಗ್ರೆಸ್ ಬೆಂಬಲಿತ ಹರೀಶ್ ಸುವರ್ಣ ಆಯ್ಕೆ

ಧರ್ಮಸ್ಥಳ ಗ್ರಾಮ ಪಂಚಾಯತದ 1ನೇ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾದ ಹರೀಶ್ ಸುವರ್ಣ ಅವರು 387 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಇವರ ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತರಾದ ರಾಜೇಶ್ ರಾವ್ 268 ಮತಗಳನ್ನು ಪಡೆದುಕೊಂಡು ಪರಾಭವಗೊಂಡಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 662 ಮತಗಳು ಚಲಾವಣೆಯಾಗಿದ್ದು, ಇದರಲ್ಲಿ 7 ಮತಗಳು ತಿರಸ್ಕೃತಗೊಂಡಿದೆ. ಈ ಕ್ಷೇತ್ರದಲ್ಲಿ ಹಿಂದೆ ಬಿಜೆಪಿ ಸದಸ್ಯರಿದ್ದು, ಈ ಬಾರಿ ಕಾಂಗ್ರೆಸ್ ಈ ಕ್ಷೇತ್ರವನ್ನು ತಮ್ಮ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಶಿಬಾಜೆ ಗ್ರಾ.ಪಂ : ಬಿಜೆಪಿ ಬೆಂಬಲಿತ ರಮೇಶ್ ಗೌಡ ಕುರುಂಜ ಆಯ್ಕೆ
ಶಿಬಾಜೆ ಗ್ರಾಮ ಪಂಚಾಯತದ 2ನೇ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾದ ರಮೇಶ್ ಗೌಡ ಕುರುಂಜ ಅವರು 477 ಮತಗಳನ್ನು ಪಡೆದು ಚುನಾಯಿತರಾಗಿದ್ದಾರೆ. ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಜು ಎನ್.ಕೆ. ಅವರು 318 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 795 ಮತ ಚಲಾವಣೆಯಾಗಿದ್ದು, ಇದರಲ್ಲಿ 13 ಮತಗಳು ತಿರಸ್ಕೃತಗೊಂಡಿದೆ. ಈ ಕ್ಷೇತ್ರವನ್ನು ಬಿಜೆಪಿ ಮತ್ತೆ ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.