ಸ್ವಾತಂತ್ರ್ಯವೇ ಸ್ವೇಚ್ಛಾಚಾರವೇ

ಮಮತಾ.ಕೆ ಮೂರ್ತಿ ಉಜಿರೆ

   ಸುದೀರ್ಘವಾದ ಬ್ರಿಟಿಷ್ ಆಳ್ವಿಕೆಯ ನಂತರ 1947ರ ಆಗಸ್ಟ್ 15ರಂದು ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರಕಿತು. ಪ್ರಜಾಪ್ರಭುತ್ವದ ಉದಯವಾಯಿತು. ಬ್ರಿಟಿಷ್ ಆಡಳಿತದಿಂದ ರೋಸಿ ಹೋಗಿದ್ದ ನಮ್ಮ ದೇಶದ ಜನರಿಗೆ ಹೊಸ ಉಸಿರು ನಿರಾಳ ಸಂತಸ ಲಭಿಸಿತು. ವರ್ಷಗಳುರುಳಿದವು ಬ್ರಿಟಿಷರ ಆಡಳಿತದ ನೋವನ್ನುಂಡಿದ್ದ ನಾಯಕರು, ಜನರು ಕಾಲದ ಮರೆಗೆ ಸಂದರು. ಇಂತಹ ಹೊತ್ತಿನಲ್ಲಿ ಕಷ್ಟಪಟ್ಟು ಎಷ್ಟೋ ಜನರ ಬಲಿದಾನದಿಂದ ಪಡೆದ ಸ್ವಾತಂತ್ರ್ಯದ ಅಪಮೌಲ್ಯವಾಗುವ ಕಾಲವು ಬರುತ್ತಲಿದೆ. ಹಾಗಾಗಿಯೇ, ಇಂದು ನಾವು ಪಡೆದುಕೊಂಡ ಸ್ವಾತಂತ್ರ್ಯದ ಬೆಲೆಯನ್ನು ನೆನಪಿಸುವ, ವಿಮರ್ಶಿಸುವ ಕಾಲವೂ ಬಂದಿದೆ.
ಇಂದಿನ ಸಮಾಜದಲ್ಲಿ ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ವೈಯಕ್ತಿಕ, ಸ್ವಾರ್ಥಪೂರಿತ ನಡೆಗಳು ವಿಜೃಂಭಿಸುತ್ತಿವೆ. ಜಾಗತೀಕರಣದ ಅಬ್ಬರದಲ್ಲಿ, ಆಕರ್ಷಣೆಯಲ್ಲಿ ನಾವು ತೀರಾ ಸ್ವಾರ್ಥಿಗಳಾಗುವತ್ತ ಹೊರಟಿದ್ದೇವೆ. ಬಳಕೆ, ಅನುಭೋಗದ ಹೆಸರಿನಲಿ, ಅಭಿವೃದ್ಧಿಯ ಹೆಸರಿನಲ್ಲಿ ನಾವು ಅನುಭವಿಸುವ ಸುಖವು ನಮ್ಮ ಕಣ್ಣಲ್ಲಿ ಸರಿ ಎನಿಸಿದರೂ ಸಮಾಜದ ನೆಲೆಯ ದೃಷ್ಟಿಯಿಂದ ನೋಡಿದರೆ ವಿಪರೀತ ಪರಿಣಾಮವನ್ನೇ ಬೀರುತ್ತಿದೆ. ಆರ್ಥಿಕ ಅಸಮಾನತೆಗಳು ವ್ಯಕ್ತಿ-ವ್ಯಕ್ತಿಗಳ ನಡುವೆ ಅಸಹನೆ ಹುಟ್ಟಿಸಿ ಸಂಘರ್ಷಗಳನ್ನು ಹೆಚ್ಚಿಸುತ್ತಿದೆ. ಸಮಾಜದಲ್ಲಿ ಭಿನ್ನ ಭಿನ್ನ ಶ್ರೇಣಿಯ ಆರ್ಥಿಕ ಬಲ ಇರುವ ಜನರು ತುಂಬಿದಂತೆ ಸಮಸ್ಯೆಗಳೂ ಅಷ್ಟೇ ವೈವಿಧ್ಯಮಯವಾಗಿ, ಸಂಕೀರ್ಣವಾಗಿ ಬೆಳೆಯುತ್ತಿವೆ. ಹಾಗಾಗಿ ಸಮಸ್ಯೆಗಳ ಪರಿಹಾರಕ್ಕೆ ಬೇಕಾದ ದೂರದರ್ಶಿತ್ವ ಮತ್ತು ವಿಧಾನಗಳೂ ಬಹಳ ಭಿನ್ನರೀತಿಯ ಆಲೋಚನೆಯಿಂದ ಕೂಡಿರಬೇಕಾಗುತ್ತದೆ. ಆರ್ಥಿಕ ವಂಚನೆಯ ಜಾಲಗಳು ಕೃಷಿಕರ ಆತ್ಮಹತ್ಯೆಯ ಸುದ್ದಿಗಳು, ಕೃಷಿ ವೈಪಲ್ಯಗಳು, ಭೂಕಬಳಿಕೆ, ಅಕ್ರಮಗಳು, ಕೊಲೆ, ಸುಲಿಗೆ, ಕಳ್ಳತನಗಳು, ಅತ್ಯಾಚಾರಗಳು ಎಲ್ಲವೂ ಗೊಂದಲ ಹುಟ್ಟಿಸುವಷ್ಟು ಒಳಸುಳಿಗಳನ್ನು ಹೊಂದಿರುತ್ತವೆ. ಪ್ರತಿಯೊಂದಕ್ಕೂ ಕಾರಣ ಹುಡುಕಿದರೆ ದಿಕ್ಕು ತಪ್ಪುವಷ್ಟು ಗೋಜಲುಗಳಾಗುವುದರಿಂದ, ನಿವಾರಣೋಪಾಯಗಳು ಕಠಿಣವಾಗುತ್ತವೆ. ಹಾಗಾಗಿ ಸ್ವಾತಂತ್ರ್ಯವನ್ನು ಎಷ್ಟು ಕೊಡಬೇಕು, ಇರಬೇಕು ಎಂಬುದೇ ತಿಳಿಯದ ಸಂದಿಗ್ಧಗಳು ಹುಟ್ಟುತ್ತಿವೆ.
ಎಲ್ಲಾ ಕೃಷಿಕರ ಸೋಲಿಗೆ, ಸಮಾನವಾದ ಕಾರಣಗಳೇ ಇರಬೇಕೆಂದಿಲ್ಲ. ಆಸೆ, ಆಮಿಷಗಳು ಕಿರಿಯರಿಂದ ತೊಡಗಿ ಹಿರಿಯರವರೆಗೆ ಹಬ್ಬಿರುವುದರಿಂದ ಅನ್ಯಾಯಗಳಿಗೂ ನಾನಾ ಕಾರಣಗಳಿರುತ್ತವೆ. ಎಲ್ಲೆಡೆಯೂ ಧರ್ಮದ, ದೇವರ ಹೆಸರಿನಲ್ಲಿ ಜನರನ್ನು ಶೋಷಿಸುವವರು, ಕಾನೂನನ್ನು ಕೈಗೆತ್ತಿಕೊಳ್ಳುವವರು, ಅಮಾಯಕರನ್ನು ಬಲಿಪಶುಗಳಾಗಿಸುವವರು ತುಂಬಿಕೊಂಡು ವ್ಯವಸ್ಥೆಯು ನಲುಗುತ್ತಿದೆ.
ಪ್ರಕೃತಿ ವಿಕೋಪಗಳಿಂದಾಗಿ ಬರದಿಂದ ತತ್ತರಿಸುವ ನೆಲ ಒಂದೆಡೆ ಗಮನ ಸೆಳೆದರೆ, ಅತಿವೃಷ್ಟಿ, ನೆರೆಗಳಿಂದ ನಾಶವಾಗುತ್ತಿರುವ ನೆಲ ಒಂದೆಡೆಗೆ ಕಾಣಿಸುತ್ತದೆ. ನಗರೀಕರಣ, ಸೌಲಭ್ಯಗಳು, ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯನಾಶ ನಡೆದು ಪರಿಸರದ ಸಮತೋಲನ ಮಾಯಾವಾಗುತ್ತಿದೆ. ಹಾಗಾಗಿ ಪರಿಹಾರ ಸೂತ್ರಗಳೂ ಬೇರೆ ಬೇರೆ ರೀತಿಯವುಗಳಾಗಿರಬೇಕು. ದಾಸ್ತಾನು ಕೋಣೆಗಳಲ್ಲಿ ಮುಗ್ಗಲು ಹಿಡಿದು ಹಾಳಾಗುವ ಅಕ್ಕಿ, ಬೇಳೆಗಳು ಶೇಖರವಾಗಿದ್ದರೆ ಇನ್ನೊಂದೆಡೆ ಹಸಿವಿನಿಂದ ನರಳುವವರ ಕೂಗು ಕೇಳಿಸುತ್ತದೆ. ಸಾಕ್ಷರತೆಯ ಕರೆ ಮುಗಿಲು ಮುಟ್ಟಿದ್ದರೂ, ಶಾಲೆ ತಪ್ಪಿಸುವವರ ಸಂಖ್ಯೆಯೂ ದೊಡ್ಡದಾಗಿಯೇ ಇದೆ . ಕೃಷಿ ಉತ್ಪನ್ನಗಳ ಬೇಡಿಕೆ ಉತ್ಪಾದನೆಗಳ ಸಮತೋಲನ ತಪ್ಪಿ ಬೆಳೆಗಳ ನಾಶ, ರೈತರ ಹತಾಶೆ ಕಾಣುತ್ತಲೇ ಇದೆ. ಉತ್ಪಾದನೆ, ವಿತರಣೆ ಎರಡೂ ಆಗಬೇಕಾದ ರೀತಿಯಲ್ಲಿ ಆಗುತ್ತಿಲ್ಲ ಸರಕಾರಿ ಶಾಲೆಗಳು ಗೋಡೆ ಕುಸಿದು, ಮಾಡು ಸೋರಿ ಬೀಳುತ್ತಿದ್ದರೆ ಹೈಟೆಕ್ ಶಾಲೆಗಳು ದುಬಾರಿ ಶುಲ್ಕ ಪಡೆದು ಬೆಳೆಯುತ್ತಿವೆ. ಮದ್ಯಪಾನ, ಧೂಮಪಾನ, ಮಾದಕ ದ್ರವ್ಯಗಳ ನಿಷೇಧದ ನಡುವೆ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಲೇ ನಡೆದಿದ್ದು ಸಮಾಜದ ಪಿಡುಗುಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಹಿಂಸೆಯು ಕಾಳ್ಗಿಚ್ಚಿನಂತೆ ವ್ಯಾಪಕವಾಗುತ್ತಿದ್ದು ಸುಳ್ಳು, ವಂಚನೆಗಳು ಬಹಳ ಸಹಜವೆಂಬಂತೆ ಸ್ವೀಕಾರವಾಗುತ್ತಿವೆ. ತಾಂತ್ರಿಕ ಆವಿಷ್ಕಾರಗಳು ಸವಲತ್ತುಗಳಾಗಿ ತೋರಿದರೂ ನಮ್ಮನ್ನು ಶ್ರಮಜೀವನದಿಂದ ವಿಮುಖರನ್ನಾಗಿಸಿ ಸೋಮಾರಿಗಳನ್ನಾಗಿಸುತ್ತದೆ. ಕೊಳ್ಳುಬಾಕತನಕ್ಕೆ ದುಡಿದ ಹಣವೆಷ್ಟಿದ್ದರೂ ಸಾಲದು ಎಂಬಂತಾಗಿ ಅನ್ಯಾಯದ ದುಡಿಮೆ ಹೆಚ್ಚುತ್ತಿದೆ. ನಮ್ಮ ಬಯಕೆಯನ್ನು ಮಿತಿಯಲ್ಲಿಟ್ಟುಕೊಳ್ಳದೆ ಸ್ವೇಚ್ಛಾಚಾರಿಗಳಾದರೆ ಮುಂದಿನ ಭವಿಷ್ಯದಲ್ಲಿ ಒಳಿತನ್ನು ಹೇಗೆ ತಾನೇ ನಿರೀಕ್ಷಿಸಲು ಸಾಧ್ಯ.? ಭ್ರಷ್ಟರಾದ ಅಧಿಕಾರಿಗಳು, ರಾಜಕಾರಣಿಗಳು, ಶಿಕ್ಷಕರು, ಹೆತ್ತವರು, ವೈದ್ಯರು, ನ್ಯಾಯಾಧೀಶರು ಎಲ್ಲರೂ ಸೇರಿಕೊಂಡಿರುವ ಈ ಸಮಾಜಕ್ಕೆ ಎಷ್ಟು ಸ್ವಾತಂತ್ರ್ಯ ಬೇಕು ಎಂದು ವಿಮರ್ಶಿಸುವ ಕಾಲ ಈಗಾಗಲೇ ಬಂದಿದೆ.
ಇನ್ನೊಬ್ಬರಿಗೆ ತೊಂದರೆಯಾಗದಂತೆ ನಮ್ಮ ಹಕ್ಕನ್ನು ಚಲಾಯಿಸುವುದು, ನಾಗರಿಕ ಸೌಲಭ್ಯಗಳನ್ನು ಅನುಭವಿಸುವವುದು, ವ್ಯವಸ್ಥೆಯ ಅನುಕೂಲಗಳನ್ನು ಪಡೆಯುವುದು, ಜವಬ್ದಾರಿಯಿಂದ ವರ್ತಿಸುವುದು ನಮ್ಮ ಮುಖ್ಯ ಗುರಿಯಾಗಬೇಕು. ಮಾನವೀಯ ಗುಣಗಳನ್ನು ಎಲ್ಲಾ ಸಂದರ್ಭದಲ್ಲೂ ಕಾಪಾಡಿಕೊಳ್ಳಬೇಕು.
ನಿಜವಾದ ಅರ್ಥದ ಸ್ವಾತಂತ್ರ್ಯ ಇನ್ನೂ ನಾಶವಾಗಿಲ್ಲ, ಆದರೆ ಕ್ಷೀಣಿಸುತ್ತಿರುವ, ಅದಕ್ಕೆ ನವಚೇತನ ನೀಡುವ ಪ್ರಯತ್ನವು ಎಲ್ಲರ ಮೂಲ ಮಂತ್ರವಾಗಬೇಕು ಸ್ವಾತಂತ್ರ್ಯ ಮತ್ತು ಸ್ವಚ್ಛೆಯ ನಡುವಣ ಅಂತರವು ಗುರುತಿಸಲೆಬೇಕು. ಈಗ ದೇಶದೆಲ್ಲೆಡೆ ಬದಲಾವಣೆಯ ಗಾಳಿಯೂ ಹಬ್ಬುತ್ತಿದೆ. ಶಾಲೆಯ ಮಕ್ಕಳನ್ನು ಕೃಷಿಯೆಡೆಗೆ ಆಕರ್ಷಿಸುವ ಚಟುವಟಿಕೆಗಳು ನಡೆಯುತ್ತಿವೆ. ಯೋಗಾಸನ, ಕ್ರೀಡೆಗಳಿಂದ ಮಕ್ಕಳ ಮನಸ್ಸನ್ನು ಅರಳಿಸುವ, ದೇಹವನ್ನು ಚೈತನ್ಯ ಶೀಲವಾಗಿಸುವ ತರಬೇತಿಗಳು ನಡೆಯ ತೊಡಗಿವೆ. ಪರಿಸರ ಪ್ರಜ್ಞೆಯನ್ನು ಮೂಡಿಸಲು ಶಾಲಾ ಮಟ್ಟದಲ್ಲೇ ಪ್ರಯತ್ನಗಳು ತೊಡಗಿವೆ. ಶುಚಿತ್ವದ ಬಗ್ಗೆ, ಆರೋಗ್ಯದ ಬಗ್ಗೆ ಸಾಕಷ್ಟು ಚರ್ಚೆಗಳು, ಕೆಲಸಗಳು ನಡೆಯುತ್ತಿವೆ. ಇವೆಲ್ಲವೂ ಸ್ವಾತಂತ್ರ್ಯದ ಮಹತ್ವವನ್ನು ಬೆಳೆಸಿ ಸ್ವೇಚ್ಛಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಗುವ ಪ್ರಯತ್ನಗಳು ಎಂಬುದು ಸಂತೋಷದ ವಿಷಯ. ಇಂತಹ ಪ್ರಯತ್ನಗಳು ಹೆಚ್ಚಾಗಲಿ ಸ್ವಾತಂತ್ರ್ಯವು ಉಳಿಯಲಿ. ಆ ನಿಟ್ಟಿನಲ್ಲಿ ದೇಶವಿಡೀ ಜಾಗೃತವಾಗಿ ಯೋಚಿಸಿ ಯೋಜಿಸಿ ನಡೆಯಲಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.