ಸೌಜನ್ಯಾ ಪ್ರಕರಣದಲ್ಲಿ ಸಿಬಿಐ ತೀರ್ಪಿಗೆ ಧರ್ಮಸ್ಥಳ ಹಿತರಕ್ಷಣಾ ವೇದಿಕೆ ಹರ್ಷ ಆ. 19ಕ್ಕೆ ಸತ್ಯಕ್ಕೆ ಸಂದ ಜಯ ಹೆಸರಿನಲ್ಲಿ ಊರವರು, ಧರ್ಮಸ್ಥಳ ಅಭಿಮಾನಿಗಳ ಸಂಗಮ

Advt_NewsUnder_1
Advt_NewsUnder_1
Advt_NewsUnder_1

Dharmasthala press meet copy  ಧರ್ಮಸ್ಥಳ : 2012ರಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ನಡೆದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಿಬಿಐ ತನಿಖಾ ವರದಿ ಹೊರಬಿದ್ದಿದ್ದು ಅದರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಕುಟುಂಬವರ್ಗದವರ ಪಾತ್ರವಿಲ್ಲ ಎಂದು ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐ ವರದಿಯಲ್ಲಿ ತಿಳಿಸಲಾಗಿದ್ದು ಇದರಿಂದ ಧರ್ಮಸ್ಥಳ ಕ್ಷೇತ್ರದ ಭಕ್ತರು, ಗ್ರಾಮಸ್ಥರು ಹಾಗೂ ಹಿತರಕ್ಷಣಾ ವೇದಿಕೆಯು ಹರ್ಷ ವ್ಯಕ್ತಪಡಿಸುತ್ತದೆ ಎಂದು ಹಿತರಕ್ಷಣಾ ವೇದಿಕೆಯ ಪ್ರಮುಖರಾದ ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷ ಚಂದನ್‌ಪ್ರಸಾದ್ ಕಾಮತ್, ನ್ಯಾಯವಾದಿ ಕೇಶವ ಪಿ ಬೆಳಾಲು ಅವರು ಆ. 10 ರಂದು ಧರ್ಮಸ್ಥಳದಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. 2012 ಅ. 10 ರಂದು ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಕಾಣೆಯಾಗಿ ಸುದ್ದಿ ತಿಳಿದಾಗ ಧರ್ಮಸ್ಥಳದ ನಾಗರಿಕರೆಲ್ಲ ಒಟ್ಟಾಗಿ ಹುಡುಕುವುದಕ್ಕೆ ಸಹಕರಿಸಿದ್ದಲ್ಲದೆ, ಹುಡುಗಿಯ ಅಜ್ಜ ಬಾಲು ಗೌಡ ಅವರು ಹೆಗ್ಗಡೆಯವರಲ್ಲಿ ತಿಳಿಸಿದಾಗ ತಕ್ಷಣವೇ ಹುಡುಕಾಟಕ್ಕೆ ಜನ ಕಳುಹಿಸುವ ವ್ಯವಸ್ಥೆ ಮಾಡಿದ್ದಲ್ಲದೆ ಮಾರನೆ ದಿನ ಆಕೆಯ ಹತ್ಯೆಯಾದದ್ದು ತಿಳಿದಾಕ್ಷಣ ಗೃಹ ಸಚಿವರಿಗೂ ದೂರವಾಣಿ ಕರೆಮಾಡಿ ಮಾತನಾಡಿ ತಕ್ಷಣವೇ ಈ ನಿಟ್ಟಿನಲ್ಲಿ ತನಿಖೆಗೆ ಹೆಗ್ಗಡೆಯವರು ಒತ್ತಾಯಿಸಿದ್ದರು.

ಸಂತೋಷ್ ರಾವ್ ಅನ್ನುವ ವ್ಯಕ್ತಿ ಕೃತ್ಯ ನಡೆಸಿದ್ದೆಂದು ಪೋಲಿಸರು ತನಿಖೆ ನಡೆಸುತ್ತಿರುವ ಸಂದರ್ಭ ಪ್ರಕರಣವನ್ನು ಸಿ.ಐ.ಡಿ. ಗೆ ಹಸ್ತಾಂತರಿಸಿ, ಅವರು ತನಿಖೆ ನಡೆಸುತ್ತಿದ್ದಾಗ ಸುಮಾರು ಒಂದು ವರ್ಷದ ನಂತರ ಮೃತರ ತಂದೆ, ತಾಯಿ ಮತ್ತು ಮಾವ ವಿಠಲ ಗೌಡ, ಕೇಮಾರು ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ಹಾಗೂ ಮಹೇಶ ಶೆಟ್ಟಿ ತಿಮರೋಡಿ ಅವರ ಒಂದು ಪ್ರಾಯೋಜಿತ ಗುಂಪು ಈ ಕೃತ್ಯದ ಹಿಂದೆ ಧರ್ಮಸ್ಥಳದ ಧೀರಜ್ ಕೆಲ್ಲ, ಮಲ್ಲಿಕ್ ಜೈನ್ ಹಾಗೂ ಉದಯ ಅವರ ಕೈವಾಡ ಇದೆ ಎನ್ನುವ ಆರೋಪ ಮಾಡಿ ಟಿ.ವಿ ೯ ಹಾಗೂ ಇತರ ಮಾಧ್ಯಮ ಮುಖೇನ ಅಪಪ್ರಚಾರ ಮಾಡಿದರು. ಹುಡುಗರಿಗೆ ಹೆಗ್ಗಡೆಯವರು ರಕ್ಷಣೆ ನೀಡುತ್ತಿದ್ದಾರೆ ಎನ್ನುವ ಕಠೋರ ಸುಳ್ಳನ್ನು ಸತ್ಯವೆಂಬಂತೆ ಬಿಂಬಿಸಿ, ಹೆಗ್ಗಡೆಯವರ ಕುಟುಂಬವೂ ಈ ಕೃತ್ಯದಲ್ಲಿ ಶಾಮೀಲಾಗಿದೆ ಎನ್ನುವ ಮಟ್ಟಕ್ಕೆ ತಲುಪಿ ಅಲ್ಲಲ್ಲಿ ಸಭೆ ನಡೆಸಿತು. ಅಲ್ಲದೆ ಧರ್ಮಸ್ಥಳದಲ್ಲಿ ಕೊಲೆಗಡುಕರ ಗುಂಪೇ ಇರುವುದಾಗಿಯೂ, ಇಲ್ಲಿ ಕಳೆದ ೧೦ ವರ್ಷದಲ್ಲಿ ೫೦೦ ಕ್ಕೂ ಅಧಿಕ ಕೊಲೆ ನಡೆದಿದೆ ಅನ್ನುವ ಸುಳ್ಳನ್ನು ಹೇಳುತ್ತಾ ಕ್ಷೇತ್ರದ ಹಾಗೂ ಹೆಗ್ಗಡೆಯವರ ವೈಯಕ್ತಿಕ ಮಾನ ಹಾನಿಗೂ ಮುಂದಾದರು. ಈ ಸಂದರ್ಭ ಸಿ.ಐ.ಡಿ. ಯವರು ವಿಸ್ತೃತ ತನಿಖೆ ಮಾಡಿ ಸಂತೋಷ ರಾವ್ ನಿಂದಲೇ ಈ ಕೃತ್ಯ ನಡೆದದ್ದಾಗಿ, ಇದರಲ್ಲಿ ಬೇರೆ ಯಾರ ಕೈವಾಡವೂ ಇಲ್ಲ ಎಂದು ವರದಿ ಸಲ್ಲಿಸಿದ್ದರೂ, ಈ ವರದಿ ನಂಬಲರ್ಹವಲ್ಲ ಎಂದು ಮೇಲೆ ತಿಳಿಸಿದ ಪ್ರಾಯೋಜಿತ ಗುಂಪು ಜನರಲ್ಲಿ ಅಪನಂಬಿಕೆ ಬಿತ್ತುತ್ತಿದ್ದ ಕಾರಣ ಹೆಗ್ಗಡೆಯವರು ಖುದ್ದಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಸಿ.ಬಿ.ಐ. ಯಿಂದ ಈ ಪ್ರಕರಣದ ಕುರಿತು ಉನ್ನತ ತನಿಖೆ ನಡೆಸಬೇಕೆಂದು ವಿನಂತಿಸಿಕೊಂಡಿದ್ದರು. ಸಿ.ಬಿ.ಐ. ತನಿಖೆಗೆ ರಾಜ್ಯ ಸರಕಾರ ನಿರ್ಧರಿಸಿತ್ತು. ರಾಷ್ಟ್ರದ ಅತ್ಯುನ್ನತ ತನಿಖಾ ಸಂಸ್ಥೆ ಸಿ.ಬಿ.ಐ. ಆಳವಾದ ತನಿಖೆ ನಡೆಸಿ, ವೈಜ್ಞಾನಿಕ ವರದಿಗಳನ್ನು ಸಹ ಪಡೆದುಕೊಂಡು, ಸಾಕ್ಷ್ಯ ಸಂಗ್ರಹಿಸಿ, ಸಂತೋಷ ರಾವ್ ಅವರೇ ಕೃತ್ಯವೆಸಗಿದ್ದೆಂದು ಮಾನ್ಯ ಬೆಂಗಳೂರು ಸಿ.ಬಿ.ಐ. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಇತ್ತೀಚೆಗೆ ಸಲ್ಲಿಸಿದ್ದಾರೆ.
ಸಿ.ಬಿ.ಐ. ವರದಿಯಿಂದ ಈಗ ಕಂಡುಕೊಂಡಂತೆ, ಸತ್ಯಕ್ಕೆ ಜಯವಾಗಿದೆ. ಆದರೆ, ಈ ಪ್ರಾಯೋಜಿತ ಗುಂಪು ಯಾವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ, ಹೆಗ್ಗಡೆಯವರು ಮತ್ತು ಧರ್ಮಸ್ಥಳದ ನಾಗರಿಕರ ಮೇಲೆ ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ, ಇದರ ಹಿಂದಿನ ನಿಗೂಢ ಉದ್ದೇಶವೇನು?, ಯಾಕಾಗಿ ಧರ್ಮಸ್ಥಳದಲ್ಲಿ ಕೊಲೆಗಡುಕರ ಗುಂಪೇ ಇರುವುದಾಗಿಯೂ, ಈಗಾಗಲೇ 500 ಕ್ಕೂ ಹೆಚ್ಚು ಕೊಲೆ ಇಲ್ಲಿ ನಡೆದಿದೆ ಅನ್ನುವ ಆರೋಪ ಮಾಡುತ್ತಿರುವುದು? ಹೆಗ್ಗಡೆಯವರ ಕುಟುಂಬದ ಸದಸ್ಯರ ಹೆಸರನ್ನು ಈ ಪ್ರಕರಣದಲ್ಲಿ ಎಳೆದು ತರುವ ಹಿಂದೆ ಅಡಗಿರುವ ಷಡ್ಯಂತ್ರ ಏನು? ಇದಕ್ಕೆ ಪರಿಹಾರವಿಲ್ಲವೇ? ಜಿಲ್ಲಾಡಳಿತ, ಪೋಲಿಸ್ ಇಲಾಖೆ ಅಥವಾ ಸರಕಾರಕ್ಕೆ ಬದ್ಧತೆ ಇಲ್ಲವೆ? ಈಗಲಾದರೂ ಸರಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಹೆಗ್ಗಡೆಯವರಂತಹ ಸಮಾಜದ ಪ್ರತಿಷ್ಟಿತ ವ್ಯಕ್ತಿಗಳ ಮೇಲೆ ಈ ರೀತಿಯ ಸುಳ್ಳು ಆರೋಪ ಮಾಡಿದಾಗ ಸರಕಾರ ಮತ್ತು ಸಂಬಂಧಿಸಿದ ಇಲಾಖೆ ಸೂಕ್ತ ಹಾಗೂ ತಕ್ಷಣದ ಕ್ರಮಕ್ಕೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
ಕಳೆದ 3 ವರ್ಷಗಳಿಂದ ಶ್ರೀ ಕ್ಷೇತ್ರದ ಗೌರವದ ರಕ್ಷಣೆಗೆ ಪಣತೊಟ್ಟಿದ್ದು ಯಾವುದೇ ಹಿಂಸಾತ್ಮಕ ಘಟನೆಗಳಿಗೆ ಆಸ್ಪದ ನೀಡಿದೆ ಇನ್ನು ಮುಂದೆಯೂ ಈ ಎಲ್ಲಾ ಆರೋಪಗಳನ್ನು ಸಹಿಸಿಕೊಂಡು ಸುಮ್ಮನಿರುವುದು ಧರ್ಮಸ್ಥಳದ ನಾಗರಿಕರಿಗೆ ಸರಿ ಕಾಣುವುದಿಲ್ಲ. ಸಿ.ಬಿ.ಐ. ವರದಿಯಿಂದ ಕಾನೂನಿನ ಅಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹಾಗೂ ಇಲ್ಲಿಯ ನಾಗರಿಕರಿಗೆ ನ್ಯಾಯ ಸಿಕ್ಕಿರಬಹುದು. ಆದರೆ ಸಾಮಾಜಿಕ ನ್ಯಾಯ ಇನ್ನಷ್ಟೆ ಸಿಗಬೇಕು. ಸರಕಾರ ಅಥವಾ ಸಂಬಂಧಿಸಿದ ಇಲಾಖೆಗಳು ತಕ್ಷಣವೇ ಮುಂದಿನ ಕ್ರಮಕ್ಕೆ ಮುಂದಾಗಬೇಕು. ಅಪವಾದ ಹೊತ್ತ ಈ ೩ ನಿರ್ದೋಷಿಗಳು ಈಗಾಗಲೇ ಸುಳ್ಳು ಆರೋಪ ಮಾಡಿದವರ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದು ಇನ್ನೂ ಮುಂದುವರಿದು ಹೆಚ್ಚಿನ ಮೊಕದ್ದಮೆಯನ್ನು ದಾಖಲಿಸಲಿದ್ದಾರೆ. ಕಳೆದ ೪ ವರ್ಷಗಳಿಂದ ನಮ್ಮೂರ ಮಗು ಸೌಜನ್ಯಾಳಿಗೆ ಪ್ರಾಯೋಜಿತ ಗುಂಪು ಮುಕ್ತಿ ಸಿಗದಂತೆ ಎಷ್ಟೇ ಪ್ರಯತ್ನ ಪಟ್ಟರೂ ಈಗಲಾದರೂ ನ್ಯಾಯ ಮತ್ತು ಮುಕ್ತಿ ಸಿಕ್ಕಿದಂತಾಗಿದೆ ಎನ್ನುವುದರಲ್ಲಿ ನಮಗೆ ಸಂತೋಷವಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಪತ್ರಿಕಾ ಗೋಷ್ಟಿಯಲ್ಲಿ ಬಾಲಕೃಷ್ಣ ಪೂಜಾರಿ ಬಜ, ಭಾಸ್ಕರ ಧರ್ಮಸ್ಥಳ, ರತ್ನವರ್ಮ ಜೈನ್, ಹರಿದಾಸ್ ಗಾಂಭೀರ, ಟಿ. ಬಿ ದೇವಸ್ಯ, ರಕ್ಷಿತ್, ಸುಧಾಕರ್, ಶ್ರೀನಿವಾಸ್ ರಾವ್ (ಪುಟಾಣಿ), ಲಕ್ಷ್ಮೀ ಭಟ್, ಸಿದ್ದೀಕ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.