ಧರ್ಮಸ್ಥಳ: ಧರ್ಮಸ್ಥಳ ಇಲ್ಲಿನ ಗ್ರಾಮ ಪಂಚಾಯತ್ ಅಧ್ಯಕ್ಷ ಅಚ್ಚುತ ಪೂಜಾರಿ ಅವರು ಜು. 13 ರಂದು ಅಕಾಲಿಕವಾಗಿ ನಿಧನರಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕಾಗಿ ಆ. 6 ರಂದು ನಡೆದ ಚುನಾವಣೆಯಲ್ಲಿ ಗ್ರಾ. ಪಂ ಸದಸ್ಯ, ಕಾಂಗ್ರೆಸ್ ಪಕ್ಷದ ತಾಲೂಕು ಮುಖಂಡ ಉದ್ಯಮಿ ಚಂದನ್ಪ್ರಸಾದ್ ಕಾಮತ್ ಅವರು 11-13 ಮತಗಳ ಅಂತರದಿಂದ ಜಯಸಾಧಿಸಿದ್ದಾರೆ.
ಗ್ರಾ. ಪಂ ನ ಒಟ್ಟು ೨೫ ಸ್ಥಾನಗಳ ಪೈಕಿ ಅಚ್ಚುತ ಪೂಜಾರಿ ಅವರ ನಿಧನದ ಬಳಿಕ ೨೪ ಸದಸ್ಯರು ಮಾತ್ರ ಇದ್ದು, ಈ ಪೈಕಿ ೧೩ ಮಂದಿ ಬಿ.ಜೆ.ಪಿ ಬೆಂಬಲಿತ ಸದಸ್ಯರಿದ್ದಾರೆ. 11 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಇಂದು ತಹಶಿಲ್ದಾರ್ ಪ್ರಸನ್ನಮೂರ್ತಿ ಅವರ ನೇತೃತ್ವದಲ್ಲಿ ನಡೆದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಚಂದನ್ಪ್ರಸಾದ್ ಕಾಮತ್, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಶ್ರೀನಿವಾಸ್ ಪುಟಾಣಿ ಅವರು ನಾಮಪತ್ರ ಸಲ್ಲಿಸಿದ್ದರು. ಮತ ಎಣಿಕೆಯ ವೇಳೆ ಚಂದನ್ಪ್ರಸಾದ್ ಕಾಮತ್ ಅವರಿಗೆ ೧೩ ಮತಗಳ ಬಂದಿದ್ದು ಶ್ರೀನಿವಾಸ್ ಅವರು ೧೧ ಮತಗಳನ್ನಷ್ಟೇ ಪಡೆದು ಪರಾಭವಗೊಂಡರು. ಇಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು 11 ಮಂದಿ ಮಾತ್ರ ಇದ್ದರೂ ಕೂಡ ಇಬ್ಬರು ಸದಸ್ಯರು ಚಂದನ್ ಅವನ್ನು ಮತದಾನದ ಮೂಲಕ ಬೆಂಬಲಿಸಿದ್ದರಿಂದ ಅವರು ವಿಜಯಿಯಾದರು.
ಚಂದನ್ಪ್ರಸಾದ್ ಕಾಮತ್ ಅವರು ಧರ್ಮಸ್ಥಳದಲ್ಲಿ ಕಾಮತ್ ರೆಸ್ಟೋರೆಂಟ್ ನಡೆಸುತ್ತಿದ್ದು ಈ ಹಿಂದೊಮ್ಮೆಯೂ ಗ್ರಾ.ಪಂ ಅಧ್ಯಕ್ಷರಾಗಿ ಆಡಳಿತದ ಅನುಭವ ಪಡೆದವರಾಗಿದ್ದಾರೆ. ಧರ್ಮಸ್ಥಳ ಸಹಕಾರಿ ಸಂಘದ ಅಧ್ಯಕ್ಷರಾಗಿ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಉಪಾಧ್ಯಕ್ಷರಾಗಿ ಸೇರಿದಂತೆ ಪಕ್ಷದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದಾರೆ. ಉತ್ತಮ ಕ್ರೀಡಾಪಟುವೂ ಆಗಿರುವ ಅವರು ಅವರದೇ ಕ್ರಿಕೆಟ್ ತಂಡ ಮತ್ತು ವಾಲಿಬಾಲ್ ತಂಡವನ್ನು ಕಟ್ಟಿಕೊಂಡಿದ್ದಾರೆ.