ವೇಣೂರು : ಇಲ್ಲಿಯ ಖಾಸಗಿ ಶಿಕ್ಷಣ ಸಂಸ್ಥೆಯ ವಾಸ್ಟೆಲ್ನಿಂದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿರುವ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕು ಎಂ.ಕೆ. ಹುಬ್ಬಳ್ಳಿ ನಿವಾಸಿ ಬಸವರಾಜ್ ಮುದುಕಪ್ಪ ಗಿರಜಿಮನಿ ಪುತ್ರ ವೇಣೂರು ಖಾಸಗಿ ಶಾಲೆಯ ೯ನೇ ತರಗತಿ ವಿದ್ಯಾರ್ಥಿ ಮನೋಜ್ ಗಿರಿಜಮನಿ (15) ಮತ್ತು ಬೆಳಗಾವಿ ವೈಭವ್ ನಗರದ ಸುರೇಶ್ ದೊಡ್ಡನಾಯ್ಕರ್ ಅವರ ಪುತ್ರ ೭ನೇ ತರಗತಿಯ ವಿದ್ಯಾರ್ಥಿ ಕಿರಣ್ ಎಸ್.ಡಿ. (12) ನಾಪತ್ತೆಯಾದ ವಿದ್ಯಾರ್ಥಿಗಳು.
ಆ.೪ರ ಸಂಜೆ ಈ ಇಬ್ಬರು ವಿದ್ಯಾರ್ಥಿಗಳು ಹಾಸ್ಟೆಲ್ನಿಂದ ಮೂತ್ರ ವಿಸರ್ಜನೆಗೆಂದು ತೆರಳಿದವರು ವಾಪಸಾಗದೆ ನಾಪತ್ತೆಯಾಗಿದ್ದಾರೆ.
ಊರಿಗೆ ಹೋಗುವುದಾಗಿ ತಿಳಿಸಿದ್ದರು: ನಾಪತ್ತೆಯಾದ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳಲ್ಲಿ ಶಾಲೆ ಬಿಟ್ಟು ಹುಬ್ಬಳ್ಳಿಗೆ ಹೋಗಿ ಅಲ್ಲಿಂದ ಕಡೂರಿಗೆ ಹೋಗಿ ರೈಲಿನಲ್ಲಿ ಊರಿಗೆ ಹೋಗುವುದಾಗಿ ತಿಳಿಸಿದ್ದಾರೆ. ಆದರೆ ಊರಿಗೂ ಮರಳದೇ ಇರುವುದರಿಂದ ಪೋಷಕರು ಆತಂಕ್ಕೀಡಾಗಿದ್ದು, ಇಬ್ಬರು ಜೊತೆಯಾಗಿ ತೆರಳಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಗೋಧಿ ಮೈಬಣ್ಣ ಹೊಂದಿರುವ ಮನೋಜ್ ಗಿರಿಜಮನಿ ಕನ್ನಡ, ಇಂಗ್ಲೀಷ್ ಭಾಷೆ ಮಾತನಾಡಬಲ್ಲವನಾಗಿದ್ದು, ಬೂದು ಬಣ್ಣದ ಜಾಕೆಟ್ ಹಾಗೂ ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಕಿರಣ್ ಎಸ್.ಡಿ. ಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ, ಹಿಂದಿ, ಇಂಗ್ಲೀಷ್, ಬಲ್ಲವನಾಗಿದ್ದು, ಕಪ್ಪು ಬಣ್ಣದ ಜಾಕೆಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಇವರ ಮಾಹಿತಿ ದೊರೆತವರು ವೇಣೂರು ಪೊಲೀಸ್ ಠಾಣೆ (08256-286232 ಅಥವಾ 9480805372) ಯನ್ನು ಅಥವಾ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.