ಆದಾಯ ಘೋಷಣೆ ಯೋಜನೆ-2016 : ಮಾಹಿತಿ ಕಾರ್ಯಾಗಾರ ಅಘೋಷಿತ ಆದಾಯ ಬಹಿರಂಗಪಡಿಸಲು ಉತ್ತಮ ಅವಕಾಶ : ಜಂಟಿ ಆಯುಕ್ತ

Adaya goshane yojane copy  ಉಜಿರೆ : ಆದಾಯ ತೆರಿಗೆ ಇಲಾಖೆ ಪುತ್ತೂರು, ಚಾರ್ಟರ್ಡ್ ಎಕೌಂಟೆಂಟ್ಸ್ ಬೆಳ್ತಂಗಡಿ ಮತ್ತು ಬೆಳ್ತಂಗಡಿ ತೆರಿಗೆ ಸಲಹೆಗಾರರ ಜಂಟಿ ಆಶ್ರಯದಲ್ಲಿ ‘ಆದಾಯ ಘೋಷಣೆ ಯೋಜನೆ-2016’ ಇದರ ಬಗ್ಗೆ ಮಾಹಿತಿ ಕಾರ್ಯಕ್ರಮವು ಜು.೨೨ರಂದು ಉಜಿರೆ ಸೀತಾರಾಮ ಕಲಾಮಂದಿರ ರಾಮನಗರ ಹಳೆಪೇಟೆ ಉಜಿರೆಯಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಂಗಳೂರು ಆದಾಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಕೆ.ಎ ಚಂದ್ರಕುಮಾರ್ ಅವರು ಮಾಹಿತಿ ನೀಡಿ, ನಮ್ಮ ದೇಶವನ್ನು ಸೈನಿಕರು ರಾತ್ರಿ ಹಗಲು ಕಾಯುತ್ತಿದ್ದಾರೆ. ದೇಶದ ರಕ್ಷಣೆಯ ಜೊತೆಗೆ ದೇಶದ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಇದಕ್ಕೆ ಸಂಪನ್ಮೂಲದ ಅಗತ್ಯವಿದೆ. ಇದು ಜನರು ವಿವಿಧ ರೀತಿಯಲ್ಲಿ ನೀಡುವ ತೆರಿಗೆ ಮೂಲಕ ಬರಬೇಕಾಗಿದೆ. ಇದಕ್ಕಾಗಿ ನಾವೆಲ್ಲ ಪ್ರಾಮಾಣಿಕತೆಯಿಂದ ತೆರಿಗೆಯನ್ನು ಕಟ್ಟಬೇಕು ಎಂದು ಹೇಳಿದರು. ಇದೀಗ ಸರಕಾರ ಆದಾಯ ಘೋಷಣೆ ಯೋಜನೆ-2016 ಜಾರಿ ಮಾಡಿದೆ. ಈ ಯೋಜನೆಯಡಿ ಸಾರ್ವಜನಿಕರು ತಮ್ಮ ಆದಾಯದ ವಿವರಗಳನ್ನು ಘೋಷಿಸಿದರೆ ಕಡಿಮೆ ದಂಡದೊಂದಿಗೆ ತೆರಿಗೆ ಪಾವತಿಸಿ ಸಕ್ರಮಗೊಳಿಸಲು ಸಾಧ್ಯವಿದೆ. ಅಘೋಷಿತ ಆದಾಯವನ್ನು ಬಹಿರಂಗಪಡಿಸಲು ಸರಕಾರ ಈ ಅವಕಾಶವನ್ನು ನೀಡಿದೆ ಎಂದು ತಿಳಿಸಿದರು.
ಈ ಯೋಜನೆಯಡಿ ಆದಾಯ ಘೋಷಣೆ ಮಾಡುವ ವ್ಯಕ್ತಿಗಳಿಗೆ ಶೇ ೩೦ರ ತೆರಿಗೆ ಮತ್ತು ಶೇ ೭.೫ ದಂಡದೊಂದಿಗೆ ಆದಾಯ ಸಕ್ರಮಗೊಳಿಸಬಹುದು, ಅಘೋಷಿತ ಆದಾಯ ಇರುವವರು ಮತ್ತು ಈಗಾಗಲೇ ಆದಾಯ ತೆರಿಗೆ ಕಟ್ಟುತ್ತಿದ್ದು, ಹೆಚ್ಚುವರಿ ಆದಾಯ ಇದ್ದರೆ ಅದನ್ನು ಈ ಸಂದರ್ಭದಲ್ಲಿ ಘೋಷಿಸಿ ನೆಮ್ಮದಿಯ ಜೀವನ ನಡೆಸಬಹುದು. ಆದಾಯ ಘೋಷಣೆ ಮಾಡುವವರಿಗೆ ನಿಗದಿತ ಅವಧಿಯಿದ್ದು, ಅರ್ಜಿಯನ್ನು ಆನ್‌ಲೈನ್ ಮೂಲಕ ತುಂಬಬಹುದು. ಅಥವಾ ಮಂಗಳೂರಿನ ಅತ್ತಾವರದಲ್ಲಿರುವ ನಮ್ಮ ಕಚೇರಿಗೆ ಬಂದು ಬೇಕಾದ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬಹುದು ಎಂದು ತಿಳಿಸಿದರು.
ಆದಾಯ ತೆರಿಗೆ ಕಟ್ಟುವುದು ಖಡ್ಡಾಯ, ಒಂದು ವೇಳೆ ಕಪ್ಪು ಹಣ ಹೊಂದಿರುವವರು ಪತ್ತೆಯಾದರೆ ಅವರ ಮೇಲೆ ಕಾನೂನು ಕ್ರಮಗಳು ಜರುಗಿ, ಜೈಲು ಶಿಕ್ಷೆ ಸಹ ವಿಧಿಸಬಹುದು. ಆದುದರಿಂದ ಸೆ.೩೦ರ ಒಳಗೆ ತಮ್ಮ ಆದಾಯವನ್ನು ಘೋಷಿಸಿಕೊಳ್ಳಲು ಅವಕಾಶವಿದೆ. ಇಲ್ಲಿ ಘೋಷಣೆಯಾದ ಆದಾಯ ಗುಪ್ತವಾಗಿ ಇಡಲಾಗುತ್ತದೆ ಇದರ ಸದುಪಯೋಗವನ್ನು ಅಘೋಷಿತ ಆದಾಯ ಇರುವವರು ಪಡೆದುಕೊಳ್ಳುವಂತೆ ಅವರು ವಿನಂತಿಸಿದರು.
ಪುತ್ತೂರಿನ ಆದಾಯ ತೆರಿಗೆ ಅಧಿಕಾರಿ ರೋಬರ್ಟ್ ಕ್ಯಾಸ್ಟಲಿನೋ ಅವರು ಸಾರ್ವಜನಿಕ ಪ್ರಶ್ನೆಗಳಿಗೆ ಉತ್ತರ ನೀಡಿದರು. ಸಿನೀಯರ್ ಚಾರ್ಟರ್ಡ್ ಎಕೌಟೆಂಟ್ಸ್ ಗಂಗಾಧರ್ ಸ್ವಾಗತಿಸಿ, ಹೊಸ ಹೊಸ ಯೋಜನೆಗಳು ಬರುವುದರಿಂದ ಜನರು ಆದಾಯ ತೆರಿಗೆ ಪಾವತಿಸಲು ಹಿಂದೆಟು ಹಾಕುತ್ತಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಸಲು ಆದಾಯ ತೆರಿಗೆ ಇಲಾಖೆ ಈ ವಿಚಾರ ಸಂಕಿರಣ ಹಮ್ಮಿಕೊಂಡಿದೆ ಎಂದು ತಿಳಿಸಿದರು. ಚಾರ್ಟರ್ಡ್ ಎಕೌಂಟೆಂಟ್ಸ್ ಗಾಯತ್ರಿ ಕಾರ್ಯಕ್ರಮ ನಿರ್ವಹಿಸಿ, ತೆರಿಗೆ ಸಲಹೆಗಾರ ಜೇಮ್ಸ್ ಡಿ’ಸೋಜಾ ವಂದಿಸಿದರು. ಬೆಳ್ತಂಗಡಿ, ಉಜಿರೆ, ಮಡಂತ್ಯಾರು ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ ನೂರಕ್ಕೂ ಮಿಕ್ಕಿ ನಾಗರಿಕರು ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.