ನಾಪತ್ತೆಯಾದ ಸೇನಾ ವಿಮಾನದಲ್ಲಿ ಗುರುವಾಯನಕೆರೆಯ ಯೋಧ ಏಕನಾಥ ಶೆಟ್ಟಿ

ಅಚ್ಚು ಮುಂಡಾಜೆyodha 3

yodha 5

ಇನ್ನೂ ಲಭಿಸದ ಸುಳಿವು, ಜನಪ್ರತಿನಿಧಿ, ಉನ್ನತ ಅಧಿಕಾರಿಗಳ ಭೇಟಿ : ಮಡುಗಟ್ಟಿದ ದುಃಖ

ಶಾಸಕರಿಂದ ತುರ್ತು ಸ್ಪಂದನೆ ವೈದ್ಯಾಧಿಕಾರಿಗೆ ಸೂಚನೆ:

ಶಾಸಕ ವಸಂತ ಬಂಗೇರ ಅವರು ಯೋಧರ ಪತ್ನಿಯ ಆರೋಗ್ಯ ಕಾಳಜಿ ವಹಿಸಿ ವೈದ್ಯಾಧಿಕಾರಿಯ ತಂಡವನ್ನು ಮನೆಗೇ ಕಳುಹಿಸಿದ್ದು ಆರೋಗ್ಯ ಪರೀಕ್ಷೆ ನಡೆಸುವಂತೆ ವ್ಯವಸ್ಥೆ ಮಾಡಿದ್ದಾರೆ. ಆರೋಗ್ಯ ಪರೀಕ್ಷೆಯ ವೇಳೆ ಅವರ ಪತ್ನಿ ಜಯಂತಿ ಅವರಿಗೆ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅವರನ್ನು ಜು.೨೫ರಂದು ಸೋಮವಾರ ಕೆಲಗಂಟೆಗಳ ಮಟ್ಟಿಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿಗೆ ಭೇಟಿ ನೀಡಿದ ಶಾಸಕರು ಅವರ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿ ಕಾಳಜಿ ಮೆರೆದಿದ್ದಾರೆ.

ನನ್ನ ಪತಿಗೆ ಇಷ್ಟು ಗೌರವ ಇದೆ ಎಂಬ ಬಗ್ಗೆ ತಿಳಿದು ಅಭಿಮಾನಪಡುತ್ತೇನೆ
ಪುತ್ರ ಇದೇ ಕ್ಷೇತ್ರ ಆಯ್ಕೆ ಮಾಡಿಕೊಂಡಲ್ಲಿ ಖಂಡಿತಾ ಪ್ರೋತ್ಸಾಹಿಸುತ್ತೇನೆ : ಜಯಂತಿಯವರ ಹೃದಯಾಂತರಾಳದ ಮಾತು

Jayanthi copy

ಸೇನೆಯಲ್ಲಿರುವ ನನ್ನ ಪತಿ ಸರಳ ಸ್ವಭಾವದವರು. ಅವರು ಕರ್ತವ್ಯಕ್ಕೆ ಹಚ್ಚು ಬೆಲೆ ಕೊಡುತ್ತಿದ್ದರು. ಇಂದು ನಮ್ಮ ಮನೆಗೆ ದೊಡ್ಡ ದೊಡ್ಡ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ನಮ್ಮನ್ನು ಸಂತೈಸುತ್ತಿರುವುದನ್ನ ಕಂಡು ನನ್ನ ಪತಿಗೆ ಇಷ್ಟು ಗೌರವ ಇದೆ ಎಂಬ ಬಗ್ಗೆ ತಿಳಿದು ಅಭಿಮಾನವಾಗುತ್ತಿದೆ. ತನ್ನ ತಂದೆಯ ಹಾದಿಯಲ್ಲಿ ಅವರು ಸೇನೆಗೆ ಸೇರ್ಪಡೆಗೊಂಡರು. ಒಂದು ಬಾರಿ ನಿವೃತರಾಗಿದ್ದರೂ ಕೂಡ ಮತ್ತೊಮ್ಮೆ ಅವರು ಸ್ವ ಆಸಕ್ತಿಯಿಂದ ಮತ್ತೆ ಸೇನೆಗೇ ಸೇರಿ ದೇಶಸೇವೆಗೆ ಹೋದರು. ಅವರಿಗೆ ಏನೂ ಆಗಿಲ್ಲ ಎಂಬ ವಿಶ್ವಾಸವಿದ್ದು ಖಂಡಿತಕ್ಕೂ ಮತ್ತೆ ಮನೆಗೆ ಮರಳಿ ಬರುತ್ತಾರೆಂಭ ಆಶಾಭಾವನೆಯಲ್ಲಿದ್ದೇವೆ. ನಮ್ಮ ಪುತ್ರ ಅಕ್ಷಯ್ ಕೂಡ ಮುಂದೆ ಅದೇ ಕ್ಷೇತ್ರ ಆಯ್ಕೆ ಮಾಡಿಕೊಂಡಲ್ಲಿ ಖಂಡಿತಾ ನನ್ನ ಬೆಂಬಲವಿದೆ. ನಮ್ಮ ದುಃಖದ ಸಂದರ್ಭ ಮಾಜಿ ಸೈನಿಕರ ಸಂಘದವರು ನಿರಂತರ ನಮ್ಮ ಸಂಪರ್ಕದಲ್ಲಿದ್ದು ನೀಡಿದ ಬೆಂಬಲ ಹಾಗೂ ಇತರರು ನಮ್ಮ ಜೊತೆ ನಡೆದುಕೊಂಡ ರೀತಿ ನಮಗೆ ಆತ್ಮಸ್ಥೈರ್ಯವನ್ನು ಹೆಚ್ಚಿಸಿತು ಎಂದು ಏಕನಾಥ ಶೆಟ್ಟಿ ಅವರ ಪತ್ನಿ ಜಯಂತಿ ಅವರು ಸುದ್ದಿಗೆ ಅಭಿಪ್ರಾಯ ನೀಡಿದರು.

ಸಣ್ಣ ಪುಟ್ಟ ಸುಳಿವು ಲಭ್ಯ: ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್

ಈ ನಡುವೆ ನವದೆಹಲಿಯಲ್ಲಿ ಸೇನಾಧಿಕಾರಿಗಳ ಜೊತೆಯಲ್ಲೇ ಕಾರ್ಯಾಚರಣೆ ಬಗ್ಗೆ ಭಾರೀ ಸ್ಪಂದನಲ್ಲಿರುವ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು, ಜು. 25 ರಂದು ರಾಜ್ಯಸಭೆಯಲ್ಲಿ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ವಿಮಾನದ ಕುರಿತು ನಾಲ್ಕೈದು ಸಣ್ಣ ಸುಳಿವುಗಳು ಲಭಿಸಿದ್ದು ಆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದಿದ್ದಾರೆ.
ವಿಮಾನ ಉತ್ತಮ ಗುಣಮಟ್ಟದ್ದಾಗಿತ್ತು. ಅಲ್ಲದೆ ಕಳೆದ ವರ್ಷ ಅದನ್ನು ಮತ್ತಷ್ಟು ಮೇಲ್ದರ್ಜೆಗೂ ಏರಿಸಿ ಕ್ರಮ ಕೈಗೊಳ್ಳಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ದೂರವಾಣಿ ಕರೆಮಾಡಿದ ಮುಖ್ಯಮಂತ್ರಿ, ಗೃಹಮಂತ್ರಿ

ಜು. 26 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕನಾಥ ಶೆಟ್ಟಿ ಅವರ ಪತ್ನಿ ಜಯಂತಿ ಅವರಿಗೆ ಕರೆಮಾಡಿ ಮಾತನಾಡಿದ್ದಾರೆ. ಜು. ೨೭ ರಂದು ಪೂರ್ವಾಹ್ನ ಗೃಹ ಸಚಿವ ಡಾ| ಜಿ ಪರಮೇಶ್ವರ ಅವರೂ ದೂರವಾಣಿ ಮೂಲಕ ಮಾತನಾಡಿದ್ದು ಮನೆಯವರಿಗೆ ಸಮಾಧಾನ ಹೇಳಿದ್ದಾರೆ. ಅಗತ್ಯ ಕಾನೂನಿನ ನೆರವು ನೀಡುವುದಾಗಿಯೂ ಈ ವೇಳೆ ಗೃಹಸಚಿವರು ಭರವಸೆ ನೀಡಿದ್ದಾರೆ.

  ಗುರುವಾಯನಕೆರೆ : ಜು.22ರಂದು ಚೆನ್ಹೈನ ತಾಂಬರಂ ವಾಯುನೆಲೆಯಿಂದ ಅಂಡಮಾನ್ ನಿಕೋಬಾರ್ ದ್ವೀಪ ಸಮೂಹದಲ್ಲಿನ ಪೋರ್ಟ್ ಬ್ಲೇರ್‌ಗೆ ನಾಲ್ವರು ಅಧಿಕಾರಿಗಳೂ ಸೇರಿ ಒಟ್ಟು 29ಮಂದಿ ಯೋಧರನ್ನು ಹೊತ್ತೊಯ್ಯುತ್ತಿದ್ದ ವಾಯುಪಡೆಯ ಎ. ಎನ್-31 ಸರಕು ಸಾಗಣೆ ವಿಮಾನವು ಕಣ್ಮರೆಯಾಗಿದ್ದು, ಈ ವಿಮಾನದಲ್ಲಿ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮ ಗುರುವಾಯನಕೆರೆ ಸಮೀಪದ ನಮ್ಮ ಮನೆ ಹವ್ಯಕ ಭವನ ಎದುರಿನ ಮನೆ ನಿವಾಸಿ, ಯೋಧ ಏಕನಾಥ ಶೆಟ್ಟಿ (51ವ.) ಅವರೂ ಸೇರಿದ್ದು ಇನ್ನೂಕೂಡ ವಿಮಾನದ ಯಾವುದೇ ಸುಳಿವು ಲಭ್ಯವಾಗಿಲ್ಲ.
ಆ ಹಿನ್ನೆಲೆಯಲ್ಲಿ ಅವರ ಪತ್ನಿ, ಮಕ್ಕಳು ಹಾಗೂ ಕುಟುಂಬ ವರ್ಗದವರಲ್ಲಿ ಆತಂಕ ಮತ್ತು ದುಗುಡ ಮನೆಮಾಡಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ| ಜಿ ಪರಮೇಶ್ವರ್ ಅವರು ದೂರವಾಣಿ ಮೂಲಕ ಕರೆ ಮಾಡಿ ಮನೆವರ ಜೊತೆ ಮಾತನಾಡಿದ್ದಾರೆ, ಶಾಸಕ, ಸಂಸದರು, ಮಾಜಿ ಶಾಸಕರು, ಸೇನಾಧಿಕಾರಿಗಳು ಹಾಗೂ ಅನೇಕ ಮಂದಿ ಗಣ್ಯರು ಬೇಟಿ ನೀಡಿ ಮನೆಯವರಿಗೆ ಸಮಾಧಾನ ಹೇಳಿದ್ದಾರೆ.

ಭಾರತೀಯ ವಾಯು ಸೇನೆ ಮತ್ತು ಭೂ ಸೇನೆ, ನೌಕಾ ಸೇನೆಯ ಯೋಧರ ತಂಡ ನಾಪತ್ತೆಯಾಗಿರುವ ಈ ವಿಮಾನದ ಶೋಧ ಕಾರ್ಯದಲ್ಲಿ ನಿರತವಾಗಿದ್ದು, ಘಟನೆ ನಡೆದು 7 ದಿನವಾಗಿದ್ದರೂ ಯಾವುದೇ ಕುರುಹುಗಳು ಪತ್ತೆಯಾದಗೇ ಇರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.
ನಾಪತ್ತೆಯಾಗಿರುವ ಸೇನಾ ವಿಮಾನದಲ್ಲಿ ಏಕನಾಥ ಶೆಟ್ಟಿ  ಅವರು ಇರುವ ಬಗ್ಗೆ ಸೇನಾ ಅಧಿಕಾರಿಗಳು ಅವರ ಪತ್ನಿ ಜಯಂತಿ ಅವರಿಗೆ ಕರೆಮಾಡಿ ಅಧಿಕೃತ ಮಾಹಿತಿ ನೀಡಿದ್ದಾರೆ.
ಘಟನೆಯ ವಿವರ : ಕಳೆದ ೩೦ ವರ್ಷಗಳಿಂದ ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದ ಏಕನಾಥ ಶೆಟ್ಟಿ ಅವರು ಬಳಿಕ ಮತ್ತೆ ವಾಯುಸೇನೆಯ ಡಿಫೆನ್ಸ್ ಸರ್ವೀಸ್ ಕೋರ‍್ಪ್ಸ್ (ಡಿಎಸ್‌ಸಿ) ವಿಭಾಗದಲ್ಲಿ ತರಭೇತುದಾರರಾಗಿ ಸೇವೆಗೆ ಸೇರಿದ್ದರು.
ಜು. 22 ರಂದು ಸಂಜೆ 4.00 ಗಂಟೆಗೆ ಅವರ ಪತ್ನಿ, ಉಜಿರೆ ಎಸ್‌ಡಿಎಂ ಹೈಸ್ಕೂಲ್‌ನಲ್ಲಿ ತಾತ್ಕಾಲಿಕ ನೆಲೆಯಲ್ಲಿ ಶಿಕ್ಷಕಿಯಾಗಿರುವ ಜಯಂತಿ ಅವರಿಗೆ ಸೇನೆಯ ಕಮಾಂಡೆಂಟ್ ದೂರವಾಣಿ ಕರೆ ಮಾಡಿದ್ದು ವಿಮಾನ ನಾಪತ್ತೆಯಾಗಿರುವ ಬಗ್ಗೆ ಮತ್ತು ಆ ವಿಮಾನದಲ್ಲಿ ಏಕನಾಥ ಶೆಟ್ಟಿ ಅವರು ಇರುವ ಬಗ್ಗೆ ತಿಳಿಸಿದ್ದಾರೆ. ಈ ಘಟನೆಯಿಂದ ಯೋಧರ ಮನೆಯವರು ಕುಟುಂಬಸ್ಥರು ತೀವ್ರ ಆತಂಕಗೊಂಡಿದ್ದಾರೆ.
ಏಕನಾಥ ಶೆಟ್ಟಿ ಅವರ ಸೇವಾ ವಿವರ : 1965 ರಲ್ಲಿ ಜನಿಸಿದ್ದ ಏಕನಾಥ ಶೆಟ್ಟಿ ಅವರು 1985ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡು ಇನ್‌ಫೆಂಟರಿ (ಪದತಿದಳ) ಇದರಲ್ಲಿ ಒಂದು ಬ್ಯಾಚ್ ಪೂರ್ತಿಗೊಳಿಸಿ 2009 ರಲ್ಲಿ ನಿವೃತ್ತಿಗೊಂಡಿದ್ದರು. ದೇಶ ಸೇವೆಯ ಅದಮ್ಯ ಬಯಕೆ ಮತ್ತು ಉತ್ಸಾಹ ಹೊಂದಿದ್ದ ಅವರು ಅಂದು ಮಾಜಿ ಸೈನಿಕ ಎಂಬ ನೆಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಕೆಲಸಕ್ಕೆ ಅವಕಾಶ ದೊರಕಿದ್ದನ್ನು ಒಪ್ಪಿಕೊಳ್ಳದೆ ನಿವೃತಿಯ 5-6 ತಿಂಗಳ ಅವಧಿಯಲ್ಲೇ ವಾಯು ಸೇನೆಯಲ್ಲಿ ತರಭೇತುದಾರರಾಗಿ ಮತ್ತೆ ಸೇನೆಗೆ ಸೇರಿಕೊಂಡಿದ್ದರು. ಭೂಸೇನೆಯ ರಕ್ಷಣಾ ಭದ್ರತೆ ವಿಭಾಗದಲ್ಲಿ ಕೆಲಸ ಮಾಡಿದ ಅನುಭವಿಗಳಿಗಷ್ಟೇ ಈ ಕೆಲಸ ಸಿಗಬಹುದಾಗಿದ್ದು ಡಿಎಸ್‌ಸಿ (ಡಿಫೆನ್ಸ್ ಸೆಕ್ಯುರಿಟಿ ಕೋರ‍್ಪ್ಸ್) ಸೇರಿ ಕೇರಳದ ಕಣ್ಣೂರಿನಲ್ಲಿ ತರಭೇತಿ ಮುಗಿಸಿ ಗೋವಾ, ಅಂಡಮಾನ್‌ನಲ್ಲಿ ಕೆಲಸದಲ್ಲಿದ್ದರು. ಸೇವಾ ಅವಧಿಯಲ್ಲಿ ಅವರು ರಾಜೀವ ಗಾಂಧಿ ಪ್ರಧಾನಿಯಾಗಿದ್ದಾಗ ತಮಿಳು ಉಗ್ರರ ವಿರುದ್ಧದ ಕಾರ್ಯಾಚರಣೆಗೆ ನಿಯೋಜಿಸಿದ್ದ ತಂಡವಾದ ಭಾರತೀಯ ಸೇನಾ ಶಾಂತಿ ಪಾಲನಾ ಪಡೆ (ಐಪಿಕೆಎಫ್) ನಲ್ಲಿ ಕೆಲಕಾಲ ಸೇವೆ ಸಲ್ಲಿಸಿದ್ದರು. ಕಾರ್ಗಿಲ್ ಕದನದಲ್ಲಿಯೂ ಏಕನಾಥ ಶೆಟ್ಟಿ ಅವರು ಭಾಗವಹಿಸಿ ಪ್ರಶಂಸೆಯನ್ನು ಪಡೆದುಕೊಂಡಿದ್ದರು. ಸಿಯಾಚಿನ್, ಲೆಹ್ ಲಡಾಕ್‌ನ ಪ್ರತಿಕೂಲ ಹವಾಮಾನ ಇರುವ ಕಡೆಗಳಲ್ಲೂ ಕೂಡ ಸೇನಾ ಸೇವೆ ಮಾಡಿದ ಅನುಭವಿಯಾಗಿದ್ದ ಅವರು ನೆನೆದುಕೊಂಡಂತೆ ಆಗುತ್ತಿದ್ದರೆ ವಾಯುಸೇನೆಯ ಅವರ ಕರ್ತವ್ಯದ ಅವಧಿಯಲ್ಲಿ ಈಗಾಗಲೇ 7 ವರ್ಷಗಳ ಸೇವೆ ಪೂರ್ತಿಯಾಗಿದ್ದು ಮುಂದಿನ ಸಾಲಿನಲ್ಲಿ ಅವರು ವರ್ಗಾವಣೆಯಾಗಿ ಬೆಂಗಳೂರಿಗೆ ಬರುವವರಿದ್ದರು. ಅಲ್ಲಿನ ಸೇವೆ ಪೂರ್ತಿಯಾಗುತ್ತಿದ್ದಂತೆ 2016 ರಲ್ಲಿ ಸೇನೆಯಿಂದ ನಿವೃತ್ತರಾಗಲಿದ್ದರು.
ಮನೆಗೆ ಬಂದು ಹೋಗಿ 14 ದಿನವಾಗಿತ್ತು: ಮಂಗಳೂರು ತಾಲೂಕು ಕೃಷ್ಣಾಪುರದಲ್ಲಿದ್ದ ತಂಗಿ ರೇವತಿ ಅವರ ಗೃಹಪ್ರವೇಶದ ನಿಮಿತ್ತ ಕೆಲ ದಿನಗಳ ರಜಾ ಅವಧಿಯಲ್ಲಿ ಊರಿಗೆ ಬಂದಿದ್ದವರು ಜು.9 ರಂದು ಮತ್ತೆ ಸೇನೆಗೆ ಮರಳಿದ್ದರು. ಮೂಲತಃ ಮಂಗಳೂರು ತಾಲೂಕು ಕುತ್ತಾರುಪದವು ನಿವಾಸಿಯಾಗಿದ್ದ ಏಕನಾಥ ಶೆಟ್ಟಿ ಅವರ ತಂದೆ ದಿ. ಕೃಷ್ಣ ಶೆಟ್ಟಿ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಾಗಿದ್ದರು. ಭಾರತ್ ಪಾಕ್ ಯುದ್ಧದಲ್ಲಿ ಅವರ ತಂದೆ ಪಾಲ್ಗೊಂಡಿದ್ದರು. ತಂದೆಯ ಇದೇ ಸ್ಪೂರ್ತಿ ಏಕನಾಥ ಶೆಟ್ಟಿ ಅವರನ್ನೂ ಸೇನೆಯೆಡೆಗೆ ಆಕರ್ಷಿಸಿತ್ತು.
ಸುಮಾರು 18 ವರ್ಷಗಳ ಹಿಂದೆ ಗುರುವಾಯನಕೆರೆಯಲ್ಲಿ ಜಾಗ ಖರೀದಿಸಿದ್ದ ಏಕನಾಥ ಶೆಟ್ಟಿ ಅವರು ಬಳಿಕ ಇಲ್ಲಿ ಮನೆ ನಿರ್ಮಿಸಿ ನೆಲೆಸಿದ್ದರು. ಉಪ್ಪಿನಂಗಡಿ ಸನಿಹದ ಪೆರ್ನೆಯವರಾದ ಜಯಂತಿ ಅವರನ್ನು 1994 ರಲ್ಲಿ ವಿವಾಹವಾಗಿ ಈಗ ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ. ಕಾಂ ನಲ್ಲಿ ಓದುತ್ತಿರುವ ಪುತ್ರಿ ಆಶಿತಾ ಮತ್ತು ಎಸ್‌ಡಿಎಂ ನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಓದುತ್ತಿರುವ ಅಕ್ಷಯ್ ಎಂಬಿಬ್ಬರು ಮಕ್ಕಳಿದ್ದಾರೆ.
ಘಟನೆಯ ಹಿಂದಿನ ದಿನ ಪತ್ನಿಯ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದರು: ಪ್ರತಿದಿನ ಒಂದು ಅವಧಿಯಲ್ಲಿ ಮನೆಗೆ ದೂರವಾಣಿ ಕರೆಮಾಡಿ ಮಾತನಾಡುತ್ತಿದ್ದ ಏಕನಾಥ ಶೆಟ್ಟಿ ಅವರು ಹಿಂದಿನ ರಾತ್ರಿ ಪತ್ನಿಗೆ ಕರೆಮಾಡಿ ಮಾತನಾಡಿದ್ದರು. ಕರ್ತವ್ಯದ ವೇಳೆ ಕಾಲಿಗೆ ಆಗಿರುವ ಸಣ್ಣ ಗಾಯವೊಂದರ ಶಸ್ತ್ರ ಚಿಕಿತ್ಸೆಗೆ ಜು. 30 ರಂದು ವೈದ್ಯರ ದಿನಾಂಕ ಸಿಕ್ಕಿದ್ದು ಆ ಹಿನ್ನೆಲೆಯಲ್ಲಿ ನಾನು ವಿಮಾನದಲ್ಲಿ ಹೋಗುವುದಿಲ್ಲ ಎಂದು ಹೇಳಿದ್ದರು. ಆದರೆ ಸೇನೆಯಿಂದ ಬಂದಿರುವ ಕರೆಯಲ್ಲಿ ವಿಮಾನದಲ್ಲಿ ಹೋದವರ ಸಾಲಿನಲ್ಲಿ ಇವರ ಹೆಸರು ಸೇರ್ಪಡೆಗೊಂಡಿದೆ. ಆದುದರಿಂದ ಕೊನೆ ಗಳಿಗೆಯಲ್ಲಿ ಅವರು ವಿಮಾನ ಹತ್ತಿರುವ ಸಾಧ್ಯತೆ ಇದೆ.
ಏಕನಾಥ ಶೆಟ್ಟಿ ಎಲ್ಲೆಲ್ಲಿ ಸೇವೆ ಸಲ್ಲಿಸಿದ್ದರು:
ಮೂರು ದಶಕಗಳಿಂದ ಮಿಲಿಟರಿ ಸೇವೆಯಲ್ಲಿರುವ ಏಕನಾಥ ಶೆಟ್ಟಿ ಅವರು ಶ್ರೀಲಂಕಾ, ಚತ್ತೀಸ್‌ಗಡ, ಕಾನ್ಪುರ, ಕಣ್ಣೂರು, ಶ್ರೀನಗರ, ದೆಹಲಿ, ಗೋವಾ, ಕೊಯಂಬತ್ತೂರು, ಅಸ್ಸಾಂ, ಅರುಣಾಚಲಪ್ರದೇಶ, ಜಮ್ಮು ಮತ್ತು ಕಾಶ್ಮೀರ (ಎನ್.ಇ ಎಫ್.ಎ) ಮೊದಲಾದೆಡೆ ಸೇವೆ ಸಲ್ಲಿಸಿದ್ದಾರೆ. ರಾಜೀವ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ನಿಯೋಜಿತ ತಮಿಳು ಉಗ್ರರ ವಿರುದ್ಧದ ತಂಡದಲ್ಲಿ, ಕಾರ್ಗಿಲ್ ಯುದ್ಧದ ಸಂದರ್ಭ, ಅಂಡಮಾನ್-ನಿಕೋಬಾರ್ ಪ್ರದೇಶದಲ್ಲಿ ವಿಶೇಷ ಸಂದರ್ಭಗಳಲ್ಲಿ ಅವರ ಸೇವೆ ದೇಶಕ್ಕೆ ಲಭಿಸಿದೆ.
ಅವರು ಪಡೆದಿರುವ ಹಲವು ಪ್ರಶಸ್ತಿ, ಫಲಕಗಳು:
ಏಕನಾಥ ಶೆಟ್ಟಿ ಅವರ ಮೂರು ದಶಕಗಳ ಸೇವೆಯಲ್ಲಿ ಹಲವು ಪ್ರಶಸ್ತಿಗಳು ಅವರನ್ನು ಅರಸಿಬಂದಿವೆ. ಶ್ರೀಲಂಕಾ ಸೇವೆಗಾಗಿ ಪ್ರಶಸ್ತಿ, ದೀರ್ಘ 20 ವರ್ಷಗಳ ಸೇನಾ ಸೇವೆಗೆ ಪುರಸ್ಕಾರ, ಸೇನೆಯಲ್ಲಿ ರಕ್ತದಾನ ಮಾಡುತ್ತಿದ್ದುದಕ್ಕಾಗಿ ಪುರಸ್ಕಾರ, ಶ್ರೀಲಂಕಾದಲ್ಲಿ ವಾರ್‌ಕ್ಯಾಶ್ಯೂವೆಲ್ಟಿಗಾಗಿ (ಯುದ್ಧ ಸಂದರ್ಭ ಗುಂಡೇಟಿಗೆ ಸಿಲುಕಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾದ ಬಗ್ಗೆ) ವಿಶೇಷ ಸೇನಾಧಿಕಾರಿಯಿಂದ ಪದಕ, ಹಿಮ್ಮಚ್ಚಾದಿತ ಪ್ರದೇಶದಲ್ಲಿ ಕೆಲಸ ನಿರ್ವಹಿಸಿದ ಬಗ್ಗೆ ಪ್ರಶಂಸನಾ ಪತ್ರ, ದೇಶದ 50 ನೇ ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಸಂದರ್ಭದ ಸವಿನೆನಪಿನ ಪುರಸ್ಕಾರ ಇತ್ಯಾಧಿ ಪ್ರಶಸ್ತಿ, ಪದಕ, ಪುರಸ್ಕಾರಗಳು ಅವರಿಗೆ ಸಂದಿದೆ.
ತಾಲೂಕು ವೈದ್ಯಾಧಿಕಾರಿ ಯಿಂದ ಆರೋಗ್ಯ ತಪಾಸಣೆ:
ಏಕನಾಥ ಶೆಟ್ಟಿ ಅವರ ಮನೆಗೆ ಸೋಮವಾರ ತಾಲೂಕು ವೈದ್ಯಾಧಿಕಾರಿ ಡಾ| ಕಲಾಮಧು ಶೆಟ್ಟಿ ಮತ್ತು ತಂಡದವರು ಭೇಟಿ ನೀಡಿ ಆರೋಗ್ಯ ವಿಚಾರಿಸುವ ಕೆಲಸ ಮಾಡಿದರು. ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಾಂಚೋಡು ಗೋಪಾಲಕೃಷ್ಣ ಭಟ್ ಮತ್ತು ಎಲ್ಲಾ ಪದಾಧಿಕಾರಿಗಳು ದಿನಕ್ಕೆರಡು ಬಾರಿಯಂತೆ ಭೇಟಿ ಮತ್ತು ನಿರಂತರ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದು ಮನೆಯವರಿಗೆ ಅಗತ್ಯ ನೆರವು, ಮಾಹಿತಿ ನೀಡುತ್ತಿದ್ದಾರೆ.
ದೆಹಲಿಯಲ್ಲಿ ವಿಶೇಷ ಕಚೇರಿ ತೆರೆದು ಸೈನಿಕರ ಕುಟುಂಬಕ್ಕೆ ಮಾಹಿತಿ: ವಿಮಾನ ನಾಪತ್ತೆಯಾಗುತ್ತಿರುವಂತೆ ಕೇಂದ್ರ ವಿಮಾನಯಾನ ಸಚಿವ ಮನೋಹರ್ ಪಾರಿಕ್ಕರ್ ಅವರು ದೆಹಲಿಯಲ್ಲಿ ವಿಶೇಷ ಮಾಹಿತಿ ಕೇಂದ್ರ ತೆರೆಯುವಂತೆ ವ್ಯವಸ್ಥೆ ಮಾಡಿದ್ದು ವಿಮಾನದ ಜೊತೆ ೨೯ ಜನರಿದ್ದ ಸೈನಿಕರ ಕುಟುಂಬಕ್ಕೆ ಪ್ರತಿ ಗಂಟೆಗೊಂದು ಬಾರಿ ಮಾಹಿತಿ ನೀಡುವ ಕೆಲಸ ಮಾಡಿದ್ದಾರೆ. ಟೋಲ್‌ಫ್ರೀ ನಂಬರನ್ನೂ ಕುಟುಂಬಸ್ಥರಿಗೆ ಒದಗಿಸಲಾಗಿದ್ದು ಉಚಿತವಾಗಿ ಕರೆಮಾಡಬಹುದಾದ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಜು. ೨೫ ರಂದೇ ಏಕನಾಥ ಶೆಟ್ಟಿ ಅವರ ಮನೆಗೆ ಭೇಟಿ ನೀಡಿದ್ದು ಈ ವೇಳೆ ಏಕನಾಥ ಶೆಟ್ಟಿ ಅವರ ನಾದಿನಿ ಪುತ್ರ ಶಶಿರಾಜ್ ಅವರನ್ನು ಈ ಕೇಂದ್ರದಲ್ಲಿರುವ ಕನ್ನಡಿಗ ಅಧಿಕಾರಿ, ಕೊಡಗು ಜಿಲ್ಲೆಯ ಸೋಮವಾರಪೇಟೆ ನಿವಸಿ ಧನಂಜಯ್ ಅವರಿಗೆ ದೂರವಾಣಿ ಮೂಲಕವೇ ಪರಿಚಯಿಸಿದ್ದು ಮುಂದಿನ ಎಲ್ಲಾ ಮಾಹಿತಿಯನ್ನೂ ಅವರ ಮೂಲಕ ಮನೆಗೆ ತಲುಪಿಸುವಂತೆ ಸೂಚಿಸಿದ್ದಾರೆ.
ಗಣ್ಯರ ಭೇಟಿ, ಸಾಂತ್ವನ, ಭರವಸೆ:
ನಾಪತ್ತೆಯಾಗಿರುವ ಯೋಧ ಏಕನಾಥ ಶೆಟ್ಟಿ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಮಾಜಿ ಶಾಸಕ ಪ್ರಭಾಕರ ಬಂಗೇರ, ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಆರ್.ಎಸ್.ಎಸ್. ಮುಖಂಡ ಡಾ| ಪ್ರಭಾಕರ ಭಟ್ ಕಲ್ಲಡ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ರಂಜನ್ ಜಿ. ಗೌಡ, ಹೈಕೋರ್ಟ್ ನ್ಯಾಯವಾದಿ ಹರೀಶ್ ಪೂಂಜ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ ಯಶೋವರ್ಮ, ಪ್ರಾಧ್ಯಾಪಕ ಡಾ| ಬಿ. ಎ ಕುಮಾರ್ ಹೆಗ್ಡೆ, ಜಿ. ಪಂ ಸದಸ್ಯೆ ಮಮತಾ ಎಂ ಶೆಟ್ಟಿ, ಕುವೆಟ್ಟು ತಾ.ಪಂ. ಸದಸ್ಯ ಗೋಪಿನಾಥ ನಾಯಕ್, ಕುವೆಟ್ಟು ಗ್ರಾ. ಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್, ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ತಾ. ಪಂ ಮಾಜಿ ಸದಸ್ಯ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಸೇರಿದಂತೆ ಅನೇಕ ಮಂದಿ ಗಣ್ಯ ಮಹನೀಯರು, ಊರಿನ ನಾಗರಿಕರು ಜು. 25 ರಂದು ಮತ್ತು ಇತರ ದಿನಗಳಲ್ಲಿ ಭೇಟಿಮಾಡಿ ಸಾಂತ್ವನ ಹಾಗೂ ಮನೆಯವರಲ್ಲಿ ಭರವಸೆ ತುಂಬುವ ಕೆಲಸ ಮಾಡಿದ್ದಾರೆ.
ಮಿಲಿಟರಿ ಅಧಿಕಾರಿಗಳು, ಸರಕಾರದ ಜಂಟಿ ಕಾರ್ಯದರ್ಶಿ ಭೇಟಿ: ಏಕನಾಥ ಶೆಟ್ಟಿ ಅವರ ಮನೆಗೆ ಮಂಗಳವಾರದಂದು ಸೇನೆಯ ಮೈಸೂರಿನ ಏರ್‌ಪೋರ್ಸ್ ವಿಂಗ್ ಕಮಾಂಡರ್ ಆರ್. ಜಿ ಹೆಗಡೆ ಅವರು ಆಗಮಿಸಿದ್ದು ಮನೆಯವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಜು. ೨೬ ರಂದು ಸೈನಿಕರ ಪುನರ್ವಸತಿ ವಿಭಾಗದ ಸರಕಾರದ ಜಂಟಿ ಕಾರ್ಯದರ್ಶಿ ಕ್ಯಾಪ್ಟನ್ ಡಾ| ಪ್ರಕಾಶ್ ಅವರೂ ಭೇಟಿ ಮಾಡಿ ಮನೆಯವರ ಜೊತೆ ಮಾತುಕತೆ ನಡೆಸಿದರು. ಈ ಸಂದರ್ಭ ಏರ್‌ಪೋರ್ಸ್‌ನ ನಿವೃತ್ತ ಸೇನಾನಿ ಎಂ. ಆರ್ ಜೈನ್, ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷ ಸುನಿಲ್ ಶೆಣೈ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪುತ್ತೂರು ಎ.ಸಿ, ತಾಲೂಕು ತಹಶಿಲ್ದಾರ್ ಭೇಟಿ:
ಜು. 25 ರಂದು ಬೆಳ್ತಂಗಡಿ ತಹಶೀಲ್ದಾರ್ ಪ್ರಸನ್ನ ಮೂರ್ತಿ, ಬೆಳ್ತಂಗಡಿ ಕಂದಾಯ ಹೋಬಳಿಯ ಕಂದಾಯ ನಿರೀಕ್ಷಕ ರವಿ ಕುಮಾರ್ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ಮಾಡಿದರೆ, ಜು. ೨೬ ರಂದು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ (ಎ.ಸಿ) ಡಾ| ರಾಜೇಂದ್ರ ಅವರು ಭೇಟಿ ಮಾಡಿ ಮನೆಯವರಿಗೆ ಧೈರ್ಯ ತುಂಬುವ ಮಾತುಗಳನ್ನಾಡಿದರು.
ವೈದ್ಯಾಧಿಕಾರಿಯಿಂದ ಮನೆಗೆ ಹೋಗಲು ನಿರಾಕರಣೆ, ಸಚಿವರಿಂದ ತಾಕೀತು, ಬಳಿಕ ಕ್ರಮ:
ಈ ಮಧ್ಯೆ ಜು. 24 ರಂದು ಏಕನಾಥ ಶೆಟ್ಟಿ ಅವರ ಪತ್ನಿ ಜಯಂತಿ ಅವರ ಆರೋಗ್ಯದಲ್ಲಿ ವೈಪರೀತ್ಯ ಕಂಡುಬಂದ ಹಿನ್ನೆಲೆಯಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಾಂಚೋಡು ಗೋಪಾಲಕೃಷ್ಣ ಭಟ್ ಅವರು ತಾಲೂಕು ವೈದ್ಯಾಧಿಕಾರಿಗಳಿಗೆ ಕರೆಮಾಡಿ ವಿಚಾರ ತಿಳಿಸಿದಾಗ, ಇಂದು ರವಿವಾರವಾಗಿರುವುದರಿಂದ ರಜೆ. ರೋಗಿ ಆಸ್ಪತ್ರೆಗೆ ಬಂದರೆ ಮಾತ್ರ ಚಿಕಿತ್ಸೆ ನೀಡಬಹುದು ಎಂದು ಪ್ರತಿಕ್ರೀಯಿಸಿದರೆಂದು ಆರೋಪವಿದ್ದು ಈ ಬಗ್ಗೆ ಸಂಘದವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದಾಗ ಅವರ ಅದೇಶದಂತೆ ಬಳಿಕ ವೈದ್ಯಾಧಿಕಾರಿಗಳು ಮನೆಗೆ ಬಂದು ಆರೋಗ್ಯ ತಪಾಸಣೆ ನಡೆಸಿದ ವಿದ್ಯಮಾನವೂ ನಡೆಯಿತು. ಈ ಮಧ್ಯೆ ಅಂದು ಆರೋಗ್ಯ ತಪಾಸಣೆಗೆ ಬಂದಿದ್ದ ವೈದ್ಯರಿಗೆ ಅಲ್ಲಿ ಏನು ಘಟನೆ ನಡೆದಿದೆ ಎಂಬ ಅರಿವೇ ಇಲ್ಲದವರಂತೆ, ಇಲ್ಲಿ ಏನಾಗಿದೆ ಎಂದು ಪ್ರಶ್ನೆ ಕೇಳಿದ್ದು ಆಶ್ಚರ್ಯಕ್ಕೂ ಕಾರಣವಾಯಿತು. ಬಳಿಕದ ವಿದ್ಯಮಾನದಲ್ಲಿ ಪ್ರತಿದಿನ ವೈದ್ಯರು ಒಂದೆರಡು ಬಾರಿ ಅವರ ಮನೆಗೆ ಭೇಟಿನೀಡಿ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ.
ಮುಂದುವರಿದೆ ಹುಡುಕಾಟ: ಕಣ್ಮರೆಯಾಗಿರುವ ವಿಮಾನವನ್ನು ಪತ್ತೆಹಚ್ಚುವ ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುತ್ತಿದ್ದು, ಇದೀಗ ಸಾಗರದಾಳವನ್ನು ಶೋಧಿಸಬಲ್ಲ ಸಂಶೋಧನಾ ಹಡಗು ಸಾಗರನಿಧಿಯ ಮೊರೆ ಹೋಗಲು ನಿರ್ಧರಿಸಲಾಗಿದೆ. ಇದೊಂದು ಅತ್ಯಾಧುನಿಕ ಅವಿಷ್ಕಾರಗಳನ್ನು ಒಳಗೊಂಡಿರುವ ಸಾಗರದಲ್ಲಿರುವ ಮಂಜಿನ ಗಡ್ಡೆಗಳನ್ನು ಭೇದಿಸಿ ಸಾಗಬಲ್ಲ ನೌಕೆಯಾಗಿದ್ದು, ಇದನ್ನು ಬಳಸಿ ನಾಪತ್ತೆಯಾಗಿರುವ ವಿಮಾನವನ್ನು ಪತ್ತೆಹಚ್ಚುವ ಕಾರ್ಯ ನಡೆಯಲಿದೆ.

Ekanatha shetty 4 copyವಿಧಾನ ಪರಿಷತ್ ಸದಸ್ಯ, ವಿರೋಧ ಪಕ್ಷದ ಮುಖ್ಯ ಸಚೇತಕ, ಮಾಜಿ ಸೈನಿಕರೂ ಆಗಿರುವ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಏಕನಾಥ ಶೆಟ್ಟಿ ಅವರ ಮನೆಗೆ ಜು. 25 ರಂದು ಭೇಟಿ ಮಾಡಿ ಅವರ ಪತ್ನಿ ಮಕ್ಳು ಹಾಗು ಕುಟುಂಬವರ್ಗದವರನ್ನು ಸಂತೈಸಿದರು. ಸ್ಪೂರ್ತಿದಾಯಕ ಮಾತುಗಳನ್ನಾಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬಿದರು. ಈ ಸಂದರ್ಭ ಮಾಜಿ ಶಾಸಕ ಪ್ರಭಾಕರ ಬಂಗೇರ, ಬಿಜೆಪಿ ತಾಲೂಕು ಅಧ್ಯಕ್ಷ ರಂಜನ್ ಜಿ ಗೌಡ, ಕಾರ್ಯದರ್ಶಿ ಬಿ. ಎಸ್ ಸೀರಾರಾಮ್, ಪ್ರಮುಖರಾದ ಪ್ರಭಾರಕ ಶೆಟ್ಟಿ ಉಪ್ಪಡ್ಕ, ನಾರಾಯಣ ಆಚಾರ್, ಅಶೋಕ್ ಕೋಟ್ಯಾನ್, ಜಿ.ಪಂ ಸದಸ್ಯೆ ಮಮತಾ ಎಂ ಶೆಟ್ಟಿ,  ಮೊದಲಾದವರು ಜೊತೆಗಿದ್ದರು.

1ಏಕನಾಥ ಶೆಟ್ಟಿ ಕಳೆದ 3 ದಶಕಗಳಿಂದ ಸೇನೆಯಲ್ಲಿ ಕೆಲಸದಲ್ಲಿದ್ದು ಈ ಅವಧಿಗಳಲ್ಲಿ ಅವರಿಗೆ ಸೇನೆಯ ಉನ್ನತ ಅದಿಕಾರಿಗಳಿಂದಲೇ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರ, ಪ್ರಶಂಸನಾ ಪತ್ರಗಳು ಲಭಿಸಿದೆ.

Ekanatha shetty 2 ಏಕನಾಥ ಶೆಟ್ಟಿ ಅವರ ಮನೆಗೆ ಜು. 25 ರಂದು ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ತಾಲೂಕು ಅಧ್ಯಕ್ಷ ರಂಜನ್ ಜಿ ಗೌಡ, ಮಾಜಿ ಶಾಸಕ ಪ್ರಭಾಕರ ಬಂಗೇರ, ಬಂಟರ ಯಾನೆ ನಾಡವರ ಸಂಘದ ಮಾಜಿ ಅಧ್ಯಕ್ಷ ಎಸ್ ಜಯರಾಮ ಶೆಟ್ಟಿ, ಟಿ. ಆರ್ ಅಡ್ಯಂತ್ಯಾಯ ಮತ್ತು ಇತರ ಗಣ್ಯರು.

Ekanatha shetty 7 copyಪುತ್ತೂರಿನ ಶಾಸಕಿ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಕುಂತಲಾ ಶೆಟ್ಟಿ ಅವರು ಜು. 25 ರಂದು ಏಕನಾಥ ಶೆಟ್ಟಿ ಅವರ ಮನೆಗೆ ಬಂದು ಪತ್ನಿ ಮಕ್ಕಳಿಗೆ ಧೈರ್ಯ ತುಂಬುವ ಕಾರ್ಯ ಮಾಡಿದರು.

Ekanatha shetty 3 copyಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರು ಜು. 25 ರಂದು ಏಕನಾಥ ಶೆಟ್ಟಿ ಅವರ ನಿವಾಸಕ್ಕೆ ಭೇಟಿ ನೀಡಿ ಪತ್ನಿ, ಮಕ್ಕಳು ಹಾಗು ಕುಟುಂಬದ ಸಸ್ಯರ ಜೊತೆ ಮಾತುಕತೆ ನಡೆಸಿದರು. ಏಕನಾಥ ಶೆಟ್ಟಿ ಅವರ ಬಗ್ಗೆ ವಿವರ ತಿಳಿದುಕೊಂಡ ಅವರು ಸಾಂತ್ವನ ಹೇಳಿದರು. ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ತಾ.ಪಂ ಸದಸ್ಯ ಗೋಪಿನಾಥ ನಾಯಕ್, ಪದ್ಮಶೇಖರ್ ಜೈನ್, ಶಶಿಧರ ಆದೇಲು, ಜಯಶೀಲಾ, ತಾ.ಪಂ ಸದಸ್ಯ ಪ್ರವೀಣ್ ಗೌಡ, ಇವರುಗಳು ಉಪಸ್ಥಿತರಿದ್ದರು.

Ekanatha shetty 12 copyತಹಶೀಲ್ದಾರ್ ಪ್ರಸನ್ನಮೂರ್ತಿಯವರು ಏಕನಾಥ ಶೆಟ್ಟಿಯವರ ಮನೆಗೆ ಬೇಟಿನೀಡಿ ಸಂತೈಸಿದರು.

Ekanatha shetty 8 copyಜಿಲ್ಲಾ ಪೊಲೀಸ್ ಎಸ್.ಪಿ ಭೂಷಣ್ ಬೊರಸೆ ಅವರು ಜು. 25ರಂದು ಏಕನಾಥ ಶೆಟ್ಟಿ ಅವರ ಮನೆಗೆ ಅಧಿಕೃತ ಭೇಟಿ ಮಾಡಿದರು. ಈ ಸಂದರ್ಭ ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿ ರವೀಶ್ ಸಿ. ಅರ್ ಮತ್ತು ಸಬ್‌ಇನ್ಸ್‌ಪೆಕ್ಟರ್ ಸಂದೇಶ್ ಪಿ. ಜಿ ಉಪಸ್ಥಿತರಿದ್ದರು.

Ekanatha shetty 6 copyಜು. 26 ರಂದು ಸೈನಿಕರ ಪುನರ್ವಸತಿ ವಿಭಾಗದ ಸರಕಾರದ ಜಂಟಿ ಕಾರ್ಯದರ್ಶಿ ಕ್ಯಾಪ್ಟನ್ ಡಾ| ಪ್ರಕಾಶ್ ಅವರು ಏಕನಾಥ ಶೆಟ್ಟಿ ಮನೆಗೆ ಭೇಟಿ ನೀಡಿ ಮನೆಯವರ ಜೊತೆ ಮಾತುಕತೆ ನಡೆಸಿದರು. ಈ ಸಂದರ್ಭ ಏರ್‌ಪೋರ್ಸ್‌ನ ನಿವೃತ ಸೇನಾನಿ ಎಂ. ಆರ್ ಜೈನ್, ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷ ಸುನಿಲ್ ಶೆಣೈ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

Ekanatha shetty 5 copyಜು. 26 ರಂದು ಏಕನಾಥ ಶೆಟ್ಟಿ ಮನೆಗೆ ಸೇನೆಯ ಮೈಸೂರಿನ ಏರ್‌ಪೋರ್ಸ್ ವಿಂಗ್ ಕಮಾಂಡರ್ ಆರ್. ಜಿ ಹೆಗಡೆ ಅವರು ಭೇಟಿ ಮಾಡಿ ಸಾಂತ್ವನ ಹೇಳಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.