ಫಲಾನುಭವಿಗಳಲ್ಲಿ ಕೃತಜ್ಞತಾ ಭಾವನೆ ಮೂಡಬೇಕು : ಶಾಸಕ ಬಂಗೇರ

padangadi hakkupatra vitarane copy ಪಡಂಗಡಿಯಲ್ಲಿ 42  ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಶಾಸಕ ಕೆ. ವಸಂತ ಬಂಗೇರ ಮಾತನಾಡುತ್ತಿರುವುದು.

ನನ್ನ ಅವಧಿ ಮುಗಿಯುವ ಒಳಗೆ ತಾಲೂಕಿನ ಎಲ್ಲಾ ಬಡವ ಫಲಾನುಭವಿಗೆ ನಿವೇಶನ ಹಾಗೂ ವಸತಿ ಒದಗಿಸಲು ಶ್ರಮಿಸುತ್ತೇನೆ. ಸರ್ಕಾರ ನೀಡಿದ ೧೬೫ ಪ್ರಣಾಳಿಕೆಯಲ್ಲಿ ಈಗಾಗಲೇ 100ನ್ನು ಈಡೇರಿಸಿದ್ದು, ಉಳಿದ 65 ಪ್ರಣಾಳಿಕೆಯನ್ನು ಸಿದ್ದರಾಮಯ್ಯ ಸರ್ಕಾರ ಅವಧಿ ಮುಗಿಯುವುದರೊಳಗೆ ಈಡೇರಿಸಲಿದೆ ಎಂಬ ಭರವಸೆ ನನಗಿದೆ.                 – ಕೆ. ವಸಂತ ಬಂಗೇರ, ಶಾಸಕರು ಬೆಳ್ತಂಗಡಿ

ಪಡಂಗಡಿ: ಬಡವರನ್ನು ಬಡತನ ರೇಖೆಗಿಂತ ಮೇಲೆತ್ತಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಫಲವನ್ನು ಅನುಭವಿಸುವ ಜನರು ನಂತರದ ದಿನಗಳಲ್ಲಿ ಸರ್ಕಾರವನ್ನೇ ಮರೆಯುತ್ತಿದ್ದಾರೆ. ಫಲಾನುಭವಿಗಳಲ್ಲಿ ಕೃತಜ್ಞತಾ ಭಾವನೆ ಮೂಡಬೇಕು ಎಂದು ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಜು. 9ರಂದು ದ.ಕ. ಜಿ.ಪಂ. ಪಂಚಾಯತು ಮಂಗಳೂರು, ತಾ.ಪಂ. ಬೆಳ್ತಂಗಡಿ ಹಾಗೂ ಗ್ರಾಮ ಪಂಚಾಯತು ಪಡಂಗಡಿ ಇದರ ಆಶ್ರಯದಲ್ಲಿ ಗರ್ಡಾಡಿ ಅಂಬೇಡ್ಕರ್ ಭವನದಲ್ಲಿ ಗ್ರಾಮೀಣ ನಿವೇಶನ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು. ರಾಜ್ಯದಲ್ಲಿ ಅನುಷ್ಠಾನ ಮಾಡಲಾದ ಯೋಜನೆಗಳು ದೇಶದ ಬೇರೆ ಯಾವ ರಾಜ್ಯದಲ್ಲೂ ಆಗಿಲ್ಲ. ಬಡವರ ಮಕ್ಕಳೂ ವಿದ್ಯಾವಂತರಾಗಬೇಕೆಂಬ ಉದ್ದೇಶದಿಂದ ಶೂ ಭಾಗ್ಯ, ಅನ್ನ ಭಾಗ್ಯ, ಕ್ಷೀರಭಾಗ್ಯ ಮುಂತಾದ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಸರ್ಕಾರದ ಇಂತಹ ಯೋಜನೆಗಳನ್ನು ಕಾರ್ಯಕರ್ತರು ಪ್ರಚಾರ ಪಡಿಸಬೇಕಾಗಿದೆ ಎಂದರು.
ರಾಜ್ಯ ಸರ್ಕಾರ ತಳಮಟ್ಟದಲ್ಲಿರುವ ಬಡವರ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿದೆ.
ಆಶ್ರಯ ಯೋಜನೆಯ ಸಾಲವನ್ನು ಮನ್ನಾ ಮಾಡಿದ್ದ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ ಎಂದು ಅಳದಂಗಡಿ ಕ್ಷೇತ್ರದ ತಾ.ಪಂ. ಸದಸ್ಯ ಶೇಖರ ಕುಕ್ಕೇಡಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡಂಗಡಿ ಗ್ರಾ.ಪಂ.  ಅಧ್ಯಕ್ಷೆ ಮೀನಾಕ್ಷಿ ವಹಿಸಿದ್ದರು.
ಪಡಂಗಡಿ ತಾ.ಪಂ. ಸದಸ್ಯ ಸುಶೀಲ, ಕಂದಾಯ ಇಲಾಖೆಯ ನಾರಾಯಣ ಕುಲಾಲ್ ಹಾಗೂ ಪಂಚಾಯತು ಕಾರ್ಯದರ್ಶಿ ದಿನೇಶ್ ಪಿ. ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಪಡಂಗಡಿ ಗ್ರಾ.ಪಂ. ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂ. ಸದಸ್ಯ ಅಹ್ಮದ್ ಬಾವ ಸ್ವಾಗತಿಸಿ ಕಾರ್ಯದರ್ಶಿ ದಿನೇಶ್ ಪಿ. ವಂದಿಸಿದರು. ಪಂ. ಅಭಿವೃದ್ಧಿ ಅಧಿಕಾರಿ ಸುಧಾಕರ ಡಿ. ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.