ಬೆಳ್ತಂಗಡಿ : ಇಲ್ಲಿನ ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಮಾಜಿ ಸೈನಿಕ, ಉದ್ಯಮಿ ಡಿ.ಎಂ. ಗೌಡ ಆಯ್ಕೆಯಾಗಿದ್ದು ಅವರ ಸಮಿತಿಯ ಪದಗ್ರಹಣವು ಜು. 7 ರಂದು ಸಂಜೆ 7 ಗಂಟೆಗೆ ಗುರುನಾರಾಯಣ ಸಂಕೀರ್ಣದ ಆಶಾಸಾಲಿಯಾನ್ ಸಭಾಂಗಣದಲ್ಲಿ ಜರುಗಲಿದೆ ಎಂದು ಕ್ಲಬ್ನ ನಿರ್ಗಮನಾಧ್ಯಕ್ಷ, ನಿವೃತ್ತ ಮೇಜರ್ ಜನರಲ್ ಎಂ.ವಿ. ಭಟ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಮಾಜಿ ಜಿಲ್ಲಾ ಗವರ್ನರ್ ಡಾ| ರವಿ ಅಪ್ಪಾಜಿ ಪದಗ್ರಹಣ ಅಧಿಕಾರಿಯಾಗಿ ಸಭೆಯಲ್ಲಿ ಭಾಗವಹಿಸಿದ್ದಾರೆ.
ಝೋನಲ್ ಅಸಿಸ್ಟೆಂಟ್ ಗವರ್ನರ್ ಸಂತೋಷ್ ಶೆಟ್ಟಿ, ಕ್ಷೇತ್ರ ದಂಡಪಾಲಕರಾಗಿ ಡಾ| ಜಯಕುಮಾರ್ ಶೆಟ್ಟಿ ಭಾಗವಹಿಸಿದ್ದಾರೆ.
ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಮುಂದಕ್ಕೆ ಆರೋಗ್ಯ ಸ್ವಚ್ಚತೆಗಳ ಬಗ್ಗೆ ಶಾಲೆಗಳ ಮೂಲಕ ಸಮಾಜಕ್ಕೆ ವ್ಯವಸ್ಥಿತವಾಗಿ ಅರಿವು ಮೂಡಿಸುವ ಕೆಲಸ, ತ್ಯಾಜ್ಯ ನಿರ್ವಹಣೆ ಮತ್ತು ಸುರಕ್ಷಿತ ಪರಿಸರ ಮಾಹಿತಿ, ಮಕ್ಕಳ ಶೋಷಣೆ ಮತ್ತು ಲೈಂಗಿಕ ಶೋಷಣೆ ತಡೆಗಟ್ಟಿ ಪರಸ್ಪರ ಗೌರವದಿಂದ ವರ್ತಿಸುವಂತೆ ಅಭ್ಯಾಸ ಮಾಡುವ ರೋಟರಿ ಪ್ರೊಟೆಕ್ಟ್, ವಿದ್ಯುತ್ ಸೌಲಭ್ಯ ತಲುಪದ ಮನೆಗಳಿಗೆ ರೋಟರಿ ವಿದ್ಯಾಜ್ಯೋತಿ ಮೂಲಕ ಸೋಲಾರ್ ಲೈಟ್ ವಿತರಣೆ, ನಿರುದ್ಯೋಗಿಗಳಿಗೆ ಕುಶಲ ಕೆಲಸಗಳಿಗೆ ತರಬೇತಿ ನೀಡುವುದು, ಹತ್ತಿರದ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಕಥೆ ಹೇಳಿ ಅವರಿಗೆ ಓದುವ ಹವ್ಯಾಸ ಬೆಳೆಸಲು ಜ್ಞಾನ ವಿಕಾಸ ಕಾರ್ಯಕ್ರಮ, ನೀರಿಂಗಿಸುವ ಬಗ್ಗೆ ಜಾಗೃತಿ, ಕೊಳವೆಬಾವಿ ಮರುಪೂರಣ, ಕೃಷಿ, ಕ್ರೀಡೆ, ಸಾಂಸ್ಕೃತಿಕ ಅರಿವು ಮೂಡಿಸುವ ಕೆಲಸ ಇತ್ಯಾಧಿ ನಡೆಸಲು ಯೋಜನೆ ತಯಾರಿಸಲಾಗಿದೆ ಎಂದರು. ಅಕ್ಟೋಬರ್ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಚೆಸ್ ಸ್ಪರ್ಧೆಯಲ್ಲಿ ಸ್ಥಳೀಯ, ರಾಷ್ಟ್ರೀಯ ಚೆಸ್ ಕ್ರೀಡಾಪಟುಗಳು, ವಿದೇಶಿಯರೂ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷ ಯಶವಂತ ಪಟವರ್ಧನ್, ಪ್ರಸ್ತುತ ಸಾಲಿನ ಅಧ್ಯಕ್ಷ ಡಿ.ಎಂ. ಗೌಡ, ಕಾರ್ಯದರ್ಶಿ ಟಿ. ಪ್ರಕಾಶ್ ಪ್ರಭು ಉಪಸ್ಥಿತರಿದ್ದರು.