ನಾರಾವಿ: ಜನರ ಸಂಕಷ್ಟಗಳಿಗೆ ಸ್ಪಂಧಿಸುತ್ತಿರುವ ಸರ್ಕಾರ ಮಳೆಹಾನಿಗೆ ಪ್ರತೀ ವರ್ಷ ಕೋಟ್ಯಂತರ ರೂ. ಪರಿಹಾರ ನೀಡಲಾಗುತ್ತಿದೆ. ರೈತರು ಕತ್ತಲಲ್ಲಿ ಇರಬಾರದೆಂಬ ಉದ್ದೇಶದಿಂದ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಅಲ್ಲದೆ ತುರ್ತು ಪರಿಸ್ಥಿತಿಯಲ್ಲೂ ಕ್ಲಪ್ತ ಸಮಯಕ್ಕೆ ವಿದ್ಯುತ್ ಸಂಪರ್ಕಕ್ಕೆ ಶ್ರಮಿಸಲಾಗಿದೆ. ರೈತರಿಗಾಗುವ ಸಂಕಷ್ಟಗಳಿಗೆ ಸರ್ಕಾರ ಸ್ಪಂಧಿಸಿದೆ ಎಂದು ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಹೇಳಿದರು. ಅವರು ಜೂ. 22ರಂದು ನಾರಾವಿ ಗ್ರಾ.ಪಂ. ಸಭಾಭವನದಲ್ಲಿ ಪ್ರಕೃತಿವಿಕೋಪದಡಿ ಹಾನಿಯಾದ ಫಲಾನುಭವಿಗಳಿಗೆ ರೂ. 2.42 ಲಕ್ಷ ಪರಿಹಾರ ಮೊತ್ತದ ಚೆಕ್ಕನ್ನು ವಿತರಿಸಿ ಮಾತನಾಡಿದರು.
ಚುನಾವಣೆ ಸಂದರ್ಭದಲ್ಲಿ ನೀಡಲಾದ 165 ಪ್ರಣಾಳಿಕೆಯಲ್ಲಿ ೧೦೦ನ್ನು ಈಗಾಗಲೇ ಪೂರೈಸಲಾಗಿದೆ. ಉಳಿದ ಎರಡು ವರ್ಷದ ಅವಧಿಯಲ್ಲಿ 65 ಪ್ರಣಾಳಿಕೆಯನ್ನು ಸರ್ಕಾರ ಪೂರೈಸಲಿದೆ ಎಂದು ಅವರು ಭರವಸೆ ನೀಡಿದರು.
ನಾರಾವಿ ಕ್ಷೇತ್ರದ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್ ಮಾತನಾಡಿ, ಪಕ್ಷರಹಿತವಾಗಿ ಒಗ್ಗಟ್ಟಿನಿಂದ ದುಡಿದಾಗ ಗ್ರಾಮದ ಅಭಿವೃದ್ಧಿ ಸಾಧ್ಯವಾಗುತ್ತದೆ. ಇದಕ್ಕೆ ನಾರಾವಿ ಗ್ರಾ.ಪಂ. ಸಾಕ್ಷಿಯಾಗಿದೆ ಎಂದರು .
ನಾರಾವಿ ಗ್ರಾ.ಪಂ. ಅಧ್ಯಕ್ಷ ರವೀಂದ್ರ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಸದಸ್ಯ ಶ್ರೀನಿವಾಸ ಕಿಣಿ, ನಾರಾವಿ ತಾ.ಪಂ. ಸದಸ್ಯೆ ರೂಪಲತಾ, ನಾರಾವಿ ಗ್ರಾ.ಪಂ. ಉಪಾಧ್ಯಕ್ಷೆ ಯಶೋಧ, ಕಂದಾಯ ಇಲಾಖಾಧಿಕಾರಿಗಳು, ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.
ಪಂ. ಅಭಿವೃದ್ಧಿ ಅಧಿಕಾರಿ ನಿರ್ಮಲ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.