6ನೇ ತರಗತಿಯಿಂದ ಆಂಗ್ಲಮಾಧ್ಯಮ ತರಗತಿಗೆ ಅನುಮತಿ ನೀಡಲಾಗುತ್ತಿತ್ತು. ಆದರೆ ಈಗ ಆ ಆದೇಶ ಇಲ್ಲ. 1 ನೇ ತರಗತಿಯಿಂದಲೇ ಆಂಗ್ಲಮಾಧ್ಯಮ ಶಿಕ್ಷಣಕ್ಕೆ ಅನುಮತಿ ನೀಡಲಾಗುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳನ್ನು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಭೀತಿಯಿಂದ ಸರ್ಕಾರ ಆಂಗ್ಲಮಾಧ್ಯಮ ಶಿಕ್ಷಣಕ್ಕೂ ಅನುಮತಿ ನೀಡುತ್ತಿದೆ. ಪೋಷಕರ ಹಾಗೂ ಮಕ್ಕಳ ಹಿತದೃಷ್ಟಿಯಿಂದ ವಿದ್ಯೋದಯ ಸಂಸ್ಥೆಯಲ್ಲಿ ಆಂಗ್ಲಮಾಧ್ಯಮ ಶಿಕ್ಷಣ ತೆರೆಯಲಾಗಿದೆ.
-ಕೆ. ಶಿವರಾಮ ಹೆಗ್ಡೆ, ಸಂಚಾಲಕರು
ವೇಣೂರು: ಇತ್ತೀಚಿನ ದಿನಗಳಲ್ಲಿ ಪೈಪೋಟಿ ಎಂಬಂತೆ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿದೆ, ಹಾಗೆಯೇ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಆದರೆ ನೈಜ ಮತ್ತು ಗುಣಮಟ್ಟದ ಶಿಕ್ಷಣ ಎಲ್ಲಿ ಸಿಗುತ್ತಿದೆ ಎಂಬುವುದನ್ನು ಪೋಷಕರು ಯೋಚಿಸಬೇಕಾದ ಸಂದರ್ಭ ಬಂದಿದೆ ಎಂದು ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಪ್ರವೀಣ್ ಕುಮಾರ್ ಇಂದ್ರ ಹೇಳಿದರು.
ಅವರು ಜೂ. 15 ರಂದು ವೇಣೂರು ವಿದ್ಯೋದಯ ಸಂಸ್ಥೆಯಲ್ಲಿ ಆಂಗ್ಲಮಾಧ್ಯಮ ಪ್ರೌಢ ಶಾಲಾ ವಿಭಾಗದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಶತಮಾನೋತ್ಸವದ ಇತಿಹಾಸ ಇರುವ ವೇಣೂರು ವಿದ್ಯೋದಯ ವಿದ್ಯಾ ಸಂಸ್ಥೆ ಇಲ್ಲಿಯವರೆಗೆ ಉತ್ತಮ ರೀತಿಯಲ್ಲಿ ಬೆಳೆಯಲು ಇಲ್ಲಿಯ ಗುಣಮಟ್ಟದ ಶಿಕ್ಷಣವೇ ಕಾರಣ. ಹಾಸ್ಟೆಲ್ ವ್ಯವಸ್ಥೆ ಸೇರಿದಂತೆ ಪ್ರತಿಯೊಂದು ಸೌಲಭ್ಯಗಳು ಉತ್ತಮ ರೀತಿಯಲ್ಲಿದ್ದು, ಕಲಿಕೆಗೆ ಮಾತ್ರ ವಿದ್ಯಾರ್ಥಿಗಳು ಶ್ರಮ ವಹಿಸಬೇಕಾಗಿದೆ. ಉತ್ತಮ ಅಂಕ ಪಡೆದು ಮಕ್ಕಳು ಶಾಲೆಗೆ, ಪೋಷಕರಿಗೆ ಕೀರ್ತಿ ತರಬೇಕು. ಶಾಲೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಪಡೆಯುವಂತಾಗಲು ಪೋಷಕರೂ ಸಹ ಪ್ರೋತ್ಸಾಹ ನೀಡಬೇಕಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯೋದಯ ಸಮೂಹ ಸಂಸ್ಥೆಯ ಸಂಚಾಲಕ ಕೆ. ಶಿವರಾಮ ಹೆಗ್ಡೆ ವಹಿಸಿದ್ದರು. ಹಿಂದಿನ ಕಾಲದಲ್ಲಿ ಕಲಿಕೆಗೆ ಪ್ರೋತ್ಸಾಹವೇ ಇರುತ್ತಿರಲಿಲ್ಲ. ಆದರೆ ಈಗ ಸರ್ಕಾರ ಮಾತ್ರವಲ್ಲದೆ ಸಂಘ ಸಂಸ್ಥೆಗಳೂ ಸಹ ಕಲಿಕೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಅದರಲ್ಲೂ ವಿದ್ಯೋದಯ ಸಂಸ್ಥೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ವೇಣೂರಿನ ಉದ್ಯಮಿ ಭಾಸ್ಕರ ಪೈ ಹೇಳಿದರು. ಮಗುವಿನಂತಿದ್ದ ಶಾಲೆ ಇಂದು ಪ್ರೌಢವ್ಯಸ್ಥೆಗೆ ತಲುಪಿದೆ. ಇದು ಸಂಚಾಲಕರ ನಿರಂತರ ಶ್ರಮದಿಂದ ಸಾಧ್ಯವಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯೋದಯ ಸಮೂಹ ಸಂಸ್ಥೆಗಳ ಕಾರ್ಯ ಸಾಧನೆ ಶ್ಲಾಘನೀಯ ಎಂದು ವೇಣೂರು ತಾ.ಪಂ. ಸದಸ್ಯ ಕೆ. ವಿಜಯ ಗೌಡ ಹೇಳಿದರು.
ಅನುಭವ ಹಂಚಿಕೆ: ಪೋಷಕರ ಪರವಾಗಿ ಅನುಭವ ವ್ಯಕ್ತಪಡಿಸಿದ ಚಂದ್ರನಾಥ್, ೧೨೦ ವರ್ಷಗಳ ಇತಿಹಾಸ ಇರುವ ವೇಣೂರು ವಿದ್ಯೋದಯ ಸಂಸ್ಥೆ ಪಠ್ಯ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಯಲ್ಲೂ ಸಕ್ರೀಯವಾಗಿದೆ ಎಂದರು. ವಿದ್ಯಾರ್ಥಿಗಳಾದ ಸುಶ್ಮಿತಾ, ಸಂದೇಶ್ ಅನುಭವ ಹಂಚಿಕೊಂಡರು. ಸಂಸ್ಥೆಯ ಟ್ರಸ್ಟಿ ಶೀಲಾ ಎಸ್. ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ರೂಪಾ ಸ್ವಾಗತಿಸಿ ಶಿಕ್ಷಕಿ ಶ್ರೀಜಾ ವಂದಿಸಿದರು. ಶಿಕ್ಷಕಿ ರಜನಿ ಎಸ್.ಜಿ. ಕಾರ್ಯಕ್ರಮ ನಿರ್ವಹಿಸಿದರು. ವೇಣೂರು ಪ.ಪೂ. ಕಾಲೇಜಿನ ಪ್ರಾಂಶುಪಾಲ ಚಂದ್ರು ಎಂ.ಎನ್., ಪ್ರೌಢ ಶಾಲಾ ವಿಭಾಗದ ಉಪ ಪ್ರಾಂಶುಪಾಲ ಸುಕೇಶ್ ಕೆ., ಲಯನ್ಸ್ ಕ್ಲಬ್ ಅಧ್ಯಕ್ಷ ಗಿರೀಶ್ ಕೆ.ಎಸ್., ಲ| ಜಗದೀಶ್ಚಂದ್ರ ಡಿ.ಕೆ., ವಿದ್ಯೋದಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶಶಿಪ್ರಭಾ, ಎಂ.ಎನ್. ಭಟ್ ಹಾಗೂ ಹಲವು ಗಣ್ಯರು, ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.