ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಯ ಉತ್ತಮ ಸಾಧನೆ ಎಸ್ಸೆಸ್ಸೆಲ್ಸಿಯಲ್ಲಿ ಸತತ ಐದು ವರ್ಷಗಳಲ್ಲಿ ಶೇ. ೧೦೦ ಫಲಿತಾಂಶ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

gkere 1

g kere

ಶಿಕ್ಷಕರ ಕೊರತೆ, ಮೂಲಭೂತ ಸವಲತ್ತುಗಳ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ಸರಕಾರಿ ಶಾಲೆಗಳು ಶೇ. 100 ಫಲಿತಾಂಶ ಪಡೆಯುವುದು ಬಹಳಷ್ಟು ಕಷ್ಟ. ಆದರೆ ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆ ಇದಕ್ಕೆಲ್ಲ ಅಪವಾದ ಈ ಶಾಲೆ ಕಳೆದ ಐದು ವರ್ಷಗಳಿಂದ ಸತತ ಶೇ. 100 ಫಲಿತಾಂಶವನ್ನು ಪಡೆದುಕೊಂಡು ರಾಜ್ಯದಲ್ಲೇ ಮಾದರಿ ಪ್ರೌಢ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮ ಪ್ರೌಢ ಶಾಲೆಯೊಂದು ಮೂಲಭೂತ ಸಮಸ್ಯೆಗಳ ನಡುವೆಯೇ ಈ ಸಾಧನೆ ಮಾಡಿರುವುದು ತಾಲೂಕಿನ ಎಲ್ಲರ ಮೆಚ್ಚುಗೆಗೆ ಹಾಗೂ ಪ್ರಶಂಸೆಗೆ ಪಾತ್ರವಾಗಿದೆ. ಕುವೆಟ್ಟು ಗ್ರಾಮದ ಗುರುವಾಯನಕೆರೆ ಪೇಟೆಯ ಸಮೀಪದ ಎತ್ತರವಾದ ಪ್ರದೇಶದಲ್ಲಿ ಈ ಶಾಲೆಯಿದೆ. ಶಾಲೆಗೆ ಸುಮಾರು 9.80 ಎಕ್ರೆ ಜಾಗವಿದ್ದು, ಇದರಲ್ಲಿ ಸುಮಾರು 3.50  ಎಕ್ರೆ ಜಾಗದಲ್ಲಿ ಸಾಮಾಜಿಕ ಅರಣ್ಯದ ನೆಡುತೋಪು ಮಾಡಲಾಗಿದೆ.
ಸರಕಾರಿ ಶಾಲೆಗೆ ಶ್ರೀಮಂತರ ಮಕ್ಕಳು ಬರುವುದಿಲ್ಲ. ಏನಿದ್ದರೂ ಬಡ ಕುಟಂಬದ ಮಕ್ಕಳಿಗೆ ಸರಕಾರಿ ಶಾಲೆ ಎಂಬ ಸ್ಥಿತಿ ಇಂದು ನಿರ್ಮಾಣವಾಗಿದೆ. ಇದು ಗುರುವಾಯನಕೆರೆ ಪ್ರೌಢ ಶಾಲೆಯನ್ನು ಹೊರತುಪಡಿಸಿಲ್ಲ, ಇಲ್ಲಿ ಬರುವ ಮಕ್ಕಳು ಬಡವರ ಮಕ್ಕಳು, ಕಲಿಕೆಯಲ್ಲಿಯೂ ಅಷ್ಟು ಮುಂದುವರಿದಿರುವುದಿಲ್ಲ, ಆದರೆ ಇಲ್ಲಿಯ ಶಿಕ್ಷಕರ ಕರ್ತವ್ಯ ನಿಷ್ಠೆ, ಪ್ರಾಮಾಣಿಕವಾದ ಸೇವೆಯಿಂದ ಇಲ್ಲಿಯ ವಿದ್ಯಾರ್ಥಿಗಳು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೇಯಲ್ಲಿ ಶೇ. 100 ಫಲಿತಾಂಶ ಪಡೆಯಲು ಕಾರಣವಾಗಿದೆ. ಇಲ್ಲಿಯ ಮಕ್ಕಳ ಸಾಧನೆ ಖಾಸಗಿ ಶಾಲೆಯನ್ನು ಮೀರಿಸುವಂತಿದೆ.
ಗುರುವಾಯನಕೆರೆ ಪ್ರೌಢ ಶಾಲೆ ೨೦೧೨ರಿಂದ ಸತತವಾಗಿ ಶೇ. ೧೦೦ ಫಲಿತಾಂಶ ದಾಖಲಿಸುತ್ತಾ ಬರುತ್ತಿದೆ. 2011-12ರಲ್ಲಿ 59 ಮಂದಿ, 2012-13ರಲ್ಲಿ 44 ಮಂದಿ, 2013-14ರಲ್ಲಿ 51 ಮಂದಿ, 2014-15ರಲ್ಲಿ 57 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಎಲ್ಲರೂ ಉತ್ತೀರ್ಣರಾಗಿದ್ದಾರೆ. ಈ ವರ್ಷ 82  ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲರೂ ಉತ್ತೀರ್ಣರಾಗಿದ್ದಾರೆ. 10 ಮಂದಿ ಎ+ಗ್ರೇಡ್, 27 ಮಂದಿ ಎ ಗ್ರೇಡ್, 26ಮಂದಿ ಬಿ+ ಗ್ರೇಡ್, 18 ಮಂದಿ ಬಿ ಗ್ರೇಡ್, ಒಬ್ಬ ಸಿ+ ಗ್ರೇಡ್ ಪಡೆದುಕೊಂಡಿದ್ದಾರೆ. ಶ್ವೇತಾ 608 ಪ್ರಥಮ ಮತ್ತು ನಿಶ್ಮಿತಾ ೬೦೦ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಇಲ್ಲಿಯ ಶಿಕ್ಷಕರು ಕೇವಲ ಶಾಲಾ ಅವಧಿಯ ಕಾರ್ಯಕ್ಕೆ ಎಂದೂ ಸೀಮಿತರಾದವರಲ್ಲ, ಶಾಲೆಗೆ ಬರುವ ಪ್ರತಿಯೊಂದು ಮಕ್ಕಳ ಹಿನ್ನಲೆಯನ್ನು ತಿಳಿದುಕೊಂಡು ಅವರ ಮನೆಗಳಿಗೆ ತೆರಳಿ ಪೋಷಕರ ಸಮಸ್ಯೆಗಳನ್ನು ತಿಳಿದುಕೊಂಡು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬುವ ಕೆಲಸವನ್ನು ಮಾಡುತ್ತಾರೆ.
ಶಾಲೆಯಲ್ಲಿ ನಡೆಯುವ ಪೋಷಕರ ಸಭೆಗೆ ಎಲ್ಲಾ ಪೋಷಕರು ಭಾಗವಹಿಸುತ್ತಾರೆ. ಮಕ್ಕಳ ಹಾಜರಾತಿ ಬಗ್ಗೆಯೂ ಹೆಚ್ಚಿನ ಜಾಗ್ರತಿ ವಹಿಸಲಾಗುತ್ತಿದೆ. ಬಹುತೇಕ ರಜಾ ದಿನಗಳಲ್ಲಿ ಮತ್ತು ಅಕ್ಟೋಬರ್ ರಜೆಯಲ್ಲಿಯೂ ತರಗತಿಗಳು ನಡೆಯುತ್ತಿರುತ್ತದೆ. ಶಿಕ್ಷಕರು, ಅಡುಗೆಯವರು ರಜಾ ದಿನಗಳೆನ್ನದೆ ಶಾಲೆಗೆ ಬರುತ್ತಾರೆ.
ಶಾಲೆಗಳ ಗೋಡೆಗಳಲ್ಲಿ ಬದುಕಿನ ಮೌಲ್ಯಗಳನ್ನು ತಿಳಿಸುವ ಮಾರ್ಗದರ್ಶನ ನೀಡುವ ಬರಹಗಳು, ದಾರ್ಶನಿಕರ ಚಿತ್ರಗಳು, ನುಡಿ ಬರಹಗಳು ವಿದ್ಯಾರ್ಥಿಗಳ ಬದುಕಿಗೆ ಮುನ್ನುಡಿಯಾಗಿದೆ. ಕಲಾವಿದ ವಿ.ಕೆ. ವಿಟ್ಲ ಅವರು ಶಾಲೆಯನ್ನು ಕಲಾದೇಗುಲವಾಗಿ ಮಾರ್ಪಡಿಸಿದ್ದಾರೆ. ಶಾಲೆಯಲ್ಲಿ ದಾನಿಗಳು ನೀಡಿದ ಕಂಪ್ಯೂಟರ್ ಸೇರಿದಂತೆ ಎಲ್ಲಾ ವಸ್ತುಗಳು ಸುಸ್ಥಿತಿಯಲ್ಲಿದ್ದು, ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತಿದೆ. ಶಾಲೆಯಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಿ ಶಾಲೆಯ ಹಾಗೂ ವಿದ್ಯಾರ್ಥಿಗಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಈ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಶಾಸಕ ಕೆ. ವಸಂತ ಬಂಗೇರ ಕಾರ್ಯನಿರ್ವಹಿಸುತ್ತಿದ್ದು, ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲಾ ಸಹಕಾರ ಮತ್ತು ಸರಕಾರದಿಂದ ದೊರೆಯಬಹುದಾದ ಸೌಲಭ್ಯಗಳನ್ನು ಒದಗಿಸಿದ್ದಾರೆ. ಜಿ.ಪಂ. ಸದಸ್ಯೆ ಮಮತಾ ಶೆಟ್ಟಿ, ಮಾಜಿ ಸದಸ್ಯೆ ತುಳಸಿ ಹಾರಬೆ, ಕುವೆಟ್ಟು ಗ್ರಾ.ಪಂ. ಆಡಳಿತ ತಮ್ಮ ಸಹಕಾರ ನೀಡುತ್ತಿದ್ದಾರೆ.
ಬೇಡಿಕೆಗಳು: ಶಾಲೆಗೆ 9.80 ಎಕ್ರೆ ಜಾಗವಿದ್ದು ಕ್ರೀಡಾಂಗಣದ ಅವಶ್ಯಕತೆ ಇದೆ. ಸುಮಾರು ರೂ.5ರಿಂದ ೬ಲಕ್ಷ ಬೇಕಾಗಬಹುದು. ಅಲ್ಲದೆ ಕಂಪೌಂಡ್, ಸಭಾಭವನ, ಸ್ವತಂತ್ರ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕಾಗಿದೆ. ಪ್ರಕೃತ ಪಂಚಾಯತ್ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಂಗಣಕ್ಕೆ ಸೂಕ್ತ ಅನುದಾನ ಒದಗಿಸಿ ಕೊಡುವ ಭರವಸೆಯನ್ನು ಜಿ.ಪಂ. ಸದಸ್ಯೆ ಶ್ರೀಮತಿ ಮಮತಾ ಶೆಟ್ಟಿ ನೀಡಿದ್ದಾರೆ.
ಶಾಲಾ ರಸ್ತೆ ಮತ್ತು ಚರಂಡಿ ದುರಸ್ಥಿಗೆ ಅನುದಾನ ಒದಗಿಸುವ ಭರವಸೆಯನ್ನು ಪಂಚಾಯತು ಅಧ್ಯಕ್ಷ ಅಶೋಕ್ ಕೋಟ್ಯಾನ್ ನೀಡಿದ್ದಾರೆ. ಎಲ್ಲಾ ತರಗತಿಗಳಿಗೆ ಹೊರಗೆ ಸಿ.ಸಿ.ಟಿ.ವಿ ಅಳವಡಿಸಲಾಗಿದೆ. ಮಂಗಳೂರಿನ ಪ್ರವೀಣ್ ಶೆಟ್ಟಿ ಇವರ ಸಹಕಾರದೊಂದಿಗೆ ಅಳವಡಿಸಲಾಗಿದೆ ಎಂದು ಶಾಲಾ ಮುಖ್ಯೋಪಧ್ಯಾಯ ಪ್ರಶಾಂತ್ ಎಲ್. ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.