ಕುಡಿಯುವ ನೀರು : ಸರಕಾರದ ಹೊಸ ಯೋಜನೆ ೧೩ ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರಿನ ಕಾಯಿನ್ ಬೂತ್

yojane1ರೂ.ಗೆ 10 ಲೀಟರ್ ನೀರು

ಬೆಳ್ತಂಗಡಿ : ಈ ಬಾರಿಯ ಬೇಸಿಗೆಯಲ್ಲಿ ತಾಲೂಕಿನ ಹಲವು ಕಡೆಗಳಲ್ಲಿ ಕುಡಿಯುವ ನೀರಿನ ಬಹಳಷ್ಟು ಸಮಸ್ಯೆ ಕಾಡಿದೆ. ಕೆಲವೊಂದು ಕಡೆಗಳಲ್ಲಿ ಮೈಲುಗಟ್ಟಲೆ ನಡೆದು ಕುಡಿಯುವ ನೀರನ್ನು ತರಬೇಕಾದ ಸನ್ನಿವೇಶ ನಿರ್ಮಾಣವಾಗಿತ್ತು. ಕೆಲ ಪಂಚಾಯತು ಗಳಲ್ಲಿ ಎರಡು ದಿನಗಳಿಗೊಮ್ಮೆ ನೀರು ಬಿಡುವ ಕೆಲಸವೂ  ನಡೆದಿದೆ. ರಾಜ್ಯದಲ್ಲಿ ತೀವ್ರ ಬರಗಾಲ ಕಾಡಿದ ಹಿನ್ನಲೆಯಲ್ಲಿ ಸರಕಾರ ಇದೀಗ ಜನರ ಸಂಕಷ್ಟಕ್ಕೆ ಸ್ಪಂದಿಸಿ, ಅಲ್ಲಲ್ಲಿ ‘ಶುದ್ಧ ಕುಡಿಯುವ ನೀರಿನ ಘಟಕ’ ಆರಂಭಿಸಲು ಯೋಜನೆ ರೂಪಿಸಿದೆ. ಇದರನ್ವಯ ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 13  ಪಂಚಾಯತು ವ್ಯಾಪ್ತಿಯಲ್ಲಿ ‘ಕುಡಿಯುವ ನೀರಿನ ಕಾಯಿನ್ ಬೂತ್’ ಆರಂಭಿಸಲು ಸರಕಾರ ಅನುದಾನ ಮಂಜೂರುಗೊಳಿಸಿದೆ. ಕಳೆದ ಬೇಸಿಗೆಯಲ್ಲಿ ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂಬ ಪ್ರದೇಶವನ್ನು ಗುರುತಿಸಿ ಈ ಯೋಜನೆ ರೂಪಿಸಲಾಗಿದ್ದು, ಬರುವ ಬೇಸಿಗೆಯೊಳಗೆ ಇದರ ಕಾಮಗಾರಿ ಪೂರ್ಣಗೊಂಡು ಕಾರ್ಯಾರಂಭ ನಡೆಯಲಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಅಳದಂಗಡಿ ಗ್ರಾ.ಪಂ. ವ್ಯಾಪ್ತಿಯ ಸುಲ್ಕೇರಿ, ಮತ್ತು ಅಳದಂಗಡಿ, ಅರಸಿನಮಕ್ಕಿ ಗ್ರಾ.ಪಂ. ವ್ಯಾಪ್ತಿಯ ನೇಲ್ಯಡ್ಕ, ಬಂದಾರು ಗ್ರಾ.ಪಂ. ವ್ಯಾಪ್ತಿಯ ಮೈರೋತ್ತಡ್ಕ, ಧರ್ಮಸ್ಥಳ ಗ್ರಾ.ಪಂ. ವ್ಯಾಪ್ತಿಯ ಕನ್ಯಾಡಿ, ಕಳಿಯ ಗ್ರಾ.ಪಂ. ವ್ಯಾಪ್ತಿಯ ಜಾರಿಗೆಬೈಲು, ಕುಕ್ಕೇಡಿ ಗ್ರಾ.ಪಂ. ವ್ಯಾಪ್ತಿಯ ಗೋಳಿಯಂಗಡಿ, ಕುವೆಟ್ಟು ಗ್ರಾ.ಪಂ. ವ್ಯಾಪ್ತಿಯ ಮದ್ದಡ್ಕ, ಮಡಂತ್ಯಾರು ಗ್ರಾ.ಪಂ. ವ್ಯಾಪ್ತಿಯ ಮಡಂತ್ಯಾರು, ಮಿತ್ತಬಾಗಿಲು ಗ್ರಾ.ಪಂ. ವ್ಯಾಪ್ತಿಯ ಕಾಜೂರು, ನಡ ಗ್ರಾ.ಪಂ. ವ್ಯಾಪ್ತಿಯ ದೊಂಪದಪಲ್ಕೆ, ಪಡಂಗಡಿ ಗ್ರಾ.ಪಂ. ವ್ಯಾಪ್ತಿಯ ಪೊಯ್ಯಗುಡ್ಡೆ, ವೇಣೂರು ಗ್ರಾ.ಪಂ. ವ್ಯಾಪ್ತಿಯ ವೇಣೂರುನಲ್ಲಿ ಈ ಘಟಕ ನಿರ್ಮಾಣವಾಗಲಿದೆ. ಸುಮಾರು ರೂ. 8.50  ಲಕ್ಷ ವೆಚ್ಚ ಇದಕ್ಕೆ ತಗಲಲಿದ್ದು, ಸರಕಾರ ಪ್ರತಿ ಕುಡಿಯುವ ನೀರಿನ ಘಟಕಕ್ಕೆ ರೂ.೫ ಲಕ್ಷ ಮಂಜೂರುಗೊಳಿಸಿದೆ. ಉಳಿದ ರೂ.3.50 ಲಕ್ಷವನ್ನು ಸ್ಥಳೀಯ ಸಂಸ್ಥೆ ಅಥವಾ ಸ್ಥಳೀಯ ಮೂಲಗಳಿಂದ ಸಂಗ್ರಹಿಸಬೇಕಾಗಿದೆ. ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದರಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯುವ ವ್ಯವಸ್ಥೆಯಿಲ್ಲ, ಗುರುತಿಸಿದ ಸ್ಥಳದಲ್ಲಿ ಬೂತ್ ನಿರ್ಮಿಸಿ, ಪಂಚಾಯತದಲ್ಲಿ ಈಗ ಇರುವ ವ್ಯವಸ್ಥೆಯಿಂದಲೇ ಇಲ್ಲಿಗೆ ನೀರಿನ ಸಂಪರ್ಕ ಕಲ್ಪಿಸಿ, ನೀರನ್ನು ಶುದ್ದೀಕರಣ ಗೊಳಿಸಿ ಜನರಿಗೆ ಕುಡಿಯಲು ಒದಗಿಸಲಾಗುತ್ತದೆ.
ಕಾಯಿನ್ ಬೂತ್‌ಮೂಲಕ ನೀರು
ಪೇಟೆಗಳಲ್ಲಿ ಪೋನ್‌ಗಾಗಿ ಕಾಯಿನ್ ಬೂತು ಇರುವಂತೆ ಇಲ್ಲಿ ಜನರಿಗೆ ಕಾಯಿನ್ ಬೂತ್ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ. ಬೂತ್‌ಗೆ ಬಂದು ರೂ.1 ಹಾಕಿ ಬಟನ್ ಒತ್ತಿಹಿಡಿದಾಗ ಒಮ್ಮೆಗೆ 10ಲೀಟರ್ ನೀರು ಬರುತ್ತದೆ. ಮತ್ತೆ ನೀರು ಬೇಕಾದರೆ ಪುನಃ ರೂ 1 ಹಾಕಿ ಬಟನ್ ಒತ್ತಿ ಹಿಡಿಯಬೇಕು. ಇದಕ್ಕಾಗಿ ಅಳವಡಿಸಲಾದ ಮೇಷಿನ್‌ನಲ್ಲಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ಪಂಚಾಯತು ನಿರ್ಧರಿಸಿದಂತೆ ನೀರು ಪೂರೈಕೆ ಮಾಡಲಾಗುತ್ತದೆ. ರೂ.1ಕ್ಕೆ ೫ಲೀಟರ್, 10ಲೀಟರ್, 20 ಲೀಟರ್ ಹೀಗೆ ಎಷ್ಟು ನಿರ್ಧರಿಸಲಾಗತ್ತದೋ ಅಷ್ಟು ನೀರು ಬರುವ ಹಾಗೆ ಮಾಡುವ ವ್ಯವಸ್ಥೆ ಮೇಷಿನಲ್ಲಿದೆ.
ದ.ಕ. ಜಿಲ್ಲಾ ಪಂಚಾಯತು ನೀರು ಮತ್ತು ನೈರ್ಮಲ್ಯೀಕರಣ ವಿಭಾಗ ಇದರ ಅನುಷ್ಠಾವನ್ನು ಮಾಡುತ್ತಿದೆ. ಮುಂದಿನ ಬೇಸಿಗೆಯೊಳಗೆ ಇದರ ಕಾಮಗಾರಿ ಪೂರ್ತಿಗೊಂಡು ಜನರಿಗೆ ಇದರ ಸೌಲಭ್ಯದೊರೆಯಲಿದೆ. ಈಗ 13 ಗ್ರಾ.ಪಂ. ವ್ಯಾಪ್ತಿಯಲ್ಲಿ ಆರಂಭಗೊಂಡ ಈ ಯೋಜನೆ ಯಶಸ್ವಿಯಾದರೆ ಎಲ್ಲಾ ಪಂಚಾಯತುಗಳಿಗೂ ಇದು ವಿಸ್ತರಣೆಯಾಗಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.