ಬೆಳ್ತಂಗಡಿ: ಪರೀಕ್ಷಾ ಫಲಿತಾಂಶಗಳು ಆ ಸಂಸ್ಥೆಯ ವಿದ್ಯಾರ್ಥಿಗಳ ಪರಿಶ್ರಮದ ಕಲಿಕೆಯ ಜೊತೆಗೆ ಅಲ್ಲಿನ ಶಿಕ್ಷಕವೃಂದ ಮತ್ತು ಶೈಕ್ಷಣಿಕ ಪ್ರೋತ್ಸಾಹಕರ ಶ್ರಮವನ್ನು ಪ್ರತಿಬಿಂಭಿಸುತ್ತದೆ. ಸಂಘ ಸಂಸ್ಥೆಗಳು ಇನ್ನಷ್ಟು ಪ್ರೋತ್ಸಾಹ ನೀಡುವುದರಿಂದ ಸಾಧನೆಗೆ ಪ್ರೇರಣೆ ದೊರೆಯುತ್ತದೆ ಎಂದು ಸತತ 5 ನೇ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಶೇ. 100 ಫಲಿತಾಂಶ ದಾಖಲಿಸಿರುವ ಗುರವಾಯನಕೆರೆ ಸರಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಪ್ರಶಾಂತ್ ಅಭಿಪ್ರಾಯಪಟ್ಟರು.
ಮೇ. 28 ರಂದು ಬೆಳ್ತಂಗಡಿ ಸುವರ್ಣ ಆರ್ಕೆಡ್ನಲ್ಲಿ ಡಾ| ಎ. ಪಿ. ಜೆ ಅಬ್ದುಲ್ ಕಲಾಂ ಸೈನ್ಸ್ ಕ್ಲಬ್ ಬೆಳ್ತಂಗಡಿ ಇದರ ವತಿಯಿಂದ ಏಕ್ಸೆಸ್ ಇಂಡಿಯಾ ಸಹಯೋಗದೊಂದಿಗೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸುವ ಮತ್ತು ಸಾಧನೆಯನ್ನು ದಾಖಲಿಸಲು ಕಾರಣರಾದ ಆಯಾಯಾ ಶಾಲೆಗಳನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೈನ್ಸ್ ಕ್ಲಬ್ ಅಧ್ಯಕ್ಷ ಸುಹೈಲ್ ವಹಿಸಿದ್ದು ಸಂಘಟನೆಯ ಉದ್ಧೇಶ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಭಾರತ್ ಸೇವಾ ದಳದ ಕೇಂದ್ರ ಮತ್ತು ಸ್ಥಾಯಿ ಸಮಿತಿ ಸದಸ್ಯ, ಉದ್ಯಮಿ ಆಲ್ಫೋನ್ಸ್ ಫ್ರಾಂಕೋ, ಸುದ್ದಿ ಬಿಡುಗಡೆ ವರದಿಗಾರ ಲ| ಅಶ್ರಫ್ ಆಲಿಕುಂಞಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮಂಗಳೂರು ಇಲ್ಲಿನ ಸಂಯೋಜಕ ಅಬ್ದುಲ್ ಖಾದರ್ ನಾವೂರು ಇವರುಗಳು ಸಂದರ್ಭೋಚಿತವಾಗಿ ಮಾತನಾಡಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಬಳಿಕ ಇನ್ನೇನು ಎಂಬ ಬಗ್ಗೆ ಕ್ಯಾರಿಯರ್ ಗೈಡೆನ್ಸ್ಅನ್ನು ಪಿ. ಎ ಕಾಲೇಜಿನ ಎಂ. ಬಿ. ಎ ಉಪನ್ಯಾಸಕ ಹಬೀಬುರ್ರಹ್ಮಾನ್ ಸಂಪನ್ಮೂಲ ಉಪನ್ಯಾಸ ನೀಡಿದರು. ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಸುಶ್ರೂತ್ ಅವರನ್ನು ಶಾಲು ಹೊದೆಸಿ ಸನ್ಮಾನಿಸಿದರೆ, ಉಳಿದ ಸಾಧಕ ವಿದ್ಯಾರ್ಥಿಗಳಿಗೆ ಸ್ಮರಣಿಕೆಯೊಂದಿಗೆ ಪ್ರಮಾಣಪತ್ರ ನೀಡಿ ಪುರಸ್ಕರಿಸಲಾಯಿತು. ವಿದ್ಯಾರ್ಥಿಗಳಾದ ಸುಶ್ರೂತ್ ಮತ್ತು ಅನುಪಮ್ರಾಜ್ ಅನಿಸಿಕೆ ವ್ಯಕ್ತಪಡಿಸಿದರು. ಶಾಹಿದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ತ್ಹಾಹಾ ಸ್ವಾಗತಿಸಿದರು.