ಬೆಳಾಲು ಶ್ರೀ ಧ. ಪ್ರೌಢಶಾಲೆಯಲ್ಲಿ ನೀರಿಂಗಿಸುವ ವಿಶೇಷ ಪ್ರಯೋಗಗಳು

Advt_NewsUnder_1
Advt_NewsUnder_1
Advt_NewsUnder_1

belal  1  ಕಳೆದ ಆರೇಳು ವರ್ಷಗಳಿಂದ ಸದ್ದಿಲ್ಲದೆ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ನಡೆಸಿರುವುದು ಬರದ ನೆರಳಿನಲ್ಲಿ ಕಂಡು ಬರುವ ವಿಶೇಷ ಅಂಶ.
ವಿಶೇಷ ಖರ್ಚಿಲ್ಲದೆ ನೀರ ಹರಿವಿನ ಮಾರ್ಗವನ್ನೇ ಅನುಸರಿಸಿ ಸಹಜವಾಗಿ ಅಲ್ಲಲ್ಲಿನ ನೀರನ್ನು ಅಲ್ಲಲ್ಲಿಯೇ ಇಂಗಿಸುವ ಪ್ರಯತ್ನ ಇಲ್ಲಿಯದು. ಶಾಲಾವರಣದೊಳಗೆ ಹರಿಯುವ ನೀರನ್ನು ಎರಡು ಭಾಗವಾಗಿ ವಿಂಗಡಿಸಿ ಹರಿಯುವಂತೆ ಮಾಡಲಾಗಿದೆ. ಆ ಎರಡು ಬಾಗಗಳಲ್ಲಿ ಹರಿದು ಹೋಗುವ ಜಾಗದಲ್ಲಿ ಧಾರಾಳವಾಗಿ ಹಸಿರು ಹುಲ್ಲು ಬೆಳೆಯುವಂತೆ ಮಾಡಿದ್ದಾರೆ. ಜೊತೆಗೆ ನೀರು ಹರಿಯುವ ದಿಕ್ಕಿನಲ್ಲಿ ಸಣ್ಣ ಸಣ್ಣ ನೀರಿನ ಕೊಳದಂತಿರುವ ಇಂಗುಗುಂಡಿಗಳನ್ನು ರಚಿಸಲಾಗಿದೆ. ಜೊತೆಗೆ ತೆಂಗಿನ ಮರಗಳ ಹೊಂಡಗಳನ್ನು ನೀರಿಂಗಿಸುವುದಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಹೀಗೆ ಶಾಲಾವರಣದೊಳಗಿನ ನೀರು ಹಸಿರು ಹಾಸಿನ ಮೇಲೆ ಹರಿಯುತ್ತಾ ಇಂಗು ಗುಂಡಿಗಳಲ್ಲಿ ತುಂಬುತ್ತಾ, ಇಂಗುತ್ತಾ ಹರಿವಿನ ವೇಗವನ್ನು ಕಳಕೊಂಡು
ನಿಧಾನವಾಗಿ ಹರಿದು ರಬ್ಬರ್ ತೋಟದಲ್ಲಿ ವಿಶಾಲವಾಗಿ ಮಡಿರುವ ಪ್ಲೇಟ್‌ಗಳಲ್ಲಿ ಹರಿದು ಇಂಗುತ್ತದೆ.
ಶಾಲಾ ಹೊರಾವರಣದ ನೀರು ಹೊರಾಂಗಣದಲ್ಲಿ ಶಾಲಾ ಮೈದಾನದ ಬದಿಯಲ್ಲಿ ಮಾಡಲಾದ ಹೊಂಡಗಳಲ್ಲಿ ತುಂಬಿ ಹರಿಯುತ್ತದೆ. ಅದು ಹೇಗಿದೆ ಎಂದರೆ ದೊಡ್ಡ ಹೊಂಡದಲ್ಲಿ ತುಂಬಿ ಹರಿದು ಸಣ್ಣ ಹೊಂಡಗಳಲ್ಲಿ ತುಂಬಿ ಹರಿಯುವಂತೆ ಸರಪಣಿ ಹೊಂಡಗಳನ್ನು ಮಾಡಲಾಗಿದೆ. ಹೆಚ್ಚುವರಿ ನೀರು ಹೊರ ಹರಿಯುತ್ತದೆ. ಇದರೊಂದಿಗೆ ೨೦೦ ಮೀ ವಿಸ್ತಾರದ ಮೈದಾನದ ನೀರ ಹರಿವನ್ನು ಮೈದಾನದ ಬದಿಯಲ್ಲಿ ಹರಿಯುವಂತೆ ಮಾಡಿದ್ದು ಕ್ರೀಡಾಂಗಣಕ್ಕೆ ಒಂದು ಸುತ್ತು ಬಂದು ಒಂದೇ ಬದಿಯಲ್ಲಿ ಹರಿದು ಹೋಗುತ್ತಿದೆ. ಅಲ್ಲಿಯೂ ಹಾಗೆಯೇ ಹರಿದು ಹೋಗುವ ದಾರಿಯಲ್ಲಿ ಸಣ್ಣದು, ದೊಡ್ಡದು ಹೊಂಡಗಳನ್ನು ಮಾಡಲಾಗಿದೆ. ಇಲ್ಲೆಲ್ಲಾ ನೀರು ತುಂಬಿ ಹರಿಯುತ್ತಾ ಇನ್ನೊಂದು ಹೊಂಡಕ್ಕಿಳಿದು ಮತ್ತೆ ತುಂಬಿ ಮುಂದಕ್ಕೆ ಹರಿಯುತ್ತದೆ. ಹೀಗೆ ನೀರು ಹರಿದು ಬರುವಾಗಲೇ ಅಷ್ಟುದ್ದಕ್ಕೂ ನಿಂತು ತುಂಬಿ ಇಂಗುವುದಕ್ಕೆ ಅವಕಾಶ ಸಿಕ್ಕಂತಾಗಿದೆ. ಈ ಶಾಲೆಯ ಸುತ್ತೆಲ್ಲಾ ಹಸಿರು ಸಿರಿ ಕಂಗೊಳಿಸುತ್ತಿದ್ದು ಮಾತ್ರವಲ್ಲದೆ ಗಾರ್ಡನ್‌ನನ್ನೇ ನೀರಿಂಗಿಸುವಂತೆ ಮಾಡಲಾದ ಪ್ರಯೋಗ ಅತೀ ವಿಶಿಷ್ಟ. ಶಾಲಾವರಣದೊಳಗೆ ಮಾಡಿನ ನೀರು ನೆಲಕ್ಕೆ ಬೀಳುವ ಸುತ್ತ ಹಸಿರು ಗಿಡ ಬೆಳೆಸಿದೆ.ಮಾಡಿನ ನೀರು ಎಲ್ಲೂ ನೇರವಾಗಿ ನೆಲಕ್ಕೆ ಬೀಳದೆ ಗಿಡಗಳ
ಮೇಲೆ ಬಿದ್ದು ನಂತರ ನೆಲವನ್ನು ತಲುಪುತ್ತದೆ. ಇದರಿಂದಾಗಿ ಮಣ್ಣಿನ ಸವಕಳಿ ಅತ್ಯುತ್ತಮ ರೀತಿಯಲ್ಲಿ ತಡೆಯಲ್ಪಟ್ಟಿದೆ. ಆರೇಳು ವರ್ಷಗಳಿಂದ ಈ ಪ್ರಯೋಗ ಜಾರಿಯಲ್ಲಿರುವುದರಿಂದ ಇದೀಗ ಮತ್ತೆ ಇಂಗು ಗುಂಡಿಗಳನ್ನು ನವೀಕರಿಸುವ ಕೆಲಸವನ್ನು ಮಾಡಲಾಗುತ್ತಿದೆ. ಅವರೊಂದಿಗೆ ಶಾಲಾವರಣದಲ್ಲಿರುವ ಬೋರ್‌ವೇಲ್‌ಗೆ ನೀರಿಂಗಿಸುವ ನೂತನ ಪ್ರಯೋಗಕ್ಕೆ ಶಾಲಾ ಆಡಳಿತ ಮಂಡಳಿಯವರ ಮೂಲಕ ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕರು, ಮತ್ತು ಸಿಬ್ಬಂದಿಯವರು ಮುಂದಾಗಿದ್ದಾರೆ. ಇಂತಹ ಪ್ರಯೋಗಗಳಿಂದಾಗಿ ಈ ವರ್ಷದ ಬಿರು ಬೇಸಿಗೆಯಲ್ಲೂ ಬಾವಿಯ ನೀರು ಬತ್ತದಿರುವುದು ವಿಶೇಷ.
೮,೯,೧೦ನೇ ತರಗತಿಯಲ್ಲಿರುವ ಬೆಳಾಲಿನ ಈ ಪ್ರೌಢಶಾಲೆಯಲ್ಲಿ ನೀರಿಂಗಿಸುವ ಪ್ರಯೋಗದೊಂದಿಗೆ ಹಲವಾರು ವಿನೂತನ ಶೈಕ್ಷಣಿಕ ಪ್ರಯೋಗಗಳು ನಡೆಯುತ್ತಿರುವುದನ್ನು ಗುರುತಿಸಲೇಬೇಕು. ತೀರಾ ಹಳ್ಳಿ ಪ್ರದೇಶದ ಶಾಲೆಯಾದರೂ ಪೇಟೆ ಶಾಲೆಗಿಂತಲೂ ಹೆಚ್ಚಿನ ಶೈಕ್ಷಣಿಕ ಅವಕಾಶಗಳನ್ನು ಇಲ್ಲಿ ನೀಡಲಾಗುತ್ತಿರುವುದು ಕಂಡು ಬರುತ್ತಿದೆ. ವಿಶೇಷವಾಗಿ ಇಂಗ್ಲೀಷಿನಲ್ಲಿ ಮಾತನಾಡುವುದಕ್ಕೆ ೮ನೇ ತರಗತಿಯಿಂದಲೇ ಪ್ರತಿ ತರಗತಿಗೆ ವಾರಕ್ಕೆ ೨ ವಿಶೇಷ ತರಗತಿಗಳು , ೧೫ ಕಂಪ್ಯೂಟರ್‌ಗಳ ಮೂಲಕ ಉಚಿತ ಕಂಪ್ಯೂಟತ್ ಶಿಕ್ಷಣ, ಯೋಗ ಮತ್ತು ನೈತಿಕ ತರಬೇತಿಗಳು, ಸಾಹಿತ್ಯ- ಸಾಂಸ್ಕೃತಿಕ ಚಟುವಟಿಕೆಗಳು, ಪ್ರತಿ ವರ್ಷ ಅಕ್ಟೋಬರ್‌ನಲ್ಲಿ ೨ ದಿನ ಏಪ್ರಿಲ್‌ನಲ್ಲಿ ೭ ದಿನಗಳ ಕ್ರೀಡೆ ಮತ್ತು ಮನೋಲ್ಲಾಸ ವಿಶೇಷ ಶಿಬಿರ, ತರಗತಿ ವಾರು ವಾಚನಾಲಯ ಮತ್ತು ಭಿತ್ತಿ ಪತ್ರಿಕೆ ಸರಕಾರಿ ಕಚೇರಿಗಳ, ಉಜಿರೆ ಕಾಲೇಜು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳಗಳ ಭೇಟಿ, ಕ್ರೀಡಾ ತರಬೇತಿ ಇತ್ಯಾದಿ ಹತ್ತಾರು ಚಟುವಟಿಕೆಗಳು ಗಮನಾರ್ಹ.
ಈ ರೀತಿಯ ವಿಶೇಷ ಪ್ರಯೋಗಗಳಿಗೆ ಶಾಲೆಯ ಆಡಳಿತ ಮಂಡಳಿಯವರು ನೀಡುವ ಪ್ರೋತ್ಸಾಹ, ಮಾರ್ಗದರ್ಶನ ಹಾಗೂ ಶಿಕ್ಷಕರೆಲ್ಲರ ಕ್ರಿಯಾಶೀಲತೆ ಕಾರಣವಾಗಿದೆ. ವಿಶಿಷ್ಟ ಪ್ರಯೋಗಗಳ ಮೂಲಕ ಗಮನ ಸೆಳೆಯುತ್ತಿರುವ ಈ ಪ್ರೌಢಶಾಲೆಯು ತಾಲೂಕಿನಲ್ಲಿಯೇ ಗುರುತಿಸುವಂತಾಗಿದ್ದು ಬೆಳಾಲು ಗ್ರಾಮಕ್ಕೆ ಹೆಮ್ಮೆ ತರುವಂತಾದ್ದು. ಈ ಶಾಲೆಯಲ್ಲಿ ಓದುವ ವಿದ್ಯಾರ್ಥಿಘಲು ನಿಜಕ್ಕೂ ಭಾಗ್ಯಶಾಲಿಗಳು. -ಜೆ.ಪಿ ಬೆಳಾಲು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.