ಕಿಡಿಗೇಡಿಗಳು ಉರಿಸಿದ ಕಾರು ಯಾರದು..? ಇದು ಯಾರ ಕೃತ್ಯ..? ಬಂದ್‌ಗೆ ಪ್ರಚೋದನೆಯೇ..? ಪೊಲೀಸ್ ತನಿಖೆ

Car benki copyಬೆಳ್ತಂಗಡಿ : ಬಂದ್ ದಿನ ಬೆಳಿಗ್ಗಿನ ಜಾವಾ ಕಾಶಿಬೆಟ್ಟು ಪ್ರಸನ್ನ ಕಾಲೇಜು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾರುತಿ ಓಮ್ನಿ ಕಾರಿಗೆ ಕಿಡಿಗೇಡಿಗಳ್ಯಾರೋ ಬೆಂಕಿಹಚ್ಚಿ ಸುಟ್ಟುಹಾಕಿದ ಘಟನೆ ನಡೆದಿದೆ. ಅಚ್ಚರಿಯೆಂದರೆ ಇನ್ನೂ ಬೆಳಕಾಗುವ ಮುನ್ನವೇ ಈ ಘಟನೆ ನಡೆದಿದ್ದು ಇದಾದ ಕೆಲವೇ ನಿಮಿಷಗಳಲ್ಲಿ ಬಹುತೇಕ ಎಲ್ಲಾ ದೃಶ್ಯ ಮಾಧ್ಯಮಗಲ್ಲಿ ಮತ್ತು ಸಮೂಹ ಮಾಧ್ಯಮಗಳಲ್ಲಿ ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ್ದು, ಬೆಳ್ತಂಗಡಿಯಲ್ಲಿ ಬಂದ್ ಹಿನ್ನೆಲೆಯಲ್ಲಿ ಕಾರಿಗೆ ಬೆಂಕಿ ಎಂದು ಬಿಂಭಿಸುವ ಯತ್ನ ನಡೆದಿದೆ ಎಂಬ ಸಂದೇಹ ಬಲವಾಗಿ ಮೂಡಿದೆ. ಅದಕ್ಕೆ ಪೂರಕವಾಗಿ ಮರುದಿನ ವಿವಿಧ ಸುದ್ದಿ ಮಾಧ್ಯಮಗಳಲ್ಲೂ ಇದೇ ಕಾರಿನ ದಗದಗ ಉರಿಯುವ ಚಿತ್ರ ಹಾಕಿ, ಬಂದ್ ನಿಮಿತ್ತ ಕಿಡಿಗೇಡಿಗಳಿಂದ ಕಾರಿಗೆ ಬೆಂಕಿ ಎಂಬ ತಲೆಬರಹದಲ್ಲಿ ವರದಿ ಭಿತ್ತರವಾಗಿದೆ.
ಘಟನೆ ನಡೆದು ಮೇ ೨೫ ಕ್ಕೆ ೭ ದಿನಗಳೇ ಕಳೆದಿದ್ದರೂ ಇನ್ನೂ ಠಾಣೆಯಲ್ಲಿ ಯಾರೂ ದೂರು ದಾಖಲಿಸಿಲ್ಲ. ಕಾರಿನ ಮಾಲಿಕರೇನಾದರೂ ಇದ್ದರೆ ಇನ್ಸ್ಯೂರೆನ್ಸ್ ಕ್ಲೈಮ್ ಸೇರಿದಂತೆ ಕಾನೂನಾತ್ಮಕವಾದ ಮುಂದಿನ ಕ್ರಮಕ್ಕೆ ಠಾಣೆಗೆ ಅಥವಾ ಇನ್ಸ್ಯೂರೆನ್ಸ್ ಕಂಪೆನಿಗೆ ದೂರು ನೀಡಬೇಕಿತ್ತಾದರೂ ಇದು ವರೆಗೆ ಯಾವುದೇ ದೂರು ದಾಖಲಾಗಿಲ್ಲ. ಹಾಗಾದರೆ ಈ ಕಾರು ಯಾರಿಗೆ ಸೇರಿದ್ದು? ಎಂಬ ಬಗ್ಗೆ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.
ಘಟನೆ ನಡೆದ ಸ್ಥಳಕ್ಕಿಂತ ೩ ಕಿ.ಮೀ. ಅಂತರದಲ್ಲಿ ಪೊಲೀಸ್ ಠಾಣೆ ಇದ್ದರೂ ಬೆಳಗ್ಗಿನ ಜಾವಾ ೪.೪೫ರ ಸಮಯಕ್ಕೆ ಮಂಗಳೂರಿನ ಪೊಲೀಸ್ ಕಂಟ್ರೋಲ್ ರೂಮ್‌ನಿಂದ ಇಲ್ಲಿನ ಠಾಣೆಗೆ ಮಾಹಿತಿ ಬಂದಿದೆ. ಅಗ್ನಿಶಾಮಕ ದಳಕ್ಕೆ ಕಾಶಿಬೆಟ್ಟು ನಿವಾಸಿ ಉಮರ್ ಅವರು ಕರೆ ಮಾಡಿ ತಿಳಿಸಿದ್ದು, ಕೋಳಿ ಸಾಗಾಟದ ವಾಹನದಲ್ಲಿದ್ದ ಅವರು ಬೆಳಗ್ಗಿನ ಜಾವಾ ಮೂಡಬಿದ್ರೆಯಿಂದ ಬರುತ್ತಿದ್ದ ವೇಳೆ ಕಾರು ಉರಿಯುತ್ತಿದ್ದುದನ್ನು ನೋಡಿ ತಮ್ಮ ಕರ್ತವ್ಯವೆಂಬಂತೆ ಅಗ್ನಿಶಾಮಕ ಠಾಣೆಗೆ ತಿಳಿಸಿದ್ದಾರೆ. ಅದರ ಆಧಾರದಲ್ಲಿ ತಕ್ಷಣ ಸ್ಥಳಕ್ಕಾಗಮಿಸಿದ ಎರಡೂ ಇಲಾಖೆಯವರು ತುರ್ತು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಚುಮುಚುಮು ಬೆಳಕು ಹರಿಯುವ ಮುನ್ನವೇ ಕಾರು ಹೊತ್ತಿ ಉರಿಯುವ ದೃಶ್ಯ ಪೂರ್ತಿ ಮೊಬೈಲ್‌ನಲ್ಲಿ ಚಿತ್ರೀಕರಣಗೊಳಿಸಲಾಗಿದ್ದು ವಿವಿಧ ಟಿ.ವಿ. ಮಾಧ್ಯಮಗಳಿಗೆ ಆ ವೀಡಿಯೋ ತುಣುಕನ್ನು ಕಳುಹಿಸಿ ಬ್ರೇಕಿಂಗ್ ಸುದ್ದಿ ಪ್ರಸಾರವಾಗುವಂತೆ ಮಾಡುವಲ್ಲಿ ಕಿಡಿಗೇಡಿಗಳು ಯಶಸ್ವಿಯಾಗಿದ್ದಾರೆ.
ಅನಾಮಧೇಯ ಕಾರಿಗೆ ಬೆಂಕಿಹಚ್ಚಿ ಬೆಳ್ತಂಗಡಿಯಲ್ಲಿ ಬಂದ್‌ನಿಂದ ಪೂರ್ತಿ ಇಡೀ ದಿನ ಕಾವೇರಿದ ವಾತಾವರಣವಿರುತ್ತದೆ ಎಂಬ ಸಂದೇಶ ರವಾನಿಸಿ, ಸ್ವಂತ ವಾಹನಗಳಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಪ್ರಯಾಣ ಮಾಡಹೊರಟವರಲ್ಲಿ ವ್ಯಥಾ ಭಯದ ವಾತಾವರಣ ತರುವ ಪ್ರಯತ್ನ ಭಾಗವಾಗಿ ಇದನ್ನು ಪೂರ್ವಯೋಜಿತವಾಗಿ ಮಾಡಲಾಗಿತ್ತೇ? ಎಂಬ ಅನುಮಾನ ಕಾಡತೊಡಗಿದೆ.
ಹೆಸರು ಹೇಳಲಿಚ್ಚಿಸದ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಯೊಬ್ಬರು ಈ ಘಟನೆಯ ಬಗ್ಗೆ ಸುದ್ದಿಗೆ ಪ್ರತಿಕ್ರೀಯಿಸಿದ್ದು, ನಮಗೆ ಕರೆಬಂದ ಹಿನ್ನೆಲೆಯಲ್ಲಿ ತುರ್ತು ಕ್ರಮಕ್ಕಾಗಿ ನಾವು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ ಕಾರನ್ನು ರಸ್ತೆಯಿಂದ ಬದಿಗೆ ಸರಿಸಿ ಬಂದಿದ್ದೇವೆ. ನಾವು ಅಲ್ಲಿ ಹೋಗಿ ನೋಡುವಷ್ಟರಲ್ಲಿ ಕಾರನ್ನು ಬೆಂಕಿ ಆವರಿಸಿಕೊಂಡಿರುವ ರೀತಿ ನೋಡಿದರೆ ಅದು ಆಕಸ್ಮಿಕ ಬೆಂಕಿ ಘಟನೆಯಂತೆ ಕಂಡು ಬರುತ್ತಿರಲಿಲ್ಲ. ಬದಲಾಗಿ ಕಾರಿನ ಒಳಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟಂತೆ ಕಾಣುತ್ತಿತ್ತು. ಕಾರಿನ ವಾರೀಸುದಾರರ ಬಗ್ಗೆ ಇನ್ನೂ ನಮಗೆ ಮಾಹಿತಿ ಬಂದಿರುವುದಿಲ್ಲ. ಪೊಲೀಸ್ ಇಲಾಖೆಯನ್ನೂ ಸಂಪರ್ಕಿಸಲಾಗಿದ್ದು ಅವರಿಗೂ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ಕಾರಿನಲ್ಲಿ ನೋಂದಾವಣೆಯ ನಂಬರ್ ಪ್ಲೇಟ್ ಕೂಡ ಇರಲಿಲ್ಲ ಎಂದಿದ್ದಾರೆ.
ಚೇಸಿನಂಬರ್ ತೆಗೆದು ಮುಂದಿನ ಕ್ರಮಕ್ಕೆ ವ್ಯವಸ್ಥೆ ಮಾಡಿದೆ; ಎಸ್.ಐ ಸಂದೇಶ್
ಘಟನೆ ನಡೆದ ೭ ದಿನವಾದರೂ ಇನ್ನೂ ಠಾಣೆಗೆ ದೂರುನೀಡಲು ಯಾರೂ ಬಂದಿಲ್ಲ. ಆದುದರಿಂದ ಕಾರಿನ ವಾರೀಸುದಾರರ ಪತ್ತೆಯಾಗಿಲ್ಲ. ಕಾರಿನಲ್ಲಿ ನೊಂದಾವಣಿ ನಂಬರ್‌ಪ್ಲೇಟ್ ಕೂಡ ಇಲ್ಲ. ಆದ್ದರಿಂದ ಅದರ ಮೂಲ ಮಾಲಿಕರನ್ನು ಪತ್ತೆಹಚ್ಚುವ ಕೆಲಸಕ್ಕೆ ಮುಂದಾಗಲಾಗಿದೆ. ಆ ಹಿನ್ನೆಲೆಯಲ್ಲಿ ಕಾರಿನ ಚೇಸಿ ನಂಬರ್ ತೆಗೆದು ಗುರುತು ಪತ್ತೆಗೆ ಕ್ರಮ ಕೈಗೊಂಡಿದ್ದೇವೆ. ಗ್ಯಾರೇಜ್ ಬಳಿ ನಿಲ್ಲಿಸಿದ್ದ ಗುಜಿರಿ ವಾಹನವನ್ನು ಬೇರೆ ವಾಹನದಲ್ಲಿ ತುಂಬಿಕೊಂಡು ಬಂದು ಅಲ್ಲಿ ಇಳಿಸಿ ಕಿಡಿಗೇಡಿಗಳ್ಯಾರೋ ಬೆಂಕಿಹಚ್ಚಿರುವ ಗುಮಾನಿ ಇದೆ. ಸಿಸಿ ಕ್ಯಾಮರಾ ಆಧರಿಸಿ ಮಾಹಿತಿ ಸಂಗ್ರಹಕ್ಕೆ ಪ್ರಯತ್ನಿಸಲಾಗುತ್ತಿದೆ. ಇದು ಪೊಲೀಸರಿಗೆ ಮತ್ತು ಜನರಿಗೆ ಚಳ್ಳೆಹಣ್ಣು ತಿನ್ನಿಸಿದ ಪ್ರಕರಣ. ಇದರ ಹಿಂದೆ ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕಾನೂನುಕ್ರಮ ಜರುಗಿಸಲಿದ್ದೇವೆ ಎಂದು ಬೆಳ್ತಂಗಡಿ ಎಸ್.ಐ. ಸಂದೇಶ್ ಬಿ.ಜಿ. ಸುದ್ದಿಗೆ ತಿಳಿಸಿದ್ದಾರೆ.
ಅಂದು ಬಂದ್ ದಿನ ಸಂತೆಕಟ್ಟೆಯಲ್ಲಿ ಬೈಕ್ ಬೆಂಕಿ ಇಡಲಾಗಿತ್ತು :
ಹಿಂದೊಮ್ಮೆ ಇದೇ ರೀತಿ ಬಂದ್‌ದಿನ ಹಾಡಹಗಲೇ ಸಂತೆಕಟ್ಟೆ ಮಾರುಕಟ್ಟೆಯ ಎದುರಿನ ಮುಖ್ಯ ರಸ್ತೆಯಲ್ಲೇ ಹೀಗೆಯೇ ಬೈಕೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಅದನ್ನೂ ಚಿತ್ರೀಕರಿಸಿ ಎಲ್ಲಾ ಮಾಧ್ಯಮಗಳಲ್ಲೂ ವರದಿ ಪ್ರಸಾರವಾಗುವಂತೆ ನೋಡಿಕೊಂಡಿದ್ದರು. ಆದರೆ ವಿಚಾರ ತಿಳಿಯುತ್ತಾ ಹೋಗುತ್ತಿದ್ದಂತೆ ಅದು ಗುಜಿರಿ ಅಂಗಡಿಗೆ ಮಾರಾಟ ಮಾಡಿದ ಬೈಕ್ ಎಂದು ಗೊತ್ತಾಗಿತ್ತು. ಆ ವೇಳೆ ಸಂಶಯದ ಮೇಲೆ ವ್ಯಕ್ತಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಕೆಲವು ಸಂಘಟನೆಯ ನಾಯಕರು ಠಾಣೆಯ ಬಳಿ ಜಮಾಯಿಸಿ ಬಳಿಕ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಸಫಲರಾಗಿದ್ದರು.
ಈ ಬಾರಿಯ ಬಂದ್ ವೇಳೆ ಬೆಳಗ್ಗಿನ ಜಾವಾ ಬೆಳ್ತಂಗಡಿ ಸಂತೆಕಟ್ಟೆಯ ಡಾಂಬರು ರಸ್ತೆಯಲ್ಲೇ ಟಯರ್‌ಗಳನ್ನು ಪೇರಿಸಿ ಕಿಡಿಗೇಡಿಗಳು ಕೊಳ್ಳಿಇಟ್ಟು ವಿಕೃತ ಆನಂದ ಪಡೆದಿದ್ದರು. ವಿಚಾರವನ್ನು ಠಾಣೆಯ ಗಮನಕ್ಕೆ ಯಾರೋ ತಂದಾಗ ತಕ್ಷಣ ಸ್ಥಳಕ್ಕೆ ಎಸ್.ಐ. ಸಂದೇಶ್ ಬಿ.ಜಿ. ಮತ್ತು ಸಿಬ್ಬಂದಿಗಳು ಧಾವಿಸಿ ಬೆಂಕಿನಂದಿಸುವ ಕಾರ್ಯ ಕೈಗೊಂಡರು.
ಈ ವೇಳೆ ಕೊಳ್ಳಿಯಿಟ್ಟವರು ಯಾರು ಎಂದು ಪೊಲೀಸರು ತಲಾಶ್ ನಡೆಸಿದಾಗ ಅಲ್ಲೇ ಇದ್ದ ಯುವಕನೋರ್ವನನ್ನು ಗುರುತಿಸಲಾಯಿತು. ಸಾರ್ವಜನಿಕ ಪ್ರದೇಶದಲ್ಲಿ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲೇ ಟಯರ್‌ಗೆ ಬೆಂಕಿಹಚ್ಚಿ ರಸ್ತೆ ಪ್ರಯಾಣಿಕರಿಗೆ ಮತ್ತು ವಾಹನಗಳ ಪ್ರಯಾಣಕ್ಕೆ ತೊಂದರೆ ನೀಡಿದ ಹಿನ್ನೆಲೆಯಲ್ಲಿ ಯುವಕನನ್ನು ಪೊಲೀಸರು ಎರಡೇಟು ಬಿಗಿದು ವಶಕ್ಕೆ ಪಡೆದುಕೊಂಡರು. ಆತನನ್ನು ಠಾಣೆಗೆ ಕರೆತರುತ್ತಿದ್ದಂತೆ ಕೆಲವು ಮುಖಂಡರುಗಳು ಮತ್ತು ಬಂಧಿಸಲ್ಪಟ್ಟಿದ್ದ ಯುವಕನ ಅಣ್ಣ ಠಾಣೆಯ ಬಳಿಗೆ ಹೋದರು. ಈ ವೇಳೆ ಮಾತಿನ ಚಕಮಕಿ ನಡೆದು ಬಂಧಿತ ಯುವಕನ ಸಂಬಂಧಿ ಪೊಲೀಸ್ ಪೇದೆಯೊಬ್ಬರನ್ನು ದೂಡಿದ ವಿದ್ಯಮಾನ ನಡೆದು ಇದರಿಂದ ಇನ್ನಷ್ಟು ಕೋಪೋದ್ರಿಕ್ತರಾದ ಎಸ್.ಐ. ಸಂದೇಶ್ ಬಿ.ಜಿ. ಅವರು ಸಂಘಟನಾ ನಾಯಕರ ಎದುರಿನಲ್ಲೇ ಆತನಿಗೂ ಪೊಲೀಸ್ ಲಾಠಿಯ ರುಚಿ ತೋರಿಸಿದ ಘಟನೆಯೂ ನಡೆಯಿತು. ಬಳಿಕ ವಿಷಯವನ್ನು ಮಾತುಕತೆಯಲ್ಲಿ ಇತ್ಯರ್ಥಪಡಿಸಲಾಗಿದೆ ಎನ್ನಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.