ಪೆರ್ಮುಡ: ಕಲ್ಲಾಣಿ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಪನ್ನ ಶಕ್ತಿಯ ಮತ್ತೊಂದು ರೂಪವೇ ದೈವ: ಭೀಮೇಶ್ವರ ಜೋಶಿ

kallani bramakalasa copyದೈವ-ದೇವರ ಶಕ್ತಿಯ ಬಗ್ಗೆ ಅಪನಂಬಿಕೆಗೆ, ಪ್ರಶ್ನೆ ಮಾಡುವ ವ್ಯವಸ್ಥೆ ಸೃಷ್ಟಿಯಾಗಬಾರದು. ದೇವತಾ ಕಾರ್ಯಗಳಿಂದ ನಮ್ಮನ್ನು ನಾವು ಪರಿಶುದ್ಧಗೊಳಿಸಿಕೊಳ್ಳುತ್ತೇವೆ, ಕಲ್ಲಾಣಿಯಲ್ಲಿ ದೈವಸ್ಥಾನದ ಸಾನಿಧ್ಯಕ್ಕೆ ಒತ್ತುಕೊಟ್ಟು, ಸಮರ್ಪಣಾ ಭಾವದಿಂದ ಕೆಲಸ ಕಾರ್ಯ ಮಾಡಿರುವುದು ಶ್ಲಾಘನೀಯ.
ಭೀಮೇಶ್ವರ ಜೋಶಿ,
ಧರ್ಮದರ್ಶಿ ಶ್ರೀ ಕ್ಷೇತ್ರ ಹೊರನಾಡು

ವೇಣೂರು: ಭಗವಂತನಿಂದ ನೀನು ನಾನಾಗು ಎಂಬ ಸಂದೇಶವನ್ನು ಹೊತ್ತು ನಮ್ಮಲ್ಲಿರುವ ಶಕ್ತಿಯನ್ನು ದೈವಗಳು ಉದ್ದೀಪನಗೊಳಿಸುತ್ತವೆ. ಕೊಟ್ಟು ಬದುಕು ಎಂಬ ನೀತಿಯನ್ನು ನಮಗೆ ತಿಳಿಸಿಕೊಡುವುದೇ ದೈವಗಳು. ಶಕ್ತಿಯ ಮತ್ತೊಂದು ರೂಪವೇ ದೈವ ಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಶಿ ಹೇಳಿದರು.
ಅವರು ಮೇ.೧೧ ರಂದು ಪೆರ್ಮುಡ ಪಂಡಿಜೆ ಕಲ್ಲಾಣಿ ಶ್ರೀ ಕೊಡಮಣಿತ್ತಾಯ, ಕಲ್ಕುಡ ಕಲ್ಲುರ್ಟಿ ದೈವಸ್ಥಾನ ಮತ್ತು ನಾಗಸನ್ನಿಧಿ ಇದರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಕೊನೆಯ ದಿನದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ನಮಗೆ ದೇವಸ್ಥಾನಗಳು ಉತ್ಸಾಹವನ್ನು ತುಂಬಿಸಿದರೆ, ದೈವಸ್ಥಾನಗಳು ಶಕ್ತಿಯನ್ನು ನೀಡುತ್ತವೆ. ದೇವರ ಅಂಶವನ್ನೇ ದೈವಸ್ಥಾನಗಳೂ ಒಳಗೊಂಡಿವೆ. ದೈವಗಳು ನಮ್ಮೊಂದಿಗೆ ಮಾತನಾಡುತ್ತವೆ, ಅಭಯ ನೀಡುತ್ತವೆ. ದೇವರಿರಲಿ, ದೈವವಿರಲಿ ನಮಗೆ ನಂಬಿಕೆ ಮುಖ್ಯ. ಇದರ ಬಗ್ಗೆ ಅಪನಂಬಿಕೆಗೆ, ಪ್ರಶ್ನೆ ಮಾಡುವ ವ್ಯವಸ್ಥೆಗೆ ಅದು ಕಾರಣವಾಗಬಾರದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ ಅಜಿಲ ವಹಿಸಿದ್ದರು. ಮೂಡಬಿದ್ರೆ ಶ್ರೀ ಧನಲಕ್ಷ್ಮೀ ಗ್ರೂಪ್ಸ್‌ನ ಶ್ರೀಪತಿ ಭಟ್, ಬೆಂಗಳೂರು ಉಚ್ಛ ನ್ಯಾಯಾಲಯದ ನ್ಯಾಯವಾದಿ ಹರೀಶ್ ಪೂಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲಕ್ಷ್ಮಣ ಹೆಬ್ಬಾರ್ ಅನಿಸಿಕೆ ವ್ಯಕ್ತಪಡಿಸಿದರು.
ಕಲ್ಲಾಣಿ ಕ್ಷೇತ್ರದಲ್ಲಿ ೧೫ ವರ್ಷಗಳಿಂದ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿರುವ ಡಾಕಯ್ಯ ಹಾಗೂ ೩೦ ವರ್ಷಗಳಿಂದ ದೈವದ ಕಾರ್ಯ ನಿರ್ವಹಿಸುತ್ತಿರುವ ಬಾಬು ನಲ್ಕೆ ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರ ಪ್ರವೀಣ ಚಂದ್ರಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷ ಅಶೋಕ್ ಪಾಣೂರು ಸ್ವಾಗತಿಸಿ ಕೋಶಾಧಿಕಾರಿ ಪಿ. ಪ್ರಶಾಂತ ಹೆಬ್ಬಾರ್ ವಂದಿಸಿದರು. ಶ್ರೇಯಾಂಕ್ ರಾನಡೆ ಕಾರ್ಯಕ್ರಮ ನಿರ್ವಹಿಸಿದರು. ಸೀಮೆಯ ಅಸ್ರಣ್ಣರಾದ ಟಿ. ವಿಷ್ಣುಮೂರ್ತಿ ಭಟ್ ಅವರ ನೇತೃತ್ವದಲ್ಲಿ ಬೆಳಿಗ್ಗೆ ಚಂಡಿಕಾ ಹೋಮ, ಕಲಶಾಭಿಷೇಕ, ಪ್ರಸನ್ನ ಪೂಜೆ, ಪರ್ವ ಸಂಕ್ರಾಂತಿ ನಡೆಯಿತು. ಗುತ್ತುಗಳಿಂದ ಭಂಡಾರ ಬಂದು ಕೊಡಮಣಿತ್ತಾಯ ದೈವದ ದರ್ಶನ, ಬಳಿಕ ದೈವಗಳ ನೇಮೋತ್ಸವ, ಸುಡುಮದ್ದು ಪ್ರದರ್ಶನ ನಡೆಯಿತು. ಬಲೇ ತೆಲಿಪಾಲೆ ತಂಡದ ಸದಸ್ಯರಿಂದ ತೆಲಿಕೆದ ಗೊಂಚಿಲ್ ಕಾರ್ಯಕ್ರಮಗಳು ಜರಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.