ಪಶ್ಚಿಮವಾಹಿನಿ ಯೋಜನೆ ಶೀಘ್ರವಾಗಿ ಜಾರಿಯಾಗಬೇಕು : ಸಚಿವ ರೈ

apmc udgatane

APMC vividaಬೆಳ್ತಂಗಡಿ ಎ.ಪಿ.ಎಂ.ಸಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ-ಶಿಲಾನ್ಯಾಸ
ಬೆಳ್ತಂಗಡಿ : ರೈತರ ಹಿತವನ್ನು ಗಮನದಲ್ಲಿಟ್ಟು ಸರಕಾರ ವಿವಿಧ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಈ ವರ್ಷ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹಳಷ್ಟು ಕಂಡು ಬಂದಿದ್ದು, ಈ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗ ಬೇಕಾದರೆ ಪಶ್ಚಿಮವಾಹಿನಿ ಯೋಜನೆಯನ್ನು ಸರಕಾರ ಜಾರಿ ಮಾಡಲು ಪ್ರಯತ್ನಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕರ್ನಾಟಕ ಸರಕಾರದ ಅರಣ್ಯ ಮತ್ತು ಪರಿಸರ ಸಚಿವರಾದ ಬಿ. ರಮಾನಾಥ ರೈ ಹೇಳಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬೆಳ್ತಂಗಡಿ ಇದರ ವತಿಯಿಂದ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ತನಿಖಾ ಠಾಣೆ ದ್ವಾರ ಹಾಗೂ ಅಡ್ಡ ರಸ್ತೆಗಳ ಉದ್ಘಾಟನೆ, 1ಸಾವಿರ ಮೆಟ್ರಿಕ್ ಟನ್‌ನ ಗೋದಾಮು ಕಟ್ಟಡದ ಶಿಲಾನ್ಯಾಸ, ಬ್ಯಾಂಕ್ ಮತ್ತು ಅಂಚೆ ಕಚೇರಿ ಕಟ್ಟಡ ಮತ್ತು ಟೆಂಡರ್ ಹಾಲ್ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ಮೇ 12ರಂದು ಜರುಗಿತು.
ಒಂದು ಸಾವಿರ ಮೆಟ್ರಿಕ್‌ಟನ್ ಗೋದಾಮು ಕಟ್ಟಡಕ್ಕೆ ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿದ ಸಚಿವ ರಮಾನಾಥ ರೈ ಅವರು ಇಂದು ಕೃಷಿ ಮಾರುಕಟ್ಟೆಯಲ್ಲಿ ಬಹಳಷ್ಟು ಸುಧಾರಣೆಯಾಗಿದ್ದು, ಬೇರೆ ಜಿಲ್ಲೆಗಳಲ್ಲಿ ಕೃಷಿ ಉತ್ಪನ್ನ ಮಾರಾಟಕ್ಕೆ ನಿರ್ದಿಷ್ಟ ಸ್ಥಳ ಇದೆ. ಆದರೆ ದ.ಕ. ಜಿಲ್ಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಇದ್ದರೂ ಅದರ ಪ್ರಯೋಜನ ರೈತರಿಗೆ ದೊರಕಿಲ್ಲ ಎಂದರು.
ಕೃಷಿಗೆ ಬೆಲೆ ಕುಸಿತವಾದಾಗ ಸರಕಾರ ವಿಶೇಷ ನಿಧಿ ನೀಡುತ್ತಿದೆ. ಕಳೆದ ಬಾರಿ ಅಡಿಕೆಗೆ ಕೊಳೆರೋಗ ಬಂದಾಗ ಸರಕಾರ ರೂ.೩೦ಕೋಟಿ ಪರಿಹಾರವನ್ನು ನೀಡಿತ್ತು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವಿಶೇಷ ಅವರ್ತನಿಧಿ ಇದೆ. ಇದನ್ನು ಸಂಕಷ್ಟ ಸ್ಥಿತಿಯಲ್ಲಿ ರೈತರಿಗೆ ಪರಿಹಾರವಾಗಿ ನೀಡಬೇಕು ಎಂದು ಸಲಹೆಯಿತ್ತರು.
ಈ ವರ್ಷ ದ.ಕ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ಕಾಣಿಸಿಕೊಂಡಿದ್ದು, ಬರಗಾಲ ಶಾಶ್ವತವಾಗಿ ಬರುವ ಸೂಚನೆ ಕಂಡುಬರುತ್ತಿದೆ. ಇದಕ್ಕಾಗಿ ಪಶ್ಚಿಮವಾಹಿನಿ ಯೋಜನೆಯನ್ನು ಸರಕಾರ ಜಾರಿ ಮಾಡಬೇಕು. ದ.ಕ ಜಿಲ್ಲೆಯಲ್ಲಿ ಎಲ್ಲಾ ಹೋರಾಟಕ್ಕಿಂತ ಪಶ್ಚಿಮವಾಹಿನಿ ಯೋಜನೆ ಜಾರಿಗೆ ಹೋರಾಟ ನಡೆಯಲಿ. ಜಿಲ್ಲೆಯಲ್ಲಿರುವ ಎಲ್ಲಾ ನದಿಗಳ ಜೋಡಣೆ ಮೂಲಕ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಮುಖ್ಯ ಮಂತ್ರಿಯವರ ಮೇಲೆ ಜಿಲ್ಲೆಯ   ಎಲ್ಲಾ ಶಾಸಕರು, ಸಚಿವರು ಒತ್ತಡ ಹಾಕುವುದಾಗಿ ತಿಳಿಸಿದರು.
ಯುವಜನ ಸೇವೆ, ಕ್ರೀಡಾ ಹಾಗೂ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಅವರು ಬ್ಯಾಂಕ್ ಹಾಗೂ ಅಂಚೆಕಚೇರಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಹೋರಾಟ ನೀರನ್ನು ಉಳಿಸುವ ನಿಟ್ಟಿನಲ್ಲಿ ನಡೆಯಬೇಕು, ಪಶ್ಚಿಮವಾಹಿನಿ ಯೋಜನೆ ೧೯೯೩ರಲ್ಲಿ ವೀರಪ್ಪ ಮೊಲಿ ಮುಖ್ಯ ಮಂತ್ರಿ ಇರುವಾಗ ಆದ ಯೋಜನೆ ಆದರೆ ಇದು ಇದುವರೆಗೂ ಅನುಷ್ಠಾನವಾಗಿಲ್ಲ, ರಾಜ್ಯದ ಇತರ ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಕೋಟಿ ಗಟ್ಟಲೆ ಹಣ ಖರ್ಚು ಮಾಡಲಾಗುತ್ತಿದೆ ಆದರೆ ನಮ್ಮ ಜಿಲ್ಲೆಯಲ್ಲಿ ನದಿ ನೀರಿನ ಸಂಗ್ರಹ ನಡೆಯುತ್ತಿಲ್ಲ. ಇದಕ್ಕಾಗಿ ಪಶ್ಚಿಮವಾಹಿನಿ ಯೋಜನೆ ಜಾರಿ ನಮ್ಮ ಮುಖ್ಯ ಬೇಡಿಕೆಯಾಗಿದೆ ಇದನ್ನು ಮುಖ್ಯ ಮಂತ್ರಿಯವರ ಮುಂದೆ ಇಟ್ಟಿದ್ದೇವೆ ಎಂದು ಹೇಳಿದರು.
ಬೆಳ್ತಂಗಡಿ ಕ್ಷೇತ್ರದ ಶಾಸಕ ಕೆ. ವಸಂತ ಬಂಗೇರ ಅವರು ತನಿಖಾ ಠಾಣೆ ದ್ವಾರ ಮತ್ತು ಅಡ್ಡ ರಸ್ತೆಗಳನ್ನು ಉದ್ಘಾಟಿಸಿ ಶುಭ ಕೋರಿದರು. ದ.ಕ. ಜಿಲ್ಲಾ ಪಂಚಾಯತದ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಹರಾಜು ಕಟ್ಟಡವನ್ನು ಉದ್ಘಾಟಸಿ ಮಾತನಾಡಿ, ಕೃಷಿ ಉತ್ಪನ್ನ ಮಾರಾಟದಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ಕೃಷಿಕರೇ ಕೃಷಿ ಉತ್ಪನ್ನಗಳನ್ನು ಇಲ್ಲಿ ನೇರವಾಗಿ ಮಾರಾಟ ಮಾಡಬಹುದು ಇದರ ಸದುಪಯೋಗವನ್ನು ಕೃಷಿಕರು ಪಡೆದುಕೊಳ್ಳಬೇಕು ಎಂದು ಸಲಹೆಯಿತ್ತರು. ಬೆಳ್ತಂಗಡಿ ತಾ.ಪಂ. ಅಧ್ಯಕ್ಷೆ ದಿವ್ಯಾಜ್ಯೋತಿ ಅವರು ಮಾತನಾಡಿ ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಕೃಷಿಕರಿಗೆ ಹೆಚ್ಚಿನ ಸೌಲಭ್ಯ ದೊರೆಯಲಿ ಎಂದು ಹಾರೈಸಿದರು. ಬೆಳ್ತಂಗಡಿ ಪಟ್ಟಣ ಪಂಚಾಯತು ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಅವರು ಮಾತನಾಡಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಪಶ್ಚಿಮವಾಹಿನಿ ಯೋಜನೆ ಜಾರಿ ಮಾಡಲು ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಎ.ಪಿ.ಎಂ.ಸಿ. ಅಧ್ಯಕ್ಷ ಧರಣೇಂದ್ರಕುಮಾರ್ ಅವರು ಮಾತನಾಡಿ ಬೆಳ್ತಂಗಡಿ ಎ.ಪಿ.ಎಂ.ಸಿಯಲ್ಲಿ ರೈತರಿಗೆ ಉತ್ತಮ ಸೌಕರ್ಯ ಕಲ್ಪಿಸಲು ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಇದೀಗ ಈ ಟೆಂಡರ್ ಮೂಲಕ ಅಡಿಕೆ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯಸ್ಥೆಯಿದ್ದು, ರೈತರಿಗೆ ಒಳ್ಳೆಯ ಧಾರಣೆ ದೊರೆಯಬಹುದು ಎಂದು ತಿಳಿಸಿದರು. ಬೆಳ್ತಂಗಡಿ ಎ.ಪಿ.ಎಂ.ಸಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಮಾಡಲಾಗುತ್ತಿದೆ. ಈಗಾಗಲೇ ವೇಣೂರಿನಲ್ಲಿ ಸಂತೆ ಮಾರುಕಟ್ಟೆ ಕಾಮಗಾರಿ ನಡೆಯುತ್ತಿದ್ದು, ಕರಾಯ, ಪೆರಾಡಿ, ಕೊಕ್ಕಡದಲ್ಲಿ ಸಂತೆಮಾರುಕಟ್ಟೆ ಮಂಜೂರಾಗುವ ಹಂತದಲ್ಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಟ್ಟಡದ ಗುತ್ತಿಗೆದಾರ ಜಯಕುಮಾರ್ ಅವರನ್ನು ಸಚಿವರು ಸನ್ಮಾನಿಸಿದರು. ವೇದಿಕೆಯಲ್ಲಿ ಕೃಷಿ ಮಾರಾಟ ಇಲಾಖೆ ಮಂಗಳೂರಿನ ಸಹಾಯಕ ನಿರ್ದೇಶಕ ರಾಮಚಂದ್ರ ರೆಡ್ಡಿ, ಸಮಿತಿ ಉಪಾಧ್ಯಕ್ಷ ಲಕ್ಷ್ಮಣ, ಸ.ಕಾ.ನಿ. ಅಭಿಯಂತರ ಎ. ಮಹೇಶ್, ಜಿ.ಪಂ. ಸದಸ್ಯರಾದ ಶೇಖರ ಕುಕ್ಕೇಡಿ, ಕೆ.ಕೆ. ಶಾಹುಲ್‌ಹಮೀದ್, ಶ್ರೀಮತಿ ನಮಿತಾ ಉಪಸ್ಥಿತರಿದ್ದರು. ಸಮಿತಿ ಸದಸ್ಯ ಸತೀಶ್ ಕೆ. ಸ್ವಾಗತಿಸಿದರು. ಕಾರ್ಯದರ್ಶಿ ಹೆಚ್.ಕೆ ಕೃಷ್ಣಮೂರ್ತಿ ಎ.ಪಿ.ಎಂ.ಸಿಯ ಸಮಗ್ರ ಅಭಿವೃದ್ಧಿ ಕಾರ್ಯಗಳ ಸಮಗ್ರ ವರದಿ ವಾಚಿಸಿದರು. ಶಿಕ್ಷಕ ಅಜಿತ್‌ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿ, ಮಾಜಿ ಅಧ್ಯಕ್ಷ ಹೆಚ್. ಭರತ್ ಕುಮಾರ್ ಇಂದಬೆಟ್ಟು ವಂದಿಸಿದರು. ಕಾರ್ಯಕ್ರಮದಲ್ಲಿ ಸಮಿತಿ ಸದಸ್ಯರುಗಳಾದ ಕುಶಾಲಪ್ಪ ಗೌಡ, ಅನಿತಾ ಹೆಗ್ಡೆ, ಹೊನ್ನಪ್ಪ ಗೌಡ, ಸಂತೋಷ್ ಕುಮಾರ್, ವಸಂತ ಮಜಲು, ಪುಷ್ಪರಾಜ ಹೆಗ್ಡೆ, ಜಯಶ್ರೀ ಡಿ.ಎಂ, ಗೋಪಾಲ ಶೆಟ್ಟಿ, ಸುನೀತಾ ಡಿಸೋಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ನ.ಪಂ. ಉಪಾಧ್ಯಕ್ಷ ಜಗದೀಶ್, ನ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್‌ಕುಮಾರ್ ಜೈನ್, ತಾ.ಪಂ. ಸದಸ್ಯ ಜಯರಾಮ, ಮಡಂತ್ಯಾರು ಸೇವಾ ಸಹಕಾರಿ ಸಂಘದ ಸದಸ್ಯ ಅಬ್ದುಲ್‌ರಹಿಮಾನ್ ಪಡ್ಪು, ಪದ್ಮಕುಮಾರ್ ಬೆಳ್ತಂಗಡಿ, ಮನೋಹರ ಇಳಂತಿಲ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.