ಶ್ರೀ ಧ.ಮಂ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಮಾವೇಶ, ಶಿಕ್ಷಣ ಸಂಸ್ಥೆಯಿಂದ ಕ್ರಾಂತಿಕಾರಿ ಪರಿವರ್ತನೆ : ಡಾ. ಹೆಗ್ಗಡೆ

sdm samaveshaಉಜಿರೆ : ಗ್ರಾಮೀಣ ಪ್ರದೇಶವಾದ ಉಜಿರೆಯಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿದ್ದರಿಂದ ಅನೇಕ ಕ್ರಾಂತಿಕಾರಿ ಪರಿವರ್ತನೆಗಳಾಗಿದೆ. ಪ್ರದೇಶದ ಬೆಳವಣಿಗೆಗೆ ವಿದ್ಯಾ ಸಂಸ್ಥೆ ಏನು ಕೊಡುಗೆ ನೀಡಬಹುದು ಎಂಬುದಕ್ಕೆ ಉಜಿರೆ ಕಾಲೇಜು ಉತ್ತಮ ಉದಾರಣೆಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಮೇ 8 ರಂದು ಉಜಿರೆ ಶ್ರೀ ಧ.ಮಂ. ಕಾಲೇಜಿನ ಸುವರ್ಣ ಮಹೋತ್ಸವದ ಆಚರಣೆಯ ಅಂಗವಾಗಿ ಉಜಿರೆ ಕಾಲೇಜು ಸಭಾಂಗಣದಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗುಣಮಟ್ಟದ ಶಿಕ್ಷಣದಿಂದ ಸಮಾನತೆ ಹಾಗೂ ಪರಿವರ್ತನೆಗಳಾಗುತ್ತದೆ. ಈ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಪ್ರಭಾಕರ್ ಹಾಗೂ ಡಾ| ಯಶೋವರ್ಮ ಅವರು ಅನೇಕ ಪರಿವರ್ತನೆಗಳನ್ನು ಮಾಡಿದ್ದಾರೆ. ಉಪನ್ಯಾಸಕರು ಉತ್ತಮ ಶಿಕ್ಷಣ ನೀಡಿದ್ದಾರೆ. ಯಾವುದೇ ಶಿಕ್ಷಕರು ವಿದ್ಯಾರ್ಥಿಗಳನ್ನು ದ್ವೇಷಿಸುವುದಿಲ್ಲ, ವಿದ್ಯಾರ್ಥಿಗಳನ್ನು ತಿದ್ದಿ ಆದರ್ಶ ಜೀವನದ ಪಾಠ ಕಲಿಸುತ್ತಾರೆ. ವಿದ್ಯಾರ್ಥಿಗಳಿಗೆ ಗುರುಗಳ ಬಗ್ಗೆ ಗೌರವ ಮಿಶ್ರಿತ ಭಯ ಇರಬೇಕು, ಗುರು-ಶಿಷ್ಯರ ಸಂಬಂಧ ಆತ್ಮೀಯವಾಗಿದ್ದಾಗ ಕಲಿಕೆ ಸಂತಸದಾಯಕವಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಧರ್ಮಸ್ಥಳದ ವತಿಯಿಂದ ಮೇ.೧೮ರಂದು ಹೊಸ ಆರ್ಯುವೇದ ಕಾಲೇಜು ಮತ್ತು ೩೦೦ ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಉದ್ಘಾಟನೆಗೊಳ್ಳಲಿದೆ, ಈಗಾಗಲೇ ಉಡುಪಿ ಮತ್ತು ಹಾಸನದಲ್ಲಿರುವ ಎಸ್.ಡಿ.ಎಂ ಆಯುರ್ವೇದ ಆಸ್ಪತ್ರೆಗಳು ಉತ್ತಮ ಸೇವೆ ನೀಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಮನ್ನಣೆಗಳಿಸಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ವಿದ್ಯಾರ್ಥಿ ಶಾಸಕ ಕೆ. ವಸಂತ ಬಂಗೇರ ಅವರು ಮಾತನಾಡಿ, ಗ್ರಾಮೀಣ ಪ್ರದೇಶವಾದ ಉಜಿರೆಯಲ್ಲಿ ಕಾಲೇಜು ಆರಂಭಿಸಿ, ಈ ಭಾಗದ ಸರ್ವತೋಮುಖ ಅಭಿವೃದ್ಧಿಯ ಜೊತೆಗೆ ಸಾವಿರಾರು ಮಂದಿಗೆ ಜ್ಞಾನದ ಬೆಳಕನ್ನು ನೀಡುವ ಕಾರ್ಯವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳು ಮಾಡಿದ್ದಾರೆ ಎಂದು ಹೇಳಿದರು. ಈ ಕಾಲೇಜಿನಲ್ಲಿ ಕಲಿತ ಮೂರು ಮಂದಿ ಈ ಕ್ಷೇತ್ರದ ಶಾಸಕರಾಗಿದ್ದಾರೆ. ಅನೇಕ ಮಂದಿ ದೇಶ, ವಿದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. ಅವರೆಲ್ಲ ವರ್ಷದಲ್ಲಿ ಒಂದು ಸಲ ಒಟ್ಟಿಗೆ ಸೇರುವ ಅವಕಾಶ ನಿರ್ಮಾಣವಾಗಲಿ ಎಂದು ಆಶಿಸಿದರು.
ಕಾಲೇಜಿನ ಹಿರಿಯ ವಿದ್ಯಾರ್ಥಿ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆ ಅವರು ಮಾತನಾಡಿ ಎಸ್.ಡಿ.ಎಂ ಕಾಲೇಜು ನಮಗೆ ಮನೆ ದೇವರಿದ್ದಂತೆ, ಇದು ಸರಸ್ವತಿಯ ಆವಾಸ ಸ್ಥಾನ, ಈ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಶಿಸ್ತು, ಪರಿಶ್ರಮ ಮತ್ತು ಸಂಸ್ಕೃತಿಯ ರಾಯಬಾರಿಗಳಾಗಿದ್ದು, ಮಾತೃ ಸಂಸ್ಥೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರಬೇಕು ಎಂದು ಸಲಹೆಯಿತ್ತರು.
ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೋ| ಎಸ್. ಪ್ರಭಾಕರ್ ಅನಿಸಿಕೆ ವ್ಯಕ್ತಪಡಿಸಿ, ಕಾಲೇಜಿನ ಹಳೇ ವಿದ್ಯಾರ್ಥಿಗಳು ನಮ್ಮ ಸಂಪತ್ತು. ಇವರು ಸಂಸ್ಥೆಯ ರಾಯಾಬಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ರತ್ನವರ್ಮ ಹೆಗ್ಗಡೆಯವರು ದೊಡ್ಡ ಉದ್ದೇಶವನ್ನು ಇಟ್ಟುಕೊಂಡು ಈ ಕಾಲೇಜನ್ನು ಕಟ್ಟಿದ್ದಾರೆ. ಇಲ್ಲಿ ಸಮನ್ವಯತೆಯನ್ನು ಕಾಪಾಡಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೆಗ್ಗಡೆ ದಂಪತಿಗಳನ್ನು ಹಾಗೂ ನಿವೃತ್ತ ಪ್ರಾಂಶುಪಾಲರಾದ ಪ್ರೊ| ಎಸ್. ಪ್ರಭಾಕರ್ ಹಾಗೂ ಡಾ| ಯಶೋವರ್ಮ ಅವರನ್ನು ಹಿರಿಯ ವಿದ್ಯಾರ್ಥಿಗಳು ಗೌರವಿಸಿದರು. ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಪರವಾಗಿ ಕೆ. ಪ್ರತಾಪ್‌ಸಿಂಹ ನಾಯಕ್ ಹಾಗೂ ಡಾ| ಪ್ರದೀಪ್ ನಾವೂರು ತಮ್ಮ ಕಾಲೇಜು ಜೀವನದ ಸವಿನೆನಪುಗಳನ್ನು ಸ್ಮರಿಸಿಕೊಂಡರು.
ವೇದಿಕೆಯಲ್ಲಿ ಉಜಿರೆ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ, ಕಾಲೇಜಿನ ಪ್ರಾಚಾರ್ಯ ಮೋಹನ್ ನಾರಾಯಣ, ಸಂಘದ ಉಪಾಧ್ಯಕ್ಷ ಗುರುನಾಥ ಪ್ರಭು, ಅನಂತ ಕೃಷ್ಣ ಉಪಸ್ಥಿತರಿದ್ದರು. ಚಿತ್ರಕಲಾವಿದ ವಿಲಾಸ್ ನಾಯಕ್ ಸ್ಥಳದಲ್ಲೇ ಕಾಲೇಜಿನ ಕಲಾಕೃತಿ ರೂಪಿಸಿ ಹೆಗ್ಗಡೆಯವರಿಗೆ ಅರ್ಪಿಸಿದರು.
ಶ್ರೀಮತಿ ಸುಮ ಶಂಕರನಾರಾಯಣ ಇವರ ಪ್ರಾರ್ಥನೆ ಬಳಿಕ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೀತಾಂಬರ ಹೇರಾಜೆ ಸ್ವಾಗತಿಸಿದರು. ಮನೋರಮಾ ಉದಯಚಂದ್ರ, ಪಿಡಿಒ ಗಾಯತ್ರಿ, ಯುವರಾಜ ಜೈನ್ ಸನ್ಮಾನ ಪತ್ರವಾಚಿಸಿದರು. ಹಿರಿಯ ವಿದ್ಯಾರ್ಥಿ ಡಾ. ಮಾಧವ ಕಾರ್ಯಕ್ರಮ ನಿರೂಪಿಸಿ, ಸಂಘದ ಕಾರ್ಯದರ್ಶಿ ಧನಂಜಯ ರಾವ್ ಧನ್ಯವಾದವಿತ್ತರು.
ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಮೈಸೂರಿನ ವಿದುಷಿ ಕೃಪಾ ಪಡ್ಕೆ ಹಾಗೂ ಬಳಗದವರಿಂದ ‘ನವದುರ್ಗಾ ವೈಭವ ನೃತ್ಯರೂಪಕ’ ದಕ್ಷಿಣ ಭಾರತೀಯ ರಫಿ ಖ್ಯಾತಿಯ ಟಾಗೋರ್‌ದಾಸ್ ಬಳಗದವರಿಂದ ‘ಯಾದೋಂ ಕಿ ಶ್ಯಾಮ್’ ರಸಮಂಜರಿ ಕಾರ್ಯಕ್ರಮ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಜಾದೂಗಾರ ಪ್ರೊ. ಶಂಕರ್ ಇವರಿಂದ ಜಾದೂ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ಹಿರಿಯ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಿ, ಪ್ರಾಧ್ಯಾಪಕರ ಜೊತೆ ಮುಕ್ತವಾಗಿ ಸಮಾಲೋಚನೆ, ವಿಚಾರ ವಿನಿಮಯ ನಡೆಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.