ಮುಂಡಾಜೆ : ಮುಂಡಾಜೆ ಗ್ರಾಮ ಪಂಚಾಯತ್ದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್ ವಿಶೇಷ ಗ್ರಾಮ ಸಭೆಯನ್ನು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಾಲಿನಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ರಾಷ್ಟ್ರೀಯ ಪಂಚಾಯತ್ರಾಜ್ ದಿವಸ್ ವಿಶೇಷ ಗ್ರಾಮ ಸಭೆಯ ವರದಿಯನ್ನು ಅಭಿವೃದ್ಧಿ ಅಧಿಕಾರಿ ಸಂಜೀವ ನಾಯ್ಕ ಸಭೆಗೆ ಮಂಡಿಸಿದರು. ವಿಶೇಷ ಗ್ರಾಮ ಸಭೆಯಲ್ಲಿ ಪಂಚಾಯತ್ನ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ಯಂಗ್ ಚಾಲೆಂಜರ್ಸ್ ಸ್ಫೋರ್ಟ್ಸ್ ಕ್ಲಬ್ ಮುಂಡಾಜೆ ಇದರ ವತಿಯಿಂದ ಪ್ರೋತ್ಸಾಹ ಧನ ರೂ. ೫೦೦೦ ಚೆಕ್ ಮೂಲಕ ಪಂಚಾಯತ್ ಅಧ್ಯಕ್ಷರಿಗೆ ಸಲ್ಲಿಸಿದರು. ಮುಂಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಕಲ ಚೇತನರಿಗೆ ಶೇ ೩%ರ ಅನುದಾನದಲ್ಲಿ ಪರಿಕರಗಳನ್ನು ವಿತರಿಸಲಾಯ್ತು. ಮುಂಡಾಜೆ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ೪ ವಾರ್ಡ್ಗಳ ಗ್ರಾಮಸ್ಥರು, ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘಸಂಸ್ಥೆಯವರು ೪ ಗುಂಪುಗಳಾಗಿ ಮಾಡಿ ವಾರ್ಡಿನ ಬೇಡಿಕೆ ಪಟ್ಟಿ ಮಾಡಿ ಸಲ್ಲಿಸಿದರು. ಈ ಬಗ್ಗೆ ಗ್ರಾಮ ಪಂಚಾಯತಿನ ೫ ವರ್ಷದ ಪಂಚವಾರ್ಷಿಕ ಕ್ರಿಯಾ ಯೋಜನೆ ಮಾಡಲಾಯ್ತು. ವಿಶೇಷ ಗ್ರಾಮ ಸಭೆಯಲ್ಲಿ ರಸ್ತೆ ಕಾಂಕ್ರಿಟೀಕರಣ ಪ.ಜಾತಿ/ಪ.ಪಂಗಡ ಕಾಲನಿಗಳ ಅಭಿವೃದ್ಧಿ, ರಾಷ್ಟ್ರ, ರಾಜ್ಯ, ಜಿಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದು. ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ, ಅಂಗನವಾಡಿಗಳಿಗೆ ಹೆಚ್ಚಿನ ಆದ್ಯತೆ, ಶಾಲೆ ಕಟ್ಟಡಗಳ ಅಭಿವೃದ್ಧಿ, ಕೃಷಿ ನೀರಾವರಿಗೆ ಹೆಚ್ಚಿನ ಆದ್ಯತೆ, ಸಣ್ಣ ಕೈಗಾರಿಕೆಗಳ ಸ್ಥಾಪನೆ, ನಿರುದ್ಯೋಗಿಗಳಿಗೆ ಹೆಚ್ಚಿನ ಸೌಲಭ್ಯ, ನಿವೇಶನ, ವಸತಿಗಳಿಗೆ ಆದ್ಯತೆ, ಆರೋಗ್ಯ, ಸೌರ ವಿದ್ಯುತ್ನ ಆದ್ಯತೆ ಅದರಂತೆ ಹೆಚ್ಚಿನ ಬೇಡಿಕೆಗಳ ಬಗ್ಗೆ ಗ್ರಾಮಸ್ಥರು ಚರ್ಚಿಸಿ ತೀರ್ಮಾನಿಸಿದರು. ವಿಶೇಷ ಗ್ರಾಮ ಸಭೆಯಲ್ಲಿ ಪ್ರಧಾನ ಮಂತ್ರಿಯಿಂದ ಗ್ರಾಮ ಉದಯ್ ಸೆ ಭಾರತ್ ಉದಯ್ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಈ ಕಾರ್ಯಕ್ರಮವನ್ನು ಗ್ರಾಮಸ್ಥರು ವೀಕ್ಷಿಸಿದರು.
ವಿಶೇಷ ಗ್ರಾಮ ಸಭೆಯಲ್ಲಿ ಪಂಚಾಯತ್ನ ಸದಸ್ಯರು, ಅಧಿಕಾರಿಗಳು, ಗ್ರಾಮಸ್ಥರು, ಸಂಪನ್ಮೂಲ ವ್ಯಕ್ತಿಗಳು, ಸಂಘ ಸಂಸ್ಥೆಯವರು, ಸ್ವಸಹಾಯ ಸಂಘದವರು, ಪಂಚಾಯತಿನ ಸಿಬ್ಬಂದಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ವಾಗತಿಸಿ ವಂದಿಸಿದರು.