ಉಜಿರೆ : ನ್ಯೂ ತ್ರಿಲೋಕ್ ಉಜಿರೆಯ ಡ್ಯಾನ್ಸ್ ಸಂಸ್ಥೆಯು ಸಾವಿರಾರು ಪ್ರತಿಭೆಗಳನ್ನು ಗುರುತಿಸಿ, ಅವಕಾಶವನ್ನು ನೀಡಿ ಹೊರ ಜಗತ್ತಿಗೆ ಪರಿಚಯಿಸಿದ ಶ್ರೇಷ್ಠ ಸಂಸ್ಥೆಯಾಗಿ ಬೆಳೆಯುತ್ತಿದೆ. ಈ ಸಂಸ್ಥೆಯು ಉಜಿರೆಯಲ್ಲಿದ್ದು ಜಾಗತಿಕ ಮಟ್ಟದಲ್ಲಿ ಈ ಮಣ್ಣಿನ ಹೆಸರನ್ನು ಪಡೆಯುವಂತಾಗಲಿ ಜೊತೆಗೆ ಸಂತೋಷವನ್ನು ನೀಡುವ ಸಂಸ್ಥೆಯಾಗಿ ಬೆಳೆಯಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಪ್ರತಾಪಸಿಂಹ ನಾಯಕ್ ಅಭಿಪ್ರಾಯಪಟ್ಟರು.
ಅವರು ಉಜಿರೆ-ಬೆಳ್ತಂಗಡಿ ಶ್ರೀ ದುರ್ಗಾ ಟೆಕ್ಸ್ಟೈಲ್ಸ್ & ರೇಡಿಮೇಡ್ ಇವರ ಪ್ರಯೋಜಕತ್ವದಲ್ಲಿ ಎ.೧೩ ರಂದು ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಮೈದಾನದಲ್ಲಿ ನಡೆದ ನ್ಯೂ ತ್ರಿಲೋಕ್ ಡ್ಯಾನ್ಸ್ ಇನ್ಸ್ಟಿಟ್ಯೂಟ್ನ ವಾರ್ಷಿಕೋತ್ಸವದ ನೃತ್ಯ ಸಂಗಮ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ನಮಗೆ ತಂದೆ-ತಾಯಿ ಎಷ್ಟು ಮುಖ್ಯವೋ ಅದೇ ರೀತಿ ಈ ನಾಡು ಕೂಡ ಮುಖ್ಯ ನಾಡಿನ ಸಂಸ್ಕೃತಿ, ಆಚರಣೆ, ನಮ್ಮ ನೆಲ, ಪರಿಸರವನ್ನು ಪ್ರೀತಿಸೋಣ ಎಂದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಉಜಿರೆ ಯುವ ಉದ್ಯಮಿ ಶರತ್ಕೃಷ್ಣ ಪಡ್ವೆಟ್ನಾಯ ವಹಿಸಿ ಮಾತನಾಡಿ ಇಂದು ಗ್ರಾಮೀಣ ಮಟ್ಟದಲ್ಲಿ ಕೂಡ ನೃತ್ಯದಲ್ಲಿ ಹೆಸರು ಮಾಡಲು ಅವಕಾಶವಿದೆ. ನೃತ್ಯ ಎಂಬುದು ಜಾತಿ, ಭಾಷೆ, ಧರ್ಮ ಪಂಥವನ್ನು ಮೀರಿದ್ದು ನಮ್ಮ ಊರಿನ ಅನೇಕ ಯುವ ಪ್ರತಿಭೆಗಳು ಟಿ.ವಿ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದದ್ದನ್ನು ನಾವು ಕಂಡಿದ್ದೇವೆ ಎಂದರು.
ಮುಖ್ಯ ಅತಿಥಿ ನೆಲೆಯಲ್ಲಿ ಯುವ ಉದ್ಯಮಿ ನ್ಯಾಯವಾದಿ ಹರೀಶ್ ಪೂಂಜಾ ಮಾತನಾಡಿ ಸ್ಥಳೀಯ ಪ್ರತಿಭೆಗಳಿಗೆ ಇಂಥ ಸಂಸ್ಥೆಯ ಮೂಲಕ ಅವಕಾಶ ದೊರೆಯುವುದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲು ಕಾರಣವಾಗುತ್ತದೆ ಎಂದರು. ಜೇಸಿ ಐ ಭಾರತದ ರಾಷ್ಟ್ರೀಯ ಸಂಯೋಜಕ ಸಂಪತ್ ಬಿ. ಸುವರ್ಣ ಮಾತನಾಡಿ ಇಚ್ಚಾಶಕ್ತಿಗೆ ಸಂಸ್ಥೆಯ ಮಾಲಕ ಸುದೀರ್ ನೇರ ನಿದರ್ಶನ ಯಾಕೆಂದರೆ ಎಲ್ಲರಲ್ಲೂ ಪ್ರತಿಭೆ ಇದೆ, ಅದು ಹೊರ ಬರಬೇಕು, ಅದಕ್ಕೆ ಉಜಿರೆ ಎಂಬ ಊರು ಹಲವರಿಗೆ ವೇದಿಕೆಯಾಗಿದೆ ಇದಕ್ಕೆ ಸಾವಿರಾರು ಪ್ರತಿಭೆಗಳಿಗೆ ವೇದಿಕೆ ನಿರ್ಮಿಸಿ ಅವಕಾಶ ಮಾಡಿಕೊಟ್ಟ ಸುಧೀರ್ ಕಾರಣ ಎಂದು ಅಭಿನಂದನೆ ಸಲ್ಲಿಸಿದರು.
ವೇದಿಕೆಯಲ್ಲಿ ಬೆಳ್ತಂಗಡಿ ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಚಿದಾನಂದ ಇಡ್ಯಾ, ಉಜಿರೆ ಶ್ರೀ ದುರ್ಗಾ ಇಂಡಸ್ಟ್ರೀಸ್ ಮಾಲಕ ಮೋಹನ ಚೌದರಿ, ಸಂಸ್ಥೆಯ ಮಾಲಕ ಸುಧೀರ್ ಜೈನ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಸಾಧಕರನ್ನು ಸನ್ಮಾನಿಸಲಾಯಿತು. ಡ್ಯಾನ್ಸ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ವಿಶೇಷ ಆಕರ್ಷಣೆ ಯಾಗಿ ಸೆಲಿಬ್ರಿಟಿ ಆಂಕರ್ ಆರ್.ಜೆ.ಅನುರಾಗ್, ಕುಣಿಯೋಣ ಬಾರ ಖ್ಯಾತಿಯ ತರುಣ್ರಾಜ್, ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಖ್ಯಾತಿಯ ಕಿಶೋರ್ ಶೆಟ್ಟಿ ಆಗಮಿಸಿದ್ದರು. ಸಂಸ್ಥೆಯ ಮಾಲಕ ಸುಧೀರ್ ಜೈನ್ ಸ್ವಾಗತಿಸಿ, ಚಂದ್ರಹಾಸ ಬಳಂಜ, ಸ್ಮಿತೇಶ್ ಬಾರ್ಯ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಪವಿತ್ರ ಧನ್ಯವಾದವಿತ್ತರು. ನೃತ್ಯ ನಿರ್ದೇಶಕ ಜಿಜಿನ್ ಕೇರಳ, ಸುಜಿತ್ ಕುಮಾರ್, ಮಕ್ಕಳ ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಂತರ ಮನೋರಂಜನಾ ಕಾರ್ಯಕ್ರಮ ಜರುಗಿತು.
ಡ್ಯಾನ್ಸ್ ಸ್ಪರ್ಧೆಯಲ್ಲಿ ಸೋಲೋ ಸಬ್ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ ಮೇಧಾ ರೈ, ದ್ವಿತೀಯ ಅವನಿ ಬಿ.ಎಂ, ಜೂನಿಯರ್ ವಿಭಾಗದಲ್ಲಿ ಪ್ರಥಮ ಸಿಂಚನ, ದ್ವಿತೀಯ ಅಂಶಿನಿ ಶೆಟ್ಟಿ, ಸೀನಿಯರ್ ವಿಭಾಗದಲ್ಲಿ ಪ್ರಥಮ ಎಂ.ಜೆ ರಾಕೇಶ್, ದ್ವಿತೀಯ ಧನ್ಯತ್ ರೈ, ಹಾಗೂ ಗ್ರೂಪ್ ಚಾಂಪಿಯನ್ಶಿಪ್ನಲ್ಲಿ ಪ್ರಥಮ ಪ್ರಿನ್ಸಿಯನ್ಸ್ ಗ್ರೂಪ್ ಮಂಗಳೂರು, ದ್ವಿತೀಯ ಡ್ಯಾನ್ಸಿಂಗ್ ಸ್ಟಾರ್ ಎಡಪದವು ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಸಾಧಕರಿಗೆ ಸನ್ಮಾನ
ಕಳೆದ ಹಲವು ವರ್ಷಗಳಿಂದ ಭಾರತೀಯ ಸೇನೆಯಲ್ಲಿ ೧೮ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಉಜಿರೆಯ ಎ.ಕೆ ಶಿವನ್, ಸೇನೆಯಲ್ಲಿ ೧೭ ವರ್ಷ ಸೇವೆ ಸಲ್ಲಿಸಿದ ಮೋಹನ್, ಸೇನೆಯಲ್ಲಿ ೨೮ ವರ್ಷ ಸೇವೆ ಸಲ್ಲಿಸಿದ ಸುಬೆದರ್ ಮೇಜರ್ ಜಗನ್ನಾಥ ಶೆಟ್ಟಿ, ಸೇನೆಯಲ್ಲಿ ೨೦ ವರ್ಷ ಸೇವೆ ಸಲ್ಲಿಸಿದ ಪ್ರಶಾಂತ್ ಕೆ.ರಾವ್ ಹಾಗೂ ಸಮಾಜ ಸೇವಕಿ ಉಜಿರೆ ಅಂಜನಾದೇವಿ, ಯುವ ಸಾಧಕ ಉಜಿರೆಯ ವಿವೇಕ್, ನೃತ್ಯ ನಿರ್ದೇಶಕ ಜಿಜಿನ್ ಕೇರಳ, ಸುಜಿತ್ ಉಜಿರೆ ಹಾಗೂ ಮಾಲಕರ ತಂದೆ-ತಾಯಿ ಶ್ರೀಮತಿ ಅರುಣ್ ಜೈನ್ ಮತ್ತು ಪಾಂಡಿರಾಜ್ ಜೈನ್ರವರನ್ನು ಸನ್ಮಾನಿಸಲಾಯಿತು.