ಉಜಿರೆ: ಉಜಿರೆ ಗ್ರಾಮ ಪಂಚಾಯತದ ೨೦೧೫-೧೬ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಪಂಚಾಯತದ ಅಧ್ಯಕ್ಷ ಶ್ರೀಧರ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಎ.೬ರಂದು ಉಜಿರೆ ಶಾರದಾ ಮಂಟಪದಲ್ಲಿ ನಡೆಯಿತು.
ಶಾಸಕ ಕೆ.ವಸಂತ ಬಂಗೇರ, ಗ್ರಾ.ಪಂ ಉಪಾಧ್ಯಕ್ಷೆ ವಿನುತ ರಜತ ಗೌಡ, ಜಿ.ಪಂ ಸದಸ್ಯೆ ನಮಿತಾ, ತಾ.ಪಂ ಸದಸ್ಯ ಶಶಿಧರ್, ನೋಡೆಲ್ ಅಧಿಕಾರಿ ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಸೂರ್ಯನಾರಾಯಣ ಭಟ್, ಗ್ರಾ.ಪಂ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಇಡೀ ಗ್ರಾಮ ಸಭೆ ಗೊಂದಲ, ಗದ್ದಲಮಯವಾಗಿ ಆರೋಪ-ಪ್ರತ್ಯಾರೋಪಗಳಿಗೆ ಬಲಿಯಾಗಿ ರಾತ್ರಿಯವರೆಗೂ ಮುಂದುವರಿಯಿತು.
ಕಳೆದ ಗ್ರಾಮ ಸಭೆಯ ನಡವಳಿಗಳ ಅನುಪಾಲನಾ ವರದಿ, ಜಮಾ-ಖರ್ಚು ವಿವರ, ವಾರ್ಡ್ ಸಭೆಗಳಲ್ಲಿ ಬಂದ ಕಾಮಗಾರಿ ಪ್ರಸ್ತಾವನೆಗಳ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ. ವರದಿ ಮಂಡಿಸಿದರು. ಸಿಬಂದಿ ಅಕ್ಕಮ್ಮ ನಿವೇಶನ ರಹಿತರ ಮತ್ತು ವಸತಿ ರಹಿತರ ಪಟ್ಟಿ ವಾಚಿಸಿದರು.
ಉಜಿರೆ ಪೇಟೆಯಲ್ಲಿ ಅನೇಕ ಲೈಸನ್ಸ್ ರಹಿತ ಅಂಗಡಿಗಳಿದ್ದು, ಕಳೆದ ಸಭೆಯಲ್ಲಿ ನಿರ್ಣಯ ಆದ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಬಾಲಸುಬ್ರಹ್ಮಣ್ಯ ಭಟ್ ಪ್ರಶ್ನಿಸಿದಾಗ ಉತ್ತರಿಸಿದ ಅಭಿವೃದ್ಧಿ ಅಧಿಕಾರಿಯವರು ಎಲ್ಲಾ ಅನಧಿಕೃತ ವ್ಯಾಪಾರಿಗಳಿಗೂ ನೋಟೀಸು ನೀಡಲಾಗಿದ್ದು ಕ್ರಮ ಕೈಗೊಳ್ಳಲಾಗಿದೆ. ೨೦೧೫-೧೬ನೇ ಸಾಲಿನಲ್ಲಿ ೧೮೪ ಅಂಗಡಿಗಳ ಪೈಕಿ ೧೩೪ ಮಂದಿ ಪರವಾನಿಗೆ ಪಡೆದುಕೊಂಡಿದ್ದಾರೆ. ೫೦ ಅಂಗಡಿಯವರದ್ದು ಬಾಕಿಯಾಗಿದ್ದು, ಈ ಅಂಗಡಿಗಳ ಲೈಸನ್ಸ್ ನವೀಕರಣಕ್ಕೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.
ವಾರ್ಡ್ ಸಭೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂಬ ಮಹೇಶ್ ಶೆಟ್ಟಿ ತಿಮರೋಡಿ ಅವರ ಪ್ರಶ್ನೆಗೆ ಸಭೆಯಲ್ಲಿ ಧೀರ್ಘ ಚರ್ಚೆ ನಡೆಯಿತು. ಚುನಾಯಿತ ಜನಪ್ರತಿನಿಧಿಗಳು ಮತ ಯಾಚನೆಗೆ ಮನೆ ಮನೆಗೆ ಬರುತ್ತಾರೆ. ಗ್ರಾಮ ಸಭೆ ಬಗ್ಗೆ ಮಾಹಿತಿ ಯಾಕೆ ನೀಡುತ್ತಿಲ್ಲ ಎಂಬ ಪ್ರಶ್ನೆಯನ್ನು ಗ್ರಾಮಸ್ಥರು ಕೇಳಿದಾಗ, ವಾರ್ಡ್ ೧ರ ಸದಸ್ಯೆ ತನಗೆ ವಾರ್ಡ್ ಸಭೆ ಬಗ್ಗೆ ಮಾಹಿತಿ ಇಲ್ಲ ಎಂದು ಉತ್ತರಿಸಿದರು. ಪ್ರತಿ ಮನೆಗೆ ವಾರ್ಡ್ ಸಭೆ, ಗ್ರಾಮ ಸಭೆ ಬಗ್ಗೆ ಮಾಹಿತಿ ತಿಳಿಸುವುದು ಸದಸ್ಯರ ಜವಾಬ್ದಾರಿ ಎಂದು ಶಾಸಕರು ನುಡಿದರು. ಪೇಟೆಯಲ್ಲಿ ಮಾತ್ರ ಮೈಕ್ ಪ್ರಚಾರ ಮಾಡದೇ ಗ್ರಾಮದ ೧೧ ವಾರ್ಡ್ಗಳಿಗೂ ಮಾಹಿತಿ ನೀಡಬೇಕು, ಗ್ರಾ.ಪಂ. ಗಳಲ್ಲಿ ಪ್ರತಿ ಮನೆಯ ಮೊಬೈಲ್ ನಂಬ್ರ ಫೀಡ್ ಆಗಿದೆ ಕಡಿಮೆ ವೆಚ್ಚದಲ್ಲಿ ವಾರ್ಡ್, ಗ್ರಾಮ ಸಭೆ ಬಗ್ಗೆ ಬೆಳುವಾಯಿ ಗ್ರಾ.ಪಂ.ದಲ್ಲಿ ಮೆಸೇಜ್ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಅದರಂತೆ ಇಲ್ಲಿಯೂ ಅನುಷ್ಠಾನ ಮಾಡಿ ಎಂದು ಬಾಲಸುಬ್ರಹ್ಮಣ್ಯ ಸಲಹೆಯಿತ್ತರು. ವಾರ್ಡ್, ಗ್ರಾಮ ಸಭೆಗಳಲ್ಲಿ ಸದಸ್ಯರ ಗೈರು ಹಾಜರಿಯನ್ನು ನಿರ್ಣಯದಲ್ಲಿ ದಾಖಲು ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ನಿವೇಶನ ರಹಿತರ ಪಟ್ಟಿಯನ್ನು ಅಕ್ಕಮ್ಮ ಅವರು ವಾಚಿಸಿದಾಗ ಈ ಪಟ್ಟಿಯ ಪರಿಶೀಲನೆಯಾಗಬೇಕು ಎಂಬ ಜನರ ಬೇಡಿಕೆಯನ್ನು ಮನ್ನಿಸಿದ ಅಧ್ಯಕ್ಷ ಶ್ರೀಧರ ಪೂಜಾರಿಯವರು ಇದನ್ನು ೧೫ ದಿನಗಳಲ್ಲಿ ನೋಟಿಸು ಬೋರ್ಡಿನಲ್ಲಿ ಪ್ರಕಟಿಸುವುದಾಗಿ ಉತ್ತರಿಸಿದರು. ಗ್ರಾಮ ಸಭೆಯಲ್ಲಿ ಚರ್ಚಿಸಬೇಕಾದ ವಿಷಯದ ಕುರಿತು ಮೂರು ದಿನ ಮುಂಚಿತವಾಗಿ ಪಂಚಾಯತಕ್ಕೆ ತಿಳಿಸಬೇಕೆಂದು ಹೇಳಿದ್ದೀರಿ ಅದೇ ರೀತಿ ಗ್ರಾಮ ಸಭೆಯ ನಿರ್ಣಯ ಕೂಡಾ ಲಿಖಿತವಾಗಿ ಕೊಡಬೇಕೆಂದು ಮಹೇಶ್ ಶೆಟ್ಟಿ ಆಗ್ರಹಿಸಿದರು.
ಗ್ರಾಮ ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಗುತ್ತಿಗೆದಾರರಿಗೆ ಪೀಸ್ ವರ್ಕ್ ನೀಡದೆ ಕೋಟೇಶನ್ ಮೂಲಕವೇ ಕೆಲಸ ವಹಿಸಿಕೊಡಬೇಕು, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಗ್ರಾಮ ಸಭೆಗೆ ಬರಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಉಜಿರೆ ಮುಖ್ಯ ವೃತ್ತದ ಡಿವೈಡರ್ ತೆಗೆಯಲು ೪ ವರ್ಷದ ಹಿಂದೆ ಗ್ರಾಮ ಸಭೆಯಲ್ಲಿ ನಿರ್ಣಯವಾಗಿದ್ದರೂ ಇನ್ನೂ ತೆಗೆದಿಲ್ಲವೆಂದು ಮಹೇಶ್ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದರು. ೨೦೧೪ರಲ್ಲಿ ಹೊಸ ರೇಷನ್ಕಾರ್ಡ್ಗೆ ತಲಾ ರೂ.೫೦ ಮತ್ತು ಎಸ್ಎಂಎಸ್ಗೆ ತಲಾ ರೂ.೧೦ರಂತೆ ಸಾರ್ವಜನಿಕರಿಂದ ಸಂಗ್ರಹಿಸಿದ ಹಣ ರೂ.೮೦ ಸಾವಿರ ಪಂಚಾಯತಕ್ಕೆ ಜಮೆಯಾಗಿಲ್ಲವೆಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ಸದ್ರಿ ಹಣ ಗ್ರಾ.ಪಂ ನಾಲ್ವರು ಸಿಬ್ಬಂದಿಗಳ ಬಳಿಯಿದ್ದು, ಅವರು ಅದನ್ನು ಇದುವರೆಗೂ ಪಾವತಿಸಿಲ್ಲವೆಂಬ ಉತ್ತರಕ್ಕೆ ಶಾಸಕರು ನಾಲ್ವರು ಸಿಬ್ಬಂದಿಗಳನ್ನು ತಕ್ಷಣವೇ ಕೆಲಸದಿಂದ ಅಮಾನತುಗೊಳಿಸುವಂತೆ ಸೂಚಿಸಿದರು. ೨೦೧೪ ಎಪ್ರಿಲ್ನಿಂದ ೨೦೧೬ ಫೆಬ್ರವರಿ ತನಕ ಮೆಸ್ಕಾಂ ಬಿಲ್ ರೂ.೪೧ಲಕ್ಷದ ಪೈಕಿ ಗ್ರಾ.ಪಂ ರೂ.೧೪ಲಕ್ಷ ಪಾವತಿಸಿ ಇನ್ನೂ ೩೧ಲಕ್ಷ ಬಾಕಿಯಿರಿಸಿಕೊಂಡಿದೆ. ಅದಕ್ಕೂ ಮೊದಲಿನ ರೂ. ೧ಕೋಟಿ ಮೆಸ್ಕಾಂಗೆ ಬಾಕಿಯಾಗಿದೆ ಎಂದು ಗ್ರಾಮಸ್ಥರು ಆಕ್ಷೇಪಿಸಿದರು. ಕೆ.ಎಸ್.ಆರ್.ಟಿ.ಸಿ ಡಿಪ್ಪೋ ನಿರ್ಮಾಣಕ್ಕೆ ೧೪ ಸೆಂಟ್ಸ್ ನಿವೇಶನ ಗುರುತಿಸಿದ್ದು ಅದರ ಸರ್ವೆ ಮಾಡಲು ಬರೆದುಕೊಳ್ಳಲಾಗಿದ್ದು, ಸರ್ವೆಯವರು ಬರಲಿಲ್ಲ ಎಂಬ ಇಲಾಖಾಧಿಕಾರಿಗಳ ಉತ್ತರಕ್ಕೆ ಶಾಸಕ ಬಂಗೇರರು ಸ್ಥಳ ಪರಿಶೀಲನೆಗೆ ತಾನು ಬರುತ್ತೇನೆ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಅನುಗ್ರಹ ಶಾಲಾ ಬಳಿಯ ಬಸ್ನಿಲ್ದಾಣದ ಅಂಗಡಿಗೆ ಸಾಮಾನ್ಯ ಸಭೆಯಲ್ಲಿ ರೂ.೨ಸಾವಿರ ಬಾಡಿಗೆ ನಿಗದಿಪಡಿಸಿದ್ದು, ಕರಾರುಪತ್ರದಲ್ಲಿ ರೂ.೧ಸಾವಿರ ನಮೂದಿಸಿ ಕಡಿಮೆ ವಸೂಲು ಮಾಡಿರುವುದಕ್ಕೆ ಆಡಿಟ್ ಆಕ್ಷೇಪ ವ್ಯಕ್ತಪಡಿಸಿರುವ ಕುರಿತಾದ ಪ್ರಶ್ನೆಗೆ ಶಾಸಕರು ಅದನ್ನು ವಸೂಲು ಮಾಡುವಂತೆ ತಿಳಿಸಿದರು. ಪಂಚಾಯತ್ ಅಂಗಡಿ ಕೋಣೆಗಳ ಬಹಿರಂಗ ಏಲಂ ಮಾಡುವುದು ಬೇಡ, ಪಂಚಾಯತ್ ನಿಗದಿಪಡಿಸಿದ ಬಾಡಿಗೆ ತೆರಲು ತಾವು ಸಿದ್ದರೆಂದು ಅಂಗಡಿ ಮಾಲಕರು ತಿಳಿಸಿದರು.
ಬೆಳಾಲು ರಸ್ತೆಯಿಂದ ಎರ್ನೋಡಿ ಸೇತುವೆವರೆಗಿನ ದ್ರವತ್ಯಾಜ್ಯ ವಿಲೇವಾರಿ ಮೋರಿ ಪ್ಲಾನ್ ಪ್ರಕಾರ ಸಮರ್ಪಕವಾಗಿಲ್ಲವೆಂಬ ಪ್ರಶ್ನೆಗೆ ಶಾಸಕರು ಸದ್ರಿ ಸ್ಥಳ ಪರಿಶೀಲನೆ ನಡೆಸಲು ತಾನು ಬರುವುದಾಗಿಯೂ, ಪೇಟೆಯ ಹೋಟೆಲ್ ಮಾಲಕರನ್ನು ಕರೆಸಿ ಸಮರ್ಪಕ ನಿರ್ಧಾರ ಕೈಗೊಳ್ಳಬೇಕೆಂದು ತಿಳಿಸಿದರು. ಪೇಟೆಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗುತ್ತಿರುವ ವಿಷಯ ಸಭೆಯಲ್ಲಿ ಪ್ರಸ್ತಾಪವಾಗಿ ಚರ್ಚೆಗೊಳಗಾಯಿತು. ಹೆದ್ದಾರಿ ಬಳಿ ಸರಕಾರಿ ಜಾಗ ಅತಿಕ್ರಮಿಸಿ ಕಟ್ಟಡ ನಿರ್ಮಾಣ ಮತ್ತು ಪಟ್ಟ ಜಾಗದಲ್ಲಿ ಬೇಕಾ ಬಿಟ್ಟಿ ಸ್ವಲ್ಪವೂ ಜಾಗ ಬಿಡದೇ ಕಟ್ಟಡ ನಿರ್ಮಿಸಿರುವುದರಿಂದ ಸಮಸ್ಯೆಯಾಗಿದೆ. ಪಂಚಾಯತು ಅನುಮತಿ ನೀಡುವಾಗ ಇದನ್ನು ಪರಿಶೀಲನೆ ನಡೆಸಬೇಕು. ರಸ್ತೆ ಮಾರ್ಜಿನ್ನಲ್ಲಿಯೂ ಕಟ್ಟಡ ನಿರ್ಮಾಣವಾಗಿದೆ. ಇದರ ಬಗ್ಗೆ ಸರ್ವೇ ನಡೆಸಬೇಕು ಅತಿಕ್ರಮಣವನ್ನು ತೆರವುಗೊಳಿಸಬೇಕು ಎಂದು ನಾಗರಿಕರು ಒತ್ತಾಯಿಸಿದರು. ಪೇಟೆಯಲ್ಲಿ ಗ್ಯಾರೇಜ್, ಉದ್ಯಮ ಹಾಗೂ ಇತರ ಕಟ್ಟಡಗಳು ಎಷ್ಟು ಇದೆ. ಯಾರ ಹೆಸರಿನಲ್ಲಿದೆ. ಎಷ್ಟು ತೆರಿಗೆ ಪಂಚಾಯತಕ್ಕೆ ನೀಡುತ್ತಿದ್ದಾರೆ ಎಂಬ ಮಾಹಿತಿಯನ್ನು ನೀಡುವಂತೆ ಕೆಲವರು ಆಗ್ರಹಿಸಿದರು. ಸದಸ್ಯರು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ, ಪ್ರಶ್ನೆಗಳಿಗೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ದೊರೆಯದೆ ಸಭೆ ರಾತ್ರಿಯವರೆಗೂ ಮುಂದುವರಿದು ಕೊನೆಗೊಂಡಿತ್ತು. ಸದಸ್ಯ ರಾಧಕೃಷ್ಣ ಶೆಟ್ಟಿ ಅವರು ಧನ್ಯವಾದವಿತ್ತರು.