ಪಂಚಾಯತ್ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ಕಾಮಗಾರಿಗಳು…

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 ಮಿತ್ತಬಾಗಿಲು ಗ್ರಾ. ಪಂ. ದ್ವಿತೀಯ ಸುತ್ತಿನ ಸಾಮಾನ್ಯ ಸಭೆಯು ಮಾ.೨೮ ರಂದು ಪಂಚಾಯತ್ ಸಭಾಂಗಣದಲ್ಲಿ ಜರುಗಿತು.
ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷ ನಾರಾಯಣ ಪಾಟಾಳಿ ವಹಿಸಿದ್ದರು. ಉಪಾಧ್ಯಕ್ಷೆ ವನಿತಾ (ವಾಣಿ) ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು. ಲಾಲ ಜಿ.ಪಂ. ಸದಸ್ಯೆ ಸೌಮ್ಯಲತಾ, ಮಿತ್ತಬಾಗಿಲು ತಾ.ಪಂ. ಸದಸ್ಯ ಜಯರಾಮ ಆಲಂಗಾರು ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಗ್ರಾ.ಪಂ. ಅಭಿವೃದ್ಧಿ
ಅಧಿಕಾರಿ ನವೀನ್ ಪಿ. ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಸುಂದರ ವರದಿ ವಾಚಿಸಿದರು. ಕಾರ್ಯದರ್ಶಿ ಮಾರುತಿ ಬಿ.ಹೆಚ್. ಸೇರಿದಂತೆ ಸಿಬ್ಬಂದಿಗಳು ಸಹಕಾರ ನೀಡಿದರು.
ಗ್ರಾ. ಪಂ. ವ್ಯಾಪ್ತಿಯ ಕೊಲ್ಲಿ ಬೊಳ್ಳಾಜೆ ಪರಾರಿ ರಸ್ತೆ ಬಹುಮೊತ್ತದ ಅನುದಾನದಲ್ಲಿ ಡಾಂಬರೀಕರಣಗೊಳ್ಳುತ್ತಿದ್ದು ಇದು ಪಂಚಾಯತ್ ಗಮನಕ್ಕೆ ಬಂದಿದೆಯೇ? ಇದು ಯಾವ ಯೋಜನೆ? ಮುಖ್ಯಮಂತ್ರಿಗಳ ಅನುದಾನ ಎಂದು ಹೇಳಲಾಗುತ್ತಿದ್ದು ಗುತ್ತಿಗೆದಾರರು ಕಚ್ಚಾ ಸಾಮಾನು ತರುತ್ತಾರೆ. ವಾಪಾಸು ಕೊಂಡೋಗುತ್ತಾರೆ. ಇದನ್ನು ಕೇಳುವವರಿಲ್ಲವೇ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಜನಪ್ರತಿನಿಧಿಗಳಿಗೆ ಗೊತ್ತಿಲ್ಲದೆ ಯಾರಾದರೊಬ್ಬರು ಗ್ರಾಮಸ್ಥರು ನೇರವಾಗಿ ಹೋಗಿ ಈ ರೀತಿ ಸರಕಾರಿ ಅನುದಾನದ ಮಾಹಿತಿಯನ್ನೂ ಸಾರ್ವಜನಿಕರಿಗೆ ನೀಡದೆ ಮಾಡುವುದಾದರೆ ಗ್ರಾ. ಪಂಚಾಯತ್ ಯಾಕೆ ಎಂದು ಪ್ರಶ್ನಿಸಿದರು.
ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸುವುದಾದರೆ ಅದರ ಮಾಹಿತಿ ಆಡಳಿತಕ್ಕೆ ನೀಡಬೇಕು. ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಇಂಜಿನಿಯರ್ ಅಥವಾ ಗುತ್ತಿಗೆದಾರನ ಕೈಯಲ್ಲಿ ಅಂದಾಜು ಪಟ್ಟಿ ಮತ್ತು ಕೆಲಸದ ಸ್ವರೂಪದ ಮಾಹಿತಿ ಬೇಕು ಎಂದು ಪಂಚಾಯತ್ ಸದಸ್ಯ ಇ.ಎಂ. ಜೋಸ್ ಸೇರಿದಂತೆ ಗ್ರಾಮಸ್ಥರೂ, ತಾ.ಪಂ. ಸದಸ್ಯ ಜಯರಾಮ ಆಲಂಗಾರು ಅವರು ಕೂಡ ಆಗ್ರಹಿಸಿದರು. ಈ ಕಾಮಗಾರಿ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಬರೆದು ವಿವರ ಕೇಳುವುದೆಂದು ತೀರ್ಮಾನಿಸಲಾಯಿತು.
ಗ್ರಾ.ಪಂ. ಆವರಣದಲ್ಲಿದ್ದ ಮರಗಳು ನಾಪತ್ತೆಯಾಗಿವೆ ಎಂದು ಮಾಜಿ ಉಪಾಧ್ಯಕ್ಷ ವಿನಯ ಸೇನೆರೆಬೊಟ್ಟು ಅವರು ಪ್ರಶ್ನೆ ಕೇಳಿದಾಗ ಉತ್ತರಿಸಿದ ಅಧ್ಯಕ್ಷರು, ಒಂದು ಮರ ಬಾಗಿಕೊಂಡು ಶೌಚಾಲಯ ಕಟ್ಟಡಕ್ಕೆ ಅಪಾಯ ತರುವ ಮಟ್ಟದಲ್ಲಿತ್ತು. ಅದನ್ನು ತೆಗೆಸಿದ್ದೇವೆ. ಅರಣ್ಯ ಇಲಾಖೆಯವರ ಗಮನಕ್ಕೆ ಬಳಿಕ ತಂದು ಅದನ್ನು ಸಾಗಿಸುವ ಆಲೋಚನೆ ಮಾಡಲಾಗಿತ್ತು ಎಂದರು. ಒಂದು ಮರ ಅಲ್ಲ. ನಾಲ್ಕೈದು ಮರಗಳು ನಾಪತ್ತೆಯಾಗಿದೆ. ಅದನ್ನು ಕದ್ದುಕೊಂಡು ಹೋದವರು ಯಾರು ಎಂದು ಪತ್ತೆಹಚ್ಚಬೇಕಾಗಿದೆ. ಅಧ್ಯಕ್ಷರು ಯಾಕೆ ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ಕೊಟ್ಟಿಲ್ಲ. ನಾಳೆ ಕಚೇರಿಯ ಕಂಪ್ಯೂಟರ್‌ಗಳನ್ನು ಯಾರಾದರೂ ಕದ್ದುಕೊಂಡುಹೋಗುತ್ತಾರೆ. ಹಿಂದೆ ಮೋರಿಗಳು, ಪಂಚಾಯತ್ ಕ್ಯಾಮರಾ ಇದೇ ರೀತಿ ನಾಪತ್ತೆಯಾಗಿತ್ತು ಎಂದು ಗ್ರಾಮಸ್ಥರು ನೆನಪಿಸಿದರು. ಅರಣ್ಯ ಇಲಾಖೆಗೆ ಬರೆದುಕೊಳ್ಳುವುದೆಂದು ತೀರ್ಮಾನಿಸಲಾಯಿತು. ಇಲಾಖಾ ಮಾಹಿತಿ ನೀಡಲು ಬಂದಿದ್ದ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ರವೀಂದ್ರ ಅವರ ಗಮನಕ್ಕೆ ತರಲಾಗಿ, ನಾನು ರಜೆಯಲ್ಲಿದ್ದೆ. ಇವತ್ತು ವಿಚಾರ ತಿಳಿದಿದೆ. ಪರಿಶೀಲನೆ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಕುಡಿಯುವ ನೀರಿನ ಪೈಪ್‌ಗಳ ದುರಸ್ಥಿ, ವಿದ್ಯುತ್‌ದೀಪಗಳ ದುರಸ್ಥಿ ಇತ್ಯಾಧಿ ಉದ್ಧೇಶಗಳಿಗೆ ಬೆಳ್ತಂಗಡಿ ನಗರದ ಕೆಲವು ಅಧಿಕೃತ ಮಳಿಗೆಗಳಲ್ಲಿ ಪಂಚಾಯತ್‌ಗೆ ವಸ್ತುಗಳನ್ನು ಖರೀದಿಸಲು ಹೋದರೆ ನಿಮ್ಮ ಪಂಚಾಯತ್‌ನ ಹಿಂದಿನ ಆಡಳಿತ ಮಂಡಳಿಯವರ ಸಾಲ ಬಾಕಿ ಇದೆ ಎನ್ನುತ್ತಾರೆ ಎಂದು ಸದಸ್ಯರೊಬ್ಬರು ಸಭೆಗೆ ತಿಳಿಸಿದಾಗ ಉತ್ತರಿಸಿದ ಮಾಜಿ ಉಪಾಧ್ಯಕ್ಷ ವಿನಯ ಮತ್ತು ಕೃಷ್ಣಪ್ಪ ಪೂಜಾರಿ ಅವರು, ಜನರ ಬೇಡಿಕೆಗಳ ಶೀಘ್ರ ಸ್ಪಂದನೆಗಾಗಿ ನಾವು ಕೆಲವೊಮ್ಮೆ ವಸ್ತುಗಳನ್ನು ಸಾಲವಾಗಿ ಪಡೆಯಬೇಕಾಗುತ್ತದೆ. ಅನುದಾನ ಬರುವುದು ತಡವಾಗುವುದರಿಂದ ಬಂದ ಬಳಿಕ ಅದನ್ನು ಪಾವತಿಸಲಾಗುತ್ತದೆ. ಆ ಹಿನ್ನೆಲೆಯಲ್ಲಿ ನಾವು ಸಾಲ ಮಾಡಿದ್ದು ನಮ್ಮ ಮನೆಗೆ ಕೊಂಡುಹೋಗುವುದಕ್ಕಲ್ಲ. ಈಗಿನ ಮಂಡಳಿ ಲಭ್ಯ ಅನುದಾನದಲ್ಲಿ ಅದನ್ನು ತೀರಿಸಿ ಜನರ ಬೇಡಿಕೆಗೆ ನಮ್ಮಂತೆ ಸ್ಪಂದಿಸಲು ಪ್ರಯತ್ನ ಮಾಡಬೇಕು ಎಂದರು.
ಇನ್ನೋರ್ವ ಮಾಜಿ ಉಪಾಧ್ಯಕ್ಷ ಕುಲಾಲ್ ಅವರು ಪ್ರಶ್ನಿಸಿ ತಮ್ಮ ವಾರ್ಡ್‌ನಲ್ಲಿ ಕೇವಲ ೮ ಮಂದಿ ಗ್ರಾಮಸ್ಥರು ಮಾತ್ರ ಇದ್ದು ವಾರ್ಡ್ ಸಭೆ ನಡೆಸಿದ್ದು ಸರಿಯಲ್ಲ ಎಂದು ಅಧ್ಯಕ್ಷರ ಕಡೆಗೆ ಬೊಟ್ಟುಮಾಡಿದಾಗ ಉತ್ತರಿಸಿದ ಅವರು, ನೀವು ಕಳೆದ ೧೫ ವರ್ಷಗಳಿಂದ ಆ ವಾರ್ಡ್‌ನಲ್ಲಿ ಸದಸ್ಯರಾಗಿದ್ದಾಗ ಇದನ್ನೇ ಮಾಡಿದ್ದೆಂದು ನಿಮಗೆ ನೆನಪಿರಬೇಕು ಎಂದು ಲಘು ಹಾಸ್ಯದ ಶೈಲಿಯಲ್ಲಿ ಉತ್ತರಿಸಿದಾಗ ಸಭೆಯಲ್ಲೂ ನಗು ಕಂಡುಬಂತು.
ಗ್ರಾಮ ಸಭೆಗೆ ಆರ್‌ಟಿಒ, ಪೊಲೀಸ್ ಇಲಾಖೆಯವರು ಮತ್ತು ಇತರ ಕೆಲವು ಇಲಾಖೆಯವರು ಯಾಕೆ ಬಂದಿಲ್ಲ ಎಂದು ಗ್ರಾಮಸ್ಥರು ಪ್ರಶ್ನಿಸಿದಾಗ, ಸಂಬಂಧ ಪಟ್ಟ ಇಲಾಖೆಯ ಬೇಡಿಕೆ, ಪ್ರಶ್ನೆಗಳನ್ನು ಗ್ರಾಮ ಸಭೆಯಲ್ಲಿ ದಾಖಲಿಸಿ ಅವರಿಂದ ಉತ್ತರ ಪಡೆದು ತಿಳಿಸಲಾಗುವುದು ಎಂದು ಮಾರ್ಗದರ್ಶಿ ಅಧಿಕಾರಿ ಸಭೆಗೆ ತಿಳಿಸಿದರು.
ಒಬ್ಬರ ಹೆಸರಿನಲ್ಲಿ ಮೂರ್‍ನಾಲ್ಕು ನಿವೇಶನಗಳಿದ್ದು ಅವರು ಅದನ್ನು ಇನ್ನೊಬ್ಬರಿಗೆ ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ ಎಂದು ಗ್ರಾಮಸ್ಥರು ಸಭೆಗೆ ತಿಳಿಸಿ ಅಂತಹ ಪ್ರಕರಣಗಳನ್ನು ಗುರುತಿಸಿ ರದ್ದುಗೊಳಿಸಬೇಕು ಎಂದು ತಿಳಿಸಿದರು. ವಿ.ಎ. ಯವರು ಉತ್ತರಿಸಿ, ನಿಮ್ಮ ಗಮನಲ್ಲಿದ್ದರೆ ಮಹಜರು ಮಾಡಿ ಕಂದಾಯ ನಿರೀಕ್ಷಕರಿಗೆ ವರದಿ ನೀಡಲು ಬದ್ಧ ಎಂದರು.
ದೇವಸ್ಥಾನದ ಬಳಿ ಇರುವ ಅಂಗಡಿ ಕೊಠಡಿ ಬಗ್ಗೆ ಕೆಲಹೊತ್ತು ಚರ್ಚೆ ನಡೆದು, ಅದರ ಪಕ್ಕದಲ್ಲಿರುವ ಬಸ್ಟ್ಯಾಂಡ್‌ನಲ್ಲಿ ಅಂಗಡಿ ಮಾಲಿಕರು ಬುಟ್ಟಿಗಳನ್ನು ಇಡುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಅದರ ಏಲಂ ಪ್ರಕ್ರೀಯೆ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿದ ಗ್ರಾಮಸ್ಥರು ಕೆಲಹೊತ್ತು ಚರ್ಚಿಸಿ, ಅದನ್ನು ಬಹಿರಂಗ ಏಲಂ ನಡೆಸಿದಲ್ಲಿ ಈಗ ಸಿಗುವ ಬಾಡಿಗೆಗಿಂತ ಹೆಚ್ಚು ಸಿಗುತ್ತದೆ ಎಂದರು. ಅದಕ್ಕೆ ಉತ್ತರಿಸಿದ ಅಧ್ಯಕ್ಷರು, ದೇವಸ್ಥಾನದ ಜಾಗದಲ್ಲಿ ತಾ.ಪಂ. ಅನುದಾನದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಆದಾಯ ಪಂಚಾಯತ್‌ಗೆ ಬರುತ್ತಿದೆ. ತಾ. ಪಂ. ಕಾರ್ಯನಿರ್ವಹಣಾಧಿಕಾರಿಗಳ ಮಾರ್ಗದರ್ಶನದಂತೆ ೧೦ ಶೇ. ಬಾಡಿಗೆ ಏರಿಸುತ್ತಾ ಈಗ ಇರುವವರಿಗೆ ಖಾಯಂಗೊಳಿಸುತ್ತಾ ಬರಲಾಗುತ್ತಿದೆ ಎಂದು ವಿವರಣೆ ನೀಡಿದರು.
ಶಾಂತಿಗುಡ್ಡೆ ಎಂಬಲ್ಲಿ ಕುಡಿಯುವ ನೀರಿಗಾಗಿ ಟ್ಯಾಂಕಿ ನಿರ್ಮಿಸಿ ೬ ವರ್ಷ ಕಳೆದಿದ್ದು ಅದು ಇನ್ನೂ ಪಂಚಾಯತ್‌ಗೆ ಹಸ್ತಾಂತರವಾಗಿಲ್ಲ. ಪಕ್ಕದಲ್ಲಿರುವ ೪ ಮನೆಗಳಿಗೆ ಮಾತ್ರ ದಿನದ ೨೪ ಗಂಟೆ ನೀರು ಬರುತ್ತಿದ್ದು ಎಲ್ಲರಿಗೂ ಸೌಲಭ್ಯ ದೊರೆಯಬೇಕು ಎಂದು ಅಲ್ಲಿನವರು ಧ್ವನಿಯೆತ್ತಿದರು. ಉತ್ತರಿಸಿದ ಅಧ್ಯಕ್ಷರು, ನಿಮ್ಮಲ್ಲಿ ಯಾರಾದರೊಬ್ಬರನ್ನು ನೀರು ಬಿಡಲು ನೀವೇ ಗುರುತಿಸಿ ಪಂಚಾಯತ್‌ಗೆ ತಿಳಿಸಿದಲ್ಲಿ ಅವರನ್ನು ನೇಮಿಸಿಕೊಂಡು ಎಲ್ಲ ಮನೆಗಳಿಗೂ ಕಡ್ಡಾಯ ಮೀಟರ್ ಅಳವಡಿಸಿ ನೀರು ಕೊಡುವ ಕೆಲಸ ಮಾಡಲಾಗುವುದು ಎಂದರು. ಮೆಸ್ಕಾಂ ಇಲಾಖೆ ಮಾಹಿತಿ ನೀಡಲು ಉಜಿರೆ ಸೆಕ್ಷನ್ ವ್ಯಾಪ್ತಿಯವರು ಬಂದಿದ್ದು ಕಿಲ್ಲೂರು ಪ್ರದೇಶದ ಪ್ರಶ್ನೆಗಳಿಗೆ ಉತ್ತರಿಸಲು ಅವರಿಂದ ಅಸಾಧ್ಯವಾಯಿತು. ಮುಂದಿನ ಸಭೆಗೆ ಆ ಭಾಗದ ಜಿ.ಇ ಅವರನ್ನೂ ಕರೆಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು. ಇಲಾಖೆಯಿಂದ ನೀಡಲಾಗುತ್ತಿರುವ ಎಲ್.ಇ.ಡಿ ೯ ವೋಲ್ಟ್ ಬಲ್ಬು ಮುಕ್ತ ಮಾರುಕಟ್ಟೆಯಲ್ಲಿ ೯೦ ರೂ.ಗೆ ೧ ವರ್ಷ ಗ್ಯಾರೆಂಟಿಯಲ್ಲಿ ಸಿಗುತ್ತಿದ್ದು ನಿಮ್ಮಲ್ಲಿ ಸಿಗುವ ಬಲ್ಬ್‌ಗೆ ೩ ವರ್ಷ ವ್ಯಾರೆಂಟಿಯಲ್ಲಿ ೧೦೦ ರೂ. ಬೆಲೆ ಇದೆ ಎಂದು ಗ್ರಾಮಸ್ಥರು ಆಕ್ಷೇಪಿಸಿದರು. ಅದು ಸರಕಾರ ನಿಗಧಿಗೊಳಿಸಿದ ಬೆಲೆ ಎಂದು ಜಿ.ಇ. ತಿಳಿಸಿದರು. ಉಳಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಎನ್.ಕೆ. ಫಡ್ಕೆ, ವಾಸುದೇವ ರಾವ್ ಕಕ್ಕೆನೇಜಿ ಸೇರಿದಂತೆ ಪ್ರಮುಖರು ಪ್ರಶ್ನೆಗಳನ್ನು ಕೇಳಿದರು.

ಸಭೆಯಲ್ಲಿ ತಾ.ಪಂ, ಜಿ.ಪಂ. ಸದಸ್ಯರಿಗೆ ಸನ್ಮಾನ
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಜಯ ಗಳಿಸಿದ ಮಿತ್ತಬಾಗಿಲು ಗ್ರಾ. ಪಂಚಾಯತನ್ನೂ ಒಳಗೊಂಡಿರು ವ ಲಾಲ ಜಿ.ಪಂ. ಸದಸ್ಯೆ ಸೌಮ್ಯಲತಾ ಮತ್ತು ಮಿತ್ತಬಾಗಿಲು ತಾ. ಪಂ. ಸದಸ್ಯ ಜಯರಾಮ ಆಲಂಗಾರು ಅವರನ್ನು ಗ್ರಾಮ ಸಭೆ ಪ್ರಾರಂಭಗೊಳ್ಳು ತ್ತಿದ್ದಂತೆ ಸನ್ಮಾನಿಸಿ ಗೌರವಿಸುವ ಮೂಲಕ ಗ್ರಾಮಕ್ಕೆ ಸ್ವಾಗತಿಸಿ ಮಾದರಿ ಸಂಪ್ರದಾಯ ಮೆರೆಯಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.