ಮುರ ಬಳಿ ಕುಸಿಯುವ ಹಂತದಲ್ಲಿ ಸೇತುವೆ : ದುರಸ್ಥಿಗೆ ಒತ್ತಾಯ

Advt_NewsUnder_1
Advt_NewsUnder_1

  ನಾವೂರು : ನಾವೂರು ಗ್ರಾಮ ಪಂಚಾಯತದ ಗ್ರಾಮ ಸಭೆ ಪಂಚಾಯತದ ಅಧ್ಯಕ್ಷೆ ಶ್ರೀಮತಿ ಲಲಿತಾ ಇವರ ಅಧ್ಯಕ್ಷತೆಯಲ್ಲಿ ಎ.4ರಂದು ನಾವೂರು ಹಿ.ಪ್ರಾ ಶಾಲಾ ಸಭಾಂಗಣದಲ್ಲಿ ನಡೆಯಿತು.
ಉಪಾಧ್ಯಕ್ಷ ಗಣೇಶ್ ಗೌಡ, ಜಿ.ಪಂ ಸದಸ್ಯೆ ಶ್ರೀಮತಿ ಸೌಮ್ಯಲತಾ, ತಾ.ಪಂ ಸದಸ್ಯೆ ವೇದಾವತಿ, ನೋಡೆಲ್ ಅಧಿಕಾರಿ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಲಕ್ಷ್ಮಣ ಶೆಟ್ಟಿ, ಗ್ರಾ.ಪಂ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಪಂಚಾಯತದ ಪಿಡಿಒ ಉಮೇಶ್ ಸ್ವಾಗತಿಸಿ, ಗತಸಭೆಯ ವರದಿ, ವಾರ್ಡ್ ಸಭೆಯ ವರದಿ ಹಾಗೂ ಜಮಾ-ಖರ್ಚಿನ ವಿವರ ನೀಡಿದರು.
ಬೆಳ್ತಂಗಡಿ-ಕಿಲ್ಲೂರು ಲೋಕೋಪಯೋಗಿ ರಸ್ತೆಯ ಮುರ ಮಸೀದಿ ಬಳಿ ಸೇತುವೆಯೊಂದು ಮುರಿದು ಬೀಳುವ ಸ್ಥಿತಿಯಲ್ಲಿದೆ ಇದನ್ನು ಶೀಘ್ರವಾಗಿ ದುರಸ್ಥಿ ಪಡಿಸುವಂತೆ ನಾರಾಯಣ ಕೈಕಂಬ ಸೇರಿದಂತೆ ಗ್ರಾಮಸ್ಥರು ಒತ್ತಾಯಿಸಿದರು. ಈ ಬಗ್ಗೆ ನಿರ್ಣಯ ಕೈಗೊಂಡು ಸಂಬಂಧಪಟ್ಟ ಇಲಾಖೆಗೆ ಬರೆದುಕೊಳ್ಳಲು ನಿರ್ಣಯಿಸಲಾಯಿತು. ನಾವೂರು-ಒಡಿಕ್ಕಾರ್ ಕಂರ್ಬಿನಡ್ಕ ರಸ್ತೆಯನ್ನು ಸಡಕ್ ಯೋಜನೆಗೆ ಸೇರಿಸಬೇಕು ಎಂದು ನ್ಯಾಯವಾದಿ ಸೇವಿಯರ್ ಪಾಲೇಲಿ ಆಗ್ರಹಿಸಿದರು.
ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಯುವಾಗ ಆ ಭಾಗದ ಜನರಿಗೆ ಮಾಹಿತಿ ನೀಡಬೇಕು. ಮಣ್ಣಿನ ಕೆಲಸ ಮಾಡುವಾಗ ಜೆಸಿಬಿಗೆ ಗಂಟೆಗೆ ಎಷ್ಟು ಹಣ ನೀಡಬೇಕು ಎಂಬುದು ಮೊದಲೇ ಪಂಚಾಯತದಲ್ಲಿ ನಿಗದಿಯಾಗಬೇಕು ಎಂದು ನಾರಾಯಣ ಸಲಹೆಯಿತ್ತರು.
ನಾವೂರು ಗ್ರಾಮದಲ್ಲಿ ೭೦೦ ಮಂದಿ ಬೀಡಿ ಕಾರ್ಮಿಕರಿದ್ದಾರೆ. ಸರಕಾರ ಈಗ ಬೀಡಿಯನ್ನು ನಿಷೇಧ ಮಾಡಲು ಹೊರಟಿದೆ. ಬೀಡಿಯಿಲ್ಲದಿದ್ದರೆ ಇವರ ಬದುಕು ಸಾಧ್ಯವಿಲ್ಲ. ಆದುದರಿಂದ ಇವರಿಗೆ ಬದಲಿ ಉದ್ಯೋಗವಾಗದೇ ಬೀಡಿ ನಿಷೇಧಿಸಬಾರದು.
ಗ್ರಾಮದಲ್ಲಿ ಎಷ್ಟು ಮಂದಿ ಬೀಡಿ ಕಾರ್ಮಿಕರಿದ್ದಾರೆ ಎಂದು ಪಂಚಾಯತದಲ್ಲಿ ದಾಖಲೆ ಮಾಡಬೇಕು ಎಂದು ನಾರಾಯಣ ಕೈಕಂಬ ಒತ್ತಾಯಿಸಿದಂತೆ ನಿರ್ಣಯ ಕೈಗೊಳ್ಳಲಾಯಿತು.
ನಾವೂರು ವನ್ಯಜೀವಿ ಉದ್ಯಾನದೊಳಗಿನ ಪುಳಿತ್ತಡಿ ಎಂಬಲ್ಲಿಗೆ ಹಳೆಯ ರಸ್ತೆಯಿದ್ದು, ಇಲ್ಲಿರುವ ಅರಣ್ಯವಾಸಿಗಳ ದಾಖಲೆ ಹೊಂದಿರುವ ಪಟ್ಟಾಜಾಗವನ್ನು ಲೇವಲ್ ಮಾಡಲು ಜೆಸಿಬಿ ಕೊಂಡೋಗಲು ಅನುಮತಿ ನೀಡುವಂತೆ ಆ ಭಾಗದ ನಿವಾಸಿಗಳು ಬೇಡಿಕೆಯಿಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಅರಣ್ಯ ಇಲಾಖೆಯ ಸಿಬ್ಬಂದಿ ಇಲ್ಲಿಗೆ ಹೋಗುವ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಕಾನೂನಿನ ತೊಡಕಿದೆ ಎಂದರು. ಇದಕ್ಕೆ ಆಕ್ಷೇಪ ಸಲ್ಲಿಸಿದ ಮಾಜಿ ಅಧ್ಯಕ್ಷ ಹರೀಶ್ ಸಾಲ್ಯಾನ್ ಅವರು ಕಳೆದ ಬಾರಿ ಜಿಲ್ಲಾಧಿಕಾರಿಗಳು ಪುಳಿತ್ತಡಿಗೆ ಬಂದಾಗ, ವನ್ಯಜೀವಿ ವಿಭಾಗದ ಡಿ.ಎಫ್.ಒ ಅವರು ಇಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ರಸ್ತೆಯನ್ನು ದುರಸ್ಥಿ ಮಾಡಲು ಇಲಾಖೆಯಿಂದ ಯಾವುದೇ ಆಕ್ಷೇಪ ಇಲ್ಲ ಎಂದು ತಿಳಿಸಿದ್ದರು. ಈಗ ಗ್ರಾಮ ಸಭೆಯಲ್ಲಿ ಅಧಿಕಾರಿಗಳು ಕಾನೂನಿನ ತೊಡಕಿದೆ ಎನ್ನುತ್ತೀರಿ, ಈ ರೀತಿ ದ್ವಂದ್ವ ಹೇಳಿಕೆ ಬೇಡ, ಸರಿಯಾದ ಮಾಹಿತಿ ನೀಡಿ ಎಂದರು. ಪುಳಿತ್ತಡಿಯ ನಿವಾಸಿಗಳು ಲಿಖಿತವಾಗಿ ಬರೆದುಕೊಟ್ಟಿಲ್ಲಿ ಮೇಲಾಧಿಕಾರಿಗಳಿಗೆ ಕಳುಹಿಸಿಕೊಡುವುದಾಗಿ ಭರವಸೆ ನೀಡಿದರು.
ನಾವೂರು ಗ್ರಾಮಕ್ಕೆ ಮೆಸ್ಕಾಂನಿಂದ ೧೦ ಕಡೆ ಟಿ.ಸಿ ಸೇರಿದಂತೆ ವಿದ್ಯುತ್ ಅಭಿವೃದ್ಧಿಗೆ ರೂ. ೩೨ ಲಕ್ಷ ವೆಚ್ಚ ಮಾಡಲಾಗಿದೆ. ಈ ಗ್ರಾಮದಲ್ಲಿ ಇನ್ನೂ ೮ ಮಂದಿಯ ಮನೆಗೆ ವಿದ್ಯುತ್ ಸಂಪರ್ಕಕ್ಕೆ ಬಾಕಿಯಿದ್ದು, ಇದೀಗ ಬರಲಿರುವ ದೀನ್‌ದಯಾಳ್ ವಿದ್ಯುತ್ ಯೋಜನೆಯಲ್ಲಿ ಇವರಿಗೆ ಸಂಪರ್ಕ ನೀಡಲಾಗುವುದು ಎಂದು ಇಂಜಿನಿಯರ್ ಶಿವಶಂಕರ್ ತಿಳಿಸಿದರು.
ಜಿ.ಪಂ ಸದಸ್ಯೆ ಸೌಮ್ಯಲತಾ ಹಾಗೂ ತಾ.ಪಂ ಸದಸ್ಯೆ ವೇದಾವತಿ ಮಾತನಾಡಿ ತಮ್ಮ ಅನುದಾನ ಬಂದಾಗ ಗ್ರಾಮದ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಅಧ್ಯಕ್ಷೆ ಲಲಿತಾ ಮಾತನಾಡಿ ಗ್ರಾಮದ ಅಭಿವೃದ್ಧಿಗೆ ಎಲ್ಲರ ಸಹಕಾರ ಕೋರಿದರು. ಪಂಚಾಯತದ ಉಪಾಧ್ಯಕ್ಷ ಗಣೇಶ್ ಗೌಡ ಧನ್ಯವಾದವಿತ್ತರು. ಸಿಬ್ಬಂದಿ ಅನಿತಾ ಸಹಕಾರ ನೀಡಿದರು.

ಗ್ರಾಮಸ್ಥರ ಬೇಡಿಕೆಗಳು
ಬೀಡಿ ಕಾರ್ಮಿಕರಿಗೆ ಬದಲಿ ವ್ಯವಸ್ಥೆ
ಗ್ರಾ.ಪಂದಲ್ಲಿ ಬೀಡಿ ಕಾರ್ಮಿಕರ ದಾಖಲಾತಿ
ಜನವಸತಿ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಿತಿ
ಇಂದಬೆಟ್ಟು ಆಸ್ಪತ್ರೆಗೆ ವೈದ್ಯಾಧಿಕಾರಿ ನೇಮಕ
ಬೆಳ್ತಂಗಡಿ-ಕಿಲ್ಲೂರು ಕೆಎಸ್‌ಆರ್‌ಟಿಸಿ ಬಸ್ಸು
ಸ್ಮಶಾನದ ದಾರಿಗೆ ಬೀದಿ ದೀಪ
94ಸಿ ಕಡತಗಳ ವಿಲೇ
ಕರ್ಮಿನಡ್ಕ ಪ್ರದೇಶಕ್ಕೆ ಟಿ.ಸಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.