Site icon Suddi Belthangady

ನ್ಯಾಯ ಮತ್ತು ಧರ್ಮಕ್ಕಾಗಿ ಆಗ್ರಹಿಸಿ ಮಹಿಳಾ ನ್ಯಾಯ ಸಮಾವೇಶ ಮತ್ತು ಜಾಥ- ಕೊಂದವರು ಯಾರು?

ಬೆಳ್ತಂಗಡಿ: ಹಲವು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಧರ್ಮಸ್ಥಳ ಗ್ರಾಮ ಮತ್ತು ಸುತ್ತಲಿನ ಪ್ರದೇಶದಲ್ಲಿ ಕುಮಾರಿ ಸೌಜನ್ಯಳಂತಹ ಅನೇಕ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ-ಕೊಲೆಗಳು ನಡೆದಿರುವುದು ಇಡೀ ರಾಜ್ಯಕ್ಕೇ ಗೊತ್ತಿದೆ. ಹಲವು ಯುವತಿಯರು ಅಸಹಜವಾಗಿ, ಸಂದೇಹಾಸ್ಪದವಾಗಿ ಸಾವನ್ನಪ್ಪಿ, ಕೆಲವರು ಕಾಣೆಯಾಗಿರುವ ಪ್ರಕರಣಗಳು ನಡೆದಿವೆ. ಈ ಭೀಕರ ಘಟನೆಗಳಿಗೆ ಕಾರಣ ಯಾರೆಂದು ನಮ್ಮ ವ್ಯವಸ್ಥೆ ಈವರೆಗೂ ಪತ್ತೆಮಾಡಿಲ್ಲ; ಯಾವ ಅಪರಾಧಿಯನ್ನೂ ಬಂಧಿಸಿ ಶಿಕ್ಷೆ ವಿಧಿಸಿಲ್ಲ ಎಂದು ಮಹಿಳಾ ಹೋರಾಟಗಾರರು ಡಿ.16ರಂದು ತಾಲೂಕು ಕಚೇರಿ ಮುಂಭಾಗ ನ್ಯಾಯ ಮತ್ತು ಧರ್ಮಕ್ಕಾಗಿ ಆಗ್ರಹಿಸಿ ನಡೆಸಿದ ಕೊಂದವರು ಯಾರು? ಮಹಿಳಾ ನ್ಯಾಯ ಸಮಾವೇಶ ಮತ್ತು ಜಾಥದಲ್ಲಿ ಮಹಿಳೆಯರು ಆಗ್ರಹ ವ್ಯಕ್ತಪಡಿಸಿದ್ದಾರೆ.

 ಡಿಸೆಂಬರ್ 16ರ ಅತ್ಯಾಚಾರ-ವಿರೋಧಿ ದಿನವಾಗಿದ್ದು, ಮಾರಿಗುಡಿಯಿಂದ ತಾಲೂಕು ಕಚೇರಿ ಆವರಣವರೆಗೆ ಮೌನ ಮೆರವಣಿಗೆ ನಡೆಸಿ, ಹೋರಾಟ ನಡೆಸಿದ ಮಹಿಳಾ ಪರ ಹೋರಾಟಗಾರರು, ಹೆಣ್ಣನ್ನು ಪ್ರಕೃತಿಗೆ ಹೋಲಿಸಲಾಗುತ್ತದೆ. ಹೆಣ್ಣು ಸಮಾಜದ ಕಣ್ಣು ಎನ್ನುತ್ತಾರೆ. ಈ ಕಣ್ಣನ್ನೇ ಇರಿದು, ಕಿತ್ತು ಸಮಾಜವನ್ನು ಕುರುಡಾಗಿಸುವ ದುಷ್ಟರು ನಮ್ಮನ್ನು ಆವರಿಸಿದ್ದಾರೆ. ದೇಶದೆಲ್ಲೆಡೆ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ, ಹಿಂಸೆ ಪ್ರತಿನಿತ್ಯ ನಡೆಯುತ್ತಲೇ ಇವೆ. ಇವೆಲ್ಲ ನೋಡಿ ನಮಗೆ ಸಂಕಟವಾಗುತ್ತದೆ. ನಮ್ಮಲ್ಲಿ ಆಕ್ರೋಶವೂ ಹುಟ್ಟುತ್ತದೆ. 2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ‘ನಿರ್ಭಯ’ ಅತ್ಯಾಚಾರ ನಡೆದಾಗ ಇಡೀ ದೇಶವೇ ಬೀದಿಗಿಳಿದು ಪ್ರತಿಭಟಿಸಿದ ಪರಿಣಾಮ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಯಿತಲ್ಲದೆ. 2013ರಲ್ಲಿ ಸಂಸತ್ತು ಅಪರಾಧ ಕಾಯ್ದೆಗಳಿಗೆ ತಿದ್ದುಪಡಿಗಳನ್ನು ತಂದಿತು. ಆಮೂಲಕ ಲೈಂಗಿಕ ದೌರ್ಜನ್ಯಗಳಿಗೆ ಶಿಕ್ಷೆಯ ವ್ಯಾಪ್ತಿಯನ್ನು ವಿಸ್ತರಿಸಿತು. ಈ ಈ ನೆಲದ ಮಹಿಳೆಯರು ಒಟ್ಟಾಗಿ, ಧರ್ಮಸ್ಥಳದಲ್ಲಿ ಪತ್ತೆಹಚ್ಚಿದ ಅತ್ಯಾಚಾರ, ಕೊಲೆ, ಅಸಹಜ ಸಾವು ಮತ್ತು ನಾಪತ್ತೆ ಪ್ರಕರಣಗಳ ವಿರುದ್ಧ ಹೋರಾಡೋಣ, ಬನ್ನಿ ಎಂದು ಕರೆ ನೀಡಿದರು.

ಈ ಜಾಥಾದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಅತ್ಯಾಚಾರ,ದಬ್ಬಾಳಿಕೆ ಕುರಿತಾಗಿ ಹೋರಾಟಗಾರರಾದ ಮಲ್ಲಿಗೆ ಸಿರಿಮನೆ, ಜ್ಯೋತಿ ಅನಂತ ಸುಬ್ಬರಾವ್, ರೈತ ಸಂಘದ ಪ್ರತಿನಿಧಿ ಅನಸೂಯಮ್ಮ,, ಸೌಜನ್ಯರ ಸಹೋದರಿ ಸೌಂದರ್ಯ, ಲೇಖಕಿಯರ ಸಂಘದ ಅಧ್ಯಕ್ಷೆ ಸುನಂದಮ್ಮ, ಸಾಮಾಜಿಕ ಹೋರಾಟಗಾರ್ತಿ ಶಶಿಕಲಾ ಶೆಟ್ಟಿ, ಲಿಂಗತ್ವ ಅಲ್ಪಸಂಖ್ಯಾತರ ಪ್ರತಿನಿಧಿ ಮೋನಿಕಾ, ಪ್ರಸನ್ನ ರವಿ, ನಾಗರಿಕ ಸೇವಾ ಟ್ರಸ್ಟ್‌ನ ವಿದ್ಯಾ ನಾಯಕ್‌ ಮಾತನಾಡಿದರು.

ಸಮಾವೇಶ ಸ್ಥಳಕ್ಕೆ ಬಂದ ತಹಶೀಲ್ದಾರ್‌ ಪೃಥ್ವಿ ಸಾನಿಕಂರಿಗೆ ಮನವಿ ಪತ್ರ ನೀಡಲಾಯಿತು, ಆ ನಂತರ ಮಾತನಾಡಿದ ಅವರು, ನೀವು ನೀಡಿದ ಮನವಿ ಪತ್ರವನ್ನು ಸರ್ಕಾರಕ್ಕೆ ತಲುಪಿಸುವ ಕರ್ತವ್ಯ ನನ್ನದಾಗಿದೆ. ಅದನ್ನು ಮಾಡುತ್ತೇನೆ ಎಂದರು.

ಗೀತಾ ಸುರತ್ಕಲ್‌ ಕಾರ್ಯಕ್ರಮ ನಿರೂಪಿಸಿದರು. ಗೌರಮ್ಮ ಹಕ್ಕೋತ್ತಾಯ ಓದಿದರು.

Exit mobile version