Site icon Suddi Belthangady

ಕಾಂಚನ ಪ್ರೌಢಶಾಲೆ: ವಾರ್ಷಿಕ ಪ್ರತಿಭಾ ಸಮಾರಂಭ-ಕ್ರೀಡೆ ಹಾಗೂ ಶೈಕ್ಷಣಿಕ ಸಾಧಕರಿಗೆ ಸನ್ಮಾನ

ಕಾಂಚನ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತಕ್ಕೆ ಒಳಪಟ್ಟ ಕಾಂಚನ ವೆಂಕಟಸುಬ್ರಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ ವಾರ್ಷಿಕ ಪ್ರತಿಭಾ ಸಮಾರಂಭ ನಡೆಯಿತು.

2024- 25ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದು ಜಿಲ್ಲೆ ಹಾಗು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ವಿದ್ಯಾರ್ಥಿಗಳನ್ನು ಸಮಾರಂಭದ ವೇದಿಕೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಮುಖ್ಯ ಶಿಕ್ಷಕ ರಮೇಶ್ ಮಯ್ಯ ರವರನ್ನು ಕಾಂಚನ ವಿದ್ಯಾಭಿಮಾನಿಗಳ ನೇತೃತ್ವದಲ್ಲಿ ಶಿಕ್ಷಕ ವೃಂದ ಹಾಗೂ ಪೋಷಕರ ಸಮ್ಮುಖದಲ್ಲಿ ಸನ್ಮಾನಿಸಿ ಸ್ಮರಣಿಕೆಯನ್ನು ನೀಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಮೇಶ್ ಮಯ್ಯ, ಶಾಲೆಯ ಈ ಎಲ್ಲಾ ಸಾಧನೆ ಮತ್ತು ಪ್ರಶಸ್ತಿಯ ಹಿಂದೆ ಊರಿನ ಜನರ ಮತ್ತು ಶಿಕ್ಷಕರ ಸಹಕಾರ ಪ್ರಮುಖವಾಗಿದೆ ಎಂದು ಸ್ಮರಿಸಿದರು. ವಿದ್ಯಾರ್ಥಿಗಳ ಮತ್ತು ಶಾಲೆಯ ಶ್ರೇಯೋಭಿವೃದ್ಧಿಗಾಗಿ ಇನ್ನು ಮುಂದೆಯೂ ನಾವೆಲ್ಲರು ಒಟ್ಟಾಗಿ ಹೆಜ್ಜೆ ಹಾಕೋಣ ಎಂದರು.

ಸಭಾ ಕಾರ್ಯಕ್ರಮದ ಬಳಿಕ ಶಾಲೆಯ ವಿದ್ಯಾರ್ಥಿಗಳಿಂದ ಭಜನೆ, ನೃತ್ಯ, ಸಂಗೀತ, ಯಕ್ಷಗಾನ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ತಯಾರಾದ ಚಿಗುರು ವಾರ್ಷಿಕ ಪುಸ್ತಕವನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಧನ್ಯ ಕುಮಾರ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಮೆಚ್ಚುಗೆಯನ್ನು ‌ವ್ಯಕ್ತಪಡಿಸಿದರು.

ಸಮಾರಂಭದ ದ್ವಜಾರೋಹಣ ಕಾರ್ಯಕ್ರಮವನ್ನು ಶಾಲೆಯ ಸಂಸ್ಥಾಪಕಿ ರೋಹಿಣಿ ಸುಬ್ಬರತ್ನಂರವರು ನೆರವೇರಿಸಿದರು. ಶಾಲೆಯ ಮುಖ್ಯ ಶಿಕ್ಷಕ ರಮೇಶ ಮಯ್ಯ, ಪ್ರಗತಿಪರ ಕೃಷಿಕ ವೇಣುಗೋಪಾಲ ಕುಳ್ಳಾಜೆ, ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ನಯನ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶಾಲೆಯ‌ ಶಿಕ್ಷಕರು ನಿರೂಪಿಸಿ, ವಂದಿಸಿದರು.

Exit mobile version