ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆಕಾಶಕಾಯಗಳ ವೀಕ್ಷಣೆಯ ‘ ಸ್ಟಾರಿ ನೈಟ್’ ವಿಶೇಷ ಕಾರ್ಯಕ್ರಮ ನಡೆಯಿತು.
ಕಾಲೇಜಿನ ಭೌತಶಾಸ್ತ್ರ ವಿಭಾಗವು ವಿದ್ಯಾರ್ಥಿಗಳಲ್ಲಿ ಖಗೋಳ ವಿಜ್ಞಾನದ ಆಸಕ್ತಿ ಮತ್ತು ಕುತೂಹಲವನ್ನು ಹೆಚ್ಚಿಸುವ ಉದ್ದೇಶದಿಂದ ಸ್ನಾತಕೋತ್ತರ ಕೇಂದ್ರದ ಮುಂಭಾಗದ ಆವರಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಎಸ್.ಡಿ.ಎಂ (ಸ್ವಾಯತ್ತ) ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೋ. ಕೇಶವ್ ಟಿ ವೀಕ್ಷಣಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಆಕಾಶಕಾಯಗಳ ವಿಸ್ಮತೆಯ ಮಾಹಿತಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಕಾರ್ಯಕ್ರಮವನ್ನು ಸಂಯೋಜಿಸಿದ ಸ್ನಾತಕೋತ್ತರ ಭೌತಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ರಾಘವೇಂದ್ರ ಎಸ್. ನಕ್ಷತ್ರ, ನಕ್ಷತ್ರಪುಂಜಗಳು ಸೇರಿದಂತೆ ಗೆಲಕ್ಸಿಗಳು ಹಾಗು ದೂರದರ್ಶಕದ ಕುರಿತಾಗಿ ವಿವರಣೆ ನೀಡಿದರು. ವಿಭಾಗದ ವಿದ್ಯಾರ್ಥಿಗಳಾದ ಹರ್ಷವರ್ಧನ್ ಮತ್ತು ಶ್ರೀಮಾನ್ ಖಗೋಳಶಾಸ್ತ್ರದ ಮೂಲಭೂತ ಅಂಶಗಳನ್ನು ವಿವರಿಸಿದರು.
ವೀಕ್ಷಣಾ ಸಂದರ್ಭದಲ್ಲಿ ಆಕಾಶವು ವಿಶೇಷವಾಗಿ ಸ್ಪಷ್ಟ ಮತ್ತು ತಿಳಿಯಾಗಿದ್ದುದ್ದರಿಂದ ಓರಿಯನ್ ನೆಬ್ಯುಲಾ, ಪ್ಲೆಯೇಡ್ಸ್ ನಕ್ಷತ್ರಪುಂಜ, ಶನಿ ಆಕಾಶಕಾಯಗಳು ವಿಶೇಷವಾಗಿ ಕಾಣಿಸಿಕೊಂಡವು. ಈ ವಿಶೇಷ ಆಕಾಶಕಾಯಗಳ ವೀಕ್ಷಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿವರ್ಗದವರು ಸಕ್ರಿಯವಾಗಿ ಭಾಗವಹಿಸಿದರು.

