ಉಜಿರೆ: ಎನ್.ಎಸ್.ಎಸ್. ಸ್ವಯಂಸೇವಕರು ಕೇವಲ ಕೆಲಸಕ್ಕೆ, ಕಸ ಹೆಕ್ಕುವುದಕ್ಕೆ ಮಾತ್ರ ಮೀಸಲು ಎಂಬಂಥ ತಪ್ಪು ಕಲ್ಪನೆ ಹೆಚ್ಚಿನವರದು. ಆದರೆ, ಈ ಯೋಜನೆಯಲ್ಲಿ ತೊಡಗಿಸಿಕೊಂಡವರಿಗೆ ಮಾತ್ರ ಈ ರಾಷ್ಟ್ರೀಯ ಸೇವಾ ಯೋಜನೆಯ ನಿಜವಾದ ಅರ್ಥ ತಿಳಿಯಲು ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ರಾಷ್ಟ್ರೀಯ ಸೇವಾ ಯೋಜನೆ ನೋಡಲ್ ಅಧಿಕಾರಿ ಸೀಮಾ ಪ್ರಭು ಹೇಳಿದರು.
ಉಜಿರೆ ಸಮೀಪದ ಬದನಾಜೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.11ರಂದು ಅವರು ಉಜಿರೆ ಎಸ್.ಡಿ.ಎಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಒಂದು ವಾರದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಎನ್ನೆಸ್ಸೆಸ್ ಶಿಬಿರದಲ್ಲಿ ಸಣ್ಣ-ಪುಟ್ಟ ಸಂಗತಿಗಳು ಆತ್ಮತೃಪ್ತಿಯನ್ನು ನೀಡುತ್ತವೆ, ಇಲ್ಲಿ ಇತರ ಸ್ವಯಂಸೇವಕರ ನಗುವಿನಲ್ಲಿ ನಮ್ಮ ನೋವನ್ನು ನಾವು ಮರೆಯುತ್ತೇವೆ. ಇತರರ ನೋವಿಗೆ ಕಂಬನಿ ಮಿಡಿಯುತ್ತೇವೆ. ನಿಜವಾದ ಸಂಬಂಧಗಳ ಅರ್ಥ ನಮಗೆ ಈ ಯೋಜನೆಯ ಮೂಲಕ ಅರ್ಥವಾಗುತ್ತದೆ ಎಂದರು.
ಬದುಕಿನಲ್ಲಿ ಶಿಸ್ತು, ಸರಿಯಾದ ನಿರ್ಧಾರ, ಆತ್ಮ ಗೌರವ ಎಂಬ ಮೂರು ಸೂತ್ರಗಳನ್ನು ಅಳವಡಿಸಿಕೊಂಡರೆ ನಾವು ನಮ್ಮ ಗುರಿಯನ್ನು ಅತಿ ಬೇಗನೆ ತಲುಪಬಹುದು. ಶಿಬಿರದಲ್ಲಿ ಕಲಿತ ಎಲ್ಲಾ ವಿಚಾರ, ಕಲಿಕೆ, ಅನುಭವಗಳನ್ನು ಮುಂದೆ ಬದುಕಿನಲ್ಲಿಯೂ ಕೂಡ ಅಳವಡಿಸಿಕೊಳ್ಳುವ ಮೂಲಕ ಸಾಧನೆ ನಿಮ್ಮದಾಗಲಿ ಎಂದು ಶುಭ ಹಾರೈಸಿದರು.
ಕೇಂದ್ರದ ಮೈ ಭಾರತ್ ಪೋರ್ಟಲ್ (my bharath portal) ಬಗ್ಗೆ ಮಾತನಾಡಿದ ಅವರು, ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡ ಸ್ವಯಂಸೇವಕರು ವಿಕಸಿತ್ ಭಾರತ್ ರಸಪ್ರಶ್ನೆ (vikasith barath quiz) ಮೊದಲಾದ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದರು.
ಬದನಾಜೆ ಸ.ಉ. ಹಿ .ಪ್ರಾ. ಶಾಲೆಯ ಮುಖ್ಯೋಪಾಧ್ಯಾಯ ನಿರಂಜನ್ ಮಾತನಾಡಿ, “ಶಾಲೆಯ ಅಮೃತ ಮಹೋತ್ಸವದ ಸಂಭ್ರಮದ ತಯಾರಿ ವೇಳೆ ಇದ್ದಂಥ ಕೆಲವೇ ಸಮಯದಲ್ಲಿ ಶಾಲೆಯ ಸುತ್ತಮುತ್ತ ಸ್ವಚ್ಛತೆ, ಅಡಿಕೆ ಸಸಿ ನೆಡುವಿಕೆ ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ನಮ್ಮೊಂದಿಗೆ ಶಿಸ್ತಿನ ಸಿಪಾಯಿಗಳಂತೆ ಎನ್ಎಸ್ಎಸ್ ಶಿಬಿರಾರ್ಥಿಗಳು, ಯೋಜನಾಧಿಕಾರಿಗಳು ಕೈಜೋಡಿಸಿದ್ದು ಸಂತೋಷ ತಂದಿದೆ” ಎಂದರು.
ಶಿಬಿರದ ಸ್ವಾಗತ ಸಮಿತಿ ಕಾರ್ಯದರ್ಶಿ ಅರುಣಾಕ್ಷಿ ಮಾತನಾಡಿ, ಎನ್.ಎಸ್.ಎಸ್. ಎಂಬುದು ಒಂದು ತುಂಬು ಕುಟುಂಬ. ಇಲ್ಲಿ ಸ್ನೇಹ, ಬಾಂಧವ್ಯ, ಸಹಬಾಳ್ವೆ ಎಲ್ಲವೂ ಒಂದೇ ಜಾಗದಲ್ಲಿ ನಮಗೆ ಸಿಗುತ್ತದೆ. ಶಿಬಿರವು ಬದನಾಜೆ ಶಾಲೆಯಲ್ಲಿ ನಡೆದದ್ದು ತುಂಬಾ ಸಂತೋಷ ತಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ಮಾತನಾಡಿ, ವರ್ಷಗಳು ಕಳೆದಂತೆ ಎಸ್ ಡಿ ಎಂ ಕಾಲೇಜಿನ ಎನ್ಎಸ್ಎಸ್ ಶಿಬಿರದ ಗುಣಮಟ್ಟ ಮತ್ತು ಶಿಬಿರದಿಂದ ಶಿಬಿರಾರ್ಥಿಗಳಿಗೆ ಲಭಿಸುತ್ತಿರುವ ವಿಚಾರಗಳ ಗುಣಮಟ್ಟ ಹೆಚ್ಚುತ್ತಿರುವುದು ಶ್ಲಾಘನೀಯ ಎಂದರು.
ರಾಷ್ಟ್ರೀಯ ಸೇವಾ ಯೋಜನೆಯ ಧ್ಯೇಯ ವಾಕ್ಯ ‘ಶ್ರಮಯೇವ ಜಯತೇ’ ಅನುಸಾರ ಶ್ರಮದ ಅರಿವು, ಬೆಲೆ ಪ್ರತಿಯೊಬ್ಬ ಶಿಬಿರಾರ್ಥಿಗೂ ಇಲ್ಲಿ ಅರಿವಾಗುತ್ತದೆ. ಎನ್ಎಸ್ಎಸ್ ಯಾವುದೇ ವ್ಯವಸ್ಥೆಗಳು ಇಲ್ಲದೆ ಜೀವಿಸುವುದನ್ನು ಕಲಿಸಿಕೊಡುತ್ತದೆ. ಪ್ರತಿಯೊಬ್ಬರೂ ಎನ್ಎಸ್ಎಸ್ ಸ್ವಯಂಸೇವಕರು ಆಗಬಹುದು. ಆದರೆ, ನಿಜವಾದ ಸ್ವಯಂಸೇವಕ ಭಾವನೆ ನಮ್ಮಲ್ಲಿ ಬರುವುದು ನಾವು ಶಿಬಿರದ ಪ್ರತಿ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಮಾತ್ರ ಎಂದರು.
ಹರಿಯಾಣದ ಕುರುಕ್ಷೇತ್ರ ವಿಶ್ವವಿದ್ಯಾನಿಲಯದಲ್ಲಿ ನ.11ರಿಂದ 17ರ ವರೆಗೆ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ರಾಷ್ಟ್ರೀಯ ಭಾವೈಕ್ಯತೆ ಶಿಬಿರದಲ್ಲಿ ಕರ್ನಾಟಕ ರಾಜ್ಯದಿಂದ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ಸ್ವಯಂಸೇವಕರಾದ ಎಸ್.ಡಿ.ಎಂ. ಕಾಲೇಜಿನ ನೆವಿಲ್ ನವೀನ್ ಮೋರಸ್, ಸುರತ್ಕಲ್ ಗೋವಿಂದ ದಾಸ್ ಪದವಿ ಕಾಲೇಜಿನ ಪಲ್ಲವಿ ಹೊಸಬೆಟ್ಟು, ಮಂಗಳೂರು ಕೆನರಾ ಕಾಲೇಜಿನ ಯುವರಾಜ್, ಮೂಲ್ಕಿ ವಿಜಯ ಕಾಲೇಜಿನ ದೀಪ್ತಿ ಶೆಟ್ಟಿ, ಕಾರ್ಕಳ ಭುವನೇಂದ್ರ ಕಾಲೇಜಿನ ಗಣೇಶ್ ಮತ್ತು ತಂಡವನ್ನು ಮುನ್ನಡೆಸಿದ ಎಸ್.ಡಿ.ಎಂ. ಕಾಲೇಜಿನ ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಶಿಬಿರದ ವರದಿಯನ್ನು ಘಟಕ ಎರಡರ ನಾಯಕ ಟಿ. ಸುದರ್ಶನ್ ನಾಯಕ್ ವಾಚಿಸಿದರು. ಏಳು ದಿನದ ಶಿಬಿರದ ಸಿಂಹಾವಲೋಕನವನ್ನು ಭಿತ್ತಿಪತ್ರಿಕೆ ಮೂಲಕ ಅನಾವರಣಗೊಳಿಸಲಾಯಿತು.
ಶಿಬಿರದ ಸ್ವಾಗತ ಸಮಿತಿ ಮತ್ತು ಬದನಾಜೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅನಿಲ್ ಡಿ’ಸೋಜಾ, ಶಿಬಿರ ಅಧಿಕಾರಿಗಳಾದ ಪ್ರವೀಣ್, ಅಭಿಲಾಷ್, ಮಂಜುಶ್ರೀ, ಸುಷ್ಮಾ, ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಯೋಜನಾಧಿಕಾರಿಗಳಾದ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಸ್ವಾಗತಿಸಿ, ಸ್ವಯಂಸೇವಕಿ ಮಾನ್ಯ ಕೆ.ಆರ್. ನಿರೂಪಿಸಿದರು. ಮಾಲಿನಿ ಅಂಚನ್ ವಂದಿಸಿದರು.

