ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಸೆಕೆಂಡರಿ ಶಾಲೆಯ ವಾರ್ಷಿಕ ಪ್ರತಿಭಾ ದಿನಾಚರಣೆಯು ಎಸ್.ಡಿ.ಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಿತು.
ಸಮಾರಂಭವನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪಠ್ಯದ ಜೊತೆಗೆ ಪಠ್ಯೇತರವಾಗಿ ಸಾಧಿಸಿದ ಮತ್ತು ಭಾಗವಹಿಸಿದ ಎಲ್ಲಾ ನೆನಪುಗಳು ಅವಿಸ್ಮರಣೀಯ. ರತ್ನ ಮಾನಸ ವಿದ್ಯಾರ್ಥಿ ನಿಲಯದಲ್ಲಿರುವ ವಿದ್ಯಾರ್ಥಿಗಳು ವಿಶೇಷವಾಗಿ ಜೀವನ ಶಿಕ್ಷಣವನ್ನು ಕಲಿಯುತ್ತಾರೆ. ಇವೆಲ್ಲ ನಮಗೆ ಹೊಸ ಪಾಠ ಮತ್ತು ಬದುಕಿನ ದಾರಿಯನ್ನು ರೂಪಿಸುತ್ತದೆ. ಎಸ್.ಡಿ.ಎಂ ಸಂಸ್ಥೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಕಲ್ಪಿಸಿಕೊಟ್ಟಿರುವ ಎಲ್ಲಾ ವ್ಯವಸ್ಥೆಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿ ಜೀವನವು ಹಸಿರಾಗಲಿ ಎಂದು ಶುಭ ಹಾರೈಸಿದರು.
ಇಂಗ್ಲಿಷ್ ಮಾಧ್ಯಮ ಶಾಲೆಗಳತ್ತ ಜನರ ಒಲವು ಹೆಚ್ಚುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಉಜಿರೆಯ ಅನುದಾನಿತ ಸೆಕೆಂಡರಿ ಕನ್ನಡ ಮಾಧ್ಯಮ ಶಾಲೆ ಬಹು ಸಂಖ್ಯೆಯ ವಿದ್ಯಾರ್ಥಿ ಸಮೂಹವನ್ನು ಹೊಂದಿದ್ದು ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡೆ ಸೇರಿದಂತೆ ಎಲ್ಲಾ ರೀತಿಯಲ್ಲೂ ಮಾದರಿಯಾಗಿದೆ. ಇದರ ಹಿಂದೆ ಪೋಷಕರು ಸೇರಿದಂತೆ ಎಲ್ಲಾ ಶಿಕ್ಷಕರ ಪ್ರಯತ್ನ ಮತ್ತು ಪ್ರೋತ್ಸಾಹ ಶ್ಲಾಘನೀಯ ಎಂದರು.
ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದ ಬೆಳ್ತಂಗಡಿಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ತಾರಕೇಸರಿ ಮಾತನಾಡಿ, ಎಐ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಬಹುಮುಖ ಪ್ರತಿಭಾವಂತ ರಾಗಬೇಕು. ಇದು ನಿಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಈಗಾಗಲೇ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಸೆಕೆಂಡರಿ ಶಾಲೆಯು ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಕಾಯ್ದುಕೊಂಡಿದೆ. ಮುಂಬರುವ ವಾರ್ಷಿಕ ಪರೀಕ್ಷೆ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ನುಡಿದರು.
ಸಮಾರಂಭದಲ್ಲಿ ಬಹುಮಾನ ವಿಜೇತ ವಿದ್ಯಾರ್ಥಿಗಳಿಗೆ ಅತಿಥಿಗಳು ಪ್ರಶಸ್ತಿ ಪ್ರಧಾನ ಮಾಡಿದರು. ಬಳಿಕ ಶಾಲೆಯ ವಿದ್ಯಾರ್ಥಿ ತಂಡ ತಯಾರಿಸಿದ ಕಥೆ,ಕವನ, ಚಿತ್ರ ಕಥೆ, ಲೇಖನಗಳಿಂದ ವಿಶೇಷವಾಗಿ ತಯಾರಿಸಿದ ಬೆಳಗು ಬಿತ್ತಿ ಪತ್ರಿಕೆಯನ್ನು ಡಾ. ಸತೀಶ್ಚಂದ್ರ ಎಸ್. ಬಿಡುಗಡೆ ಗೊಳಿಸಿದರು. ಸಭಾ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ಕುಣಿತ ಭಜನೆ, ಯಕ್ಷಗಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ತುಳುನಾಡ ವಿಶೇಷ ಆಚರಣೆ ಮತ್ತು ಅಭಿವೃದ್ಧಿಯ ಸಂಕೇತವಾಗಿ ಅತಿಥಿಗಳು ಭತ್ತವನ್ನು ಕಳಶಕ್ಕೆ ಸುರಿದು ಹಿಂಗಾರದ ಸಿರಿಯನ್ನು ಅರಳಿಸಿದ್ದು ಎಲ್ಲರ ಕಣ್ಮನ ಸೆಳೆಯಿತು.ಶಾಲೆಯ ಮುಖ್ಯೋಪಾಧ್ಯಾಯಿನಿ ವಿದ್ಯಾಕಿರಣ ಎಲ್ಲರನ್ನು ಸ್ವಾಗತಿಸಿ, ಶಾಲೆಯ ಶೈಕ್ಷಣಿಕ ವರದಿಯನ್ನು ಮಂಡಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಂಯೋಜಕ ಎನ್ ಕಾಕತ್ಕಾರ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಧನ್ಯ ಕುಮಾರ್, ರತ್ನ ಮಾನಸ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಯತೀಶ್, ಶಾಲೆಯ ಮುಖ್ಯೋಪಾಧ್ಯಾಯಿನಿ ವಿದ್ಯಾಕಿರಣ, ಶಾಲಾ ವಿದ್ಯಾರ್ಥಿ ನಾಯಕ ಪ್ರೇಮ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶಾಲೆಯ ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಸೇರಿದಂತೆ ಪೋಷಕರು ಭಾಗಿಯಾಗಿದ್ದರು. ಶಾಲಾ ವಿದ್ಯಾರ್ಥಿಗಳ ತಂಡ ಪ್ರಾರ್ಥನೆ ಹಾಡಿದರು. ಕಾರ್ಯಕ್ರಮವನ್ನು ಶಿಕ್ಷಕರಾದ ರಾಧಾಕೃಷ್ಣ ಜ್ಞಾನೇಶ್ ವಿದ್ಯಾರ್ಥಿಗಳಾದ ನಿಶ್ಚಿತ್, ಶಹಿಮಾ ಬಾನು ಹಾಗು ಮಾನ್ಯ ನಿರೂಪಿಸಿದರು. ಅಧ್ಯಾಪಕ ರವೀಶ್ ಕುಮಾರ್ ವಂದಿಸಿದರು.

