ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾಗಿ ಎಸ್‌ಐಟಿಯಿಂದ ಬಂಧಿಸಲ್ಪಟ್ಟಿರುವ ಚಿನ್ನಯ್ಯನಿಗೆ ಸೂಕ್ತ ರಕ್ಷಣೆ ನೀಡಬೇಕು ಹಾಗೂ ಆತನಿಗೆ ಜಾಮೀನಿನಲ್ಲಿ ವಿಧಿಸಿರುವ ಹತ್ತನೇ ನಿಬಂಧನೆಯನ್ನು ಸಡಿಲಗೊಳಿಸಬೇಕು ಎಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಚಿನ್ನಯ್ಯ ಪರ ವಕೀಲರು ಶನಿವಾರ ಮನವಿ ಸಲ್ಲಿಸಿದ್ದಾರೆ. ಸಾಕ್ಷಿ ಸಂರಕ್ಷಣಾ ಕಾಯಿದೆಯಲ್ಲಿ ರಕ್ಷಣೆ ಪಡೆದಿದ್ದ ಮಂಡ್ಯ ಮೂಲದ ಚಿನ್ನಯ್ಯ ಆರೋಪಿಯಾದ ಬಳಿಕ ಈ ರಕ್ಷಣೆಯನ್ನು ಕಳೆದುಕೊಂಡಿದ್ದ. ಇದೀಗ ದಕ್ಷಿಣ ಕನ್ನಡ ಜಿಲ್ಲಾ ಸಕ್ಷಮ ಪ್ರಾಧಿಕಾರದ ಮುಂದೆ ನ್ಯಾಯವಾದಿಗಳು ಚಿನ್ನಯ್ಯನಿಗೆ ರಕ್ಷಣೆ ನೀಡುವಂತೆ ಮನವಿ ಸಲ್ಲಿಸಿದ್ದು ಸೂಕ್ತ ರಕ್ಷಣೆ ನೀಡುವಂತೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಚಿನ್ನಯ್ಯ ಜಾಮೀನಿನ ಮೇಲೆ ಹೊರ ಬಂದರೆ ಆತ ಸ್ಥಳೀಯ ಠಾಣೆಗೆ ಬಂದು ಸಹಿ ಹಾಕುವಂತೆ ವಿಧಿಸ ಗಿರುವ ನಿಬಂಧನೆಯನ್ನು ಸಡಿಲಿಸುವಂತೆಯೂ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ. ಆರೋಪಿ ಚಿನ್ನಯ್ಯ ಜಾಮೀನು ಲಭಿಸಿದರೆ ಆತನ ಊರಾದ ಮಂಡ್ಯದಲ್ಲಿ ವಾಸಿಸಲು ನಿರ್ಧರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಠಾಣೆಗೆ ಹಾಜರಾಗಲು ವಿನಾಯಿತಿ ನೀಡುವಂತೆ ವಿನಂತಿಸಲಾಗಿದೆ. ಆರೋಪಿ ಚಿನ್ನಯ್ಯ ರಕ್ಷಣೆ ಕೋರಿರುವ ಬಗ್ಗೆ ಬೆಳ್ತಂಗಡಿ ವೃತ್ತ ನಿರೀಕ್ಷಕರಿಂದ ಹಾಗೂ ಇತರ ವಿಚಾರಗಳ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಂದ ನ್ಯಾಯಾಲಯ ವರದಿ ಕೋರಿದೆ.
ಕಾನೂನು ಸಲಹೆ ಪಡೆಯಲು ಎಸ್‌ಐಟಿಗೆ ನಿರ್ದೇಶನ-ಡಿ. ೨೬ಕ್ಕೆ ವಿಚಾರಣೆ ಮುಂದೂಡಿಕೆ: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆಯ ಕುರಿತು ನಿರ್ದೇಶನ ಕೋರಿ ಎಸ್‌ಐಟಿ ಸಲ್ಲಿಕೆ ಮಾಡಿರುವ ವರದಿಗೆ ಸಂಬಂಧಿಸಿದಂತೆ ಬೆಳ್ತಂಗಡಿ ನ್ಯಾಯಾಲಯದಲ್ಲಿ ಮಂಗಳವಾರ ವಿಚಾರಣೆ ನಡೆದು ಸೂಕ್ತ ಕಾನೂನು ಸಲಹೆ ಪಡೆಯುವ ಜತೆಗೆ ಅಂತಿಮ ವರದಿ ಸಿದ್ಧಪಡಿಸುವಂತೆ ನ್ಯಾಯಾಧೀಶರು ಎಸ್‌ಐಟಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಡಿ. ೨೬ಕ್ಕೆ ಮುಂದೂಡಿದ್ದಾರೆ. ಬೆಳ್ತಂಗಡಿ ನ್ಯಾಯಾಲಯಕ್ಕೆ ಎಸ್‌ಐಟಿ ಅಧಿಕಾರಿಗಳು ನ. ೨೦ರಂದು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ ೨೧೫ರಡಿಯಲ್ಲಿ ಸುಳ್ಳು ಸಾಕ್ಷಿಯ ಅಪರಾಧಕ್ಕಾಗಿ ಕಾನೂನು ಕ್ರಮಕ್ಕೆ ವಿನಂತಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.
ಚಿನ್ನಯ್ಯ ಸಹಿತ ೬ ಮಂದಿಯ ಹೆಸರನ್ನು ಉಲ್ಲೇಖಿಸಿ ಸುಮಾರು ೧೨೦ ದಿನಗಳ ತನಿಖೆಯ ವಿವರವನ್ನು ನ್ಯಾಯಾಲಯಕ್ಕೆ ತಿಳಿಸಿದ್ದ ಎಸ್‌ಐಟಿ ಅಧಿಕಾರಿಗಳು ಮುಂದಿನ ತನಿಖೆಗೆ ಮಾರ್ಗದರ್ಶನ ನೀಡುವಂತೆ ಮನವಿ ಮಾಡಿದ್ದರು. ಎಸ್‌ಐಟಿ ವರದಿಗೆ ಸಂಬಂಧಿಸಿದಂತೆ ಮಂಗಳವಾರ ನ್ಯಾಯಾಲಯದಲ್ಲಿ ವಾದ ನಡೆದಿದ್ದು ಪರಿಪೂರ್ಣ ವರದಿ ಸಲ್ಲಿಸುವ ಅಂಶಗಳು ಕೂಡ ಪ್ರಸ್ತಾಪಗೊಂಡಿದೆ. ಎಸ್‌ಐಟಿಯಿಂದ ಬಂಧನಕ್ಕೊಳಗಾಗಿ ಶಿವಮೊಗ್ಗ ಜೈಲಿನಲ್ಲಿರುವ ಚಿನ್ನಯ್ಯನಿಗೆ ಮಂಗಳೂರು ಸೆಷೆನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದರೂ ಆತನಿಗೆ ಜಾಮೀಜು ನೀಡಲು ಯಾರೂ ಮುಂದೆ ಬಾರದ ಕಾರಣ ಆತ ಇನ್ನೂ ಜೈಲಿನಲ್ಲಿದ್ದಾನೆ.
ಈ ಮಧ್ಯೆ ಚಿನ್ನಯ್ಯನಿಗೆ ಜಾಮೀನು ನೀಡಲು ಆತನ ಪತ್ನಿ ನ್ಯಾಯಾಲಯಕ್ಕೆ ಬಂದಿದ್ದರೂ ತಾಂತ್ರಿಕ ಅಡಚಣೆಯಿಂದ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.
