Site icon Suddi Belthangady

ಬಜಿರೆ ಕೊರಗಜ್ಜ ದೈವಸ್ಥಾನದ ಮುಂದೆ ರಸ್ತೆ ನಿರ್ಮಾಣಕ್ಕೆ ಹೈಕೋರ್ಟ್ ತಡೆ

ಬೆಳ್ತಂಗಡಿ: ಬಜಿರೆ ಗ್ರಾಮದ ಬಾಡಾರು ಪ್ರದೇಶದಲ್ಲಿ ಕೊರಗಕಲ್ಲು ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನಕ್ಕೆ ಸೇರಿದ ಸರಕಾರಿ ಜಾಗದಲ್ಲಿ ಖಾಸಗಿ ಆಸ್ತಿ ಮಾಲಕರಿಗಾಗಿ ರಸ್ತೆ ನಿರ್ಮಾಣ ಮಾಡದಂತೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಬಜಿರೆ ಗ್ರಾಮದ ಕೊರಗಕಲ್ಲು ಶ್ರೀ ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರದೀಪ್ ಕುಮಾರ್ ಹೆಗ್ಡೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನೀಲ್‌ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತಡೆಯಾಜ್ಞೆ ನೀಡಿದೆ. ಬಜಿರೆ ಗ್ರಾಮದ ಬಾಡಾರು ಪ್ರದೇಶದ ಸರ್ವೆ ನಂಬರ್ ೩೯/೧ಎರಲ್ಲಿ ಕೊರಗಜ್ಜ ದೈವಸ್ಥಾನಕ್ಕೆ ಸೇರಿದ ೦.೮೦ ಎಕರೆ ಸರಕಾರಿ ಜಮೀನಿನಲ್ಲಿ ಪಕ್ಕದ ಖಾಸಗಿ ಆಸ್ತಿ ಮಾಲಕರ ಬಳಕೆಗೆ ರಸ್ತೆ ನಿರ್ಮಾಣ ಮಾಡದಂತೆ ಸರಕಾರ ಮತ್ತು ಜಿಲ್ಲಾಡಳಿತಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆಯಲ್ಲದೆ ಅರ್ಜಿ ಸಂಬಂಧ ರಾಜ್ಯ ಸರಕಾರದ ಕಂದಾಯ ಇಲಾಖೆ, ಜಿಲ್ಲಾಧಿಕಾರಿ, ಪುತ್ತೂರು ಉಪವಿಭಾಗಾಧಿಕಾರಿ, ಬೆಳ್ತಂಗಡಿ ತಹಶಿಲ್ದಾರ್ ಹಾಗೂ ಖಾಸಗಿ ಆಸ್ತಿ ಮಾಲಕರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿದೆ.

ಅರ್ಜಿಯ ವಿವರ: ಬಜಿರೆ ಗ್ರಾಮದ ಬಾಡಾರುನಲ್ಲಿ ಜಿಲ್ಲಾ ಪಂಚಾಯತ್ ರಸ್ತೆಯ ಬದಿ ಕೊರಗಜ್ಜ ದೈವದ ಸಾನಿಧ್ಯ ಸುಮಾರು ೪೦೦ ವರ್ಷಗಳಿಂದ ಇದೆ. ಇದು ಗ್ರಾಮದ ಸರ್ವೆ ನಂಬರ್ ೩೯/೧ಎ ರಲ್ಲಿ ೦.೮೦ ಎಕರೆ ಸರಕಾರಿ ಜಾಗದಲ್ಲಿದೆ. ಸುತ್ತಲೂ ಕಲ್ಲಿನ ಕಂಬ ಹಾಗೂ ತಂತಿ ಹಾಕಲಾಗಿದೆ. ಏಳೆಂಟು ತಿಂಗಳ ಹಿಂದೆ ಕೊರಗಜ್ಜನ ಗುಡಿಯನ್ನು ಪುನರ್‌ನಿರ್ಮಾಣ ಮಾಡಲಾಗಿದೆ. ಸ್ಥಳೀಯ ಜನರು ಮತ್ತು ಭಕ್ತಾದಿಗಳು ತಮ್ಮ ಸೇವಾ ಕೈಂಕರ್ಯಗಳನ್ನು ಸಲ್ಲಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಈ ಜಾಗದ ಉತ್ತರ ದಿಕ್ಕಿನಲ್ಲಿ ಕೆಲವು ಖಾಸಗಿ ವ್ಯಕ್ತಿಗಳ ಜಮೀನು ಇದೆ. ಅದಕ್ಕೆ ದೈವಸ್ಥಾನದ ಮುಂಭಾಗದಿಂದ ಹಾದು ಹೋಗುವಂತೆ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಹೀಗಾದಲ್ಲಿ ದೈವಸ್ಥಾನದ ಕಾರ್ಯ ಚಟುವಟಿಕೆಗಳಿಗೆ ತೊಂದರೆ ಆಗಲಿದೆ. ಈ ಸಂಬಂಧ ೨೦೨೫ರ ಅ.೩೦ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಯಾವುದೇ ಕ್ರಮ ಜರುಗಿಸಿಲ್ಲ. ಆದ್ದರಿಂದ ನ್ಯಾಯಾಲಯದಿಂದ ನಿರ್ದೇಶನ ಕೋರಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Exit mobile version