Site icon Suddi Belthangady

ಎಸ್.ಡಿ.ಎಂ ಪ.ಪೂರ್ವ ಕಾಲೇಜು: ‘ಆರೋಹಣಂ – 2025’ ವಾರ್ಷಿಕೋತ್ಸವ ಸಮಾರಂಭ: ಆರೋಗ್ಯವಂತ ಸಮಾಜ ಮತ್ತು ಸಾಧನೆಯತ್ತ ಹೆಜ್ಜೆ ಹಾಕೋಣ: ಡಾ. ಹೇಮಗಿರಿ ಕೆ.

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ವತಿಯಿಂದ ಆಯೋಜಿಸಿದ್ದ ‘ಆರೋಹಣಂ – 2025’ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಭವ್ಯವಾಗಿ ನಡೆಯಿತು.

ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಕಾರವಾರದ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನ ಕಮ್ಯುನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಹೇಮಗಿರಿ ಕೆ ಮಾತನಾಡಿ,
ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಗುರುಗಳು ಪ್ರಮುಖ ಪಾತ್ರವಹಿಸುತ್ತಾರೆ. ನಮ್ಮ ಗುರಿಯನ್ನು ತಲುಪಲು ಸದಾ ಮಾರ್ಗದರ್ಶನ ಮಾಡುತ್ತಾರೆ. ವಿದ್ಯಾರ್ಥಿ ಜೀವನದಿಂದಲೇ ದುಶ್ಚಟ, ಆಲಸ್ಯ, ಅಹಂಕಾರ, ಅಶಿಸ್ತು, ಅನೈತಿಕ ಚಟುವಟಿಕೆಗಳನ್ನು ಬಿಟ್ಟು ಪರಿಶ್ರಮ ಮತ್ತು ಪ್ರಯತ್ನಗಳ ಬೆನ್ನತ್ತಬೇಕು ಇದು ನಮ್ಮಲ್ಲಿ ಮಹತ್ತರ ಬದಲಾವಣೆಯನ್ನು ತರುತ್ತದೆ, ಭವಿಷ್ಯವನ್ನು ಯಶಸ್ಸಿನ ಹಾದಿಯೆಡೆಗೆ ಕೊಂಡೊಯ್ಯುತ್ತದೆ. ಸಾಧನೆಗೆ ಹಲವು ಕ್ಷೇತ್ರಗಳಿವೆ, ಆದರ್ಶಗಳಿಗೆ ಈ ಸಮಾಜದಲ್ಲಿ ನೂರಾರು ಸಾಧಕರು ಇದ್ದಾರೆ, ವಿದ್ಯಾರ್ಥಿಗಳು ತಮ್ಮ ಆಸಕ್ತಿ ವಲಯವನ್ನು ದೃಡಪಡಿಸಿಕೊಂಡು ಮುಂದೆ ಸಾಗಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಮತ್ತೊರ್ವ ಅಭ್ಯಾಗತರಾಗಿದ್ದ ಕಿರುತೆರೆ ನಟಿ ದೀಪಾ ವಿ ಕಟ್ಟೆ ಮಾತನಾಡಿ, ಈ ದಿನ ಪಡೆದ ಬಹುಮಾನಗಳೆಲ್ಲ ನಿಮ್ಮ ಮುಂದಿನ ಸಾಧನೆಗೆ ಪ್ರೇರಣೆಯಾಗಲಿ, ಸೋಲುಗಳು ಹೊಸ ಅನುಭವವನ್ನು ನೀಡುತ್ತದೆ. ಫಲಿತಾಂಶಗಳ ನಿರೀಕ್ಷೆ ಬಿಟ್ಟು ಪ್ರಯತ್ನ ಶೀಲರಾಗಬೇಕು. ಪಠ್ಯದ ಜೊತೆಗೆ ವಿನೂತನ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಬಹುಮುಖ ಪ್ರತಿಭೆಗಳಾಗಿ ಬೆಳೆದಾಗ ಸಮಾಜ ನಿಮ್ಮನ್ನು ಗುರುತಿಸಿತ್ತದೆ ಎಂದರು. ಇದೇ ಸಂದರ್ಭದಲ್ಲಿ ಎಸ್.ಡಿ.ಎಂ ಕಲಾ ಕೇಂದ್ರದ ವಿದ್ಯಾರ್ಥಿಗಳ ಪ್ರತಿಭೆಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿ, ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಮತ್ತು ತರಬೇತುದಾರರಿಗೆ , ಪ್ರೋತ್ಸಾಹಿಸಿದ ಉಪನ್ಯಾಸಕರು ಮತ್ತು ಪೋಷಕರಿಗೆ ಅಭಿನಂದನೆಗಳನ್ನು ತಿಳಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮೌಲ್ಯಯುತ ಶಿಕ್ಷಣ ಮತ್ತು ಜೀವನ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕಲ್ಪಸಿಕೊಡುವುದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಮಹತ್ತರ ಉದ್ದೇಶವಾಗಿದೆ. ಇದನ್ನು ಹಿರಿಯ ವಿದ್ಯಾರ್ಥಿಗಳು ಸಾಬೀತು ಮಾಡಿದ್ದಾರೆ. ಇವೆಲ್ಲವು ನಿಮಗೆ ಪ್ರೇರಣೆಯಾಗಬೇಕು ಎಂದರು.

ಸಭಾ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರಮೋದ್ ಕುಮಾರ್ ಬಿ. ಎಸ್.ಡಿ.ಎಂ ಪದವಿಪೂರ್ವ ವಿದ್ಯಾ ಸಂಸ್ಥೆಯ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ ಇತ್ಯಾದಿ ಸಾಧನೆಗಳ ವಾರ್ಷಿಕ ವರದಿಯನ್ನು ವಾಚಿಸಿದರು. ಸಮಾರಂಭದಲ್ಲಿ ಸಂಸ್ಥೆಯ ಬೆಳವಣಿಗೆಯ ಕುರಿತಾಗಿ ಹಿರಿಯರು ಮತ್ತು ಗಣ್ಯರು ಕಳುಹಿಸಿದ ಸಂದೇಶ ಪತ್ರವನ್ನು ಉಪನ್ಯಾಸಕಿ ಪಲ್ಲವಿ ವಾಚಿಸಿದರು.

ಶೈಕ್ಷಣಿಕ ಸಾಲಿನಲ್ಲಿ ಪಠ್ಯ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಮತ್ತು ಕಾಲೇಜಿನ ವತಿಯಿಂದ ಉಪನ್ಯಾಸಕರಿಗೆ ಆಯೋಜಿಸಿದ್ದ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದವರಿಗೆಛ್ಘ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ನಡೆಯಿತು. ಪ್ರಶಸ್ತಿಯನ್ನು ಅತಿಥಿಗಳಾದ ಡಾ. ಸತೀಶ್ಚಂದ್ರ ಎಸ್., ಡಾ. ಹೇಮಗಿರಿ ಕೆ, ದೀಪಾ ವಿ ಕಟ್ಟೆ ಸೇರಿದಂತೆ ಕಾಲೇಜಿನ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಹಸ್ತಾಂತರಿಸಿದರು.

ಸಭೆಯಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಮತ್ತು ಕಾಲೇಜಿನ ವತಿಯಿಂದ ಕಾರ್ಯಕ್ರಮದ ಅಭ್ಯಾಗತರಾಗಿದ್ದ ಡಾ. ಹೇಮಗಿರಿ ಕೆ, ದೀಪಾ ವಿ ಕಟ್ಟೆ ಅವರನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಗೌರವಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕಾಲೇಜಿನ ವಿದ್ಯಾರ್ಥಿಗಳಿಂದ ಮನೋರಂಜನೀಯ ಸಾಂಸ್ಕೃತಿಕ ಕಾರ್ಯಕ್ರಮದ ನಡೆಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಉಪನ್ಯಾಸಕರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಉಪ ಪ್ರಾಚಾರ್ಯ ಡಾ. ರಾಜೇಶ್ ಬಿ. ಸ್ವಾಗತಿಸಿದರು. ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಕಾರ್ಯಕ್ರಮವನ್ನು ಹಿಂಸಿನಿ ಭೀಡೆ ಹಾಗೂ ವಸುಧ ನಿರೂಪಿಸಿ, ಉಪನ್ಯಾಸಕ ಡಾ. ಮಹಾವೀರ ಜೈನ್ ವಂದಿಸಿದರು.

Exit mobile version