Site icon Suddi Belthangady

ಲಾಯಿಲ: ಜನ ಜಾಗೃತಿ ವೇದಿಕೆ- ವಿಶೇಷ ಮದ್ಯವರ್ಜನ ಶಿಬಿರ- ಆಂತರಿಕ ಒತ್ತಡದಿಂದ ವ್ಯಸನಮುಕ್ತರಾಗಲು ಸಾಧ್ಯ: ಡಾ. ಹೆಗ್ಗಡೆ

ಉಜಿರೆ: ಸಂಸಾರದಲ್ಲಿ ನಾನಾ ರೀತಿಯ ಒತ್ತಡಗಳು, ಆಸಕ್ತಿಗಳಿವೆ. ಅದರಲ್ಲಿ ದುಶ್ಚಟ ಒಂದು ಚಟ, ಅದು ಒಂದು ಸಲ ಮನುಷ್ಯನನ್ನು ಹಿಡಿದುಕೊಂಡಲ್ಲಿ ಅದರಿಂದ ಬಿಡಿಸಿಕೊಳ್ಳುವುದು ತುಂಬಾ ಕಷ್ಟ.
ದುಶ್ಚಟ ಎಂಬುದು ಹೆಚ್ಚು ಶಕ್ತಿವಂತ. ಹಾಗಾಗಿ ಮನೋ ಕಾಮನೆಗಳನ್ನು ಆತ್ಮ ಪರಾಮರ್ಶೆಗೆ ಒಳಪಡಿಸಿದಾಗ ದುಶ್ಚಟ ಮುಕ್ತರಾಗಲು ಸಾಧ್ಯ. ಶಿಬಿರಾರ್ಥಿಗಳು ದುಶ್ಚಟಗಳಿಂದ ಒಮ್ಮೆ ಹೊರ ಬಂದ ಮೇಲೆ ಮತ್ತೆ ಇದರ ಬಳಿ ಹೋಗುವುದಿಲ್ಲ ಎಂಬ ದೃಢ ಸಂಕಲ್ಪ ಮಾಡಬೇಕು. ಕುಡಿತ ಬಿಡಬೇಕಾದರೆ ಬಾಹ್ಯ ಒತ್ತಡಕ್ಕಿಂತ ಆಂತರಿಕ ಒತ್ತಡ ಬಹಳ ಮುಖ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಉಜಿರೆ ಲಾಯಿಲ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 260ನೇ ವಿಶೇಷ ಮದ್ಯವರ್ಜನ ಶಿಬಿರದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ದುಶ್ಚಟಕ್ಕೊಳಗಾದವರನ್ನು ಮನಪರಿವರ್ತನೆ ಮೂಲಕ ವ್ಯಸನಮುಕ್ತಿಗೊಳಿಸಲು ಸಾಧ್ಯ ಎಂಬುದನ್ನು ವೇದಿಕೆಯ ಮದ್ಯವರ್ಜನ ಶಿಬಿರಗಳು ತೋರಿಸಿಕೊಟ್ಟಿವೆ. ದುಶ್ಚಟದ ಬಲೆಗೆ ಬಿದ್ದು, ಬದುಕಿನಲ್ಲಿ ಭರವಸೆಯನ್ನು ಕಳಕೊಂಡ ಸಾವಿರಾರು ಕುಟುಂಬಗಳು ಮದ್ಯವರ್ಜನ ಶಿಬಿರಗಳಿಂದಾಗಿ ಕುಟುಂಬದಲ್ಲಿ ಪ್ರೀತಿ, ವಿಶ್ವಾಸ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು. ಶಿಬಿರದಲ್ಲಿ 48 ಮಂದಿ ಭಾಗವಹಿಸಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಗಳಾದ ಡಾ. ಹರೀಶ್ ಕೃಷ್ಣಸ್ವಾಮಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್, ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷ ನಟರಾಜ್ ಬಾದಾಮಿಯವರು ಶಿಬಿರಾರ್ಥಿಗಳಿಗೆ ಮಾಹಿತಿ, ಮಾರ್ಗದರ್ಶನ ನೀಡಿದರು. 8 ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಯೋಗ,
ಧ್ಯಾನ, ವಾಯಾಮ, ಚಿಂತನೆ, ಸಲಹೆ, ಭಜನೆ, ಗುಂಪು ಚಟುವಟಿಕೆ, ಆತ್ಮಾವಲೋಕನ, ಮಾಹಿತಿ ಕಾರ್ಯಕ್ರಮಗಳು, ಮನೋರೋಗ ತಜ್ಞರ ಸಲಹೆ ಇವೆಲ್ಲಾ ಚಟುವಟಿಕೆಗಳ ಮೂಲಕ ವ್ಯಸನಿಯ
ಮನಪರಿವರ್ತನೆ ಮಾಡಲಾಗುತ್ತಿದೆ.

ಶಿಬಿರದಲ್ಲಿ ಜನಜಾಗೃತಿ ವೇದಿಕೆಯ ರಾಜ್ಯ ಕಾರ್ಯದರ್ಶಿ ವಿವೇಕ್ ವಿ. ಪಾಸ್, ಆಡಳಿತ ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿ ರಮೇಶ್, ಆರೋಗ್ಯ ಸಹಾಯಕಿ ಫಿಲೋಮಿನಾ ಡಿಸೋಜಾ, ಆಪ್ತಸಮಾಲೋಚಕ ಜಿ.ಆರ್. ಮಧು ಜಾಗೃತಿ ಸೌಧದ ಪ್ರಬಂಧಕ ಕಿಶೋರ್ ಸಹಕರಿಸಿದರು.

Exit mobile version