Site icon Suddi Belthangady

ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ ಖೋ-ಖೋ ಟೂರ್ನಮೆಂಟ್

ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯಲ್ಲಿ ಮಂಗಳೂರು ಯೂನಿವರ್ಸಿಟಿ ಮಟ್ಟದ ಹುಡುಗರ ಹಾಗೂ ಹುಡುಗಿಯರ ಅಂತರ್ ಕಾಲೇಜು ಖೋ-ಖೋ ಪಂದ್ಯಾಟ ಆರಂಭಗೊಂಡಿದೆ. ಡಿ.9 ಹಾಗೂ ಡಿ.10ರಂದು ಎರಡು ದಿನಗಳ ಕಾಲ ಟೂರ್ನಮೆಂಟ್ ನಡೆಯಲಿದೆ. ಅಂತರ್ ಕಾಲೇಜು ಖೋ-ಖೋ ಟೂರ್ನಮೆಂಟ್ ಅನ್ನು ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ತುಕರಾಂ ಏನೆಕಲ್ ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮೂಡುಬಿದಿರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಟ್ರಸ್ಟಿಯಾಗಿರುವ ವಿವೇಕ್ ಆಳ್ವ ಅವರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯಾವುದೇ ಖಾಸಗಿ ಕಾಲೇಜಿಗೂ ಕಡಿಮೆಯಿಲ್ಲ ಎನ್ನುವ ಹಾಗೆ ಅತ್ಯಂತ ಗುಣಮಟ್ಟಯುಕ್ತ ಟೂರ್ನಮೆಂಟ್ ಅನ್ನು ಆಯೋಜಿಸಿರುವುದು ಸಂತಸ ತಂದಿದೆ. ಇಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ಹೆಣ್ಣುಮಕ್ಕಳೇ ಇದ್ದಾರೆ. ಹೆಣ್ಣು ಮಕ್ಕಳು ಹೆಚ್ಚು ಇರುವ ಸಂಸ್ಥೆಯು ಅತ್ಯಂತ ಅಭಿವೃದ್ಧಿ ಹೊಂದುತ್ತದೆ ಎಂದೇ ಅರ್ಥ ಎಂದರು. ಕ್ರೀಡೆ ಎಂದಾಗ ಸೋಲು-ಗೆಲುವು ಇದ್ದೇ ಇರುತ್ತದೆ. ಆದರೆ, ಅದು ನಮ್ಮ ಬದುಕಿಗೆ ದೊಡ್ಡ ಪಾಠವಾಗಿರಲಿದೆ. ಖೋ-ಖೋ ಪ್ಲೇಯರ್ ಹೆಚ್ಚಿನ ಫಿಟ್ ನೆಸ್ ಅನ್ನು ಹೊಂದಿರುತ್ತಾರೆ. ಅವರು ಉಳಿದೆಲ್ಲಾ ಆಟಗಳನ್ನು ಆಡಲು ಸಾಧ್ಯವಾಗುತ್ತದೆ. ಹೀಗಾಗಿ ಖೋ-ಖೋ ಅತ್ಯಂತ ಹೆಚ್ಚಿನ ಮಹತ್ವವನ್ನು ಪಡೆದಿರುವ ದೇಶೀಯ ಕ್ರೀಡೆಯಾಗಿದೆ ಎಂದು ಆಟಗಾರರಿಗೆ ಶುಭ ಹಾರೈಸಿದರು.

ಇದೇ ವೇಳೆ, ದೈಹಿಕ ಶಿಕ್ಷಣ ನಿರ್ದೇಶಕರಾಗಿ ಮಹತ್ತರ ಸಾಧನೆಗೈದು ನಿವೃತ್ತ ಜೀವನದಲ್ಲಿರುವ ತುಕರಾಂ ಏನೆಕಲ್ ಹಾಗೂ ಶಾಂತಿರಾಜ್ ಕಂಬ್ಲಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ, ತುಕರಾಂ ಏನೆಕಲ್ ಅವರು, ಪ್ರತಿಭಾನ್ವಿತರು ಸಾಯಬಹುದು ಆದರೆ ಸ್ಫೂರ್ತಿ ಎನ್ನುವಂತದ್ದು ಸಾಯುವುದಿಲ್ಲ. ಹೀಗಾಗಿ ನಮ್ಮ ಆಟವು ಇನ್ನೊಬ್ಬರಿಗೆ ಸ್ಫೂರ್ತಿ ತುಂಬುವಂತಿರಬೇಕು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಶಿಸ್ತು ಉಳಿದಂತಹ ಎಲ್ಲಾ ಕಾಲೇಜುಗಳಿಗೆ ಕೂಡಾ ಸ್ಫೂರ್ತಿದಾಯಕವಾಗಿದೆ ಎಂದರು.

ಸಭಾಧ್ಯಕ್ಷತೆಯನ್ನು ಸ.ಪ್ರ.ದ. ಕಾಲೇಜು ಬೆಳ್ತಂಗಡಿಯ ಪ್ರಾಂಶುಪಾಲ ಫ್ರೊ. ಸುರೇಶ್ ವಿ. ವಹಿಸಿದ್ದರು. ವೇದಿಕೆಯಲ್ಲಿ ಮಂಗಳೂರು ಯುನಿವರ್ಸಿಟಿ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿ ಸೋಜಾ, ಸ.ಪ್ರ.ದ. ಕಾಲೇಜು ಬೆಳ್ತಂಗಡಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ. ರಾಧಾಕೃಷ್ಣ ಹೆಚ್.ಬಿ., ಎಸ್. ಡಬ್ಲ್ಯು. ಒ. ಫ್ರೊ. ಪದ್ಮನಾಭ, ಪಿಟಿಎ ಅಧ್ಯಕ್ಷ ವೈಲೆಟ್ ವಾಸ್ ಹಾಗೂ ಕಾಲೇಜಿನ ಕ್ರೀಡಾ ಸಂಚಾಲಕರು ಉಪಸ್ಥಿತರಿದ್ದರು.

ಇನ್ನು, ಮಂಗಳೂರು ಯೂನಿವರ್ಸಿಟಿ ಮಟ್ಟದ ಹುಡುಗರ ಹಾಗೂ ಹುಡುಗಿಯರ ಅಂತರ್ ಕಾಲೇಜು ಖೋ-ಖೋ ಪಂದ್ಯಾಟದಲ್ಲಿ ಒಟ್ಟು 60 ತಂಡಗಳು ಭಾಗವಹಿಸಿದೆ. ಡಿ. 10 ರಂದು ಸಂಜೆ ಸಮಾರೋಪ ಸಮಾರಂಭವು ಜರುಗಲಿದೆ. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಕೋ-ಆರ್ಡಿನೇಟರ್ ಡಾ. ಕುಶಾಲಪ್ಪ ಎಸ್. ಸ್ವಾಗತಗೈದರು. ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ಸ್ ವಿಭಾಗದ ಅಸಿಸ್ಟೆಂಟ್ ಪ್ರೊ. ಡಾ. ದಿವ್ಯ ಪ್ರಭು ಪಿ. ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಫ್ರೊ. ಪದ್ಮನಾಭ ಕೆ ಧನ್ಯವಾದ ಸಮರ್ಪಿಸಿದರು.

Exit mobile version