Site icon Suddi Belthangady

ಕೊಕ್ಕಡ: ಹೃದಯಾಘಾತದ ನಂತರ ಸಂಕಷ್ಟಕ್ಕೆ ಸಿಲುಕಿದ ಕುಟುಂಬಕ್ಕೆ ಸ್ನೇಹಿತರ ಬೆಂಬಲ: ಶ್ರಮದಾನದಿಂದ ಮನೆ ದುರಸ್ತಿ ಆರಂಭ

ಕೊಕ್ಕಡ: ಕೆಲವು ತಿಂಗಳ ಹಿಂದೆ ಹೃದಯಾಘಾತದಿಂದ ನಿಧನರಾದ ಕೊಕ್ಕಡ ಗ್ರಾಮದ ಪದ್ಮನಾಭ ಆಚಾರ್ಯ ಅವರ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ನೆರವಾಗಿ ನಿಂತು ಡಿ.7ರಂದು ಅವರ ಮನೆಯವರು ವಾಸಿಸಲು ಯೋಗ್ಯವಾಗದ ಮಟ್ಟಿಗೆ ಹಾಳಾಗಿದ್ದ ಆಚಾರ್ಯರ ಮನೆಯ ದುರಸ್ತಿ ಕಾರ್ಯವನ್ನು ಮೃತರ ಆಪ್ತ ಸ್ನೇಹಿತರು ಹಾಗೂ ದಾನಿಗಳು ಶ್ರಮದಾನದ ಮೂಲಕ ಕೈಗೆತ್ತಿಕೊಂಡರು.

ಸುಮಾರು 70 ಮಂದಿ ಸೇರಿಕೊಂಡು ಭಾನುವಾರ ಬೆಳಿಗ್ಗೆಯಿಂದಲೇ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿದ್ದು, ಮನೆಗೆ ಹೊಸ ರೂಪ ನೀಡುವ ಉದ್ದೇಶದಿಂದ ಶ್ರಮದಾನ ಕಾರ್ಯ ತೀವ್ರಗತಿಯಲ್ಲಿ ನಡೆಯಿತು. ಕುಟುಂಬದ ಸಂಕಷ್ಟದ ವೇಳೆಯಲ್ಲಿ ನಾವು ಇದ್ದೇವೆ ಎಂಬ ಭರವಸೆಯನ್ನು ನೀಡಿ, ಮೃತರ ಸ್ನೇಹಿತರ ಬಳಗವೇ ಸಂಪೂರ್ಣ ಕಾರ್ಯವನ್ನು ಮುನ್ನಡೆಸಿದೆ.

ಈ ಕಾರ್ಯಕ್ಕೆ ಮೃತರ ಆಪ್ತ ಸ್ನೇಹಿತ, ಸಮಾಜಸೇವಕ ತುಕ್ರಪ್ಪ ಶೆಟ್ಟಿ ನೂಜೆ, ಉದ್ಯಮಿ ನಾರಾಯಣಗೌಡ, ಸೌತಡ್ಕ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಶಾಂತಪ್ಪ ಮಡಿವಾಳ, ರಜಾಕ್ ಕೊಕ್ಕಡ, ಜಾರ್ಜ್, ತಾಲೂಕು ಪಂಚಾಯತಿ ಮಾಜಿ ಸದಸ್ಯ ಲಕ್ಷ್ಮೀನಾರಾಯಣ, ಅವರೊಂದಿಗೆ ಶ್ಯಾಮರಾಜ್ ಪಟ್ರಮೆ, ಕಾಂಟ್ರಾಕ್ಟರ್ ಫಾರೂಕ್ ಮಡೆಂಜೋಡಿ, ಬಾಲಕೃಷ್ಣ ಗೌಡ ಬಳಕ್ಕ, ಧನಂಜಯ ಪಟ್ರಮೆ, ಜನಾರ್ಧನ, ಲಾರೆನ್ಸ್ ಪಾಯಿಸ್, ಶ್ರೀಧರ ಗೌಡ ಹಾಗೂ ಮೃತರ ಪತ್ನಿ ಮಕ್ಕಳು, ಸಹೋದರ ಸೇರಿದಂತೆ ಸೇರಿ ಸುಮಾರು 70 ಮಂದಿ ಸ್ನೇಹಿತರ ತಂಡ ಶ್ರಮದಾನದಲ್ಲಿ ಪಾಲ್ಗೊಂಡು ಮನೆ ದುರಸ್ತಿಗೆ ಕೈ ಜೋಡಿಸಿದರು.

Exit mobile version