Site icon Suddi Belthangady

ದಿ.ಡಾ.ಬಿ. ಯಶೋವರ್ಮ ಜನ್ಮದಿನ ಸ್ಮರಣಾರ್ಥ ಹಲವು ಕಾರ್ಯಕ್ರಮ-ಶ್ರೇಷ್ಠ ವ್ಯಕ್ತಿತ್ವದ ವ್ಯಕ್ತಿಗಳನ್ನು ಸಮಾಜ ಸದಾ ಸ್ಮರಿಸುತ್ತದೆ: ಡಾ. ಪ್ರದೀಪ್ ನಾವೂರ-ಯಶೋವನದಲ್ಲಿ ವಿಶೇಷ ಸಸಿನೆಟ್ಟು ಆಚರಣೆ-ಮಕ್ಕಳು ಮತ್ತು ಹಿರಿಯರಿಗೆ ಕಾರ್ಟೂನ್ ಕಾರ್ಯಾಗಾರ-ಧರ್ಮಸ್ಥಳದ ರಂಗಶಿವ ತಂಡದಿಂದ ರಂಗಗೀತೆ

ಉಜಿರೆ : ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ಶಿಕ್ಷಣ ತಜ್ಞ, ಸಾಮಾಜಿಕ ಮುಖಂಡ ದಿವಂಗತ ಡಾ.ಬಿ. ಯಶೋವರ್ಮರವರ 70 ನೇ ಜನ್ಮ ದಿನದ ಪ್ರಯುಕ್ತ ಉಜಿರೆಯ ಯಶೋವನದಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ವಿಶೇಷವಾಗಿ ಆಚರಿಸಲಾಯಿತು.

ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಧಾರ್ಮಿಕ ಚಿಂತಕ ಡಾ. ಪ್ರದೀಪ್ ನಾವೂರ ಮಾತನಾಡಿ, ವ್ಯಕ್ತಿ ಅಮರನಾದರು ಆತನ ವ್ಯಕ್ತಿತ್ವ ಮತ್ತು ಆದರ್ಶಗಳಿಗೆ ಸಾವಿಲ್ಲ. ದಿ.ಡಾ.ಬಿ. ಯಶೋವರ್ಮರವರು ಶಿಕ್ಷಣ ಕ್ಷೇತ್ರದಲ್ಲಿ ಅಗಾಧ ಪರಿಣಿತಿ ಮತ್ತು ದೂರದೃಷ್ಟಿತ್ವ ಇದ್ದವರು. ಈ ಕಾರಣದಿಂದಾಗಿಯೇ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳಲ್ಲಿ ಹೊಸ ಬೆಳವಣಿಗೆಗಳನ್ನು ಜಾರಿ ತಂದು ಶಿಕ್ಷಣ ತಜ್ಞ ಎನಿಸಿಕೊಂಡವರು. ವ್ಯಕ್ತಿ ಗೌರವ ಮತ್ತು ಸ್ವಆಸಕ್ತಿಯ ರೂವರಿಯಾಗಿದ್ದ ಇವರು, ತಮ್ಮ ಜೀವನದುದ್ದಕ್ಕೂ ಓದು, ಕಲೆ, ಹೊಸತನದ ತಂತ್ರಜ್ಞಾನ, ಸಾಹಿತ್ಯ ಇತ್ಯಾದಿ ಕೌಶಲ್ಯಗಳನ್ನು ನಿರಂತರವಾಗಿ ಕಲಿತು ಅಳವಡಿಸಿಕೊಳ್ಳುತಿದ್ದರು. ಇದರ ಜೊತೆಯಲ್ಲೇ ಸಾಮಾಜಿಕ ಕ್ಷೇತ್ರದಲ್ಲೂ ವಿಶೇಷವಾಗಿ ಗುರಿತಿಸಿಕೊಂಡು, ಸಾವಿರಾರು ಜನರ ಯಶಸ್ಸಿಗೆ ಅಡಿಪಾಯವನ್ನು ರೂಪಿಸಿಕೊಟ್ಟವರು. ಶ್ರೇಷ್ಠ ವ್ಯಕ್ತಿತ್ವದ ವ್ಯಕ್ತಿಗಳನ್ನು ಸಮಾಜ ಸದಾ ಸ್ಮರಿಸುತ್ತದೆ. ಅವರ ಚಿಂತನೆ ಮತ್ತು ಆದರ್ಶಗಳು ನಮ್ಮೆಲ್ಲರ ಒಳಿತಿಗೆ ಮಾರ್ಗದರ್ಶನವಾಗಲಿ ಎಂದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಪೂರನ್ ವರ್ಮ ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪೂಜ್ಯ ತಂದೆಯವರಿಗೆ ಯೊಶೋವನ ಅತ್ಯಂತ ನೆಚ್ಚಿನ ಜಾಗ. ಇಲ್ಲಿನ ಪ್ರತಿಯೊಂದು ಗಿಡ ಮರಗಳನ್ನು ಅವರು ನೆಟ್ಟು ಬೆಳೆಸಿ ಸಾದಾ ಅವುಗಳೊಂದಿಗೆ ಮಾತನಾಡುತ್ತಿದ್ದರು. ಹಲವು ಕ್ಷೇತ್ರಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ತಂದೆಯವರು ಯಾವುದನ್ನೂ ಕಡೆಗಣಿಸದೆ ಸಮಕ್ಕೆ ಸರಿಯಾಗಿ ಅವುಗಳ ಅಭ್ಯಾಸ ಮತ್ತು ಪರಿಪಾಲನೆಯಲ್ಲಿ ನಿರತರಾಗುತ್ತಿದ್ದರು. ತಂದೆಯಾಗಿ, ಗುರುವಾಗಿ, ಮಾರ್ಗದರ್ಶಕರಾಗಿ ಅವರು ಹಾಕಿಕೊಟ್ಟ ಹೆಜ್ಜೆಗಳು ಎಂದೆಂದಿಗೂ ಶಾಶ್ವತ ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ದಿವಂಗತ ಡಾ.ಬಿ. ಯಶೋವರ್ಮರವರ 70 ನೇ ಜನ್ಮ ದಿನದ ಪ್ರಯುಕ್ತ ಉಜಿರೆಯ ಯಶೋವನದಲ್ಲಿ ಖ್ಯಾತ ಪರಿಸರ ತಜ್ಞ ಶಿವಾನಂದ ಕಳವೆಯವರು ಉಡುಗೊರೆಯಾಗಿ ನೀಡಿದ ’40 ಅಡಿಗೂ ಎತ್ತರ ಮತ್ತು ಎರಡು ಎಕರೆಯಷ್ಟು ವಿಸ್ತಾರವಾಗಿ ಬೆಳೆಯುವ ಆಫ್ರಿಕನ್ ವಿಶೇಷ ಸಸಿಗಳನ್ನು’ ನೆಡುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸೋನಿಯಾ ಯಶೋವರ್ಮ, ಪೂರನ್ ವರ್ಮ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

ಇದೇ ಕಾರ್ಯಕ್ರಮದ ಭಾಗವಾಗಿ ರಾಷ್ಟ್ರ ಮಟ್ಟದ ಕಾರ್ಟೂನ್ ಪ್ರಶಸ್ತಿ ವಿಜೇತ, ಸಹಪ್ರಾಧ್ಯಾಪಕ ಶೈಲೇಶ್ ಇವರಿಂದ ಕಾರ್ಟೂನ್ ಕಾರ್ಯಾಗಾರ ನಡೆಯಿತು. ಬಳಿಕ ಮಾತನಾಡಿದ ಇವರು, ಪ್ರತಿಯೊಂದು ಕಲೆಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಕಾರ್ಟೂನ್ ಗೆ ಯಾವುದೇ ಷರತ್ತುಗಳು ಇಲ್ಲ ಆದರೆ ಕೆಲವೊಂದು ಮೂಲಭೂತ ನೀತಿಗಳನ್ನು ಅನುಸರಿಸಬೇಕು. ಮತ್ತೆ ಮತ್ತೆ ಪ್ರಯತ್ನ ಮತ್ತು ಅಭ್ಯಾಸದಿಂದ ಕಾರ್ಟೂನ್ ಕಲೆಯಲ್ಲಿ ಪರಿಣಿತಿಯನ್ನು ಹೊಂದಬವುದು ಎಂದರು. ಕಾರ್ಯಗಾರದಲ್ಲಿ ಮಕ್ಕಳು, ವಿದ್ಯಾರ್ಥಿಗಳು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡು ಕಾರ್ಟೂನ್ ತರಬೇತಿಯನ್ನು ಪಡೆದರು. ಇದೇ ಸಂದರ್ಭದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಕಾರ್ಟೂನಿಸ್ಟ್ ಶೈಲೇಶ್ ರವರನ್ನು ಸನ್ಮಾನಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಧರ್ಮಸ್ಥಳದ ರಂಗಶಿವ ತಂಡದಿಂದ ರಂಗಗೀತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಸೇರಿದಂತೆ ವಿವಿಧ ಸಂಸ್ಥೆಗಳ ಪ್ರಾಂಶುಪಾಲರು, ಮುಖ್ಯಸ್ಥರು , ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕ ಡಾ.ಸುವೀರ್ ಜೈನ್ ನಿರೂಪಿಸಿ, ವಂದಿಸಿದರು. ತೃಪ್ತ ಜೈನ್ ಕಾರ್ಯಕ್ರಮದ ಸಂಯೋಜನೆಯಲ್ಲಿ ಸಹಕರಿಸಿದರು.

Exit mobile version