ಬೆಳ್ತಂಗಡಿ: ತಾಲೂಕಿನ ಉರುವಾಲು ಗ್ರಾಮದ ಕುಪ್ಪೆಟ್ಟಿಯ ಶ್ರೀ ಗಣೇಶ ಭಜನಾ ಮಂದಿರದ ನೂತನ ರಾಜಗೋಪುರ ಹಾಗೂ ಶ್ರೀ ದುರ್ಗಾ ಗಣೇಶ ಸಭಾಭವನ ಲೋಕಾರ್ಪಣಾ ಸಮಾರಂಭವು ಡಿ. 6,7,8 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ, ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದು, ಡಿ. 6ರಂದು ವೇದಮೂರ್ತಿ ಪ್ರಸನ್ನ ಮುಚ್ಚಿನ್ನಾಯರ ಮಾರ್ಗದರ್ಶನದಲ್ಲಿ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಗಣೇಶ ಮಂದಿರದ ನೂತನ ರಾಜಗೋಪುರ ಹಾಗೂ ದುರ್ಗಾಗಣೇಶ ಸಭಾಭವನದ ಲೋಕಾರ್ಪಣೆ ನಡೆಯಿತು.
ಸಂಜೆ ಮೂರು ಗಂಟೆಗೆ ಹೊರೆಕಾಣಿಕೆಯ ಉದ್ಘಾಟನೆಯನ್ನು ಆರಿಕೋಡಿ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಹರೀಶ್ ಆರಿಕೋಡಿ ನೆರವೇರಿಸಿದರು. ಕಾರ್ಯಾಲಯದ ಉದ್ಘಾಟನೆ ರೈತಬಂಧು ಸಂಸ್ಥೆಯ ಮಾಲಕ ಶಿವಶಂಕರ್ ನೆರವೇರಿಸಿದರು.
ಉಗ್ರಾಣವನ್ನು ಸತ್ಯಧರ್ಮ ಚಾವಡಿ ಮನೆಯ ಅಧ್ಯಕ್ಷ ಜನಾರ್ಧನ ಪೂಜಾರಿ ಕಡ್ತಿಲ ನಡೆಸಿಕೊಟ್ಟರು.
ಸಂಜೆ 5ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ ಕುಪ್ಪೆಟ್ಟಿಯಲ್ಲಿ ಭಜನಾ ಮಂಡಳಿ ಸಭಾಭವನ ಮಾಡಲು ಸಮಿತಿಯವರು ಹಾಗೂ ಊರವರು ಕಷ್ಟಪಟ್ಟಿದ್ದಾರೆ. ಇಡೀ ಹಿಂದೂ ಸಮಾಜ ಒಗ್ಗಟ್ಟಾಗಿ ಇರಬೇಕು. ಯಾವುದೇ ಕೆಲಸಗಳು ಭಗವಂತನ ಅನುಗ್ರಹ ಇಲ್ಲದೆ ಆಗುವುದಿಲ್ಲ ದೇವರ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದರು.
ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಮ್ ಕಾಲೇಜಿನ ಉಪನ್ಯಾಸಕ ರವೀಶ್ ಪಡುಮಲೆ ಧಾರ್ಮಿಕ ಭಾಷಣವನ್ನು ಮಾಡಿದರು. ಕಾರ್ಯಕ್ರಮದಲ್ಲಿ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು, ತೆಕ್ಕಾರು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಬಟ್ರಬೈಲು, ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಕ್ಷಿತ್ ಪಣಿಕ್ಕರ್, ಕಣಿಯೂರು ಮಹಾವಿಷ್ಣು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಸುದರ್ಶನ್ ಹೆಗ್ಡೆ, ಕುಪ್ಪೆಟ್ಟಿ ಭಜನಾ ಮಂಡಳಿಯ ಅಧ್ಯಕ್ಷ ರೋಹಿತ್ ಶೆಟ್ಟಿ, ತೆಕ್ಕಾರು ದೇವಸ್ಥಾನ ಟ್ರಸ್ಟ್ ಅಣ್ಣು ಪೂಜಾರಿ ಉಪಸ್ಥಿತರಿದ್ದರು.
ಸೀತಾರಾಮ ಆಳ್ವ ಸ್ವಾಗತಿಸಿ, ಪ್ರಭಾಕರ ಪೊಸಂದೊಡಿ ಕಾರ್ಯಕ್ರಮ ನಿರೂಪಿಸಿದರು.

