ಉಜಿರೆ: ಕಳೆದ 75 ವರ್ಷಗಳಿಂದ ಊರಿನ ಅನೇಕ ವಿದ್ಯಾರ್ಥಿಗಳಿಗೆ ಜ್ಞಾನ ಧಾರೆಯನ್ನೆರೆದು ಇವತ್ತು ಸಮಾಜದ ಶಕ್ತಿಗಳಾಗಿ ರೂಪಿಸಿದೆ ಬದನಾಜೆ ಸರಕಾರಿ ಉನ್ನತೀ ಕರಿಸಿದ ಪ್ರಾಥಮಿಕ ಶಾಲೆ. 1945 ರಲ್ಲಿ ಸ್ಥಾಪನೆಗೊಂಡ ಶಾಲೆ ಇದೀಗ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ.
1943 ರಲ್ಲಿ ಮಲೆಬೆಟ್ಟು ಸಮೀಪದ ಬರಮೇಲು ಸೇಸಗೌಡರ ಕೊಟ್ಟಿಗೆಯಲ್ಲಿ ಪ್ರಾರಂಭವಾದ ನಂತರ 1945ರಲ್ಲಿ ಸರಕಾರದಿಂದ ಅಂಗೀಕೃತ ಗೊಂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಾಯಿತು. ನಂತರ ಹಂತಹಂತವಾಗಿ ಬೆಳೆದು ಇಂದು ಪ್ರೌಢ ಶಾಲೆ ಕೂಡಾ ಜೊತೆ ಸೇರಿಕೊಂಡು RMSA ಶಾಲೆಯಾಗಿದೆ.. ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಆಗುತ್ತಿರುವ ಕಾರಣ ಶೀಘ್ರದಲ್ಲೇ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಬದಲಾಗಿ ಪಿ.ಯು.ಶಿಕ್ಷಣದ ಆರಂಭಕ್ಕೂ ಕಾತರಿಸುತ್ತಿದೆ.
ಸುಜ್ಞಾನ ಹಿರಿಯ ವಿದ್ಯಾರ್ಥಿ ಸಂಘ: ದಿ. ಕೂಸಪ್ಪ ಗೌಡ ಓರಾಲು ರವರ ಸ್ಥಾಪಕ ಅಧ್ಯಕ್ಷತೆಯಲ್ಲಿ, ಮೋಹನ್ ಎಚ್.ಬಿ.ಯವರ ಕಾರ್ಯದರ್ಶಿಯಾಗಿ ಪ್ರಾರಂಭ ಗೊಂಡ ಹಳೆ ವಿದ್ಯಾರ್ಥಿ ಸಂಘ ನಂತರ ಮೋಹನ್ ಪರಂಗಾಜೆ ಅಧ್ಯಕ್ಷರಾಗಿ, ಗೋಪಾಲ್ ಮಾಸ್ಟರ್ ಕಾರ್ಯದರ್ಶಿಯಾಗಿ ಮುಂದುವರಿದರು. ಪ್ರಸ್ತುತ ರಾಮಯ್ಯ ಗೌಡರ ಅಧ್ಯಕ್ಷತೆಯಲ್ಲಿ, ಸುರೇಶ್ ಮಾಸ್ಟರ್ ಮಾಚಾರ್ ಕಾರ್ಯದರ್ಶಿ ಗಳಾಗಿರುವ *ಸುಜ್ಞಾನ ಹಿರಿಯ ವಿದ್ಯಾರ್ಥಿ ಸಂಘ ಮಾರ್ಚ್ 2024 ರಲ್ಲಿ ಉಜಿರೆಯ ಶ್ರೀ ಜನಾರ್ದನ ಸ್ವಾಮು ದೇವಸ್ಥಾನದ ಆನುವಂಶಿಕ ಆಡಳಿತ ಮೋಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯರಿಂದ ಉದ್ಘಾಟನೆಗೊಂಡಿತು.
ಉಜಿರೆಯ ಉದ್ಯಮಿ, ‘ಬದುಕು ಕಟ್ಟೋಣ ಬನ್ನಿ’ ಸೇವಾ ಟ್ರಸ್ಟ್ ಮೋಹನ್ ಕುಮಾರ್ ರಿಂದ ಚಾಲನೆ ಪಡೆದ ಸುಜ್ಞಾನ ನಿಧಿ ಯೋಜನೆಯ ಮೂಲಕ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿತು. ಸುಜ್ಞಾನ ನಿಧಿಗೆ ಮೊದಲ ದೇಣಿಗೆಯನ್ನು ಸ್ಕ್ಯಾನ್ ಮಾಡುವ ಮೂಲಕ ಶರತ್ ಕೃಷ್ಣ ಪಡುವೆಟ್ನಾಯರು ಉದ್ಘಾಟಿಸಿ ಇವತ್ತು ಭವ್ಯವಾದ ಸುಜ್ಞಾನ ಸಭಾಂಗಣ ನಿರ್ಮಾಣ ಗೊಂಡಿದೆ. ಬೆಳಾಲು ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿಯವರ ದಿವ್ಯ ಹಸ್ತ ದಿಂದ ಕೆಸರು ಕಲ್ಲು ಹಾಕುವುದರ ಮೂಲಕ ನಮ್ಮ ಕನಸಿನ ಸಭಾಂಗಣ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಹಿರಿಯ ವಿದ್ಯಾರ್ಥಿ ಸಂಘದ ಅಡಿಯಲ್ಲಿ ಪ್ರಾರಂಭಗೊಂಡ ಈ ಸುಜ್ಞಾನ ನಿಧಿ ಯೋಜನೆಯ ಸಂಚಾಲಕರಾಗಿ ಸುಂದರ ಬಂಗೇರ ಹಾಗೂ ಸಹ ಸಂಚಾಲಕರಾಗಿ ಸೋಮಶೇಖರ್ ಕೆ. ಇವರ ನೇತೃತ್ವದಲ್ಲಿ ಅಂದಿನಿಂದ ಪ್ರತಿ ಆದಿತ್ಯವಾರ ನಮ್ಮೂರಿನ ಪ್ರತಿ ಮನೆಮನೆಗಳಿಗೆ ತೆರಳಿ ಧನ ಸಂಗ್ರಹ ಮಾಡಿದ ಫಲವೇ ಈ ಭವ್ಯ ಸಭಾಂಗಣ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನುಡಿಯಂತೆ,’ ಶಾಲೆ ಆ ಊರಿನ ಮನಸ್ಥಿಯ ಕೈಗನ್ನಡಿ’ ಎಂಬ ಮಾತಿನಂತೆ ನಮ್ಮೂರಿನ ವಿದ್ಯಾಭಿಮಾನಿಗಳು ,’ಬದನಾಜೆ ನಮ್ಮೂರ ಶಾಲೆ,ನಮಗೆ ಕಲಿಸಿದ, ಬೆಳೆಸಿದ ಶಾಲೆ’ ಎಂಬ ಪ್ರೀತಿ ಯೊಂದಿಗೆ ಜೊತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ,ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ, ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ ಬೆಳಾಲು,ನಮ್ಮ ಪ್ರಗತಿ ಯುವಕ ಮಂಡಲ ಮಾಚಾರು, ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಉಜಿರೆ,ಶ್ರೀ ವ್ಯಾಘ್ರಚಾಮುಂಡೇಶ್ವರಿ ಕ್ಷೇತ್ರ ಕೋರ್ಯಾರು ಗುತ್ತಿನ ಟ್ರಸ್ಟ್, ಮೊಯ್ಯುದ್ದಿನ್ ಜುಮ್ಮಾ ಮಸೀದಿ ಮಾಚಾರು, ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂಡಳಿ ಬದನಾಜೆ ಹಾಗೂ ಇತರ ಸಂಘ ಸಂಸ್ಥೆಗಳಿಂದ ನೀಡಲಾಗಿರುವ ಧನ ಸಹಾಯವನ್ನು ಮರೆಯುವಂತಿಲ್ಲ. ಒಟ್ಟಿನಲ್ಲಿ ಒಂದೂರಿನ ಜನರು ಮನಸ್ಸು ಮಾಡಿದರೆ ಒಂದು ಸರಕಾರಿ ಶಾಲೆಯನ್ನು ಯಾವ ರೀತಿಯಲ್ಲಿ ಮಾದರಿಯಾಗಿ ಅಭಿವೃದ್ಧಿ ಮಾಡಬಹುದು ಎಂದು ತೋರಿಸಿ ಕೊಟ್ಟಿದ್ದಾರೆ.
ಡಿ. 21 ಮತ್ತು 22ರಂದು ಅಮೃತ ಮಹೋತ್ಸವ ಕಾರ್ಯಕ್ರಮ, ಸುಜ್ಞಾನ ಸಭಾ ಭವನದ ಲೋಕಾರ್ಪಣೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಅಮೃತ ಪಥ ಸ್ಮರಣ ಸಂಚಿಕೆ ಬಿಡುಗಡೆ, ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ, ಸಾಂಸ್ಕೃಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

