ಬೆಳ್ತಂಗಡಿ: ಕಪುಚಿನ್ ಕೃಷಿಕ್ ಸೇವಾ ಕೇಂದ್ರದ ಅಂಗಸಂಸ್ಥೆಯಾದ ದಯಾ ವಿಶೇಷ ಶಾಲೆಯಲ್ಲಿ ಡಿ. 3ರ ವಿಶ್ವ ವಿಕಲಚೇತನರ ದಿನಾಚರಣೆಯ ಪ್ರಯುಕ್ತ ಡಿ. 4ರಂದು ಶಾಲಾ ಮಕ್ಕಳೊಂದಿಗೆ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಿ.ಕೆ.ಎಸ್.ಕೆ ಸಂಸ್ಥೆಯ ಕಾರ್ಯಕ್ರಮ ಸಂಯೋಜಕಿ ಲವೀನಾ ಜ್ಯೋತಿ ಫೆರ್ನಾಂಡಿಸ್ ರವರು, ದಯಾ ವಿಶೇಷ ಶಾಲೆಯ ಆಪ್ತ ಸಮಾಲೋಚಕಿ ಮೆರಿನ್ ಎಂ.ಪಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಗಣ್ಯ, ಅಫ್ರಾಝ್ ಹಾಗೂ ಶಾಲಾ ಶಿಕ್ಷಕ ಪ್ರತಿನಿಧಿಯಾಗಿ ಧನ್ಯ ಟಿ.ವಿ. ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಲವೀನಾ ಜ್ಯೋತಿ ಫೆರ್ನಾಂಡಿಸ್ ರವರು ಮಕ್ಕಳ ಕೈಯಲ್ಲಿ ವಿವಿಧ ಧನಾತ್ಮಕ ಘೋಷಣೆಗಳನ್ನೊಳಗೊಂಡ ಫಲಕಗಳನ್ನು ನೀಡಿ ಅವನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು.
ಶಾಲೆಯ ಸ್ಪೀಚ್ ಥೆರಪಿಸ್ಟ್ ರಕ್ಷಾ ಅರುಣ ಪೂಜಾರಿ ರವರು ವಿಶ್ವ ವಿಕಲಚೇತನರ ದಿನಾಚರಣೆಯ ಶುಭಾಶಯವನ್ನು ಕೋರುತ್ತಾ, ಈ ದಿನದ ಮಹತ್ವ ಮತ್ತು ಈ ದಿನವನ್ನು ವಿಶ್ವದಾದ್ಯಂತ ಆಚರಿಸುತ್ತಿರುವ ಉದ್ದೇಶವನ್ನು ತಿಳಿಸಿದರು.
ಮೆರಿನ್ ರವರು ಮಾತನಾಡಿ ದಯಾ ವಿಶೇಷ ಶಾಲೆಯು ವಿಶೇಷ ಚೇತನ ಮಕ್ಕಳ ಹಾಗೂ ಅವರ ಪೋಷಕರ ಬಾಳಲ್ಲಿ ಬೆಳಕಾಗಲು ಸಂಸ್ಥೆಯು ಹಮ್ಮಿಕೊಂಡಿರುವ ವಿವಿಧ ಚಟುವಟಿಕೆಗಳು ಮತ್ತು ಸಂಸ್ಥೆಯ ನಿರ್ದೇಶಕರ ಹಾಗೂ ಸಿಬ್ಬಂದಿಗಳ ಪರಿಶ್ರಮವನ್ನು ವಿವರಿಸಿ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೆ ವಂದಿಸಿದರು.
ಕಾರ್ಯಕ್ರಮದಲ್ಲಿ ಡಿ.3ರ ವಿಶ್ವ ವಿಕಲಚೇತನರ ದಿನಾಚರಣೆಯ ಪ್ರಯುಕ್ತ ಶಾಲೆಯಲ್ಲಿ ನಡೆಸಲಾದ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಮಂಗಳೂರಿನ ಪುರಭವನದಲ್ಲಿ ನೀಡಲಾದ ಪ್ರಶಸ್ತಿಗಳನ್ನು ಅತಿಥಿಗಳಾದ ಲವೀನಾ, ಜ್ಯೋತಿಯವರು ಮಕ್ಕಳಿಗೆ ನೀಡಿ ವಿಜೇತರನ್ನು ಅಭಿನಂದಿಸಿದರು.
ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳಿಗೆ ಸಿಹಿಯನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ 100 ವಿಶೇಷ ಮಕ್ಕಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಶಿಕ್ಷಕಿ ಜಯಮಣಿಯವರು ಸರ್ವರನ್ನು ಸ್ವಾಗತಿಸಿ, ಶಿಕ್ಷಕಿ ಸುರಕ್ಷಾರವರು ಕಾರ್ಯಕ್ರಮವನ್ನು ನಿರೂಪಿಸಿದರು. ದೈಹಿಕ ಶಿಕ್ಷಕಿ ಜೆನ್ವಿರಾರವರು ವಂದಿಸಿದರು.

