Site icon Suddi Belthangady

ಬದನಾಜೆಯಲ್ಲಿ ಉಜಿರೆ ಎಸ್.ಡಿ.ಎಂ. ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ-ವಿದ್ಯಾರ್ಥಿಗಳು ಎನ್.ಎಸ್.ಎಸ್. ಶಿಬಿರಗಳಲ್ಲಿ ಭಾಗವಹಿಸುವುದರಿಂದ ಗ್ರಾಮಗಳಲ್ಲಿ ಬದಲಾವಣೆ: ಡಾ. ಸತೀಶ್ಚಂದ್ರ ಎಸ್.

ಉಜಿರೆ: “ವಿದ್ಯಾರ್ಥಿಗಳು ಕಲಿಕೆಯ ಜೊತೆ ಜೊತೆಗೆ ಇಂತಹ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ಬದುಕಿನಲ್ಲಿ ಆತ್ಮವಿಶ್ವಾಸ ಹೊಂದಿ, ಜೀವನಮೌಲ್ಯಗಳನ್ನು ಅರಿತುಕೊಳ್ಳುವುದರಿಂದ ಸಮಾಜದಲ್ಲಿ ಪ್ರತಿ ಗ್ರಾಮದಲ್ಲಿಯೂ ನಾವು ಬದಲಾವಣೆಗಳನ್ನು ಕಾಣುವುದಕ್ಕೆ ಸಾಧ್ಯ” ಎಂದು ಉಜಿರೆ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅಭಿಪ್ರಾಯಪಟ್ಟರು.

ಬದನಾಜೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಯೂತ್ ಫಾರ್ ಮೈ ಭಾರತ್ – ಯೂತ್ ಫಾರ್ ಡಿಜಿಟಲ್ ಲಿಟ್ರಸಿ’ ಥೀಂ ಅಡಿಯಲ್ಲಿ ಆಯೋಜಿಸಿದ ಉಜಿರೆ ಎಸ್.ಡಿ.ಎಂ. ಕಾಲೇಜಿನ ಎನ್.ಎಸ್.ಎಸ್. ಘಟಕಗಳ ಒಂದು ವಾರದ ವಾರ್ಷಿಕ ವಿಶೇಷ ಶಿಬಿರವನ್ನು ಡಿ.5ರಂದು ಉದ್ಘಾಟಿಸಿ ಅವರು ಮಾತನಾಡಿದರು.

ಜ್ಞಾನ ಎಂಬುದು ಕೇವಲ ಪುಸ್ತಕದಿಂದ ದೊರೆಯುವುದಿಲ್ಲ. ಬದಲಿಗೆ ಜನರ ಜೊತೆಗೆ ಬೆರೆಯುವುದರಿಂದ ಕೂಡ ಲಭಿಸುತ್ತದೆ. ವಿದ್ಯಾರ್ಥಿಗಳ ಸಂಪೂರ್ಣ ಸರ್ವತೋಮುಖ ವ್ಯಕ್ತಿತ್ವ ವಿಕಸನಕ್ಕೆ ಎನ್.ಎಸ್.ಎಸ್. ಅಡಿಪಾಯ ಒದಗಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿರುವ ಬದುಕಿನ ಮಹತ್ವದ ಅಂಶಗಳಾದ ನಾಯಕತ್ವ, ಹೊಂದಾಣಿಕೆ, ತಾಳ್ಮೆ ಸಹಿತ ವಿವಿಧ ಮೌಲ್ಯಗಳನ್ನು ಇದು ಕಲಿಸುತ್ತದೆ. ಆ ಮೂಲಕ ಮಹತ್ತರ ಬದಲಾವಣೆಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿ, ಉದ್ಯಮಿ ರಾಜೇಶ್ ಪೈ ಮಾತನಾಡಿ, ಒತ್ತಡದ ವಿದ್ಯಾರ್ಥಿ ಜೀವನದಲ್ಲಿ ಏಳು ದಿನ ಹೊಸ ಕಲಿಕೆಯೊಂದಿಗೆ ವ್ಯಕ್ತಿತ್ವವನ್ನು ಕೂಡ ವಿಕಸನಗೊಳಿಸುವುದಕ್ಕೆ ಎನ್ಎಸ್ಎಸ್ ದಾರಿ ಮಾಡಿಕೊಡುತ್ತದೆ ಎಂದರು.

ಶಿಸ್ತು, ಸಮಯಪಾಲನೆ, ನಾಯಕತ್ವ, ಹೀಗೆ ಪ್ರತಿಯೊಂದರ ಮಹತ್ವ ಕುರಿತಂತೆ ಎನ್.ಎಸ್.ಎಸ್. ಶಿಬಿರ ಅರಿವು ಮೂಡಿಸುತ್ತದೆ. ವಿದ್ಯಾರ್ಥಿ ದೆಸೆಯಲ್ಲಿ ಕೈಗೊಳ್ಳುವ ಪ್ರತಿಯೊಂದು ನಿರ್ಧಾರಗಳು ಕೂಡ ಬದುಕಿನಲ್ಲಿ ತುಂಬಾ ಬದಲಾವಣೆಯನ್ನು ತರುತ್ತವೆ. ಹಾಗಾಗಿ ಬದುಕಿನ ಪ್ರತಿ ನಿರ್ಧಾರವೂ ನಿಮ್ಮ ಇಚ್ಛೆಯಂತೆಯೇ ಇರಲಿ ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.

ಎಸ್.ಡಿ.ಎಂ. ಕಾಲೇಜಿನ ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯಕ್ ಮಾತನಾಡಿ, ಎನ್.ಎಸ್.ಎಸ್. ಶಿಬಿರವು ಉತ್ತಮ ಸಮಾಜವನ್ನು ನಿರ್ಮಿಸುವುದನ್ನು ಮತ್ತು ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಬದುಕುವುದನ್ನು ಕಲಿಸಿಕೊಡುತ್ತದೆ ಎಂದರು.

ತಾನು ಎನ್.ಎಸ್.ಎಸ್. ಸ್ವಯಂಸೇವಕನಾಗಿ ಶಿಬಿರದಲ್ಲಿ ಭಾಗವಹಿಸಿದ್ದ ಅನುಭವಗಳನ್ನು ಹಂಚಿಕೊಂಡರು. ಬದುಕಿನಲ್ಲಿ ನಿರ್ದಿಷ್ಟವಾದ ಗುರಿಯನ್ನು ಹೊಂದಿ ಆ ಗುರಿಯನ್ನು ಸಾಧಿಸುವ ಸಲುವಾಗಿ ಪರಿಶ್ರಮ ಪಡಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ., ಸರ್ವತೋಮುಖ ಅಭಿವೃದ್ಧಿಯಲ್ಲಿ ಎನ್.ಎಸ್.ಎಸ್. ಎಂಬ ವೇದಿಕೆ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಈ ಶಿಬಿರವು ಶಿಬಿರಾರ್ಥಿಗಳಿಗೆ, ಶಾಲಾ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಹೀಗೆ ಮೂರು ಹಂತದಲ್ಲಿ ಪ್ರಯೋಜನಕಾರಿಯಾಗಿದೆ. ವಿದ್ಯಾರ್ಥಿಗಳು ಯಾವ ಉದ್ದೇಶವನ್ನು ಇಟ್ಟುಕೊಂಡು ಶಿಬಿರಕ್ಕೆ ಬಂದಿದ್ದೇವೆ ಎಂಬುದನ್ನು ಮರೆಯಬಾರದು ಎಂದರು.

ಶಿಬಿರದಲ್ಲಿ ಡಿ.7ರಂದು ನಡೆಯಲಿರುವ ಆರೋಗ್ಯ ಶಿಬಿರ ಕುರಿತ ಭಿತ್ತಿಪತ್ರ ಹಾಗೂ ಶಿಬಿರದ ಕುರಿತಂತೆ ವಿದ್ಯಾರ್ಥಿಗಳು ಹೊರತಂದ ಭಿತ್ತಿಪತ್ರಿಕೆಯ ಮೊದಲ ಸಂಚಿಕೆ ಬಿಡುಗಡೆಗೊಂಡಿತು.

ಬದನಾಜೆ ಸ.ಉ.ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯ ನಿರಂಜನ್, ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಜಮುನಾ, ವಾರ್ಷಿಕ ವಿಶೇಷ ಶಿಬಿರದ ಸ್ವಾಗತ ಸಮಿತಿ ಅಧ್ಯಕ್ಷ ಅನಿಲ್ ಡಿ’ಸೋಜಾ, ಕಾರ್ಯದರ್ಶಿ ಅರುಣಾಕ್ಷೀ, ಉಜಿರೆ ಗ್ರಾಮ ಪಂಚಾಯತ್ ಸದಸ್ಯೆ ಸವಿತಾ, ಯುವಕ ಮಂಡಳಿ ಸದಸ್ಯರಾದ ನವಿನಾ, ಶುಭಲಕ್ಷ್ಮೀ, ಶಿಬಿರ ಅಧಿಕಾರಿ ಪ್ರವೀಣ್ ಡಿ.ಎಸ್., ಹಿರಿಯ ಸ್ವಯಂಸೇವಕರು, ಶಾಲೆಯ ವಿದ್ಯಾರ್ಥಿಗಳು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ರಾ.ಸೇ. ಯೋಜನಾಧಿಕಾರಿಗಳಾದ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಸ್ವಾಗತಿಸಿ, ಸ್ವಯಂಸೇವಕಯರಾದ ಶ್ರೇಜಾ ಮತ್ತು ಕೆ.ಎನ್ ಧನುಷ್ ಕಾರ್ಯಕ್ರಮ ನಿರೂಪಿಸಿದರು. ಮಾಲಿನಿ ಅಂಚನ್ ವಂದಿಸಿದರು.

Exit mobile version